ಶನಿವಾರ, ಸೆಪ್ಟೆಂಬರ್ 24, 2022
21 °C

Recipes & Food| ತ್ರಿವರ್ಣದ ಮೊಮೋಸ್‌

ಚಂದ್ರಕಲಾ ಮಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ಕಣಕ ತಯಾರಿಕೆ:

ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು - 1 ಕಪ್‌ ಉಪ್ಪು - ರುಚಿಗೆ ತಕ್ಕಷ್ಟು.ಪಾಲಕ್ ಸೊಪ್ಪು - 7 ರಿಂದ 8 ಎಲೆಗಳು
ಕ್ಯಾರೆಟ್ - 1

ಮೈದಾ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 ಭಾಗ ಮಾಡಿಕೊಳ್ಳಿ. ಪಾಲಕ್ ಸೊಪ್ಪು ಮತ್ತು ಕ್ಯಾರೆಟ್ ಅನ್ನು ಪ್ರತ್ಯೇಕವಾಗಿ ರುಬ್ಬಿಟ್ಟುಕೊಳ್ಳಬೇಕು. ಒಂದು ಮೈದಾ ಹಿಟ್ಟಿನ ಭಾಗಕ್ಕೆ ರುಬ್ಬಿದ ಕ್ಯಾರೆಟ್ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಇನ್ನೊಂದು ಮೈದಾ ಹಿಟ್ಟಿನ ಭಾಗಕ್ಕೆ ರುಬ್ಬಿದ ಪಾಲಕ್ ಸೊಪ್ಪಿನ ರಸ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಮತ್ತೊಂದು ಭಾಗವನ್ನು ಹಾಗೆಯೇ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಬೇಕು. ಮೂರು ಬಣ್ಣಗಳ ಹಿಟ್ಟು ಸಿದ್ಧವಾಯಿತು.

ಸ್ಟಫಿಂಗ್‌ ತಯಾರಿಕೆಗೆ

ಬೇಕಾಗುವ ಸಾಮಗ್ರಿಗಳು

ಈರುಳ್ಳಿ - 1, ಬೆಳ್ಳುಳ್ಳಿ - 1 ಪೂರ್ತಿ ಬೀನ್ಸ್ - 100 ಗ್ರಾಂ , ಕ್ಯಾರೆಟ್ - 100 ಗ್ರಾಂ ಬಟಾಣಿ - 100 ಗ್ರಾಂ, ಆಲೂಗಡ್ಡೆ - 1 (ಹೂಕೋಸು, ಬ್ರೊಕೋಲಿ ನಿಮಗೆ ಅಗತ್ಯವೆನಿಸುವ ತರಕಾರಿಗಳನ್ನೂ ಬಳಸಬಹುದು). ಅಡುಗೆ ಎಣ್ಣೆ - 2 ಟೇಬಲ್ ಚಮಚ ಸೋಯಾ ಸಾಸ್ - ಒಂದು ಚಮಚ ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ : ಈರುಳ್ಳಿ, ಬೆಳ್ಳುಳ್ಳಿ, ತರಕಾರಿಗಳೆಲ್ಲವನ್ನೂ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿಯನ್ನು ಹುರಿದುಕೊಳ್ಳಿ. ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲೆ, ಅಚ್ಚಖಾರದ ಪುಡಿ ಹಾಕಿ ಹುರಿದು, ಸ್ವಲ್ಪ ನೀರು ಚಿಮುಕಿಸಿ ತರಕಾರಿಗಳನ್ನು ಬೇಯಿಸಿಕೊಳ್ಳಿ. ಅವು ಬೆಂದ ನಂತರ ಒಂದು ಚಮಚ ಸೋಯಾ ಸಾಸ್ ಹಾಕಿ ಒಂದೆರಡು ನಿಮಿಷ ಹುರಿದುಕೊಂಡರೆ ಸ್ಟಫಿಂಗ್ ಸಿದ್ಧ.

ಮೊಮೋಸ್ ತಯಾರಿ

ಈಗ ಕಲೆಸಿಟ್ಟುಕೊಂಡ ಹಿಟ್ಟನ್ನು ಪೂರಿಯಷ್ಟು ಅಗಲದಲ್ಲಿ ಗುಂಡಗೆ, ತೆಳ್ಳಗೆ ಲಟ್ಟಿಸಿಕೊಳ್ಳಿ. ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳ ಸಿದ್ಧವಾಗುತ್ತವೆ. ಲಟ್ಟಿಸಿಕೊಂಡ ಕಣಕದೊಳಗೆ ತಯಾರಿಸಿಕೊಂಡ ತರಕಾರಿ ಮಿಶ್ರಣವನ್ನು ಎರಡು ಚಮಚ ಹಾಕಿ ಮೋದಕದ ಆಕಾರದಲ್ಲಿ ಮಡಚಿಕೊಳ್ಳಿ. ಈಗ ಮಡಚಿಟ್ಟುಕೊಂಡ ಮೊಮೋಸ್‌ಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.‌

ಮೊಮೋಸ್ ಚಟ್ನಿ

ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ - 10 ರಿಂದ 12, ಟೊಮೊಟೊ - 1 ಮೀಡಿಯಂ ಗಾತ್ರದ್ದು, ಬೆಳ್ಳುಳ್ಳಿ - 7 ರಿಂದ 8 ಎಸಳುಗಳು, ಶುಂಠಿ - ಅರ್ಧ ಇಂಚು, ಅಡುಗೆಎಣ್ಣೆ - 2 ಚಮಚ, ಸಕ್ಕರೆ - 1 ಚಮಚ ಸೋಯಾ ಸಾಸ್ - 1 ಚಮಚ, ವಿನೇಗರ್ - ಅರ್ಧ ಚಮಚ, ಉಪ್ಪು - ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬ್ಯಾಡಗಿ ಮೆಣಸಿನಕಾಯಿ ಮತ್ತು ಟೊಮೆಟೊವನ್ನು ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. ಬೆಂದ ನಂತರ ಟೊಮೆಟೊ ಸಿಪ್ಪೆ ತೆಗೆದು, ಬೆಂದ ಮೆಣಸಿನಕಾಯಿಯ ಜೊತೆ ರುಬ್ಬಿಕೊಳ್ಳಿ.

ಒಗ್ಗರಣೆಗೆ ಎರಡು ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ ಶುಂಠಿ ಸೇರಿಸಿ ಹುರಿಯಿರಿ. ನಂತರ ರುಬ್ಬಿಟ್ಟುಕೊಂಡ ಒಣಮೆಣಸಿನಕಾಯಿ ಮತ್ತು ಟೊಮೆಟೊ ಪೇಸ್ಟ್ ಹಾಕಿ ಸ್ವಲ್ಪ ಕುದಿಸಿ. ಕುದಿಯುವಾಗ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಸಕ್ಕರೆ ಸೇರಿಸಿ ಕುದಿಸಿ. ಕೊನೆಯಲ್ಲಿ ಒಂದು ಚಮಚ ಸೋಯಾಸಾಸ್, ಅರ್ಧ ಚಮಚ ವಿನೇಗರ್ ಸೇರಿಸಿ ಒಂದೆರಡು ನಿಮಿಷ ತಿರುಗಿಸಿ ಸ್ಟವ್ ಆರಿಸಿ. ಮೊಮೋಸ್‌ ಚಟ್ನಿ ಸವಿಯಲು‌ ಸಿದ್ಧ.

ಒಂದು ಚಂದದ ಸ್ಟೀಲ್‌ ಟ್ರೇನಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳ ಮೊಮೋಸ್‌ಗಳನ್ನು ಅಲಂಕರಿಸಿ, ಬಣ್ಣದ ಚಟ್ನಿಗಳನ್ನು ಅದರ ಎದುರು ಜೋಡಿಸಿ. ಈಗ ತ್ರಿವರ್ಣದ ಮೊಮೋಸ್ ಸವಿಯಲು ಸಿದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು