ಶುಕ್ರವಾರ, ಸೆಪ್ಟೆಂಬರ್ 25, 2020
23 °C

ನಳಪಾಕ | ಕೃಷ್ಣ ಜನ್ಮಾಷ್ಟಮಿಗೆ ಉಂಡೆ, ಚಕ್ಕುಲಿ

ವಿದ್ಯಾಶ್ರೀ ಶಿ. ಗಾಣಿಗೇರ Updated:

ಅಕ್ಷರ ಗಾತ್ರ : | |

Prajavani

ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ. ಗೋಕುಲಾಷ್ಟಮಿಯ ದಿನ ಕೃಷ್ಣನನ್ನು ಪೂಜಿಸುವ ಜೊತೆಗೆ ಸಿಹಿ ಅವಲಕ್ಕಿ, ಕೋಡುಬಳೆ, ನಿಪ್ಪಟ್ಟು, ಕರ್ಜಿಕಾಯಿ, ಉಂಡೆಗಳಂತಹ ತಿನಿಸುಗಳನ್ನು ತಯಾರಿಸಿ ನೈವೇದ್ಯ ಮಾಡುತ್ತಾರೆ. ಅಂತಹ ಕೆಲವು ತಿಂಡಿಗಳನ್ನು ಮನೆಯಲ್ಲೇ ತಯಾರಿಸುವ ವಿಧಾನ ವಿವರಿಸಿದ್ದಾರೆ ವಿದ್ಯಾಶ್ರೀ ಶಿ. ಗಾಣಿಗೇರ.

***

ಅಂಟಿನ ಉಂಡೆ
ಬೇಕಾಗುವ ಸಾಮಗ್ರಿಗಳು:
ಅಂಟು – 100 ಗ್ರಾಂ, ಒಣಗಿದ ಖರ್ಜೂರ – 200 ಗ್ರಾಂ, ಒಣ ಕೊಬ್ಬರಿ – 500 ಗ್ರಾಂ, ಗೋಡಂಬಿ – 100 ಗ್ರಾಂ, ಬೆಲ್ಲ – ಅರ್ಧ ಕೆ.ಜಿ, ತುಪ್ಪ – ಅರ್ಧ ಕೆ.ಜಿ, ಏಲಕ್ಕಿ, ಲವಂಗ, ಗಸಗಸೆ ಸ್ವಲ್ಪ.

ತಯಾರಿಸುವ ವಿಧಾನ: ಕೊಬ್ಬರಿ ತುರಿದುಕೊಂಡು, ಬಿಸಿಲಿನಲ್ಲಿ ಸ್ವಲ್ಪ ಒಣಗಿಸಬೇಕು. ನಂತರ ತುಪ್ಪದಲ್ಲಿ ಅಂಟನ್ನು ಕರಿದು ತೆಗೆದಿಡಿ. ಖರ್ಜೂರದ ಬೀಜ ತೆಗೆದು ಕೆಂಪಗೆ ತುಪ್ಪದಲ್ಲಿ ಹುರಿಯಿರಿ. ನಂತರ ತುರಿದ ಕೊಬ್ಬರಿ, ಏಲಕ್ಕಿ, ಲವಂಗ, ಗಸಗಸೆ, ಗೋಡಂಬಿ ಎಲ್ಲವನ್ನೂ ತುಪ್ಪದಲ್ಲಿ ಸ್ವಲ್ಪ ಹುರಿದು ಕುಟ್ಟಿ ಪುಡಿ ಮಾಡಿಕೊಳ್ಳಿ. ಬೆಲ್ಲದಿಂದ ಪಾಕ ತಯಾರಿಸಿ, ಎಲ್ಲಾ ಪದಾರ್ಥಗಳನ್ನು ಹಾಕಿ ಕಲೆಸಿ ಉಂಡೆ ಕಟ್ಟಿ.

ಬೆಣ್ಣೆ ಚಕ್ಕುಲಿ
ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು-1 ಕೆ.ಜಿ., ಮೈದಾಹಿಟ್ಟು – ಕಾಲು ಕೆ.ಜಿ, ಅಕ್ಕಿಹಿಟ್ಟು – 100 ಗ್ರಾಂ, ಎಣ್ಣೆ ಕರಿಯಲು, ಬೆಣ್ಣೆ – 200 ಗ್ರಾಂ, ಉಪ್ಪು ರುಚಿಗೆ, ಸ್ವಲ್ಪ ಸೋಡಾ ಪುಡಿ.

ತಯಾರಿಸುವ ವಿಧಾನ: ಮೂರು ಬಗೆಯ ಹಿಟ್ಟನ್ನು ಕೂಡಿಸಿ, ಅದಕ್ಕೆ ಉಪ್ಪು, ಕರಗಿಸಿದ ಬೆಣ್ಣೆ, ಸೋಡಾಪುಡಿ ಹಾಕಿ, ಸರಿ ಹೊಂದುವಷ್ಟು ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ. ಇದನ್ನು ಚೆನ್ನಾಗಿ ನಾದಿ ಚಕ್ಕುಲಿ ಒರಳಿನಲ್ಲಿ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಒತ್ತಿ ಹದವಾಗಿ ಕರಿಯಿರಿ.

ಅವಲಕ್ಕಿ ಉಂಡೆ
ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ– ಅರ್ಧ ಕೆ.ಜಿ, ಒಣ ಕೊಬ್ಬರಿ ತುರಿ– ಅರ್ಧ ಕಪ್‌, ಸ್ವಲ್ಪ ಗೋಡಂಬಿ, ಗಸಗಸೆ, ಎಳ್ಳು, ಕಾಲು ಕೆ.ಜಿ ಪುಡಿ ಮಾಡಿದ ಬೆಲ್ಲ, ಕಾಲು ಕೆ.ಜಿ ತುಪ್ಪ.

ತಯಾರಿಸುವ ವಿಧಾನ: ಅವಲಕ್ಕಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಕೊಬ್ಬರಿ ತುರಿ, ಗೋಡಂಬಿ, ಗಸಗಸೆ, ಎಳ್ಳನ್ನು ಸಹ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಬೆಲ್ಲ ಕರಗುವಷ್ಟು ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಂಡು, ಉಳಿದೆಲ್ಲಾ ಪದಾರ್ಥಗಳನ್ನು ಹಾಕಿ ಉಂಡೆ ಕಟ್ಟಿ.

ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು – 200 ಗ್ರಾಂ, ಮೈದಾ – 100 ಗ್ರಾಂ, ಸೋಯಾ ಹಿಟ್ಟು – 50 ಗ್ರಾಂ, ತುಪ್ಪ – 4  ಚಮಚ, ಖಾರದಪುಡಿ – 2 ಚಮಚ, ಅಜವಾನ ಸ್ವಲ್ಪ, ಉಪ್ಪು ರುಚಿಗೆ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಎಲ್ಲಾ ಹಿಟ್ಟನ್ನೂ ಒಂದು ಬೌಲ್‌ನಲ್ಲಿ ಹಾಕಿ ಖಾರದ ಪುಡಿ, ಎಳ್ಳು, ಅಜವಾನ, ಉಪ್ಪು ಸೇರಿಸಿ, ತುಪ್ಪ ಬಿಸಿ ಮಾಡಿ ಹಾಕಿ. ಬೇಕಾದಷ್ಟು ನೀರು ಹಾಕಿ ಚಪಾತಿ ಕಣಕದ ಹದಕ್ಕೆ ಕಲೆಸಿ. ನಿಂಬೆ ಗಾತ್ರದ ಉಂಡೆಗಳನ್ನ ಮಾಡಿಟ್ಟುಕೊಂಡು, ಬಾಳೆ ಎಲೆ ಮೇಲೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು