ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸ್ಟೊರೆಂಟ್‌: ‘ಬೋಗಿ ಬೋಗಿ’... ತಿನ್ನಿ ಹೋಗಿ

--
Published 25 ಜೂನ್ 2023, 0:32 IST
Last Updated 25 ಜೂನ್ 2023, 0:32 IST
ಅಕ್ಷರ ಗಾತ್ರ

ಗೌರಮ್ಮ ಕಟ್ಟಿಮನಿ

ಮುಂದೆ ಎಂಜಿನ್ ಇಲ್ಲ, ಹಿಂದೆ ಗಾರ್ಡ್ ಕಾಣಿಸಲ್ಲ. ಚುಕುಚುಕು ಶಬ್ದ ಕೇಳಲ್ಲ. ತೂಕಡಿಕೆ ಇರಲ್ಲ. ಟಿಕೆಟ್ ತಪಾಸಣೆಗೆ ಟಿಟಿ ಅಧಿಕಾರಿ ಬರಲ್ಲ. ಪ್ಲಾಟ್‌ಫಾರ್ಮ್ ಟಿಕೆಟ್ ಕೂಡ ತೆಗೆದುಕೊಳ್ಳಬೇಕಿಲ್ಲ. ಆದರೂ ಇದೊಂದು ಪುಟ್ಟ ರೈಲು. ಇದಕ್ಕೆ ಇರುವ ಚೆಂದದ ಹೆಸರು ಬೋಗಿ ಬೋಗಿ!

ಜಗತ್ತಿನ ಅತ್ಯಂತ ಉದ್ದನೆಯ ಪ್ಲಾಟ್‌ಫಾರ್ಮ್‌ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಆವರಣದಲ್ಲಿ ಇರುವ ‘ಬೋಗಿ ಬೋಗಿ’ ದೂರದಿಂದ ಆಕರ್ಷಕವಾಗಿ ಕಾಣುತ್ತದೆ. ಹತ್ತಿರ ಹೋಗಿ ಒಳಹೊಕ್ಕರೆ, ವಿಶಿಷ್ಟ ಅನುಭೂತಿ.

ಎಸಿ ಬೋಗಿಯಲ್ಲಿ ಕೂತು ಪ್ರಯಾಣಿಸುವ ಭಾವ. ಈ ಬೋಗಿಯಲ್ಲಿ ಎಲ್ಲಿ ಕೂತರೂ ಬಯಸಿದ ತಿಂಡಿ, ಊಟ, ಪಾನೀಯವನ್ನು ಪ್ರೀತಿಯಿಂದ ತಂದು ಕೊಡುತ್ತಾರೆ. ದಿನ ರಾತ್ರಿಯೆನ್ನದೇ 24 ಗಂಟೆಗಳಲ್ಲಿ ಯಾವ ಸಮಯಕ್ಕೆ ಹೋದರೂ ಸರ್ವಿಸ್ ಲಭ್ಯ. ಇದು ರೈಲು ಬೋಗಿಯಲ್ಲಿನ ಪುಟಾಣಿ ಹೋಟೆಲ್.

ಕೆಲ ದಿನಗಳ ಹಿಂದೆಯಷ್ಟೇ ಆರಂಭವಾಗಿರುವ ‘ಬೋಗಿ ಬೋಗಿ’ ಹೋಟೆಲ್ ಇತರ ಉಪಾಹಾರ ಮಂದಿರಗಳಿಗಿಂತ ಭಿನ್ನ. ಅಕ್ಷರಶಃ ಚಲಿಸುತ್ತಿರುವ ಎಸಿ ಬೋಗಿಯಲ್ಲಿ ಕೂತು ಉಪಾಹಾರ ಅಥವಾ ಊಟ ಮಾಡುತ್ತಿರುವಂತೆ ಭಾಸವಾಗಿಸುವ ಈ ಪುಟ್ಟ ಕುಟೀರವು ರೈಲ್ವೆ ಇಲಾಖೆ ಕುರಿತ ಜ್ಞಾನವನ್ನು ಇನ್ನಷ್ಟು ವಿಸ್ತರಿಸುವಂತೆ ಮಾಡುತ್ತದೆ.

ಈ ‘ಬೋಗಿ ಬೋಗಿ‘ ಏಕೈಕ ಬೋಗಿಯಲ್ಲಿ ರೂಪಿಸಿರುವ ಹೋಟೆಲ್. ನವೀಕೃತಗೊಳಿಸಿ ಆಕರ್ಷಕವಾಗಿಸಿಸಲಾಗಿರುವ ಇದರ ಎರಡೂ ಬದಿಯಲ್ಲಿ ರೈಲ್ವೆ ಇಲಾಖೆಯ ಇತಿಹಾಸ ಪರಿಚಯಿಸುವ ಚಿತ್ರ, ದಿನಾಂಕ ಜೊತೆಗೆ ಬೆರಗು ಮೂಡಿಸುವಂತಹ ಕೆಲವಷ್ಟು ಅಂಕಿಅಂಶಗಳಿವೆ.

ಹುಬ್ಬಳ್ಳಿಯ ‘ಬೋಗಿ ಬೋಗಿ’ ರೆಸ್ಟೊರೆಂಟ್‌ನ ನೋಟ
ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ‘ಬೋಗಿ ಬೋಗಿ’ ರೆಸ್ಟೊರೆಂಟ್‌ನ ನೋಟ ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಬೋಗಿಯ ಒಳಾವರಣದಲ್ಲಿ ಏಕಕಾಲಕ್ಕೆ 50 ಮಂದಿ ಮತ್ತು ಹೊರಾವರಣದಲ್ಲಿ 50 ಮಂದಿ ಕೂರಬಹುದು. ಮಧ್ಯಾಹ್ನದ ಬಿಸಿಲಿನ ಸಹವಾಸವೇ ಬೇಡವೆಂದು ಕೆಲವರು ಎಸಿ ಬೋಗಿಯಲ್ಲಿ ಕೂತರೆ, ಸಂಜೆಯ ತಂಪಾದ ಗಾಳಿಯನ್ನು ಆಹ್ಲಾದಿಸಲೆಂದೇ ಇನ್ನು ಕೆಲವರು ಬೋಗಿಯ ಪಕ್ಕ ಹಾಕಲಾಗಿರುವ ಕುರ್ಚಿಗಳ ಮೇಲೆ ಕೂರುತ್ತಾರೆ.

ದೇಶದ ವಿವಿಧ ರಾಜ್ಯಗಳ ತಿಂಡಿ ತಿನಿಸು ಅಲ್ಲದೇ ಅಪ್ಪಟ ‘ಲೋಕಲ್’ ಆಹಾರವೂ ಇಲ್ಲಿ ಸಿಗುತ್ತದೆ. ತವಾ ಪುಲಾವ್‌, ಚಿಕನ್‌ ಲಾಲಿಪಪ್‌, ಮಟನ್‌ ಖಾದ್ಯಗಳು ಬಾಯಲ್ಲಿ ನೀರೂರಿಸಿದರೆ, ವೆಜ್‌ ಕಡಾಯಿ, ಹರಿಯಾ ರಸೂಲಿ ಪದೇಪದೇ ಬೆರಳುಗಳನ್ನು ಚಪ್ಪರಿಸುವಂತೆ ಮಾಡುತ್ತವೆ. ಅರೇಬಿಯನ್‌ ಜ್ಯೂಸ್‌ ಕುಡಿದವರ ನಾಲಗೆಗೆ ಪರಮ ಸುಖ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಬೋಗಿ’ಯಲ್ಲಿ ಹೋಟೆಲ್ ಅಸ್ತಿತ್ವಕ್ಕೆ ಬಂದಿದೆ. ‘ರೈಲ್ವೆ ಕೋಚ್ ರೆಸ್ಟೊರೆಂಟ್’ ಮತ್ತು ‘ರೆಸ್ಟೊರೆಂಟ್‌ ಆನ್‌ ವೀಲ್ಸ್‌’ ಎಂಬ ಹೆಸರೂ ಇದಕ್ಕಿದೆ. ಆದರೆ, ಹೆಸರು ಕೊಂಚ ಉದ್ದವಾಗುವ ಕಾರಣ ಬಹುತೇಕ ಮಂದಿ ಬನ್ರಿ ‘ಬೋಗಿ ಬೋಗಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ.

’ರೈಲು ನಿಲ್ದಾಣದಲ್ಲಿ ಹಲವು ಬಗೆಯ ಹೋಟೆಲ್‌ಗಳು ಇವೆ. ಕೆಲವರು ಆ ತುದಿಯಿಂದ ಈ ತುದಿಯವರೆಗೆ ಓಡುತ್ತ ಇಡ್ಲಿ, ವಡಾ, ಚಹಾ ಮುಂತಾದವನ್ನು ಮಾರುತ್ತಾರೆ. ಆದರೆ, ಸಾಕಷ್ಟು ಸಮಯವಿದ್ದರೆ ಮತ್ತು ಹೊಸದಾದ ಸ್ಥಳದಲ್ಲಿ ಆಹಾರ ಸವಿಯಬೇಕೆಂದು ಅನ್ನಿಸಿದರೆ, ಬೋಗಿ ಬೋಗಿಗೆ ಬರಬೇಕು. ಇಲ್ಲಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆ ದೀರ್ಘ ಹೊತ್ತಿನವರೆಗೆ ಹರಟೆ ಹೊಡೆಯುತ್ತ ಆಹಾರ ಸವಿಯಬಹುದು ಎಂದು ಪಿ.ಬಿ.ಶ್ರೀರಾಮ ಹೇಳುತ್ತಾರೆ. ಅವರು ಮೂರಕ್ಕೂ ಹೆಚ್ಚು ಬಾರಿ ಬಂದಿದ್ದು, ಇಲ್ಲಿನ ತಿಂಡಿ ಮತ್ತು ಊಟಕ್ಕೆ ಫಿದಾ ಆಗಿದ್ದಾರೆ.

ಬೋಗಿಯ ಒಂದು ಬದಿಯಲ್ಲಿ ಅಂಬಾರಿ ಹೊತ್ತ ಆನೆ, ಮೈಸೂರು ಅರಮನೆ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮೇಕ್‌ ಇನ್‌ ಇಂಡಿಯಾ ಲೋಗೊ ಇದ್ದು, ಸರ್ಕಾರಿ ಯೋಜನೆ ಹಾಗೂ ಕರ್ನಾಟಕದ ಸಂಸ್ಕೃತಿ ಅನಾವರಣ ಮಾಡಲಾಗಿದೆ.  ಇನ್ನೊಂದು ಬದಿಯಲ್ಲಿ ಬಿಡಿಸಿರುವ ಕುಟುಂಬದವರು, ಸ್ನೇಹಿತರು, ಪ್ರೇಮಿಗಳು ಹಾಗೂ ಮಕ್ಕಳು ಬೋಗಿಯಲ್ಲಿ ಕುಳಿತು ಊಟ ಸವಿಯುತ್ತಿರುವ ಚಿತ್ರಗಳು ಆಕರ್ಷಿಸುತ್ತವೆ.

ಹಿರಿಯರು ಮತ್ತು ಕಿರಿಯರನ್ನು ಆಕರ್ಷಿಸಲೆಂದೇ ಇಲ್ಲಿ ಸೆಲ್ಫಿ ಪಾಯಿಂಟ್‌ ಇದೆ. ಅದರಲ್ಲಿ ಹಳೇ ಕಾಲದ ಟೆಲಿಫೋನ್‌ ಇದ್ದು, ಫೋಟೊಪ್ರಿಯರನ್ನು ಸೆಳೆಯುತ್ತದೆ. ಇದರ ಪಕ್ಕದಲ್ಲೇ ‘ಜ್ಯೂಸ್‌ ಬಾಕ್ಸ್‌’ ಇದ್ದು, ಎಲ್ಲಾ ಹಣ್ಣಿನ ಜ್ಯೂಸ್‌, ಮಿಲ್ಕ್‌ಶೇಕ್‌ ಹಾಗೂ ಐಸ್‌ಕ್ರೀಮ್‌ ದೊರೆಯುತ್ತವೆ. ಇದರ ಇನ್ನೊಂದು ಬದಿಯಲ್ಲಿ ‘ಐ ಲವ್‌ ಬೋಗಿ ಬೋಗಿ’ ಎಂಬ ಬರಹ ಇದೆ.

ನಿತ್ಯ ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಟೀ, ಕಾಫಿ, ಬಾದಾಮಿ ಹಾಲು, ಕಷಾಯ, ಚಿತ್ರನ್ನ, ಉಪ್ಪಿಟ್ಟು, ಶಿರಾ ಸಿಗುತ್ತದೆ. ಸಂಜೆ 5 ರಿಂದ ಮಧ್ಯರಾತ್ರಿ 3ರವರೆಗೆ 11 ರೀತಿಯ ದೋಸೆ ಸಿಗುತ್ತದೆ. ಮಸಾಲ ಬೆಣ್ಣೆ ದೋಸೆಗೆ ಬೇಡಿಕೆ ಹೆಚ್ಚು. ಆಹಾರದ ಸಮಯ ನಸುಕಿನ 5 ಗಂಟೆಯವರೆಗೆ ವಿಸ್ತರಿಸುತ್ತದೆ. ಆ ನಂತರ ಹೊಸ ದಿನದ ಮೆನು ಮತ್ತೆ ಸೇರ್ಪಡೆಯಾಗುತ್ತದೆ ಎಂದು ಶೆಫ್ ರಾಜು ನಗು ತುಳುಕಿಸುತ್ತಾರೆ.

ಹುಬ್ಬಳ್ಳಿಯ ‘ಬೋಗಿ ಬೋಗಿ’ ರೆಸ್ಟೊರೆಂಟ್‌ನಲ್ಲಿ ಊಟ ಮಾಡುತ್ತಿರುವ ಗ್ರಾಹಕರು
ಹುಬ್ಬಳ್ಳಿಯ ‘ಬೋಗಿ ಬೋಗಿ’ ರೆಸ್ಟೊರೆಂಟ್‌ನಲ್ಲಿ ಊಟ ಮಾಡುತ್ತಿರುವ ಗ್ರಾಹಕರು

ರೈಲ್ವೆ ಇಲಾಖೆಗೆ ವಾರ್ಷಿಕ ₹ 20 ಲಕ್ಷ ಆದಾಯ

‘ಶ್ರೀ ಸಿದ್ಧಾರಾಢಸ್ವಾಮಿ ರೈಲು ನಿಲ್ದಾಣದಲ್ಲಿ ನಿತ್ಯ 37 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಪ್ರಯಾಣಿಕರಿಗೆ 24 ಗಂಟೆಯೂ ಉಪಾಹಾರ ಹಾಗೂ ಊಟದ ಸೌಲಭ್ಯ ಒದಗಿಸಬೇಕು ಎಂಬ ಉದ್ದೇಶದಿಂದ ಖಾಸಗಿ ಕಂಪನಿಯವರಿಂದ ಇ–ಟೆಂಡರ್ ಆಹ್ವಾನಿಸಿದೆವು. ಹುಬ್ಬಳ್ಳಿಯ ಮರಿಹಾ ಕಮ್ಯುನಿಕೇಷನ್‌ ಟೆಂಡರ್‌ ಪಡೆದಿದ್ದು ಅವರಿಗೆ ರೈಲ್ವೆಯ ಹಳೆಯ ಹಾಳಾದ ಬೋಗಿ ಹಾಗೂ ರೈಲ್ವೆ ಆವರಣದಲ್ಲೆ 300 ಚದರ ಮೀಟರ್‌ ಸ್ಥಳ ನೀಡಿದ್ದೇವೆ. ಇದರಿಂದ ವಾರ್ಷಿಕ ₹ 20 ಲಕ್ಷ  ರೈಲ್ವೆ ಇಲಾಖೆಗೆ ಆದಾಯ ಬರುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ವಾಣಿಜ್ಯ ವ್ಯವಸ್ಥಾಪಕಿ ಹರಿತಾ. ಹೊಸಪೇಟೆ ಬೆಳಗಾವಿಯಲ್ಲೂ ಇದೇ ರೀತಿ ರೆಸ್ಟೊರೆಂಟ್‌ ಆರಂಭಿಸುವ ಉದ್ದೇಶವಿದ್ದು ಅದಕ್ಕೆ ಪೂರಕ ಕೆಲಸಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸುತ್ತಾರೆ.

₹1.5 ಕೋಟಿಯಲ್ಲಿ ಅಭಿವೃದ್ಧಿ

ಕನ್ನಡಿಗರೇ ಆಗಿರುವ ಹುಬ್ಬಳ್ಳಿ ನಿವಾಸಿ ಉದ್ಯಮಿ ಇಸ್ರಾರ್‌ ಮಂಗಳೂರು ಅವರು ‘ಬೋಗಿ ಬೋಗಿ’ ಹೋಟೆಲ್ ಅಭಿವೃದ್ಧಿಪಡಿಸಿದ್ದಾರೆ. ‘ಸುಮಾರು ₹ 1.5 ಕೋಟಿ ವೆಚ್ಚದಲ್ಲಿ ಹೋಟೆಲ್ ವಿನ್ಯಾಸಗೊಳಿಸಿದ್ದೇನೆ. ಮುಂಬೈನಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಿ ಯಶಸ್ಸು ಕಂಡೆ. ಅದೇ ಪ್ರಯತ್ನ ಇಲ್ಲಿ ಮಾಡಿರುವೆ’ ಎಂದು ಇಸ್ರಾರ್ ಹೇಳುತ್ತಾರೆ. ’ಜುಲೈ 15ರಿಂದ ಆನ್‌ಲೈನ್‌ ಆರ್ಡರ್‌ ಸೌಲಭ್ಯ ಆರಂಭವಾಗಲಿದ್ದು ಅದಕ್ಕಾಗಿ ಪ್ರತ್ಯೇಕ ಆ್ಯಪ್‌ ಕೂಡ ಅಭಿವೃದ್ಧಿಪಡಿಸಲಾಗಿದೆ‘ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT