ಮಂಗಳವಾರ, ಮೇ 18, 2021
23 °C

ಯುಗಾದಿ ಸಂಭ್ರಮಕ್ಕೆ ಮಾವಿನ ಹಣ್ಣಿನ ಖೀರ್

ವೇದಾವತಿ ಎಚ್.ಎಸ್. Updated:

ಅಕ್ಷರ ಗಾತ್ರ : | |

Prajavani

ತೊಗರಿಬೇಳೆ ಒಬ್ಬಟ್ಟು
ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – 1 ಕಪ್ (250 ಗ್ರಾಂ), ಹಸಿ ತೆಂಗಿನ ತುರಿ – 1/2 ಕಪ್, ಬೆಲ್ಲದ ಪುಡಿ – ಒಂದೂಕಾಲು ಕಪ್, ಏಲಕ್ಕಿಪುಡಿ – 1/4 ಟೀ ಚಮಚ, ಮೈದಾಹಿಟ್ಟು – 1 ಕಪ್ (250 ಗ್ರಾಂ), ಉಪ್ಪು – 1/4 ಟೀ ಚಮಚ, ತುಪ್ಪ – 2 ಟೇಬಲ್ ಚಮಚ, ಅರಸಿನಪುಡಿ – 1/2 ಟೀ ಚಮಚ, ನೀರು – ಹದಕ್ಕೆ, ಎಣ್ಣೆ– 4 ಟೇಬಲ್ ಚಮಚ, ತುಪ್ಪ/ಎಣ್ಣೆ ಬೇಯಿಸಲು.

ತಯಾರಿಸುವ ವಿಧಾನ: ಬೇಳೆಯನ್ನು ತೊಳೆಯಿರಿ. 4 ಕಪ್ ನೀರನ್ನು ಹಾಕಿ ಬೇಯಿಸಲು ಇಡಿ. 10ರಿಂದ 15 ನಿಮಿಷಗಳ ಕಾಲ ಬೇಳೆ ಮೃದುವಾಗುವವರೆಗೆ ಬೇಯಿಸಿ. ಬೆಂದ ಬೇಳೆಯಲ್ಲಿರುವ ನೀರನ್ನು ಸೋಸಿಕೊಳ್ಳಿ. ಮಿಕ್ಸಿಯಲ್ಲಿ ಬೇಳೆ, ತೆಂಗಿನತುರಿ ಮತ್ತು ಏಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬಾಣಲೆಗೆ ಹಾಕಿ. ಬೆಲ್ಲದ ಪುಡಿಯನ್ನು ಸೇರಿಸಿ. ಬೆಲ್ಲವನ್ನು ಬೇಕಿದ್ದರೆ 1/4 ಕಪ್ ನೀರನ್ನು ಹಾಕಿ ಕರಗಿಸಿ ಸೋಸಿ ಹಾಕಿ. ಬೆಲ್ಲದಲ್ಲಿ ಕಸ, ಮಣ್ಣು ಇದ್ದರೆ ಹೋಗುತ್ತದೆ. ಮಧ್ಯಮ ಉರಿಯಲ್ಲಿ ಉಂಡೆ ಪಾಕ ಬರುವರೆಗೆ ಮಗುಚಿ. ನಂತರ ಆರಲು ಬಿಡಿ.

ಕಣಕಕ್ಕೆ: ಪಾತ್ರೆಯಲ್ಲಿ ಉಪ್ಪು, 1 ಟೇಬಲ್ ಚಮಚ ತುಪ್ಪ, ಅರಸಿನ ಪುಡಿ, ಮೈದಾಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಹಿಟ್ಟನ್ನು ಮೃದುವಾಗಿ ನಾದಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತಲೂ ಮೃದುವಾಗಿರಲಿ. ತಯಾರಿಸಿದ ಕಣಕದ ಹಿಟ್ಟನ್ನು ಒಂದು ಗಂಟೆ ಕಾಲ ಮುಚ್ಚಿಡಿ. ನಂತರ ಹಿಟ್ಟನ್ನು ಮೃದುವಾಗಿ ಹಿಗ್ಗುವಂತೆ ನಾದಿಕೊಳ್ಳಿ. ಹಿಟ್ಟಿನ ಮೇಲೆ ಎಣ್ಣೆಯನ್ನು ಹಾಕಿಡಿ. ಬೇಳೆಯ ಹೂರಣವನ್ನು ನಿಮಗೆ ಬೇಕಾದ ಗಾತ್ರಕ್ಕೆ ಉಂಡೆಗಳನ್ನು ಕಟ್ಟಿಕೊಳ್ಳಿ. ಹೂರಣದ ಗಾತ್ರದಷ್ಟೇ ಕಣಕದ ಹಿಟ್ಟನ್ನು ತೆಗೆದುಕೊಳ್ಳಿ. ಕಣಕವನ್ನು ಚಪ್ಪಟೆಯಾಗಿ ಮಾಡಿ ಅದರಲ್ಲಿ ಹೂರಣದ ಉಂಡೆಯನ್ನು ಇಟ್ಟು ಗಟ್ಟಿಯಾಗಿ ಮುಚ್ಚಿ. ಈ ಉಂಡೆಗಳನ್ನು ಬಾಳೆಎಲೆ ಅಥವಾ ಬೈಡಿಂಗ್ ಶೀಟ್‌ನಲ್ಲಿ ತೆಳುವಾಗಿ ಲಟ್ಟಿಸಿಕೊಳ್ಳಿ. ತವಕ್ಕೆ ತುಪ್ಪ/ಎಣ್ಣೆಯನ್ನು ಸವರಿ ಲಟ್ಟಿಸಿಕೊಂಡ ಒಬ್ಬಟ್ಟನ್ನು ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಬೇಯಿಸಿ. ರುಚಿಕರವಾದ ಒಬ್ಬಟ್ಟು ಸವಿಯಲು ಸಿದ್ಧ.

ಮಾವಿನ ಹಣ್ಣಿನ ಖೀರ್
ಬೇಕಾಗುವ ಸಾಮಗ್ರಿಗಳು: ಸಿಹಿ ಮಾವಿನ ಹಣ್ಣಿನ ಗಟ್ಟಿಯಾದ ರಸ – 1 ಕಪ್, ಚಿಕ್ಕದಾಗಿ ಕತ್ತರಿಸಿದ ಮಾವಿನಹಣ್ಣಿನ ತುಂಡುಗಳು – 1 ಕಪ್, ಹಾಲು – 1 ಲೀಟರ್, ತುಪ್ಪ – 1 ಟೇಬಲ್ ಚಮಚ, ಏಲಕ್ಕಿ ಪುಡಿ – 1/2 ಟೀ ಚಮಚ, ಶ್ಯಾವಿಗೆ – 1 ಕಪ್, ಸಕ್ಕರೆ – 1/2 ಕಪ್, ಕೇಸರಿ ದಳಗಳು – 10-15 (ಕೇಸರಿ ದಳವನ್ನು 2 ಟೇಬಲ್ ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ). ಬಾದಾಮಿ, ಪಿಸ್ತಾ ಮತ್ತು ಗೋಡಂಬಿ ಚೂರುಗಳು ಅಲಂಕಾರಕ್ಕೆ ಸ್ವಲ್ಪ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಶ್ಯಾವಿಗೆಯನ್ನು ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಹಾಲನ್ನು ಕುದಿಸಿ ಅದಕ್ಕೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗಿದ ನಂತರ ಹುರಿದುಕೊಂಡ ಶ್ಯಾವಿಗೆಯನ್ನು ಹಾಕಿ. ಮೆತ್ತಗಾಗುವವರೆಗೆ ಬೇಯಿಸಿ. ನಂತರ ನೆನೆಸಿಟ್ಟ ಕೇಸರಿಯನ್ನು ಹಾಕಿ. ಏಲಕ್ಕಿಪುಡಿಯನ್ನು ಸೇರಿಸಿ. ಶ್ಯಾವಿಗೆ ಹಾಲಿನೊಂದಿಗೆ ಚೆನ್ನಾಗಿ ಬೆಂದು ಗಟ್ಟಿಯಾಗುತ್ತಾ ಬಂದಾಗ ಒಲೆಯನ್ನು ಅರಿಸಿ. ಪೂರ್ತಿ ಆರಲು ಬಿಡಿ. ನಂತರ ಗಟ್ಟಿಯಾದ ಮಾವಿನ ಹಣ್ಣಿನ ರಸವನ್ನು ಸೇರಿಸಿ ಮಿಶ್ರಣ ಮಾಡಿ. ತಯಾರಿಸಿದ ಪಾಯಸಕ್ಕೆ ಮಾವಿನ ಹಣ್ಣಿನ ತುಂಡುಗಳು, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಅಲಂಕರಿಸಿ. ರುಚಿಕರವಾದ ಮಾವಿನ ಹಣ್ಣಿನ ಪಾಯಸವನ್ನು ಬಿಸಿಯಾಗಿ ಅಥವಾ ಫ್ರಿಜ್‌ನಲ್ಲಿ ತಣ್ಣಗೆ ಮಾಡಿ ಸವಿಯಲು ರುಚಿಯಾಗಿರುತ್ತದೆ.

ಕಡಲೆಹಿಟ್ಟು ಮಿಲ್ಕ್ ಪೌಡರ್ ಬರ್ಫಿ
ಬೇಕಾಗುವ ಸಾಮಗ್ರಿಗಳು: ತುಪ್ಪ – 1/2 ಕಪ್, ಕಡಲೆಹಿಟ್ಟು – 1 ಕಪ್‌, ಮಿಲ್ಕ್ ಪೌಡರ್ – 3/4 ಕಪ್, ಸಕ್ಕರೆ –1 ಕಪ್, ನೀರು – 1/2 ಕಪ್, ಏಲಕ್ಕಿ ಪುಡಿ –1/4 ಟೀ ಚಮಚ, ಅಲಂಕರಿಸಲು ಪಿಸ್ತಾ, ಬಾದಾಮಿ ಚೂರುಗಳು

ತಯಾರಿಸುವ ವಿಧಾನ: ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ತುಪ್ಪಕ್ಕೆ ಕಡಲೆಹಿಟ್ಟನ್ನು ಹಾಕಿ 3 ರಿಂದ 4 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ. ನಂತರ ಒಲೆಯನ್ನು ಆರಿಸಿ. ಕೂಡಲೆ ಮಿಲ್ಕ್ ಪೌಡ್‌ ಅನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಕ್ಕದಲ್ಲಿಡಿ. ಬಾಣಲೆಗೆ ಸಕ್ಕರೆ ಮತ್ತು ನೀರನ್ನು ಹಾಕಿ. ಒಂದೆಳೆ ಪಾಕ ತಯಾರಿಸಿಕೊಳ್ಳಿ. ಸಕ್ಕರೆ ಪಾಕಕ್ಕೆ ಕಡಲೆಹಿಟ್ಟು ಮತ್ತು ಮಿಲ್ಕ್ ಪೌಡರ್‌ನ ಮಿಶ್ರಣವನ್ನು ಹಾಕಿ. ಗಂಟಾಗದ ರೀತಿಯಲ್ಲಿ ಮಗುಚಿ. ಏಲಕ್ಕಿ ಪುಡಿಯನ್ನು ಸೇರಿಸಿ. ಈ ಮಿಶ್ರಣವು ಗಟ್ಟಿಯಾಗಿ ಬಾಣಲೆಯನ್ನು ಬಿಟ್ಟು ಬರುವಾಗ ಒಲೆಯನ್ನು ಆರಿಸಿ. ತಯಾರಿಸಿದ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಸಮತಟ್ಟಾಗಿ ಮಾಡಿ. ಅದರ ಮೇಲೆ ಪಿಸ್ತಾ, ಬಾದಾಮಿ ಚೂರುಗಳನ್ನು ಹಾಕಿ ಅಲಂಕರಿಸಿ. 1/4 ಗಂಟೆ ಬಿಟ್ಟು ಕತ್ತರಿಸಿ. ರುಚಿಕರವಾದ ಬೇಸನ್ ಮಿಲ್ಕ್ ಬರ್ಫಿ ಸವಿಯಲು ಸಿದ್ಧ.

ಮಟನ್ ಕರಿ
ಬೇಕಾಗುವ ಸಾಮಗ್ರಿಗಳು: 
ಈರುಳ್ಳಿ – 2 ದೊಡ್ಡದು ಹೆಚ್ಚಿದ್ದು, ಟೊಮೆಟೊ – 2 ದೊಡ್ಡದು ಹೆಚ್ಚಿದ್ದು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3 ಚಮಚ, ಗರಂಮಸಾಲೆ – 2 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಜೀರಿಗೆ ಪುಡಿ – 2 ಚಮಚ, ಅರಿಸಿನ – ಅರ್ಧ ಚಮಚ, ಖಾರದಪುಡಿ – ಅರ್ಧ ಚಮಚ, ಕುರಿ ಮಾಂಸ – ಅರ್ಧ ಕೆ.ಜಿ, ಉಪ್ಪು – ರುಚಿಗೆ, ಎಣ್ಣೆ– ಸ್ವಲ್ಪ, ಕೊತ್ತಂಬರಿ ಸೊಪ್ಪು – ಹೆಚ್ಚಿದ್ದು 2 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಈರುಳ್ಳಿಯನ್ನು ತೆಗೆದಿರಿಸಿ. ತಣ್ಣದಾಗ ಮೇಲೆ ಮಿಕ್ಸಿಗೆ ಈರುಳ್ಳಿ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ತೆಗೆದಿರಿಸಿ ಮಿಕ್ಸಿ ಜಾರಿಗೆ ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ. ಮತ್ತೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್ ಹಾಕಿ 2 ರಿಂದ 3 ನಿಮಿಷ ಹುರಿದುಕೊಳ್ಳಿ.

ಅದಕ್ಕೆ ಟೊಮೆಟೊ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಸಿನ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕುದಿಸಿ. ಕುರಿ ಮಾಂಸವನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆ ಹೋಳುಗಳಿಗೆ ಹಿಡಿಯುವವರೆಗೆ ಕೈಯಾಡಿಸಿ. ನಂತರ ಅರ್ಧ ಕಪ್ ನೀರು ಹಾಕಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಕುರಿ ಮಾಂಸ ಬೇಯುವವರೆಗೆ ಬೇಯಿಸಿ. ಚೆನ್ನಾಗಿ ಕುದಿದು, ಮಾಂಸ ಬೆಂದು ಮಂದ ಆಗುವವರೆಗೂ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು