ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಿಮೊ ಕಾಂಡದ ಅಂತಿಮ ಅಧ್ಯಾಯ

ಕೈ ಹಿಡಿದಳು ಗಾಯತ್ರಿ–12(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)
Last Updated 28 ಫೆಬ್ರುವರಿ 2021, 10:26 IST
ಅಕ್ಷರ ಗಾತ್ರ

ನಾಲ್ಕು ಕಿಮೊ ಮುಗಿದ ನಂತರ ಮತ್ತೆ ನಾಲ್ಕು ಕಿಮೊ ಇಂಜೆಕ್ಷನ್‌ಗೆ ಔಷಧ ಬದಲಾಯಿತು. ಆ ಇಂಜೆಕ್ಷನ್‌ ನನ್ನ ನರಗಳನ್ನೇ ಸುಟ್ಟು ಬಿಟ್ಟವು. ಪ್ಲಾಸ್ಟಿಕ್‌ ಕೊಳವೆಯೊಳಗೆ ಕಬ್ಬಿಣದ ಕುದಿದ್ರವ ಮುನ್ನುಗ್ಗಿ ಸಾಗಿದಂತೆ ಕಿಮೊ ಹಾದು ಹೋಗುವಾಗ ನರಗಳನ್ನೇ ಸುಡುತ್ತ ಸಾಗಿದವು. ನರಗಳು ಅಲ್ಲಲ್ಲೇ ಗಂಟು ಗಂಟಾದವು. ಅಬ್ಬಾ... ಆ ಯಾತನೆ ಹೇಗಿತ್ತೆಂದರೆ ನರಕವೆಂದರೆ ಇದೇ ಇರಬಹುದು ಅನಿಸಿತು. ಇಂಥ ಭಯಂಕರ ಅನುಭವವನ್ನು ಎರಡು ವಾರದ ಓದಿದ್ದಿರಿ.

ಮಾರ್ಚ್‌ 29: ಯುಗಾದಿ ಹಬ್ಬ. ಮನದೊಳಗಿನ ಬೇಗುದಿ ಜೊತೆ ಆರ್ಥಿಕ ಸಂಕಷ್ಟವೂ ಸೇರಿಕೊಂಡಿತು. ಆಗಾಗ ಊರಿನಿಂದ ಸಂಬಂಧಿಗಳು ಬಂದು ಆರೋಗ್ಯ ವಿಚಾರಿಸಿ ಹೋಗುತ್ತಿದ್ದರು. ದೇಹದೊಳಗಿನ ತೀವ್ರ ಉಷ್ಣತೆಗೆ ಜೊತೆಗೆ ವಾತಾವರಣದ ಪ್ರಖರ ಬಿಸಿಲಿನ ಬೇಗೆ ಮೈಮನವನ್ನು ಹೈರಾಣಾಗಿಸಿತ್ತು. 15 ದಿನಗಳಿಂದ ಕಾಯ್ತಿದ್ದೆ. ಒಂದಾದರೂ ಮಳೆ ಬಂತಾ ಎಂದು. ಅಂತೂ ನನ್ನ ಕರೆ ಆ ವರುಣ ದೇವನಿಗೆ ಕೇಳಿಸಿತೋ ಏನೋ? ಏಪ್ರಿಲ್‌ 1ರಂದು ಒಂದಿಪ್ಪತ್ತು ನಿಮಿಷ ಜೋರಾಗಿ ಮಳೆ ಸುರಿಯಿತು. ಇಳೆ ತಂಪಾಯಿತು. ರಾತ್ರಿವರೆಗೂ ನಳದಲ್ಲಿ ಬಿಸಿಯಾಗಿಯೇ ಬರುತ್ತಿದ್ದ ನೀರು ಕೂಲ್‌ ಆಗಿ ಬರ್ತಿತ್ತು. ಅಬ್ಬಾ... ನನಗಂತೂ ಆದ ಖುಷಿಗೆ ಪಾರವೇ ಇಲ್ಲ. ಗ್ಯಾಲರಿಯಲ್ಲಿ ನಿಂತು ಮಳೆ ಫೋಟೊ ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದೆ. ಯಾರು ಲೈಕ್‌ ಮಾಡದೆ ಇರ್ತಾರೆ ಹೇಳಿ. ಅದೂ ಅಪರೂಪದ ಮಳೆರಾಯ ಬಂದಾಗ. ನಮ್ಮ ಕಡೆನೂ ಸ್ಪಲ್ಪ ಮಳೆ ಕಳಿಸಿಕೊಡಿ ಎಂಬ ಕಾಮೆಂಟ್‌ಗಳೂ ಬಂದವು. ಬಳಲಿಕೆ ನಿಂತರೂ ಕೈಯಲ್ಲಿನ ನರದ ನೋವು ಹಾಗೇ ಇತ್ತು. ಜೊತೆಗೆ ಒಸಡು ನೋವೂ ಕಾಣಿಸಿಕೊಂಡಿತು.

ಏ.5: ಇಂಥ ಸ್ಥಿತಿಯಲ್ಲೇ ಬ್ಯಾಂಕಿಗೆ ಹೋಗಿ ಬಂದೆ. ಕೆಲವು ಜವಾಬ್ದಾರಿಗಳನ್ನೂ ನಾನೇ ನಿರ್ವಹಿಸಬೇಕಿತ್ತು. ಹೌಸಿಂಗ್‌ ಲೋನ್‌ ಅಪ್‌ಡೇಟ್‌ ತಂದೆ. ಆಫೀಸ್‌ಗೆ ಅದರ ದಾಖಲೆ ನೀಡಬೇಕಿತ್ತು. ಹಾಗೇ ಆಫೀಸಿಗೂ ಹೋಗಿ ಬಂದೆ. ಮಾರನೇ ದಿನ ದಿಗಂತನ ಸ್ಕೂಲ್‌ಗೆ ಹೋಗಿ, ಅವನ ಪ್ರೋಗ್ರೆಸ್‌ ಕಾರ್ಡ್‌ ತಂದೆ. 1st ಸ್ಟ್ಯಾಂಡರ್ಡ್‌ಗೆ ಅಪ್ಲಿಕೇಷನ್‌ ತುಂಬಿ ಬಂದೆ. ಈ ನಡುವೆ ಕೇಂದ್ರೀಯ ವಿದ್ಯಾಲಯಕ್ಕೆ ದಿಗಂತನ ಅಡ್ಮಿಷನ್‌ ಸಂಬಂಧ ಸಾಕಷ್ಟು ಪ್ರಯತ್ನ ಪಟ್ಟೆ. ಕಡೆಗೂ ಅದು ಸಿಗಲೇ ಇಲ್ಲ. ನಿರಾಸೆಯಾಯಿತು. ಈ ನಡುವೆ ಹಣದ ಅಡಚಣೆ ಹೆಚ್ಚಿತು. ಎಲ್ಲೆಲ್ಲಿ ಸಿಗುತ್ತೋ ಅಲ್ಲೆಲ್ಲ ಮಾಡಿಕೊಂಡ ಸಾಲದ ಮೊತ್ತವೂ ಕೈಯಲ್ಲಿ ಕರಗಿತ್ತು. ಸಂಬಳ ರಹಿತ ರಜೆಯ ಬಿಸಿ ಅದಾಗಲೇ ನನ್ನ ಕಾಯಿಸಿತ್ತು. ಮನೆ ಸಾಲ, ಮನೆ ಖರ್ಚು, ನನ್ನ ಚಿಕಿತ್ಸೆ ಖರ್ಚು, ದಿಗಂತನ ಸ್ಕೂಲ್‌ ಫೀ, ಅದು ಇದು ಅಂತ ಒಮ್ಮೆಲೆ ನುಗ್ಗಿ ಬಂದವು. ಕಿಮೊ ಯಾವಾಗ ಮುಗಿಯುತ್ತೋ, ಸರ್ಜರಿ ಯಾವಾಗ ಮುಗಿಯುತ್ತೋ ಅಂತ ಚಾತಕ ಪಕ್ಷಿಯಂತೆ ಕಾದೆ. ಇವೆರಡು ಹಂತ ಮುಗಿದ ಮೇಲೆ ರೆಡಿಯೇಷನ್‌ ಅವಧಿಯಲ್ಲಿ ಆಫೀಸ್‌ಗೆ ಹೋದರೆ ತಿಂಗಳ ಸಂಬಳವಾದರೂ ಕೈಸೇರುತ್ತಲ್ಲ; ಹೇಗೋ ಮ್ಯಾನೇಜ್‌ ಮಾಡಬಹುದು ಎಂಬ ಯೋಚನೆ. ಆದರೆ ಅಲ್ಲಿವರೆಗೂ ದಿನ ದೂಡಬೇಕಲ್ಲ. ಹೇಗೋ ನಿರ್ವಹಣೆ ಮಾಡಿದೆ. ಬದುಕಿನಲ್ಲಿ ಇಂಥ ವಿಷಮ ಪರಿಸ್ಥಿತಿಗಳು ನಮಗೆ ಕಲಿಸೋ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸದು. ಕಷ್ಟದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವುದು ಕೂಡ ಒಂದು ಕೌಶಲವೇ. ಆದರೆ ಇಂಥ ಸಂದರ್ಭದಲ್ಲಿ ನಮ್ಮಲ್ಲಿನ ತಾಳ್ಮೆ ಭಾವ ಬಹು ಮುಖ್ಯ. ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ, ತಾಳ್ಮೆಯಿಂದ ನಮ್ಮೊಳಗಿನ ಒತ್ತಡಕ್ಕೆ ಹದ ಹಾಕಬಹುದು. ಜೊತೆಗೆ ಕಷ್ಟಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂಬ ಮಾತನ್ನು ನನ್ನಲ್ಲಿ ನಾನು ಕಂಡುಕೊಂಡೆ.

ಏಪ್ರಿಲ್‌ 10ಕ್ಕೆ 7ನೇ ಕಿಮೊ. ಈ ಬಾರಿ ಇಂಜೆಕ್ಷನ್‌ಗೆ ಹೋಗುವಾಗ ಅಷ್ಟೊಂದು ನೋವೆನಿಸಲಿಲ್ಲ. 5 ಗಂಟೆಗೆ ಕಿಮೊ ಇಂಜೆಕ್ಷನ್ ಮುಗಿಯಿತು. ಡಾ.ಪ್ರಸಾದ ಅವರ ಹತ್ತಿರ ಮುಟ್ಟಿನ ಬಗ್ಗೆ ಪ್ರಶ್ನೆಯಿಟ್ಟೆ. ಕಿಮೊ ನಡೆಯುವಾಗ ಮುಟ್ಟು ಆದರೆ ಸಮಸ್ಯೆ ಏನಾದರೂ ಇದೆಯಾ ಎಂದು. ‘ಸಾಮಾನ್ಯವಾಗಿ ಮುಟ್ಟು 45–50 ವರ್ಷದ ಅವಧಿಯಲ್ಲಿ ನಿಲ್ಲುತ್ತದೆ. ನಿಮಗೆ 10 ವರ್ಷ ಮೊದಲೇ ನಿಂತಿತು ಅಂದ್ಕೊಳ್ಳಿ ಅಷ್ಟೆ. ಅದರಿಂದ ತೊಂದರೆ ಏನಿಲ್ಲ. ಮುಟ್ಟು ನಿಂತ ನಂತರ ಮಹಿಳೆಯರು ಎದುರಿಸಬೇಕಾದ ಸಾಮಾನ್ಯ ಸಮಸ್ಯೆಯೆಂದರೆ ಎಲುಬಿನ ಸಾಂದ್ರತೆ ಕಡಿಮೆಯಾಗುತ್ತದೆ’ ಅಂದ್ರು.

ಏ.14ರಂದು ತುಂಬಾ ಕಷ್ಟವೆನಿಸಿತು. ಕಿಮೊ ತನ್ನ ತಾಂಡವ ರೂಪವನ್ನು ತೋರಲು ಆರಂಭಿಸಿತ್ತು. ಹೊರಗಿನ ಬಿಸಿಲು, ದೇಹ, ಮನದೊಳಗಿನ ಬೇಗುದಿ ಎಲ್ಲ ಸೇರಿ ಮತ್ತದೇ ಯಾತನೆ. ಅಮ್ಮ ಬಾರ್ಲಿ ನೀರು ಮಾಡಿ ಕೊಡೋಕೆ ಶುರು ಮಾಡಿದ್ಲು. ಏನೇ ಮಾಡಿದರೂ ಮನದೊಳಗಿನ ಹೊಯ್ದಾಟಕ್ಕೆ ಮದ್ದು ಅರೆಯುವುದು ತುಸು ಕಷ್ಟವೇ. ಇಂಥ ಸಮಯದಲ್ಲಿ ನಮಗೆ ಒಂದಷ್ಟು ಸಲಹೆ ನೀಡುವವರು ಬಹುಬೇಗೆ ಆಪ್ತವೆನಿಸಿಬಿಡುತ್ತಾರೆ. ಅಂಥ ಸಂಬಂಧಿ, ಸ್ನೇಹಿತರು, ಹಿತೈಷಿಗಳು ನನ್ನ ಪಾಲಿಗೆ ಸಾಕಷ್ಟು ಮಂದಿಯಿದ್ದರು. ಯಶೋದಾ ನಾಗರಾಜ (ನಾಗರಾಜ್‌ ಸರ್‌ ಮನೆಯವರು) ಅವರು ಆಗಾಗ ಫೋನ್‌ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತ, ಒಂದಷ್ಟು ಸಲಹೆಗಳನ್ನು ಕೊಡುತ್ತಿದ್ದರು. ಅವರ ಮಾತಿನಿಂದ ಸಾಕಷ್ಟು ನಿರಾಳ ಭಾವ ಹೊಂದಿದ್ದೆ. ಅವರ ಮಾತುಗಳು ಅಷ್ಟು ಆಪ್ತವೆನಿಸಲು ಕಾರಣವೂ ಇದೆ. ಅವರ ತಂಗಿ ಕೂಡ ಕ್ಯಾನ್ಸರ್‌ ಅನುಭವಿಸಿದವರು. ಆದ್ದರಿಂದ ಅಗ್ದಿ ಹತ್ತಿರದಿಂದ ಕ್ಯಾನ್ಸರ್‌ ತಂದೊಡ್ಡುವ ಕಷ್ಟಗಳನ್ನು ಕಂಡವರು. ಕಿಮೊ ಸಮಯದಲ್ಲಿ ಏನೆಲ್ಲ ತಿನ್ನಬೇಕು, ತಿನ್ನಬಾರದು, ಯಾವ ಥರದಲ್ಲಿ ಎಚ್ಚರ ವಹಿಸಬೇಕು ಎಂಬೆಲ್ಲ ಮಾತುಗಳನ್ನು ಹೇಳುತ್ತಿದ್ದರು. ನನಗವರು ಅಕ್ಕನಂತೆ ಕಂಡರು. ನನ್ನನ್ನು ಮಗಳೇ ಅಂತಾನೆ ಕರೆಯುವ ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಹೆಗಡೆ ಅವರಿಗೆ ನನಗೆ ಕ್ಯಾನ್ಸರ್ ಆಗಿದ್ದು ತಡವಾಗಿ ತಿಳಿಯಿತು. ಆದರೆ ಸುದ್ದಿ ತಿಳಿದ ಕೂಡಲೇ ಮೊದಲು ಫೋನ್‌ ಮಾಡಿ ಆರೋಗ್ಯ ವಿಚಾರಿಸಿದರು. ಗಟ್ಟಿಯಾಗಿರು, ಯಾವುದಕ್ಕೂ ಭಯಪಡಬೇಡ. ಏನೇ ಸಹಾಯ ಬೇಕಿದ್ರು ಕೇಳು ಎಂದು ಹೇಳಿದರು. ಅವರ ಮಾತುಗಳು ಕೂಡ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಇದೇ ಸಂದರ್ಭದಲ್ಲಿ ಹೆಗಡೆ ಸರ್‌ ಮನೆಯವರಿಗೂ ಕೂಡ ಆರೋಗ್ಯ ಸಮಸ್ಯೆ ಕಾಡಿದ್ದರಿಂದ ಅವರಿಗೆ ಸರ್ಜರಿ, ಕಿಮೊ, ರೆಡಿಯೇಷನ್‌ ಅನ್ನೋ ಗಡಿಬಿಡಿಯಲ್ಲಿ ಇದ್ದರು. ಅದು ಕೂಡ ಬೆಂಗಳೂರಿನಲ್ಲಿ. ಅವರ ಕಷ್ಟವೇ ಅಷ್ಟಿರಬೇಕಾದರೆ, ನನ್ನ ಕಷ್ಟಕ್ಕೆ ಧೈರ್ಯವಾಗಿ ಬಂದಿದ್ದರು.

ಇವರೆಲ್ಲರ ಮಾತುಗಳು ನನ್ನೊಳಗಿನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದರೂ, ದೈಹಿಕ ನೋವನ್ನು ಮಾತ್ರ ನಾನು ಅನುಭವಿಸದೇ ಇರಲು ಆಗಲಿಲ್ಲ. ನರಗಳ ನೋವು ಇನ್ನಷ್ಟು ಹಿಂಸೆ ಎನಿಸಿತು. ಕೈಯನ್ನು ನೇರವಾಗಿಸಿದರೆ ಒಳಗಿನ ನರಗಳು ಎಳೆದಿಟ್ಟ ಅನುಭವ. ಆಗ ಕಾಡುವ ನೋವು ಹೇಳಲಸಾಧ್ಯ. ಮೂರು ಇಂಜೆಕ್ಷನ್‌ ಕೊಟ್ಟ ಜಾಗದಲ್ಲಿ ಒಳಗೊಳಗೆ ನರಗಳು ಬೆಂದು, ಸುಟ್ಟಂತೆ ಆಗಿ ಕಪ್ಪಿಟ್ಟವು. ಹಸ್ತದ ಚರ್ಮ ಕೂಡ ಸುಟ್ಟು ಕಿತ್ತು ಬರುವಂತಾಯಿತು. ನರಗಳ ಮೂಲಕ ಹೇಗೆ ಔಷಧ ಹಾದು ಹೋಗಿದೆಯೋ ಅಲ್ಲೆಲ್ಲ ನರಗಳು ಸುಟ್ಟಂತಾದವು. ಅಲ್ಲಲ್ಲೇ ಗಟ್ಟಿಯಾದವು. ಕೈ ಎತ್ತಲು ಕಷ್ಟ, ಬಟ್ಟೆ ಧರಿಸಲು, ತೆಗೆಯಲು ಕೂಡ ಕೈ ಎತ್ತದಂತಾಯಿತು. ಎಷ್ಟೇ ಕಷ್ಟವಾದರೂ ಬಿಡದೇ ದಿನಕ್ಕೆ ಮೂರು ಬಾರಿ ಶ್ರದ್ಧೆ, ವಿಶ್ವಾಸದಿಂದ ನಡೆಸಿಕೊಂಡು ಬರುತ್ತಿದ್ದ ಗಾಯತ್ರಿ ಮುದ್ರೆ ಮಾಡಲು ಅಸಾಧ್ಯವೆಂಬಂತಾಯಿತು. ಎಡಗೈಯ ಬೆರಳುಗಳನ್ನು ತುಸು ಅಲುಗಾಡಿಸಲು ಆಗದಂತಾದಾಗ ಇನ್ನು ಕೆಲವು ಕ್ಲಿಷ್ಟಕರ ಮುದ್ರೆಗಳ ಮಾಡುವ ಮಾತು ದೂರವೇ ಉಳಿಯಿತು.

ಏ.16ರಂದು ಒಂಥರಾ ಸುಸ್ತು. ಅದು ಸುಸ್ತೋ; ಖಿನ್ನತೆಯೋ ಏನೆಂದು ತಿಳಿಯದಾಯಿತು. ಖಿನ್ನತೆಗೆ ಮನ ಜಾರದಂತೆ ನಾನು ಕಂಡುಕೊಂಡ ಮಾರ್ಗವೆಂದರೆ ಓದು, ಧ್ಯಾನ, ಶ್ಲೋಕ ಪಠಣ, ಯೋಗ, ಬರವಣಿಗೆ. ಬಹುತೇಕ ಎಲ್ಲ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳಲ್ಲಿ ದೇಹಕ್ಕಷ್ಟೆ ಚಿಕಿತ್ಸೆ ನೀಡುತ್ತಾರೆ. ಆದರೆ ಮನಸ್ಸಿಗೂ ಬಲ ತುಂಬಲು, ಮನೋಬಲ ಹೆಚ್ಚಿಸುವ ಒಂದಷ್ಟು ಮಾತುಗಳು ಆಪ್ತ ಸಮಾಲೋಚನೆಯ ಮೂಲಕ ನೀಡಿದರೆ ಅದು ನಿಜಕ್ಕೂ ರೋಗಿ ಪಾಲಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಆದರೆ ಅಂಥ ಕೆಲಸ ಆಗುತ್ತಿಲ್ಲವೆಂಬುದು ಬೇಸರವೆನಿಸಿತು. ಕಿಮೊಥೆರಪಿಯಿಂದ ಎದುರಾಗುವ ಅಡ್ಡಪರಿಣಾಮಗಳನ್ನಷ್ಟೇ ಹೇಳಿ ವೈದ್ಯರು ಸುಮ್ಮಗಾಗುತ್ತಾರೆ. ಆದರೆ ಅನುಭವಿಸುವ ಯಾತನೆಯನ್ನು ಎದುರಿಸಲು ರೋಗಿಯ ಮನಸ್ಸಿಗೆ ಬಲ ತುಂಬುವ ಕೆಲಸವಾದಲ್ಲಿ, ಖಿನ್ನತೆಗೆ ಜಾರುವುದನ್ನು ತಡೆಯಲು ಸಾಧ್ಯವಿದೆ.

ಅಂತೂ ಇಂತೂ ಕಿಮೊ ಅಧ್ಯಾಯಕ್ಕೆ ಫುಲ್‌ಪಾಯಿಂಟ್‌ ಇಡುವ ದಿನ ಬಂದೇ ಬಿಟ್ಟತು. ಮನದಲ್ಲಿ ಒಳಗೊಳಗೆ ಖುಷಿಯೋ ಖುಷಿ. ಒಂದು ಕಿಮೊ ತಗೊಂಡರೆ ಆಯಿತಲ್ಲ; ಇನ್ನು ಈ ಜನ್ಮದಲ್ಲಿ ಕಿಮೊ ಉಸಾಬರಿ ಬೇಡ ಎಂದು ಅಂದೇ ಮನಸ್ಸು ನಿರ್ಧರಿಸಿತು. ಆದರೂ ಡಾಕ್ಟರ್‌ ಪ್ಲಾನ್‌ ಪ್ರಕಾರ ಸರ್ಜರಿ, ರೆಡಿಯೇಷನ್‌ ಆದಮೇಲೆ ಮತ್ತೂ ಒಂದು ವರ್ಷದವರೆಗೆ ನಿರಂತರ ಇಂಜೆಕ್ಷನ್‌ (ವಿವಿಟ್ರ ಇಂಜೆಕ್ಷನ್‌) ತಗೋಬೇಕಿತ್ತು. ನನ್ನ ಬಯಾಸ್ಪಿ ರಿಪೋರ್ಟ್‌ ಪ್ರಕಾರ ಕ್ಯಾನ್ಸರ್‌ ಮರುಕಳಿಸುವ ಸಾಧ್ಯತೆ ಶೇ 66ರಷ್ಟಿತ್ತು. ಆದರೆ ಮುಂದೆ ಒಂದು ವರ್ಷ ಪೂರ್ತಿ ಇಂಜೆಕ್ಷನ್‌ ತೆಗೆದುಕೊಳ್ಳಲು ನನ್ನ ಎಡಗೈ ಸಹಕರಿಸಬೇಕಲ್ಲ. ಕೈಗಳ ನರಗಳು ಅದಾಗಲೇ ಸುಟ್ಟು ಸುಣ್ಣವಾಗಿದ್ದವು. ಅವು ತುಂಬಾ ಸೂಕ್ಷ್ಮ ಇರೋದ್ರಿಂದ ಪೋರ್ಟ್‌ ಹಾಕಿಸಿಕೊಳ್ಳುವುದು ಸೂಕ್ತ ಎಂದು ಡಾ.ಪ್ರಸಾದ್‌ ಗುನಾರಿ ಸಲಹೆ ನೀಡಿದ್ದರು. ಏಕೆಂದರೆ ಉಳಿದ ಒಂದು ಕಿಮೊ ಹೊರತಾಗಿ ಇನ್ನೂ 18 ಇಂಜೆಕ್ಷನ್‌ ಅನ್ನು ನಾನು ತಗೊಳ್ಳಬೇಕಿತ್ತು. ಪೋರ್ಟ್‌ ಅನ್ನು ಸರ್ಜರಿ ವೇಳೆ ಎದೆಯ ಮೇಲೆ ಚರ್ಮದ ಒಳಗೆ ಅಳವಡಿಸಲಾಗುವುದು ಎಂದು ಅವರು ವಿವರಿಸಿದ್ದರು.

ಆ.18 ಇಂಜೆಕ್ಷನ್‌ ಕಥೆ ಒತ್ತಟ್ಟಿಗಿರಲಿ. ಈಗ ಉಳಿದಿರೋ ಒಂದು ಕಿಮೊ ತೆಗೆದುಕೊಳ್ಳುವುದೇ ನನ್ನ ಮುಂದಿರುವ ದೊಡ್ಡ ಸವಾಲೆನಿಸಿತು. ಮೂರು ಕಿಮೊ ಪ್ರವೇಶಿಸಿದ ಜಾಗ ಸುಟ್ಟು, ಕರಕಲಾಗಿದ್ದವು. ನರಗಳು ಕರಗಿ ಹೋಗಿದ್ದಲ್ಲವೆ ಬಾವು ಇಳಿದಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕ್ಯಾನುಲಾ ಅಳವಡಿಸಲಿಕ್ಕಾಗಿ ನರವನ್ನು ಹುಡುಕಲು ಸಿಸ್ಟರ್‌ ಚುಚ್ಚುವುದು ಒಂದೆರಡು ಕಡೆಗಳಲ್ಲಿ ಅಲ್ಲ; ನರ ಸಿಗುವವರೆಗೂ ಚುಚ್ಚುತ್ತಲೇ ಇರುತ್ತಾರೆ. ಈ ಸಿಸ್ಟರ್‌ಗಳಿಗೆಲ್ಲ ಕರುಳೇ ಇಲ್ಲವಾ ಎಂದು ನನಗನಿಸುತ್ತಿತ್ತು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಚುಚ್ಚಿಸಿಕೊಳ್ಳುವುದು ನಮ್ಮ ಪ್ರಾರಬ್ಧ. ಇದನ್ನೆಲ್ಲ ಯೋಚನೆ ಮಾಡುತ್ತ ಮನದೊಳಗಿನ ತೊಳಲಾಟ ಇಮ್ಮಡಿಯಾಯಿತು. ಮೇ 2ರಂದು ಲಾಸ್ಟ್‌ ಕಿಮೊ ಇದ್ದುದರಿಂದ ಹಿಂದಿನ ದಿನ ನನ್ನಲ್ಲಿ ಸಹಜವಾಗಿಯೇ ಆತಂಕ, ದುಗುಡ ಮನೆಮಾಡಿತ್ತು. ಆ ದುಗುಡವನ್ನು ಹೊರದೂಡಲು ನನ್ನಲ್ಲಿಯೂ ಅಸ್ತ್ರವಿತ್ತು. ಅದೇ, ಕೊನೆಯ ಕಿಮೊ ಎಂಬ ಖುಷಿಯ, ಸಮಾಧಾನದ ಅಸ್ತ್ರ.

ಮೇ 2: ಬೆಳಿಗ್ಗೆ ಆಸ್ಪತ್ರೆಗೆ ಬಂದು, ಪಾಳಿಯಲ್ಲಿ ಕುಳಿತೆ. ಬೆಳಿಗ್ಗೆ 8 ಗಂಟೆಗೆ ಕೊಡುವ ಟೋಕನ್‌ ಅನ್ನು ಗಿರೀಶ ತಂದಿದ್ದರು. 6ನೇ ನಂಬರ್‌. ಡಾಕ್ಟರ್‌ ಕೊಠಡಿಯ ಬಾಗಿಲ ಮೇಲೆ ಡಿಜಿಟಲ್‌ ನಂಬರ್‌ ಪ್ಲೇಟ್‌ ಒಂದೊಂದೇ ನಂಬರನ್ನು ಊಲಿ ಸುಮ್ಮನಾಗುತ್ತಿತ್ತು. ‘ಟೋಕನ್‌ ನಂಬರ್‌ ಆರು; ಟೋಕನ್‌ ನಂಬರ್‌ ಸಿಕ್ಸ್‌’ ಎಂದು ಮಹಿಳೆಯ ಸುಂದರ ಅನೌನ್ಸ್‌ಮೆಂಟ್‌ನೊಂದಿಗೆ 6 ಎಂಬ ಅಂಕೆ ಮೂಡಿತು. ಡಾಕ್ಟರ್‌ ಚೇಂಬರ್‌ಗೆ ಹೋದೆ. ಹೇಗಿದ್ದೀರಿ ಎಂಬ ಡಾಕ್ಟರ್‌ ಮಾತಿಗೆ ಕೈ ನೋವು ಒಂದು ಬಿಟ್ಟರೆ ಉಳಿದಂತೆ ಚೆನ್ನಾಗಿದ್ದೇನೆ ಸರ್‌ ಎಂದೆ. ಗುಡ್‌ ಎಂದ ಡಾಕ್ಟರ್‌, ಇವತ್ತು ಲಾಸ್ಟ್‌ ಕಿಮೊ ಅಂದ್ರು. ತಕ್ಷಣ ನನ್ನ ಕಣ್ಣುಗಳೆರಡೂ ಮತ್ತಷ್ಟು ಅರಳಿಕೊಂಡವು. ಮೊಗದಲ್ಲಿ ಮೂಡಿದ ನಗುವಿನೊಂದಿಗೆ ಹೌದು ಎನ್ನುತ್ತ ಬೋಳಾದ ತಲೆಯಾಡಿಸಿದೆ. ‘21 ದಿನಗಳ ನಂತರ ಸರ್ಜರಿ ಮಾಡೋಣ’ ಎಂದು ಮೇ 23ರ ದಿನ ನಿಗದಿ ಮಾಡಿದರು. ಅಲ್ಲಿಂದ ಹೊರಬಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು ಕ್ಯಾನುಲಾ ಅಳವಡಿಸುವ ರೂಂಗೆ ಹೋದೆ. ಮೂರು ಕಡೆ ಸುಟ್ಟು ಗಾಯಗಳಾದಂತಿದ್ದವು. ಈ ಬಾರಿ ಎಲ್ಲಿ ಜಾಗ ಹುಡುಕಿ ಕ್ಯಾನುಲಾ ಪ್ರತಿಷ್ಠಾಪಿಸುತ್ತಾರೋ ಅನ್ನೋ ಪ್ರಶ್ನೆ ನನ್ನ ಮನದಲ್ಲಿ ಹೊಯ್ದಾಡುತ್ತಿತ್ತು. ಅಂಗೈ ಮೇಲ್ಭಾಗದಲ್ಲಿ ಐದನೇ ಇಂಜೆಕ್ಷನ್‌ ಕೊಟ್ಟ ಜಾಗದ ಪಕ್ಕದಲ್ಲೇ ಒಂದು ನರ ಸಿಕ್ಕಿತು. ಮನಸ್ಸನ್ನು ಕಲ್ಲು ಮಾಡಿಕೊಂಡೆ. ಕ್ಯಾನುಲಾ ಚುಚ್ಚಿಸಿಕೊಂಡು ಡೇ ಕೇರ್‌ ರೂಮ್‌ಗೆ ಹೋದೆ. ತುಸು ಅಲುಗಾಡಿದರೂ ಜೀವವೇ ಹೋಗುವಂತ ನೋವು. ಅದಕ್ಕೆ ಎಡಗೈಯನ್ನು ಎಷ್ಟು ಸೂಕ್ಷ್ಮವಾಗಿ ಮ್ಯಾನೇಜ್‌ ಮಾಡುತ್ತಿದ್ದೆ ಅನ್ನೋದು ನನಗಷ್ಟೇ ಗೊತ್ತು. ಬೆರಳುಗಳೂ ತುಸು ಅಲ್ಲಾಡದಂತೆ ನೋಡಿಕೊಂಡೆ. ಆದರೂ ಸಿಸ್ಟರ್‌ ಇಂಜೆಕ್ಷನ್‌ ಏರಿಸುವಾಗ ಕ್ಯಾನುಲಾದ ಟ್ಯಾಪ್‌ ತೆಗೆಯುವಾಗ ಅಯ್ಯೋ ಅಂದಿತು. ಉಸಿರು ಬಿಗಿಯಾಗಿಸಿಕೊಂಡೆ. ಸ್ಟ್ಯಾಂಡ್‌ ಏರಿದ ಬಾಟಲಿಯಿಂದ ಒಂದೊಂದೆ ಹನಿ ಉದುರಲು ಆರಂಭಿಸಿತು. ಮತ್ತೆ ಶುರುವಾಯಿತು. ಇಂಜೆಕ್ಷನ್‌ ಹಾದು ಹೋಗುವಾಗ ನೋವು, ಉರಿ. ಒಂದು ಬಾಟಲಿ ಖಾಲಿಯಾಗುತ್ತಲೇ ಸಿಸ್ಟರ್‌ ಹತ್ರ ವಾಷ್‌ರೂಮ್‌ ಹೋಗಬೇಕಿದೆ ಎಂದೆ. ಆಯ್ತು ಎಂದು ಕ್ಯಾನುಲಾದಿಂದ ಇಂಜೆಕ್ಷನ್‌ ಪೈಪ್‌ ರಿಮೂವ್‌ ಮಾಡಿದರು. ಹೋಗಿ ಬಂದೆ. ಬೆಡ್‌ ಹತ್ತಿರ ಬಂದು ಕೈ ನೋಡ್ತೇನೆ, ಕ್ಯಾನುಲಾ ಸಪೋರ್ಟ್‌ಗೆ ಹಾಕಿದ್ದ ಬ್ಯಾಂಡೇಜ್‌ ಸ್ಟ್ರೀಪ್‌ ರಕ್ತಸಿಕ್ತವಾಗಿತ್ತು. ಸಾಲದ್ದಕ್ಕೆ ಧರಿಸಿದ್ದ ದುಪ್ಪಟ್ಟಾ ಮೇಲೆಲ್ಲ ರಕ್ತ ಚೆಲ್ಲಿತ್ತು. ಗಾಬರಿಯಿಂದ ಸಿಸ್ಟರ್‌.. ಎಂದು ಕೂಗಿದೆ. ನೋಡಿದ್ರೆ ಇಂಜೆಕ್ಷನ್‌ ಪೈಪ್‌ ರಿಮೂವ್‌ ಮಾಡಿದ ಮೇಲೆ ಹಾಕಿದ ಕ್ಯಾನುಲಾ ಕ್ಯಾಪ್‌ ಸರಿಯಾಗಿ ಕೂತಿರಲಿಲ್ಲ. ಓರೆಯಾಗಿದ್ದರಿಂದ ರಕ್ತ ಸುರಿದು ಹೋಗಿತ್ತು. ಅದನ್ನೆಲ್ಲ ಮತ್ತೆ ಸರಿಪಡಿಸಿ ಇಂಜೆಕ್ಷನ್‌ ದೇಹ ಸೇರಲು ದಾರಿ ಮಾಡಿಕೊಟ್ಟರು. ಅಂತೂ ಕಿಮೊಗೆ ಇತಿಶ್ರೀ ಹಾಡಿ ಮನೆಗೆ ಬಂದೆ. ಕೈ ಮೇಲೆ ಬಾವು ಬಂದಿತ್ತು. ಐಸ್‌ಪ್ಯಾಕ್‌ ಇಟ್ಟೆ. ಸಂಜೆ ವೇಳೆ ಜೋರಾಗಿ ಮಳೆ ಸುರಿಯಿತು. ಮೈ, ಮನಕ್ಕೆ ತಂಪೆನಿಸಿತು. ಮೇ 4ರಂದು ಇನ್ನೂ ಹೆಚ್ಚು ಊದಿಕೊಂಡಿತು. ಕೈ ಕೆಳಗೆ ಬಿಟ್ಟು ನಡೆದಾಡಿದರೆ, ಭಾರವೆನಿಸಿತು. ಪವರ್‌ ಕಟ್‌ ಇದ್ದುದ್ದರಿಂದ ಸೆಕೆ ಹೆಚ್ಚು, ಇನ್ನೂ ಕಷ್ಟವೆನಿಸಿತು. ಮೇ ತಿಂಗಳ ಬಿಸಿಲು, ಧಗೆಗೆ ಉರಿಯೋ ಉರಿ. ಮೇ 5ರಂದು ಮಂಪರು ಶುರುವಾಯಿತು. ಊಟ ಮೆಚ್ಚಲಿಲ್ಲ. ಮೈಮನವನ್ನೆಲ್ಲ ಕಿಮೊ ಯಾತನೆ ಆವರಿಸಿತು. ಗಂಡನ ಮನೆಯವರು ಹೊನ್ನಾವರದ ಮುಗ್ವಾ ಸುಬ್ರಹ್ಮಣ್ಯದಲ್ಲಿ ನಾಗಸಂಸ್ಕಾರ, ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮೇ 11ರಂದು ಹಮ್ಮಿಕೊಂಡಿದ್ದರು. ಕುಟುಂಬದವರೆಲ್ಲ ಉಪಸ್ಥಿತರಿರಬೇಕು. ಮೊದಲ ದಿನದ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಎರಡನೇ ದಿನ ಹೋಗಿ ಸೇರಿಕೊಳ್ಳಲು ನಿರ್ಧರಿಸಿದೆ. ತಲೆಯಲ್ಲಿ ಕೂದಲಿಲ್ಲದ್ದರಿಂದ ಊರಿಗೆ ಹೋಗುವ ಮೊದಲು ಮನಸ್ಸು ಯೋಚನೆಗೆ ಬಿತ್ತು. ತಲೆಗೊಂದು ವಿಗ್‌ ತಂದರೆ ಹೇಗೆ ಎಂದು. ವಿಗ್‌ ಎಲ್ಲಿ ಸಿಗಲಿದೆ ಎಂಬ ಮಾಹಿತಿ ನನಗಿರಲಿಲ್ಲ. ಡಾ.ಸುಜಾತಾ ಗಿರಿಯನ್‌ ಅವರನ್ನೇ ಕೇಳಿದೆ. ಮೇಡಂ ವಿಗ್‌ ಎಲ್ಲಿ ಸಿಗಲಿದೆ ಎಂದು. ತನಗೂ ಅಷ್ಟು ಐಡಿಯಾ ಇಲ್ಲ ಎಂದ ಅವರು, ಒಮ್ಮೆ ಹರ್ಷಾ ಕಾಂಪ್ಲೆಕ್ಸ್‌ನಲ್ಲಿ ವಿಚಾರಿಸಿ ಎಂದರು. ನಾನು ಮತ್ತು ಗಿರೀಶ ಹರ್ಷಾ ಕಾಂಪ್ಲೆಕ್ಸ್‌ಗೆ ಹೋದೆವು. ಅಲ್ಲಿರುವ ಅಂಗಡಿಯವರೊಬ್ಬರನ್ನು ಕೇಳಿದೆ. ಫಸ್ಟ್‌ ಫ್ಲೋರ್‌ಗೆ ಹೋಗಿ ಅಂದರು. ಹೋಗಿ ನೋಡಿದರೆ, ಅಂಗಡಿಯಿತ್ತು. ಬೋರ್ಡ್‌ ಕೂಡ ಇತ್ತು. ಆದರೆ ಶೆಟರ್‌ ಮೇಲೆ ಸ್ಥಳಾಂತರಿಸಲಾಗಿದೆ ಎಂದು ಎಂದೋ ಬರೆದು ಅಂಟಿಸಿದ ಬಿಳಿ ಹಾಳೆ ದೂಳು ಮೆತ್ತಿಕೊಂಡಿತ್ತು. ಬೋರ್ಡ್‌ನಲ್ಲಿ ಮೊಬೈಲ್‌ ನಂಬರ್‌ ಇತ್ತು. ಡಯಲ್‌ ಮಾಡಿದರೆ ಆ ಕಡೆಯಿಂದ ಹೆಲೋ ಎಂದಿತು. ‘ಹೆಲೊ ಮೇಡಂ, ವಿಗ್‌’ ಅನ್ನುತ್ತಲೇ ‘ಹೌದು; ನಮ್ಮ ಶಾಪ್‌ ಚೇಂಜ್‌ ಆಗಿದೆ. ದೇಸಾಯಿ ಕ್ರಾಸ್‌ಗೆ ಬನ್ನಿ. ಬಂದು ಕಾಲ್‌ ಮಾಡಿ. ಅಡ್ರೆಸ್‌ ಹೇಳ್ತೇನೆ‘ ಎಂದರು. ‘ಅಲ್ಲಾ ಮೇಡಂ, ವಿಗ್‌ಗೆ ಎಷ್ಟು ಆಗಬಹುದು’ ಎಂದೆ. ‘ಬೇರೆ ಬೇರೆ ವೆರೈಟಿ, ಕೂದಲ ಸೈಜ್ ಮೇಲೆ ಬೇರೆ ಬೇರೆ ರೇಟ್ಸ್‌ ಇರುತ್ತೆ. ನಿಮ್ಮ ತಲೆಯ ಅಳತೆ ತೆಗೆದುಕೊಂಡು, ಯಾವ ಸ್ಟೈಲ್‌ನಲ್ಲಿ ಬೇಕು ಅನ್ನೋದನ್ನ ನಿರ್ಧರಿಸಿದ ಮೇಲೆ ರೇಟ್‌ ಹೇಳಲಾಗುತ್ತೆ’ ಎಂದರು. ಆದರೂ ಅಂದಾಜು ಎಷ್ಟು ಆಗಬಹುದು ಎಂದೆ. ₹10 ಸಾವಿರದಿಂದ ಸ್ಟಾರ್ಟ್‌ ಆಗುತ್ತೆ ಎಂದರು. 10 ಸಾವಿರನಾ... ಎಂದು ಕೇಳಿದವಳೇ, ಆಯ್ತು ಮೇಡಂ ಇನ್ನೊಂದು ದಿನ ಬರ್ತೇನೆ ಎಂದವಳೇ ಕಾಲ್‌ ಕಟ್‌ ಮಾಡಿದೆ. ಅಂದಿನ ಪರಿಸ್ಥಿತಿಯಲ್ಲಿ ಒಂದು ಸಾವಿರ ಎಂದರೂ ನಾನು ಕೊಟ್ಟು ಖರೀದಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಒಂದು ವಾರ ಮನೆಯಿಂದ ಹೊರ ಹೋಗುವಾಗ ಇರಲಿ ಎಂದು ಯೋಚಿಸಿದ್ದೇನೋ ಹೌದು. ಆದರೆ ಅದಕ್ಕೆ 10 ಸಾವಿರ ಯಾಕೆ ಖರ್ಚು ಮಾಡೋದು. ಹೇಗೂ ಕಿಮೊ ಮುಗಿದಿದೆ. ಒಂದೆರಡು ತಿಂಗಳಲ್ಲಿ ಕೂದಲು ಮತ್ತೆ ಹುಟ್ಟುತ್ತದೆ ಅಂದುಕೊಂಡು ವಿಗ್‌ ಖರೀದಿಸುವ ಯೋಚನೆಯನ್ನೇ ಬಿಟ್ಟುಬಿಟ್ಟೆ.

ಹುಬ್ಬಳ್ಳಿಯಿಂದ ಕಾನಸೂರ ಮನೆಗೆ ಕಾರಿನಲ್ಲಿ ಬಲುಮಾವ ಜಾಗರೂಕತೆಯಿಂದ ಕರೆದೊಯ್ದ. ಏನೂ ತೊಂದರೆಯಾಗಲಿಲ್ಲ. ಅಲ್ಲಿನ ತಂಪಿನ, ಶುದ್ಧ ವಾತಾವರಣ ಮೈಮನಕ್ಕೆ ಆಹ್ಲಾದವೆನಿಸಿತು. ನಗರ ವಾತಾವರಣಕ್ಕೂ ತವರಿನ ಹಸಿರ ವಾತಾವರಣಕ್ಕೂ ಅಜಗಜಾಂತರ. ಕಿಮೊ ತೆಗೆದುಕೊಂಡು 8 ದಿನವಾಗಿತ್ತು. ಮೇ 11ಕ್ಕೆ ಆಶ್ಲೇಷಬಲಿ ಪೂಜೆಯಲ್ಲಿ ಪಾಲ್ಗೊಳ್ಳಲು ಮುಗ್ವಾ ಸುಬ್ರಹ್ಮಣ್ಯಕ್ಕೆ ಹೋದೆ. ಅಲ್ಲಿ ಪೂಜೆ ಮುಗಿಸಿ, ಉಪ್ಲೆ ಮನೆಗೆ (ಗಂಡನ ಮನೆ)ಗೆ ಹೋಗಿ ಸಂಜೆ ಮತ್ತೆ ವಾಪಸ್‌ ಶಿರಸಿಯ ಚಿಕ್ಕಮ್ಮನ ಮನೆಗೆ ಬಂದೆ. ಎಲ್ಲಿಯೂ ತೊಂದರೆಯೇನಾಗಲಿಲ್ಲ. ಕಿಮೊ ವೇಳೆ ದೇಹ ಸೂಕ್ಷ್ಮವಾಗಿರುವುದರಿಂದ ನಾನು ಹೆಚ್ಚು ಎಚ್ಚರ ವಹಿಸುವ ಅಗತ್ಯವಿತ್ತು. ಸೆಕೆ ಅನ್ನೋದು ಒಂದು ಬಿಟ್ಟರೆ ಫುಲ್‌ ಖುಷಿ. ದಂಗಲ್‌ ಫಿಲ್ಮ್‌ ಅನ್ನು ನೋಡಿದೆ. ಟೈಮ್‌ ಪಾಸ್‌ ಆಯಿತು. ಚಿಕ್ಕಮ್ಮನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತು. ಪೂಜೆಗೆ ಬಂದ, ಸಂಬಂಧಿಗಳು, ಹಿತೈಷಿಗಳು ಹೆಚ್ಚಿನವರು ನನಗೆ ಚಿರಪರಿಚಿತರಾಗಿದ್ದರೂ ಹೆಚ್ಚಿನವರಿಗೆ ನನ್ನ ಪರಿಚಯವೇ ಸಿಕ್ಕಿರಲಿಲ್ಲ. ತಲೆಯಲ್ಲಿ ಕೂದಲು, ಕಣ್‌ಹುಬ್ಬು, ರೆಪ್ಪೆ ಕೂದಲು ಇಲ್ಲದಿರುವಾಗ ನಮ್ಮ ಗುರುತು ನಮಗೇ ಸಿಗದಿರುವಾಗ, ಅವರಾದರೂ ಹೇಗೆ ಗುರುತು ಮಾಡುತ್ತಾರೆ. ಯಾರೋ ಏನೋ ಅಂತಾ ಸುಮ್ಮನಾಗಿದ್ದರು. ಅಲ್ಲಿರುವಾಗ ನಾನೊಂದು ಪಿಂಕ್‌ ಕಲರ್‌ ನೈಟಿ ಹಾಕುತ್ತಿದ್ದೆ. ಆಗ ನನ್ನ ಸಣ್ಣ ತಂಗಿ ನನಗೆ ಲಾಮಾ ಥರ (ಬೌದ್ಧ ಬಿಕ್ಕು) ಕಾಣ್ತಿಯಾ ಅಂತ ಕೀಟಲೆ ಮಾಡೋವಳು. ನನ್ನ ಮಗನಂತೂ ತಲೆ ಮೇಲೆ ಕೈ ಆಡಿಸುತ್ತ ಟಕ್ಲು ಟಕ್ಲು ಅಂತ ಗೋಳು ಹೊಯ್ಕೊಳ್ಳೋನು. ನಾನದಕ್ಕೆ ನಕ್ಕಾಗ ಎಲ್ಲರೂ ನಗುವಿನೊಂದಿಗೆ ಜೊತೆಯಾಗುತ್ತಿದ್ದರು. ‘ಅಯ್ಯೊ ಮಗನೆ, ತಲೆಲಿ ಕೂದಲೇ ಇಲ್ವಲ್ಲ, ಯಾವಾಗ ಬರುತ್ತೆನೋ’ ಎಂದು ತಲೆ ಮೇಲೆ ಕೈ ಆಡಿಸುತ್ತ ಹೇಳಿದಾಗ, ‘ತಲೆ ಏನು ಅಬಾ...ಮೂಗಿನ ಹೊಳ್ಳೆ ಒಳಗಿನ ಕೂದಲು ಕೂಡ ಉದುರಿ ಹೋಗಿವೆ. ಉಸಿರಾಡೋ ಗಾಳಿ ಫಿಲ್ಟರ್‌ ಆಗದೇ ನೇರವಾಗಿ ಶ್ವಾಸಕೋಶಕ್ಕೆ ಹೋಗ್ತಿದೆ ನೋಡು’ ಅಂದಾಗ... ‘ನೀನಿಷ್ಟು ಖುಷಿಯಾಗಿ, ಧೈರ್ಯವಾಗಿ ಇರೋದೇ ನಮಗೆಲ್ಲ ಧೈರ್ಯ ನೋಡು’ ಅನ್ನೋರು.

ಮೇ 21ಕ್ಕೆ ಸರ್ಜರಿ ನಿಗದಿಯಾಗಿದ್ದರಿಂದ ನಾಲ್ಕು ದಿನ ಮೊದಲೇ ಡಾಕ್ಟರ್‌ ಬಂದು ಹೋಗಲು ತಿಳಿಸಿದ್ದರು. ಅದಕ್ಕೆ ತಿರುಗಿ ಮೇ 17ಕ್ಕೆ ವಾಪಸ್‌ ಹುಬ್ಬಳ್ಳಿಗೆ ಬಂದೆ.

(ಮುಂದಿನ ವಾರ: ಐಸಿಯುನಲ್ಲಿ ಕಳೆದ ಆ ಘೋರ ದಿನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT