ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ – ಕುಶಲ: ಆಪ್ತ ಸಮಾಲೋಚನೆ ಎಂಬ ದಿಕ್ಸೂಚಿ

Published 27 ಮೇ 2024, 21:59 IST
Last Updated 27 ಮೇ 2024, 21:59 IST
ಅಕ್ಷರ ಗಾತ್ರ

ಈ ಮನಸ್ಸು ಗೊಂದಲ-ಗೋಜಲುಗಳ ಗೂಡು. ನಾವು ಎಷ್ಟೇ ಕ್ರಮಬದ್ಧವಾದ ಜೀವನವನ್ನು ನಡೆಸುತ್ತಿದ್ದರೂ ಒಮ್ಮೊಮ್ಮೆ ಮನಸ್ಸು ಭಾವಯಾನದ ತೀವ್ರಾತೀವ್ರತೆಯಲ್ಲಿ ಹೊಯ್ದಾಡುವುದಿದೆ. ಎಷ್ಟೋ ಬಾರಿ ನಮ್ಮ ನಿರ್ಧಾರಗಳು ಮತ್ತು ನಡವಳಿಕೆಗಳು ಸರಿಯೋ ತಪ್ಪೋ ಎಂಬ ದ್ವಂದ್ವದಲ್ಲಿಯೇ ದಿನಗಳನ್ನು ನೂಕುತ್ತಿರುತ್ತೇವೆ. ಇನ್ನು ಕೆಲವರಿಗೆ ಮಹತ್ವದ ಕಾರ್ಯಗಳನ್ನು ಮಾಡುವ ಮನಸ್ಸು ಮತ್ತು ಪ್ರತಿಭೆಯಿದ್ದರೂ ಸಮಯ ನಿರ್ವಹಣೆಯಲ್ಲಿ ಸೋಲುತ್ತಾರೆ. ಮತ್ತೆ ಕೆಲವರಿಗೆ ತಮ್ಮ ಸಾಮರ್ಥ್ಯ ಮೀರಿ ಸಾಧಿಸುವ ಆಸೆ. ಒಮ್ಮೆಲೇ ಹತ್ತು ಹಲವು ಕಡೆ ಕೈ ಹಾಕಿ ಎಲ್ಲಿಯೂ ಮುಂದಕ್ಕೆ ಸಾಗದೆ ನಿಂತ ನೀರಿನಂತಾಗುತ್ತಾರೆ, ಹತಾಶರಾಗುತ್ತಾರೆ. ಇಂತಹ ಪ್ರಸಂಗಗಳು ಮನಸ್ಸನ್ನು ಘಾಸಿಗೊಳಿಸಿದಾಗ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನೂ ಪರಿಪೂರ್ಣವಾಗಿ ಪೂರೈಸಲು ಅಸಮರ್ಥರಾಗುತ್ತಾರೆ. ಅದರಿಂದ ಮತ್ತಷ್ಟು ಅಸಮಾಧಾನಗೊಳ್ಳುತ್ತಾರೆ; ಎಲ್ಲ ಕೆಲಸಗಳಲ್ಲಿ ಹಿಂದುಳಿಯುತ್ತಾರೆ. ಇದು ವ್ಯಕ್ತಿಯನ್ನು ಸಮಸ್ಯೆಯ ಸುಳಿಗಳಲ್ಲಿ ಸಿಕ್ಕಿಸಿ, ಇನ್ನಷ್ಟು ಕುಗ್ಗಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ತನ್ನ ಮನಸ್ಸಿನ ತುಮುಲಗಳನ್ನು ಮತ್ತೊಬ್ಬರಲ್ಲಿ ಹಂಚಿಕೊಂಡರೆ ಒಂದಿಷ್ಟು ಸಮಾಧಾನ ಸಿಗುತ್ತದೆ. ಅಷ್ಟೇ ಅಲ್ಲ, ಅವರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರವೂ ಸಿಗಬಹುದು. ಮುಂದಿನ ಬದುಕಿನ ದಿಕ್ಸೂಚಿಯೂ ದೊರೆಯಬಹುದು. ಆದರೆ, ತೀರ ವೈಯಕ್ತಿಕ ವಿಷಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ಅಂತಹದ್ದಕ್ಕೆ ಎದುರಿನ ವ್ಯಕ್ತಿ ಆತ್ಮೀಯನಾಗಿರಬೇಕು. ಕುಟುಂಬದ ಸದಸ್ಯನೋ ಅಥವಾ ಆಪ್ತ ಗೆಳೆಯ/ಗೆಳತಿಯಾಗಿದ್ದರೆ ಇನ್ನೂ ಸೂಕ್ತ. ಆದರೆ, ಕೆಲವೊಮ್ಮೆ ಹತ್ತಿರದವರ ಬಳಿಯೂ ನಿವೇದಿಸಿಕೊಳ್ಳಲು ಮುಜುಗರವಾಗಬಹುದು. ಮುಂದಿನ ಜೀವನವೆಲ್ಲ ಜೊತೆಯಲ್ಲಿಯೇ ಇರಬೇಕಾದ ಕುಟುಂಬದವರೊಡನೆ ತಮ್ಮ ಮನಸ್ಸಿನಳಾದ ವಿಷಯಗಳನ್ನು ವ್ಯಕ್ತಪಡಿಸಲು ಕೆಲವೊಮ್ಮೆ ಇರಿಸುಮುರಿಸಾಗಬಹುದು. ಆಂತರ್ಯದ ಎಲ್ಲ ವಿಚಾರಗಳನ್ನು ತೆರೆದ ಮನಸ್ಸಿನಿಂದ ಹೇಳಲು ಕಷ್ಟವೆನಿಸಬಹುದು. ಅಷ್ಟೇ ಅಲ್ಲ, ಕೇಳಿಸಿಕೊಳ್ಳುವ ಎದುರಿನ ವ್ಯಕ್ತಿಗೆ ಸಹನೆ ಸಮಾಧಾನವಿಲ್ಲದಿದ್ದರೆ, ಅಂತಹವರಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳುವುದು ವ್ಯರ್ಥ ಎನಿಸಬಹುದು. ಗಂಭೀರವಾಗಿ ವ್ಯಕ್ತಿ ತನ್ನ ಸಮಸ್ಯೆ ನೋವುಗಳನ್ನು ಹಂಚಿಕೊಳ್ಳುವ ವೇಳೆ ಎದುರಿನವರು ನಿರಾಸಕ್ತಿ ತೋರಿದರೆ, ಸರಿಯಾಗಿ ಸ್ಪಂದಿಸದಿದ್ದರೆ ಮತ್ತಷ್ಟು ಹತಾಶೆಯೇ.

ಬಹು ನಿರೀಕ್ಷೆಯಿಂದ ನಮ್ಮ ದ್ವಂದ್ವಗಳನ್ನು ಮತ್ತು ಮನಸ್ಸಿನ ವಿಚಾರಗಳನ್ನು ನಿವೇದಿಸಿಕೊಳ್ಳುವಾಗ ಎದುರಿನ ವ್ಯಕ್ತಿ ಅಂತಹದ್ದೇ ಆತನ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರು ಮಾಡಿದರೆ ಅದು ಮತ್ತಷ್ಟು ಹಿಂಸೆ. ಪರಿಹಾರ ಸೂಚಿಸದೆ ಸಮಸ್ಯೆಯ ಸುತ್ತಲೇ ಗಿರಕಿ ಹೊಡೆದರೆ ಅದು ವ್ಯಕ್ತಿಯನ್ನು ಮತ್ತಷ್ಟು ಘಾಸಿಗೊಳಿಸೀತು. ನಮ್ಮ ಅಸಲಿ ಭಾವನೆಗಳನ್ನು ನಕಲಿ ಮನುಷ್ಯರೊಂದಿಗೆ ಹಂಚಿಕೊಳ್ಳಲಾಗುವುದೇ? ಹಾಗಾಗಿಯೇ ಇಂತಹದ್ದಕ್ಕೆ ಎದುರಿನ ವ್ಯಕ್ತಿ ಸಮಚಿತ್ತತೆಯನ್ನು ಹೊಂದಿದ, ಸಂಭಾವಿತ ಆತ್ಮೀಯನಾಗಿರಬೇಕು. ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುವುದು ದಿಟ.


ಸಮಾಲೋಚನೆಯ ನೆರವು:

ಇಂತಹ ಮನಸ್ಸಿನ ಕಿರಿಕಿರಿಗಳಿಂದ ಹೊರಬರಲು, ನಮ್ಮಲ್ಲಿರುವ ಸಾಮರಥ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು, ಸಮಯ ನಿರ್ವಹಣೆಯನ್ನು ಕರಗತ ಮಾಡಿಕೊಳ್ಳಲು, ನಮ್ಮ ಕ್ಷಮತೆಯನ್ನು ಶೇ. ನೂರರಷ್ಟು ಹೊರತರಲು ನಮಗೆ ಎಷ್ಟೋ ಬಾರಿ ಇನ್ನೊಬ್ಬರಿಂದ ಸಮಾಲೋಚನೆ/ಸಾಂತ್ವನದ ಅಗತ್ಯ ಇರುತ್ತದೆ. ಅಂತಹ ಎಲ್ಲ ಸನ್ನಿವೇಶಗಳಲ್ಲಿ ನಮ್ಮ ನೆರವಿಗೆ ಬರುವವರು ಆಪ್ತ ಸಮಾಲೋಚಕರು.

ಆದರೆ ಸಮಾಲೋಚಕರನ್ನು ಆಯ್ಕೆ ಮಾಡಿಕೊಳ್ಳುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕು. ಆದಷ್ಟೂ ವೃತ್ತಿಪರ ಮತ್ತು ಮನೋವೈದ್ಯರ ಸಂಪರ್ಕವಿರುವ ಆಪ್ತ ಸಮಾಲೋಚಕರನ್ನು ಆರಿಸಿಕೊಳ್ಳುವುದು ಸೂಕ್ತ. ನಮ್ಮ ಗೋಜಲುಗಳಿಗೆ ಹಿತವಾದ ಕಿವಿಯಾಗುವ ಚಾಕಚಕ್ಯತೆಯು ವೃತ್ತಿಪರ ಆಪ್ತಸಮಾಲೋಚಕರಿಗೆ ಇರುತ್ತದೆ. ಅವರು ನಮ್ಮ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ. ನಮ್ಮ ವ್ಯಕ್ತಿತ್ವದ ಮಜಲುಗಳನ್ನು ಅರ್ಥ ಮಾಡಿಕೊಳ್ಳುವ ವಿಧಾನಗಳನ್ನು ಅವರು ಅಧ್ಯಯನದಿಂದ ಅರಿತಿರುತ್ತಾರೆ.

ಸಾಮಾನ್ಯವಾಗಿ ಉತ್ತಮ ಕೇಳುಗರಾಗಿರುವ ಆಪ್ತ ಸಮಾಲೋಚಕರು ನಮ್ಮ ವಿಷಯಧಾರೆಯನ್ನು ಸಾವಾಧನದಿಂದ ಕೇಳಿಸಿಕೊಂಡು ಸಮರ್ಪಕವಾದ ಸ್ಪಂದನೆಯನ್ನು ಕೊಡುತ್ತಾರೆ. ನಮ್ಮ ಅಭಿಪ್ರಾಯ, ನಡವಳಿಕೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ತಪ್ಪುಗಳಿದ್ದರೆ ನಮ್ಮ ಅರಿವಿಗೆ ತರುತ್ತಾರೆ. ನಮ್ಮ ಮಿತಿಯಲ್ಲಿರುವ ಸುಧಾರಣಾ ಕ್ರಮಗಳ ಬಗ್ಗೆ ತಿಳಿ ಹೇಳುತ್ತಾರೆ. ನಮ್ಮಲ್ಲಿನ ಕುಂದುಗಳನ್ನು ಎತ್ತಿ ತೋರಿಸಿ, ಸರಿಪಡಿಸುವ ಮಾರ್ಗಗಳನ್ನೂ ಸೂಚಿಸುತ್ತಾರೆ. ನಾವು ತಪ್ಪು ದಾರಿಯನ್ನು ತುಳಿಯುತ್ತಿದ್ದರೆ, ತಪ್ಪು ನಿಲುವುಗಳನ್ನು ಹೊಂದಿದ್ದರೆ ಅದನ್ನೂ ತಿದ್ದುತ್ತಾರೆ. ಎಷ್ಟೋ ಬಾರಿ ಒಬ್ಬ ದಕ್ಷ ಆಪ್ತ ಸಮಾಲೋಚಕನ ಬಳಿ ಸಮಸ್ಯೆಯ ನಿವೇದನೆಯೇ ಮನಸ್ಸನ್ನು ಹಗುರಾಗಿಸುತ್ತದೆ.

ನುರಿತ ಹಾಗೂ ವೃತ್ತಿಪರ ಸಮಾಲೋಚಕರು ಮನೋವೈದ್ಯಕೀಯ ಕಾಯಿಲೆಗಳ ಗುಣಲಕ್ಷಣಗಳ ಬಗ್ಗೆಯೂ ಅಧ್ಯಯನದ ವೇಳೆ ಅಭ್ಯಸಿಸಿರುತ್ತಾರೆ. ಒಂದು ವೇಳೆ ನಮ್ಮ ಸಮಸ್ಯೆಯು ಸರಳವಾಗಿರದೆ, ಮನೋವೈಕಲ್ಯಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದರೆ ಒಮ್ಮೆ ಮನೋವೈದ್ಯರ ಸಲಹೆಯನ್ನು ಪಡೆಯಲೂ ಸೂಚಿಸುತ್ತಾರೆ. ಹೀಗೆ ಮುದುಡಿದ ಮನಸ್ಸನ್ನು ಅರಳಿಸುವ ಎಲ್ಲ ಪ್ರಯತ್ನಗಳನ್ನು ಸಮಾಲೋಚಕರು ಮಾಡುವುದರಿಂದ ಗೊಂದಲದ ಗೂಡಾದ ಮನಸ್ಸು ತಿಳಿಯಾಗುತ್ತದೆಯಲ್ಲದೆ ನಮ್ಮ ಕ್ಷಮತೆಯೂ ವೃದ್ಧಿಸುತ್ತದೆ.

ಮುಚ್ಚಿದ ದಾರಿ ತೆರೆಯಲಿ:

ನಾವು ಎಷ್ಟೇ ಶಿಸ್ತುಬದ್ಧ ಬದುಕನ್ನು ನಡೆಸುತ್ತೇವಾದರೂ ಒಮ್ಮೊಮ್ಮೆ ಎಡವುದಿದೆ. ಹಲವು ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ನಿಭಾಯಿಸುವಾಗ ಮನಸ್ಸು ಗೊಂದಲಗೊಳ್ಳುವುದಿದೆ. ಏನೇ ಸರಿಪಡಿಸಿಕೊಂಡರೂ ನಮ್ಮ ತಪ್ಪುಗಳು ನಮಗೆ ಕಾಣಿಸದೆ ಸುತ್ತಲಿನವರ ತಪ್ಪುಗಳೇ ಎದ್ದುಕಾಣುವುದಿದೆ. ನಮ್ಮ ಬೆನ್ನು ನಮಗೆ ಕಾಣದು – ಎಂಬಂತೆ ನಮ್ಮ ಲೋಪದೋಷಗಳು ನಮ್ಮರಿವಿಗೆ ಬಾರದೆಯೇ ಉಳಿದುಬಿಡುತ್ತವೆ. ಬದುಕಿನಲ್ಲಿ ಸರಿ–ತಪ್ಪುಗಳನ್ನು ವಿಶ್ಲೇಷಿಸಲು ಅಸಮರ್ಥರಾಗಿಬಿಡುತ್ತೇವೆ. ಇಂತಹ ಪರಿಸ್ಥಿಯಲ್ಲಿ ಒಬ್ಬ ವೃತ್ತಿಪರ ಹಾಗೂ ಮನೋವೈದ್ಯರ ಸಂಪರ್ಕದಲ್ಲಿ ಕಾರ್ಯನಿರ್ವಹಿಸುವ ಆಪ್ತಸಮಾಲೋಚಕರ ಭೇಟಿ ಅತ್ಯಗತ್ಯ. ಅವರು ನಮ್ಮ ಸಮಸ್ಯೆಯ ತಿರುಳನ್ನು ವೈಜ್ಞಾನಿಕವಾಗಿ ಹೊಕ್ಕು, ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗುತ್ತಾರೆ. ಕರುಣೆ ಮತ್ತು ಅನುಭೂತಿಯಿಂದ ಸ್ಪಂದಿಸಿ ಬದುಕಿನಲ್ಲಿ ಮುಚ್ಚಿದ ದಾರಿಯನ್ನು ತೆರೆಯಲು ಅಣುವು ಮಾಡಿಕೊಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT