ಗುರುವಾರ , ಡಿಸೆಂಬರ್ 5, 2019
24 °C

ರೂಪಾ ಅಯ್ಯರ್‌ಗೆ ಇಚ್ಛಾಶಕ್ತಿಯೇ ಬಲ

Published:
Updated:

‘ದೇಹದ ಸಮತೋಲನ ಕಾಪಾಡಿಕೊಳ್ಳಲು ಆತ್ಮವಿಶ್ವಾಸ ಒಂದಿದ್ದರೆ ಸಾಕು’ ಎನ್ನುವ ಕನ್ನಡದ ಕಿರುತೆರೆ ನಟಿ, ನಿರ್ದೇಶಕಿ ಮತ್ತು ಬರಹಗಾರ್ತಿ ರೂಪಾ ಅಯ್ಯರ್‌ ಇದೀಗ ಯುವಜನತೆಯ ನೆಚ್ಚಿನ ರೋಲ್‌ ಮಾಡೆಲ್‌. 1985ರಲ್ಲಿ ಬೆಳಕವಾಡಿಯಲ್ಲಿ ಜನಿಸಿದ ಇವರು, ಪ್ರಧಾನಮಂತ್ರಿ ಜನಕಲ್ಯಾಣ ಯೋಜನೆ ಅಭಿಯಾನದ ರಾಜ್ಯ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಎಚ್‌ಐವಿ ಮಕ್ಕಳು, ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ ಸೇರಿದಂತೆ ಮೂರು ಟ್ರಸ್ಟ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಸಿನಿಮಾ ವೃತ್ತಿಯನ್ನೂ ಆರಂಭಿಸಿದ ಇವರು 36ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಮುಖಪುಟ’, ಮತ್ತು ‘ದಾಟು’ ಸಿನಿಮಾಗಳಲ್ಲಿ ನಟಿಸಿರುವ ರೂಪಾ ಅಯ್ಯರ್‌ ’ಮ್ಯಾಜಿಕ್‌ ಅಜ್ಜಿ’ ಮತ್ತು ‘ಚಂದ್ರ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸದ್ಯ ಅವರು ಪ್ರಾಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರವನ್ನು ಕನ್ನಡದಲ್ಲಿ ತಯಾರು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ‘ಸಕಾರಾತ್ಮಕ ಮನೋಭಾವ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ’ ಎಂದು ಹೇಳುವ ರೂಪಾ ಅಯ್ಯರ್‌ ತಮ್ಮ ಫಿಟ್‌ನೆಸ್‌ ಹವ್ಯಾಸದ ಪರಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು...

*ನಿಮ್ಮ ಪ್ರಕಾರ ಫಿಟ್‌ನೆಸ್‌ ಎಂದರೆ?
ಫಿಟ್‌ನೆಸ್‌ ಎಂಬುದು ಇಚ್ಛಾಶಕ್ತಿ. ಜಿಮ್‌ನಲ್ಲಿ ಅಭ್ಯಾಸ ಮಾಡುವುದು ಮಾತ್ರವಲ್ಲ, ನೃತ್ಯ ತರಬೇತಿಯನ್ನೂ ಪಡೆಯುತ್ತೇನೆ ಮತ್ತು ಯೋಗವನ್ನೂ ಪ್ರತಿನಿತ್ಯ ತಪ್ಪದೇ ಅಭ್ಯಾಸ ಮಾಡುತ್ತೇನೆ. ನಾನು ಧ್ಯಾನ ಮಾಡುವ ಸಮಯದಲ್ಲಿ ನನ್ನ ಅಂತರಾಳದ ಯೋಚನೆ, ದೈಹಿಕ ಸಾಮರ್ಥ್ಯ ಮತ್ತು ಕಡಿಮೆ ವಯಸ್ಸಿನಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂಬುದರ ಮೇಲೆ ಹಿಡಿತ ಸಾಧಿಸುತ್ತೇನೆ. ನಮ್ಮ ಯೋಚನೆಯ ಆಧಾರದ ಮೇಲೆ ದೈಹಿಕ ಸಾಮರ್ಥ್ಯ ನಿಂತಿದೆ.

*ವರ್ಕ್‌ಔಟ್‌ ಪ್ರಾರಂಭಿಸಿದ್ದು ಯಾವಾಗ?
ನನಗೆ 24 ವರ್ಷ ತುಂಬಿದಾಗ ವರ್ಕ್‌ಔಟ್‌ ಆರಂಭಿಸಿದೆ. ಸುಮಾರು 12 ವರ್ಷದಿಂದ ನಿರಂತರವಾಗಿ ಫಿಟ್‌ನೆಸ್‌ ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಇದು ಉತ್ತಮ ಅನುಭವ ಎಂದೇ ಹೇಳಬಹುದು. ಈ ಸಮಯದಲ್ಲಿ ಆರೋಗ್ಯಕ್ಕೆ ಬೇಕಾದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ನಾನು ದೇಹದಂಡನೆ ಮಾಡಲು ಪ್ರಾರಂಭಿಸಿದಾಗಿನಿಂದ ಈವರೆಗೆ ಹೀಗೆಯೇ ಆರೋಗ್ಯವಾಗಿದ್ದೇನೆ. ತೀರಾ ದಪ್ಪವೂ ಆಗಲಿಲ್ಲ, ಸಣ್ಣವೂ ಆಗಿಲ್ಲ. ಇತರರಿಗೆ ಸಲಹೆಗಳನ್ನು ಸಹ ನೀಡುತ್ತೇನೆ.

* ದೇಹದಂಡನೆ ದೈಹಿಕ ಸೌಂದರ್ಯಕ್ಕೆ ಹಾದಿಯೇ?
ಹೌದು, ವರ್ಕ್‌ಔಟ್‌ ಮಾಡುವುದರಿಂದ ದೇಹ ಸಮತೋಲನ ಸಾಧಿಸಬಹುದು. ಜತೆಗೆ ನಾವು ಸುಂದರವಾಗಿ ಕಾಣಬೇಕು ಎಂದರೆ ಅದು ಅಂತರಾಳದ ಶಕ್ತಿಯಿಂದ ಮಾತ್ರ ಸಾಧ್ಯ. ನಮ್ಮ ಯೋಚನೆ ಸಕರಾತ್ಮಕವಾಗಿರಬೇಕು. ನನಗೆ ಮುಪ್ಪು ಆವರಿಸಿತು ಎಂದು ಕೂರಬಾರದು, ಯಾವಾಗೂ ‘ಯುವ ಮತ್ತು ಉತ್ಸಾಹಿ’ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಆತ್ಮಸ್ಥೈರ್ಯಕ್ಕೆ ಏನನ್ನು ಬೇಕಾದರೂ ಬದಲಾಯಿಸುವಂತ ಶಕ್ತಿ ಇದೆ.

ಕೆಲವರು ಜಿಮ್‌ನಲ್ಲಿ ತಾಲೀಮು ಮಾಡಿ ತಾವು ಬಯಸಿದಷ್ಟು ಸಣ್ಣರಾಗಿರುತ್ತಾರೆ, ಆದರೆ ಅವರ ದೇಹದಲ್ಲಿಯೂ ಶಕ್ತಿ ಇರುವುದಿಲ್ಲ, ಮಾನಸಿಕವಾಗಿಯೂ ಅವರು ಶಕ್ತರಾಗಿರುವುದಿಲ್ಲ. ಇದರಿಂದ ವರ್ಕ್ಔಟ್‌ ಮಾಡಿಯೂ ಉಪಯೋಗವಿರುವುದಿಲ್ಲ. ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ಫಿಟ್‌ ಆಗಿರಬೇಕು.

*ಆಹಾರ ಕ್ರಮದ ಬಗ್ಗೆ ತಿಳಿಸಿ
ಆಹಾರ ಕ್ರಮವನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ಮಿತಿಮೀರಿ ಆಹಾರ ಸೇವಿಸುವುದು ಒಳಿತಲ್ಲ. ನನಗೆ ಒಂದೆರಡು ಇಂಚು ದೇಹದ ತೂಕ ಹೆಚ್ಚಿದೆ ಎನಿಸಿದಾಗ ಪ್ರೊಟೀನ್‌ ಅಂಶ ಹೆಚ್ಚಿರುವಂತಹ ಆಹಾರ, ಹಣ್ಣು, ತರಕಾರಿ, ಓಟ್ಸ್‌ ಸೇವಿಸುತ್ತೇನೆ. ದಕ್ಷಿಣ ಭಾರತದ ಆಹಾರದಲ್ಲಿ ಕೋಸಂಬರಿ ಹೆಚ್ಚು ಬಳಸುತ್ತಾರೆ, ಇದು ಆರೋಗ್ಯಕ್ಕೂ ಉತ್ತಮ. ಎಲ್ಲಾ ಆಹಾರಕ್ಕಿಂತ ಕಡಿಮೆ ಕ್ಯಾಲೊರಿ ಇರುವುದು ಕಡಲೆಕಾಳಿನಲ್ಲಿ. ಕಡಲೆಕಾಳನ್ನು ಆಹಾರಕ್ಕೆ ಉಪಯೋಗಿಸಬಹುದು. 

ನಿಮ್ಮ ನೆಚ್ಚಿನ ವರ್ಕ್‌ಔಟ್‌?
ಸೂರ್ಯ ನಮಸ್ಕಾರ ಮಾಡುವುದೆಂದರೆ ನನಗಿಷ್ಟ. ಯೋಗವನ್ನೂ ಹೆಚ್ಚು ಮಾಡುತ್ತೇನೆ, ಇದರಿಂದ ನಮ್ಮ ಆತ್ಮಬಲ ವೃದ್ಧಿಯಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಮತ್ತೂ ಕೆಲವು ಸಮಯ ಯೋಗ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತೇನೆ. ಜಿಮ್‌ನಲ್ಲಿ ವೇಟ್‌ಲಿಫ್ಟಿಂಗ್‌ ಮತ್ತು ಕಾರ್ಡಿಯೊ ಎರಡನ್ನೂ ಮಾಡಿಸುತ್ತಾರೆ. ಅಲ್ಲದೆ, ಥ್ರೆಡ್‌ಮಿಲ್‌ ಮೇಲೆ ಒಂದು ಗಂಟೆ ಸಮಯ ಅಭ್ಯಾಸ ಮಾಡುತ್ತೇನೆ. ನಾನು ಕ್ರೀಡಾಪಟು ಅಲ್ಲದಿದ್ದರೂ ಸುಮಧುರ ಹಾಡು ಕೇಳುತ್ತಾ ‘ಥ್ರೆಡ್‌ಮಿಲ್‌ ರನ್‌’ ಮಾಡುವುದೆಂದರೆ ನನಗಿಷ್ಟ. ಡಾನ್ಸ್‌ ಫಿಟ್‌ನೆಸ್‌ಗೂ ಹೋಗಿ ತಾಲೀಮು ಮಾಡುತ್ತೇನೆ. ನಾವು ಭಾರತೀಯರು ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ, ಹಾಡು ಕೇಳುತ್ತಲೇ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆ. 

*ಫಲಿತಾಂಶ ಹೇಗಿದೆ?
ನನಗೆ ಉತ್ತಮವಾದ ಫಲಿತಾಂಶ ಸಿಕ್ಕಿದೆ. ಕೆಲವರು ಒಂದು ಬಾರಿ ಜಿಮ್‌ಗೆ ಹೋಗಿ ಬಂದರೆ ಊಟದ ಮೇಲೆ ಮಿತಿ ಸಾಧಿಸುವುದಿಲ್ಲ, ಇನ್ನೂ ಕೆಲವರು ಒಂದು ಬಾರಿ ಜಿಮ್‌ಗೆ ಹೋದರೆ ಮತ್ತೆ ಮತ್ತೆ ಹೋಗುತ್ತಲೇ ಇರಬೇಕು ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಇದು ಸುಳ್ಳು. ತಿನ್ನುವುದರಿಂದ ಶೇ 80ರಷ್ಟು ದಪ್ಪವಾದರೆ, ದೇಹದಂಡನೆ ಮಾಡದಿದ್ದರೆ ಶೇ 20ರಷ್ಟು ದಪ್ಪವಾಗುತ್ತೇವೆ. ಕೀಲುಗಳು ಮತ್ತು ಸ್ನಾಯುಗಳಿಗೆ ಶಕ್ತಿ ಬರಲು ಹಾಗೂ ದೇಹ ಆರೋಗ್ಯವಾಗಿರಲು ವರ್ಕ್‌ಔಟ್‌ ಮುಖ್ಯ. ಮನುಷ್ಯ ಮೂರು ಹಿಡಿ ತಿನ್ನಬೇಕು ಎಂಬ ಮಾತಿದೆ, ಆದರೆ ನಾವು ನೋಡಿದ್ದೆಲ್ಲ ತಿನ್ನುತ್ತೇವೆ, ಸಿಕ್ಕಿದ್ದೆಲ್ಲ ತಿನ್ನುತ್ತೇವೆ. ಇದರಿಂದ ಕೊಬ್ಬಿನಂಶ ಹೆಚ್ಚುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಯಾವ ಕಾಯಿಲೆಯೂ ಬರುವುದಿಲ್ಲ ಎಂದು ಮನಸಿನಲ್ಲಿಯೇ ಅಂದುಕೊಂಡರೆ ಬಿಪಿ, ಸಕ್ಕರೆ ಕಾಯಿಲೆಗಳಿಗೆ ಒಳಗಾಗುವುದಿಲ್ಲ.

*ದೇಹದಾರ್ಢ್ಯ ಮಾಡುವ ಯುವಜನರಿಗೆ ಏನು ಹೇಳಬಯಸುತ್ತೀರಿ?
ಇತ್ತೀಚೆಗೆ ಬಹಳಷ್ಟು ಯುವಕ–ಯುವತಿಯರು ಫಿಟ್‌ನೆಸ್‌ ಅಭ್ಯಾಸ ಮಾಡುತ್ತಿದ್ದಾರೆ. ತೀರಾ ದಪ್ಪ ಆದಾಗ ಅಭ್ಯಾಸ ಮಾಡಬೇಡಿ. ನಿಮಗೆ ನೀವು ಒಂದು ಅಥವಾ ಎರಡಿಂಚು ದಪ್ಪ ಆಗಿರುವುದಾಗಿ ಅರಿವಿಗೆ ಬಂದಾಗ ವರ್ಕ್‌ಔಟ್‌ ಮಾಡಿ. ಜಿಮ್‌ಗೆ ಹೋದರೂ ಸಣ್ಣ ಆಗುವುದಿಲ್ಲ, ಔಷಧಿ ತೆಗೆದುಕೊಂಡರೂ ಪ್ರಯೋಜನವಾಗಲಿಲ್ಲ ಎಂದು ಹೇಳುವಾಗಿಲ್ಲ. ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು..

*ದೇಹದಲ್ಲಿ ಕೊಬ್ಬು ಕರಗಿಸಲು ಔಷಧಗಳನ್ನು ಸೇವಿಸುತ್ತಾರೆ, ಇದು ಎಷ್ಟು ಪರಿಣಾಮಕಾರಿ?
ಔಷಧಗಳನ್ನು ಸೇವಿಸುವುದರಿಂದ ಬಹುಬೇಗ ಫಲಿತಾಂಶ ಪಡೆದರೂ ಅದು ಕ್ಷಣಿಕ. ಕೆಲವೊಮ್ಮೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದಕ್ಕಿಂತ ಹಣ್ಣು, ತರಕಾರಿ ಮತ್ತು ಹೆಚ್ಚಿನ ಪೋಷಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಧಾನ್ಯ ತಿನ್ನುವುದರಿಂದ ನಮ್ಮ ದೇಹದ ಕೊಬ್ಬು ಕರಗುತ್ತದೆ. ಮನೆಯಲ್ಲೇ ತಯಾರಿಸುವಂತಹ ಮದ್ದುಗಳಿರುತ್ತವೆ ಅದನ್ನು ಸೇವಿಸಬಹುದು. ಚಕ್ಕೆಯನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಉತ್ತಮ ಫಲಿತಾಂಶ ಸಿಗುವುದು. ಬೆಳಗ್ಗೆ ಎದ್ದಾಗ ನಿಂಬೆಹಣ್ಣಿನ ಹುಳಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಿದರೆ ಕೊಬ್ಬು ಕರಗುತ್ತದೆ. ಬೆಳಗಿನಿಂದ ರಾತ್ರಿ ತನಕ ಬಿಸಿ ನೀರನ್ನು ಕುಡಿದರೆ ಅದೂ ಸಹ ದೇಹದಲ್ಲಿ ಕೊಬ್ಬು ಕರಗಿಸುವುದಲ್ಲದೆ, ತಿಂಗಳಿಗೆ ಎರಡು ಕೆಜಿಯಾದರೂ ಸಣ್ಣವಾಗಬುದು.

ಪ್ರತಿಕ್ರಿಯಿಸಿ (+)