ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆರಿಗೆ ನಂತರದ ಬೆನ್ನುನೋವು; ಅನಸ್ತೇಶಿಯಾ ಕಾರಣವೇ?

Published : 5 ಅಕ್ಟೋಬರ್ 2021, 7:39 IST
ಫಾಲೋ ಮಾಡಿ
Comments

ಹೆರಿಗೆಯಾದವರಲ್ಲಿ ಬೆನ್ನುನೋವಿನ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹೆರಿಗೆಯಾಗಿ ಕೆಲ ತಿಂಗಳುಗಳವರೆ‌ಗೆ ಅಥವಾ ಮಗುವಾಗಿ ಒಂದೆರಡು ವರ್ಷಗಳ ನಂತರವೂ ಬೆನ್ನುನೋವಿನ ಸಮಸ್ಯೆ ಕಾಡಬಹುದು. ಅದರಲ್ಲೂ ಸಿಸೇರಿಯನ್ ಅಥವಾ ಸಿ–ಸೆಕ್ಷನ್ ಆದವರಲ್ಲಿ ಬೆನ್ನುನೋವು ಹೆಚ್ಚು ಕಾಡುತ್ತದೆ. ಇದಕ್ಕೆ ಹೆರಿಗೆ ಸಮಯದಲ್ಲಿ ನೀಡುವ ಅನಸ್ತೇಶಿಯಾ ಇಂಜೆಕ್ಷನ್‌ ಕಾರಣ ಎಂಬುದು ಹಲವರ ಅಭಿಪ್ರಾಯ. ಹಾಗಾದರೆ ಹೆರಿಗೆ ನಂತರದ ಬೆನ್ನುನೋವಿಗೆ ನಿಜವಾದ ಕಾರಣವೇನು, ಬಾಣಂತಿಯರು ಬೆನ್ನಿನ ಕಾಳಜಿ ಮಾಡುವುದು ಹೇಗೆ ಎಂಬ ವಿಷಯವಾಗಿ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಇಂಟರ್‌ವೆಂಷನಲ್‌ ಪೈನ್‌ ಸ್ಪೈನ್‌ ಸೆಂಟರ್‌ನ ವೈದ್ಯೆ ಡಾ. ರೇಣು ದಡಿಯಾಲ

* ಹೆರಿಗೆ ನಂತರ ಕಾಣಿಸುವ ಬೆನ್ನುನೋವಿಗೆ ಅನಸ್ತೇಶಿಯಾ ಇಂಜೆಕ್ಷನ್‌ ಕಾರಣ ಎನ್ನುವುದು ನಿಜವೇ, ತಪ್ಪುಕಲ್ಪನೆಯೇ?

ಹೆರಿಗೆಯಾದ ಮೇಲೆ ಬೆನ್ನುನೋವು ಕಾಣಿಸುವುದು ಸಹಜ. ಸಿ–ಸೆಕ್ಷನ್ ಹೆರಿಗೆ ಮಾಡಿಸಿಕೊಂಡವರಿಗೆ ಹೆರಿಗೆ ಸಮಯದಲ್ಲಿ ಕೊಡುವ ಅನಸ್ತೇಶಿಯಾ ಇಂಜೆಕ್ಷನ್‌ ಕಾರಣ ಎನ್ನುವುದು ಜನರಲ್ಲಿನ ತಪ್ಪು ಅಭಿಪ್ರಾಯ. ಅನಸ್ತೇಶಿಯಾಕ್ಕೂ ಬೆನ್ನುನೋವಿಗೂ ಯಾವುದೇ ಸಂಬಂಧವಿಲ್ಲ. ಹೆಣ್ಣು ಗರ್ಭವತಿಯಾದಾಗ ಸೊಂಟದ ಸುತ್ತಲೂ ಹಾಗೂ ಬೆನ್ನಿನ ಕೆಳಭಾಗದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆಯಾದ ಹಾಗೆ ತಾಯಿಯ ದೇಹರಚನೆಯಲ್ಲೂ ಬದಲಾವಣೆಗಳಾಗುತ್ತವೆ. ಇದರಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ.

* ಬಾಣಂತಿಯರಲ್ಲಿ ಕಾಣಿಸಿಕೊಳ್ಳುವ ಬೆನ್ನುನೋವಿಗೆ ಪ್ರಮುಖ ಕಾರಣಗಳು ಯಾವುವು?

ಬಾಣಂತಿಯರ ಬೆನ್ನುನೋವಿಗೆ ಮೂರು ಪ್ರಮುಖ ಕಾರಣಗಳು. ಮೊದಲನೆಯದ್ದು ಬೆನ್ನಿನ ಕೆಳ ಭಾಗದ ಮೂಳೆಯಲ್ಲಿ ವಕ್ರತೆ ಹೆಚ್ಚುವುದು, ಎರಡನೆಯದ್ದು ಮಗು ಬೆಳವಣಿಗೆಯಾದ ಹಾಗೆ ನರಗಳಲ್ಲಿ ಆಗುವ ಬದಲಾವಣೆ, ಮೂರನೆಯದ್ದು ಪ್ರೆಗ್ನೆನ್ಸಿ ಹಾರ್ಮೋನ್‌ನ ಹರಡುವಿಕೆ.

* ಹೆರಿಗೆಯ ನಂತರ ನೆಲದ ಮೇಲೆ ಕುಳಿತುಕೊಳ್ಳುವುದು, ವ್ಯಾಯಾಮ ಮಾಡುವುದು ಇದರಿಂದಲೂ ಬೆನ್ನು ನೋವು ಬರುತ್ತದೆ ಎನ್ನುತ್ತಾರೆ. ಇದು ನಿಜವೇ?

ಈ ಜಗತ್ತಿನಲ್ಲಿ ಪ್ರತಿಯೊಂದು ಹೆಣ್ಣು ಪ್ರಾಣಿಯು ಗರ್ಭ ಧರಿಸುತ್ತದೆ. ಗರ್ಭಾವಸ್ಥೆ ಎನ್ನುವುದು ನೈಸರ್ಗಿಕ ಪ್ರಕ್ರಿಯೆಯೇ ಹೊರತು ಇದು ಕಾಯಿಲೆ ಅಲ್ಲ. ಗರ್ಭಿಣಿ ಹೆಂಗಸನ್ನು ಎಂದಿಗೂ ಪ್ರೆಗ್ನೆಂಟ್ ಪೇಷೆಂಟ್ ಎಂದು ಕರೆಯುವುದಿಲ್ಲ. ಆದರೆ ಗರ್ಭಿಣಿ ಮಹಿಳೆಗೆ ವೈದ್ಯರು ಸರಿಯಾಗಿ ಮಾರ್ಗದರ್ಶನ ಮಾಡುವುದು ಅಗತ್ಯ. ಗರ್ಭ ಧರಿಸಿದ ನಂತರ ಆಗುವ ಬದಲಾವಣೆಗಳ ಬಗ್ಗೆ ವಿವರಿಸಿ ವ್ಯಾಯಾಮ, ವಾಕಿಂಗ್‌ ಮಾಡುವುದು, ಕುಳಿತುಕೊಳ್ಳುವ ಕ್ರಮ ಎಲ್ಲದರ ಬಗ್ಗೆಯೂ ವಿವರಿಸಿ ಹೇಳಬೇಕು. ಹೆರಿಗೆಯಾದ ಬಳಿಕ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೂ ಬೆನ್ನುನೋವಿಗೂ ಸಂಬಂಧವಿಲ್ಲ. ಗರ್ಭ ಧರಿಸಿದ ಮೇಲೆ ಬೆನ್ನಿನ ಸ್ನಾಯುಗಳಲ್ಲಿ ಬದಲಾವಣೆಯಾಗುತ್ತವೆ. ಇದರಿಂದ ಮಗುವಾದ ಮೇಲೂ ಬೆನ್ನುನೋವಿನ ಸಮಸ್ಯೆ ಬರುವುದು ಸಹಜ. ದಿನಕಳೆದಂತೆ ಬೆನ್ನುನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

* ಗರ್ಭಿಣಿಯರು ವ್ಯಾಯಾಮ ಮಾಡಬಹುದೇ?

ಖಂಡಿತವಾಗಲೂ ಮಾಡಬಹುದು. ತೀರಾ ಕಷ್ಟದ ವ್ಯಾಯಾಮ ಮಾಡುವುದು ಸರಿಯಲ್ಲ. ಆದರೆ ಸರಳವಾದ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಬೆನ್ನಿನ ಭಾಗ ಸದೃಢವಾಗುತ್ತದೆ. ಅಲ್ಲದೇ ಇದರಿಂದ ಸೊಂಟ ಹಾಗೂ ಬೆನ್ನಿನ ಕೆಳ ಭಾಗ ಸ್ನಾಯುಗಳು ಗಟ್ಟಿಯಾಗುತ್ತವೆ. ಇದು ಹೆರಿಗೆಯಾದ ಮೇಲೆ ಬೆನ್ನುನೋವಿನ ಸಮಸ್ಯೆ ಪರಿಹಾರಕ್ಕೂ ದಾರಿ.

* ಸಿ– ಸೆಕ್ಷನ್ ಡೆಲಿವರಿ ಆದವರಿಗಷ್ಟೇ ಬೆನ್ನುನೋವು ಬರುತ್ತದೆಯೇ ಅಥವಾ ಸಹಜ ಹೆರಿಗೆ ಆದವರಲ್ಲೂ ಕಾಣಿಸುತ್ತದೆಯೇ?

ಮಗುವನ್ನು ಹಡೆದ ಪ್ರತಿ ತಾಯಿಗೂ ಬೆನ್ನುನೋವಿನ ಸಮಸ್ಯೆ ಕಾಡುವುದು ಸಹಜ. ಅದಕ್ಕೆ ಸಹಜ ಹೆರಿಗೆ ಅಥವಾ ಸಿ–ಸೆಕ್ಷನ್ ಎಂಬ ವ್ಯತ್ಯಾಸವಿಲ್ಲ. ಸಹಜ ಹೆರಿಗೆ ಆದವರಿಗೂ ಆ್ಯಪಿಡ್ಯೂರಲ್ ಎಂಬ ಇಂಜೆಕ್ಷನ್ ನೀಡಲಾಗುತ್ತದೆ. ಆದರೆ ಇದು ಬೆನ್ನುನೋವಿಗೆ ಕಾರಣವಾಗುವುದಿಲ್ಲ.

* ಹೆರಿಗೆಯಾದ ನಂತರ ವ್ಯಾಯಾಮ ಮಾಡಬಹುದೇ?

ಹೆರಿಗೆಯಾದ ನಂತರ ದೇಹ ಸಹಜಸ್ಥಿತಿಗೆ ಬರುವುದು ತುಂಬಾ ಮುಖ್ಯ. ಆ ಕಾರಣಕ್ಕೆ ಕೆಲ ದಿನಗಳ ನಂತರ ವ್ಯಾಯಾಮ ಆರಂಭಿಸುವುದು ಅತೀ ಅಗತ್ಯ. ಸಹಜ ಹೆರಿಗೆ ಆದರೆ ಒಂದು ವಾರ ಅಥವಾ ಹತ್ತು ದಿನಗಳ ನಂತರ ವ್ಯಾಯಾಮ ಮಾಡಲು ಆರಂಭಿಸಬಹುದು. ಸಿ–ಸೆಕ್ಷನ್ ಆದವರು 6 ರಿಂದ 8 ವಾರಗಳವರೆಗೆ ವ್ಯಾಯಾಮ ಮಾಡುವುದು ಸರಿಯಲ್ಲ. ಆದರೆ ಮನೆಯಲ್ಲೇ ವಾಕಿಂಗ್ ಮಾಡಬಹುದು. ಮೊದಲು ಸರಳ ವ್ಯಾಯಾಮಗಳನ್ನಷ್ಟೇ ಮಾಡಬಹುದು. ಆದರೆ ಮೂರು ತಿಂಗಳ ನಂತರ ಎಲ್ಲಾ ರೀತಿಯ ವ್ಯಾಯಾಮಗಳನ್ನೂ ಮಾಡಬಹುದು.

* ಸಿ ಸೆಕ್ಷನ್ ಡೆಲಿವರಿ ಆದವರು ತಮ್ಮ ಬೆನ್ನಿನ ಕಾಳಜಿ ಮಾಡುವುದು ಹೇಗೆ?

ಸಿ–ಸೆಕ್ಷನ್ ಡೆಲಿವರಿ ಆದವರು 15 ದಿನಗಳ ನಂತರ ಬೆಲ್ಟ್ ಧರಿಸಿ ತಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಳ್ಳಬಹುದು. ನಿಧಾನಕ್ಕೆ ವಾಕ್ ಮಾಡುವುದು, ಅಡುಗೆ ಮನೆಯಲ್ಲಿ ನಿಂತು ಮಾಡುವ ಕೆಲಸಗಳನ್ನು ಮಾಡಬಹುದು. ಆದರೆ ಒಗ್ಗಿಕೊಂಡು ಕೆಲಸ ಮಾಡುವುದು ಮಾಡಬಾರದು. ಬಾಣಂತಿ ಮಲಗೇ ಇರಬೇಕು ಎಂಬುದೆಲ್ಲಾ ಇಲ್ಲ. ವಾರಗಳ ನಂತರ ಎದ್ದು ಸಹಜವಾಗಿ ಓಡಾಡಿಕೊಂಡು ಇರಬಹುದು. ಇದರೊಂದಿಗೆ ಸರಿಯಾದ ಕ್ರಮದಲ್ಲಿ ಆಹಾರ ಸೇವಿಸುವುದು ಅಗತ್ಯ.

* ಮಲಗುವ ಹಾಗೂ ಕುಳಿತುಕೊಳ್ಳುವ ಭಂಗಿಯಲ್ಲಿ ವ್ಯತ್ಯಾಸವಾದರೆ ನೋವು ಕಾಣಿಸುವ ಸಾಧ್ಯತೆ ಇದೆಯೇ?

ಕೆಲವೊಮ್ಮೆ ಭಂಗಿಯೂ ಮುಖ್ಯವಾಗುತ್ತದೆ. ಹೆರಿಗೆಯಾದ ಮೇಲೆ ತಾಯಿಯಾದವಳು ಮಗುವಿಗೆ ಹಾಲೂಡಿಸುವ ಕಾರಣದಿಂದ ಹೆಚ್ಚು ಹೊತ್ತು ಕುಳಿತುಕೊಂಡೇ ಇರಬೇಕಾಗುತ್ತದೆ. ಕುಳಿತಿರುವಾಗ ಬೆನ್ನಿಗೆ ಸಪೋರ್ಟ್ ನೀಡುವುದು ಮುಖ್ಯವಾಗುತ್ತದೆ. ಆ ಕಾರಣಕ್ಕೆ ತೊಡೆ ಹಾಗೂ ಬೆನ್ನಿನ ಹಿಂಭಾಗಕ್ಕೆ ದಿಂಬನ್ನು ಇರಿಸಿಕೊಂಡು ಹಾಲೂಡಿಸಬೇಕು. ಆಗ ಬೆನ್ನಿನ ಮೇಲೆ ಹೆಚ್ಚು ಭಾರ ಹಾಕಬೇಕು ಎಂದಿರುವುದಿಲ್ಲ.

* ಬಾಣಂತಿಯರ ಬೆನ್ನುನೋವಿಗೂ ಆಹಾರಕ್ರಮಕ್ಕೂ ಸಂಬಂಧವಿದೆಯೇ? ಅವರ ಆಹಾರಕ್ರಮ ಹೇಗಿರಬೇಕು?

ಹಿಂದಿನಿಂದಲೂ ಬಾಣಂತಿಯರಿಗೆಂದೇ ಸಾಂಪ್ರದಾಯಿಕ ಆಹಾರ ತಯಾರಿಸಿ ನೀಡುವುದು ವಾಡಿಕೆ. ಇದರೊಂದಿಗೆ ಹಾಲು ಉತ್ಪತ್ತಿಯಾಗುವ ಉದ್ದೇಶದಿಂದ ತುಪ್ಪವನ್ನು ಹೆಚ್ಚು ಹೆಚ್ಚು ಕೊಡುತ್ತಾರೆ. ಆದರೆ ಎದೆಹಾಲು ಹೆಚ್ಚಲು ತಾಯಿಯಾದವಳು ಎಷ್ಟು ನೀರಿನಂಶ ಸೇವಿಸುತ್ತಾಳೆ ಎಂಬುದು ಮುಖ್ಯವಾಗುತ್ತದೆ. ನೀರು, ಮಜ್ಜಿಗೆ ಮುಂತಾದವುಗಳ ಸೇವನೆ ಹೆಚ್ಚಿದಷ್ಟೂ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ. ಇದರೊಂದಿಗೆ ಹೆಚ್ಚು ಹೆಚ್ಚು ಹಣ್ಣು, ತರಕಾರಿ, ಹಸಿರು ಸೊಪ್ಪಿನ ಸೇವನೆಯೂ ಮುಖ್ಯ. ತಾಯಿ ಸೇವಿಸುವ ಆಹಾರವೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

* ಕುಳಿತು ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆಯ ನಂತರ ಹೆಚ್ಚು ಬೆನ್ನುನೋವಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಅವರು ದಿನವಿಡೀ ಒಂದೇ ಕುಳಿತು ಕೆಲಸ ಮಾಡುವುದು ಕಾರಣವೇ?

ಇದಕ್ಕೂ ಬೆನ್ನುನೋವಿಗೂ ಯಾವುದೇ ಸಂಬಂಧವಿಲ್ಲ. ಹೆಚ್ಚಿನ ಮಹಿಳೆಯರಿಗೆ ಹೆರಿಗೆಯ ನಂತರ ತಮ್ಮ ಬೆನ್ನಿನ ಕಾಳಜಿ ಹೇಗೆ ಮಾಡಬೇಕು ಎಂಬುದರ ಅರಿವು ಇರುವುದಿಲ್ಲ. ಮಗುವನ್ನು ಪಡೆದ ಸಂಭ್ರಮದಲ್ಲಿ ದೇಹದ ಒಳಗೆ ಏನಾಗುತ್ತದೆ ಎಂಬುದರ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. 9 ತಿಂಗಳಲ್ಲಿ ನಿಮ್ಮ ಬೆನ್ನಿನ ಭಾಗ ದುರ್ಬಲವಾಗಿರುತ್ತದೆ. ಮನೆಯಲ್ಲಿ ಇರುವಾಗ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡು, ಬೆನ್ನಿನ ಕಾಳಜಿ ಮಾಡಬೇಕು. ವಾಕಿಂಗ್‌, ವ್ಯಾಯಾಮ ಹಾಗೂ ಯೋಗ ನಿರಂತರವಾಗಿ ಮಾಡುವುದರಿಂದ ಬೆನ್ನುನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT