ಬುಧವಾರ, ಆಗಸ್ಟ್ 17, 2022
25 °C

ಕೊರೊನಾ ಒಂದಿಷ್ಟು ತಿಳಿಯೋಣ: ‘ದುಗುಡ ಮರೆಯಲು ಚಟುವಟಿಕೆಯಿಂದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾದ ಪರೋಕ್ಷ ಪರಿಣಾಮ ಬಹುತೇಕ ಪ್ರತಿಯೊಬ್ಬರ ಮೇಲೂ ಆಗಿದೆ. ಈಗಂತೂ ಚಳಿಗಾಲ ಕಾಲಿಟ್ಟಿದ್ದು, ಹಗಲಿನ ಅವಧಿ ಕಡಿಮೆಯಾಗಿದೆ. ಈಗಾಗಲೇ ಮನೆಯೊಳಗೆ ಹೆಚ್ಚು ಸಮಯ ಕಳೆಯುತ್ತಿರುವವರು, ಅದರಲ್ಲೂ ವಿಶೇಷವಾಗಿ ವೃದ್ಧರು ಮನೆಗೇ ಅಂಟಿಕೊಳ್ಳುವಂತಾಗಿದೆ. ಇದು ಮಾನಸಿಕವಾಗಿ ಇನ್ನಷ್ಟು ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದೊಂದು ರೀತಿಯ ಸೌಮ್ಯ ಖಿನ್ನತೆ ಹಾಗೂ ದುಗುಡವನ್ನು ಹೆಚ್ಚಿಸುತ್ತದೆ ಎಂದು ‘ಅನ್ನಲ್ಸ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌’ನಲ್ಲಿ ಪ್ರಕಟವಾದ ಅಧ್ಯಯನದ ವರದಿಯಲ್ಲಿ ತಜ್ಞರಾದ ಎರಿಕ್‌ ಫ್ಲೀಗ್ಲರ್‌, ಲೂಯಿಸ್‌ ಲೀ ಮೊದಲಾದವರು ಎಚ್ಚರಿಸಿದ್ದಾರೆ.

ವಿಟಮಿನ್‌ ‘ಡಿ’ಯಲ್ಲಾಗುವ ಕುಸಿತ, ಮೂಡ್‌ ಅನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಉತ್ಪಾದನೆಯಲ್ಲಾಗುವ ಏರುಪೇರು ಇದಕ್ಕೆ ಕಾರಣ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ. ಆದರೆ ಈಗಾಗಲೇ ಕಡಿಮೆಯಾಗಿರುವ ಸಾಮಾಜಿಕವಾಗಿ ಬೆರೆಯುವ ಸಂದರ್ಭ, ಹೆಚ್ಚಿರುವ ಒತ್ತಡ, ಕೆಲವರು ಕೆಲಸ ಕಳೆದುಕೊಂಡಿರುವುದು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಚಳಿಗಾಲದಲ್ಲಿ ದೇಹದ ಜೊತೆ ಮುದುಡುವ ಮನಸ್ಸಿಗೆ ಉಲ್ಲಾಸ ತುಂಬಲು ಹಿಂದೆ ಬೇಕಾದಷ್ಟು ಅವಕಾಶಗಳಿದ್ದವು. ಪ್ರವಾಸ ಮಾಡಬಹುದಿತ್ತು, ಸ್ನೇಹಿತರ ಜೊತೆ ಪಾರ್ಟಿ, ಸಮಾರಂಭಗಳು ಎಂದು ಬರೆಯಬಹುದಿತ್ತು. ಆದರೆ ಈ ಬಾರಿ ಕೋವಿಡ್‌ನಿಂದಾಗಿ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದರಿಂದ ದುಗುಡದಂತಹ ಲಕ್ಷಣಗಳು ಹೆಚ್ಚಾಗಬಹುದು ಎಂದು ಎಚ್ಚರಿಸಲಾಗಿದೆ.

‘ವೃದ್ಧರು ಚಳಿಗಾಲದಲ್ಲಿ ಹೊರಗಡೆ ಓಡಾಡುವುದರಿಂದ ಮೂಳೆಗೆ ಸಮಸ್ಯೆಯಾಗಬಹುದು. ಹೀಗಾಗಿ ಮನೆಯೊಳಗೇ ಇರುವ ಸಂದರ್ಭ ಬರುತ್ತದೆ. ಇದು ಒಂದು ರೀತಿಯ ಬೇಸರ ಮೂಡಿಸುತ್ತದೆ’ ಎನ್ನುತ್ತಾರೆ ಆಪ್ತ ಸಮಾಲೋಚಕ ನಡಹಳ್ಳಿ ವಸಂತ್‌.

ಈ ಸಂದರ್ಭದಲ್ಲಿ ಅಸಹಾಯಕತೆ, ಒಂಟಿತನದ ಭಾವನೆ ಜಾಸ್ತಿಯಾಗಬಹುದು. ಆಯಾಸವಾದಂತೆ ಎನಿಸಬಹುದು. ಯಾವುದೇ ಚಟುವಟಿಕೆ ನಡೆಸಲು ಆಸಕ್ತಿ ಕಡಿಮೆಯಾಗಬಹುದು. ನಿದ್ರೆಗೆ ತೊಂದರೆಯಾಗಬಹುದು ಮತ್ತು ಜಂಕ್‌ ಫುಡ್‌ ತಿನ್ನುವ ಬಯಕೆ ಹೆಚ್ಚಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ವಯಸ್ಕರನ್ನು ಮಾತ್ರವಲ್ಲ, ಹದಿಹರೆಯದವರು ಹಾಗೂ ಮಕ್ಕಳನ್ನೂ ಈ ಲಕ್ಷಣಗಳು ಕಾಡಬಹುದು.

ಇದರಿಂದ ಹೊರಬರುವುದು ಸಾಧ್ಯವಿಲ್ಲವೇ? ಇದೆ ಎನ್ನುತ್ತಾರೆ ತಜ್ಞರು. ಕುಟುಂಬದವರ ಜೊತೆ ಮನಬಿಚ್ಚಿ ಮಾತನಾಡಬೇಕು. ಸ್ನೇಹಿತರು ಮತ್ತು ಬಂಧುಗಳ ಜೊತೆ ಫೋನ್‌ನಲ್ಲಿ ಮಾತನಾಡಬಹುದು.

‘ಕೋವಿಡ್‌ಗಿಂತ ಮುನ್ನ ಮಾಡುತ್ತಿದ್ದ ಚಟುವಟಿಕೆಗಳನ್ನು, ಹವ್ಯಾಸಗಳನ್ನು ಪುನಃ ಆರಂಭಿಸಬಹುದು’ ಎನ್ನುವ ವಂಸತ್‌, ‘ಕುಟುಂಬದವರ ಜೊತೆ ಹಳೆಯ ಹಾಡಿಗೆ ಹೆಜ್ಜೆ ಹಾಕುವಂತಹ ಚಟುವಟಿಕೆ ಮನಸ್ಸಿಗೆ ಮುದ ನೀಡುತ್ತದೆ’ ಎನ್ನುತ್ತಾರೆ.

ಸಾಕಷ್ಟು ವ್ಯಾಯಾಮ ಮಾಡಿ. ಒಳ್ಳೆಯ ಆಹಾರ ಸೇವಿಸಿ. ಮನೆಯೊಳಗೆ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳುವುದರಿಂದ ಈ ಖಿನ್ನತೆಯ ಭಾವನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನದ ವರದಿಯಲ್ಲಿ ಸಲಹೆ ನೀಡಲಾಗಿದೆ. ಹಾಗೆಯೇ ಬೆಳಗಿನ ಬಿಸಿಲಿಗೆ ಒಂದಿಷ್ಟು ಒಡ್ಡಿಕೊಂಡರೆ ಉಲ್ಲಾಸದ ಭಾವನೆ ಮನಸ್ಸಿನಲ್ಲಿ ಮೂಡಬಹುದು. ಇದರಿಂದ ಸ್ವಲ್ಪಮಟ್ಟಿಗೆ ಆತಂಕವನ್ನು ಮರೆಯಬಹುದು ಎಂದೂ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು