ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ ಕುಶಲ: ಸಹಜ ಹೆರಿಗೆಯ ಲಾಭಗಳು

ಡಾ. ಜಯಲಕ್ಷ್ಮಿ ಎಂ. ನಾಯ್ಕ್
Published 12 ಆಗಸ್ಟ್ 2024, 23:47 IST
Last Updated 12 ಆಗಸ್ಟ್ 2024, 23:47 IST
ಅಕ್ಷರ ಗಾತ್ರ

ತಾಯ್ತನ ಹೆಣ್ಣಿನ ಜೀವನದ ಅವಿಸ್ಮರಣೀಯ ಅನುಭವ. ಹೆಣ್ಣು ತಾನು ಗರ್ಭಿಣಿ ಎಂದು ತಿಳಿದಂದಿನಿಂದಲೇ ತನ್ನ ಆರೋಗ್ಯದ ಬಗ್ಗೆ, ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾರಂಭಿಸುತ್ತಾಳೆ. ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸುತ್ತಾಳೆ. ಏಕೆಂದರೆ ಅವಳಿಗೆ ತನಗೆ ಹುಟ್ಟುವ ಮಗು ಗರ್ಭದಲ್ಲಿ ಸದೃಢವಾಗಿ ಬೆಳೆಯಬೇಕೆಂಬ ಆಸೆ. ಆದರೆ ಇದೇ ಕಾಳಜಿಯನ್ನು ಹೆರಿಗೆಯ ಬಗ್ಗೆಯಾಗಲೀ, ನಂತರದಲ್ಲಿ ಮಗುವಿನ ಪೋಷಣೆಯಲ್ಲಾಗಲೀ ಕಂಡುಬರುವುದಿಲ್ಲ. ಹೆರಿಗೆಯ ಪ್ರಕ್ರಿಯೆ ಹಾಗೂ ಸಂಪೂರ್ಣ ಎದೆಹಾಲು ನೀಡುವಿಕೆ – ಇವೆರಡು ಮಗುವಿನ ಸರ್ವತೋಮುಖ ಬೆಳವಣಿಗೆಯ ಮೇಲೆ ತುಂಬಾ ಪರಿಣಾಮವನ್ನು ಬಿರುತ್ತದೆ ಎಂಬುದನ್ನು ಗರ್ಭಿಣಿ ಹಾಗೂ ಅವಳ ಮನೆಯವರೆಲ್ಲರೂ ತಿಳಿಯಬೇಕಾಗಿದೆ.

ಅಧ್ಯಯನದ ಪ್ರಕಾರ ಶೇ‌ 85ರಷ್ಟು ಗರ್ಭವತಿಯರಿಗೆ ಸಹಜ ಹೆರಿಗೆಯಾಗುವ ಸಾಧ್ಯತೆಯಿರುತ್ತದೆ. ಉಳಿದ ಶೇ‌ 15ರಷ್ಟು ಗರ್ಭವತಿಯರಿಗೆ ಮಾತ್ರವೇ ‘ಸಿಸರೇನಿಯನ್’ ಅಥವಾ ‘ಸಿ–ಸೆಕ್ಷನ್’ ಹೆರಿಗೆಯ ಅಗತ್ಯ ಎದುರಾಗಬಹುದು.


ಈ ಹಿಂದೆ, ‘ಸಿಸೆರಿಯನ್ ಹೆರಿಗೆ’ ಎಂದರೆ ಬಹು ದೊಡ್ಡ ಆಪರೇಶನ್ ಎಂಬ ಕಲ್ಪನೆ ಇತ್ತು; ಅದು ವಿರಳವೂ ಆಗಿತ್ತು. ಆದರೆ ಈಗ ಶೇ  70-80ರಷ್ಟು ಹೆರಿಗೆಗಳು ಸಿಸೇರಿಯನ್‌ಗಳಾಗುತ್ತಿವೆ. ಇದಕ್ಕೆ ಕಾರಣ ವೈದ್ಯಕೀಯ ಅಡೆತಡೆಗಳು ಕೆಲವಾದರೆ, ಸಹಜ ಹೆರಿಗೆಯ ಜೊತೆಯಲ್ಲಿರುವ ನೋವಿನ ಕಾರಣ ಎಷ್ಟೋ ಮಹಿಳೆಯರು ‘ಸಿ-ಸೆಕ್ಷನ್ ಡೆಲಿವರಿ’ಯನ್ನು ಆರಿಸಿಕೊಳ್ಳುತ್ತಾರೆ. ಸಿಸೇರಿಯನ್ ಪ್ರಕ್ರಿಯೆಯು ಕಡಿಮೆ ನೋವು ಮತ್ತು ಹೆರಿಗೆಯ ಸುಲಭತೆಯ ಭರವಸೆಯನ್ನು ಕೊಡುತ್ತದೆ. ಹೀಗಾಗಿ ಇದು ತಾಯಂದಿರು ಮತ್ತು ವೈದ್ಯರ ಮೊದಲ ಆಯ್ಕೆಯಾಗಿದೆ. ಬಹುಶಃ ಈಗಿನ ವೈದ್ಯರಿಗೆ ಸಹಜ ಹೆರಿಗೆ ಮಾಡಿಸುವಷ್ಟು ತಾಳ್ಮೆ ಇಲ್ಲ ಹಾಗೂ ಈಗಿನ ಗರ್ಭಿಣಿಯರಿಗೆ ಹೆರಿಗೆಯ ನೋವನ್ನು ತಡೆದುಕೊಳ್ಳುವಷ್ಟು ಶಕ್ತಿ ಇಲ್ಲ ಎನಿಸುತ್ತದೆ. ಈ ಕಾರಣದಿಂದ ಸಹಜ ಹೆರಿಗೆಗಳು ಬಹಳಷ್ಟು ಕಡಿಮೆಯಾಗಿವೆ; ಅವುಗಳಿಂದ ಆಗುವ ಲಾಭಗಳಿಂದ ಇಂದಿನ ಪೀಳಿಗೆ ವಂಚಿತವಾಗುತ್ತಿದೆ.

ಮಹಿಳೆಯ ದೇಹವು ಸಾಮಾನ್ಯ ಹೆರಿಗೆಯನ್ನು ನಿಭಾಯಿಸಲು ವಿನ್ಯಾಸಗೊಂಡಿದೆ. ಸರಿಯಾದ ಸಮಯಕ್ಕೆ ಅವಧಿ ತುಂಬಿದ ಮಗುವಿಗೆ ಸಹಜ ಹೆರಿಗೆಯಿಂದ ಜನ್ಮವಾಗುವುದು ಪ್ರಕೃತಿಯ ನಿಯಮ. ಯೋನಿಯ ಮೂಲಕ ಆಗುವ ಜನನದಿಂದ ತಾಯಿ– ಮಗುವಿಗಿಬ್ಬರಿಗೂ ಅನೇಕ ಪ್ರಯೋಜನಗಳಿವೆ:

ತಾಯಿಗೆ ಆಗುವ ಲಾಭಗಳು

  • ವೇಗವಾಗಿ ಚೇತರಿಸಿಕೊಳ್ಳುವುದು

  • ಒಂದು ಅಥವಾ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಬಹುದು

  • ಯಾವುದೇ ಸೋಂಕುಗಳು ಅಥವಾ ತೊಡಕುಗಳಿಲ್ಲದಿರುವುದು

  • ಕನಿಷ್ಠ ನೋವು

  • ಅರಿವಳಿಕೆ ಅಪಾಯವಿಲ್ಲ

  • ಪ್ರಸವಾನಂತರದ ತಕ್ಷಣದ ಆರೈಕೆ

  • ಶೀಘ್ರ ಹಾಲು ಉತ್ಪತ್ತಿ; ಮಗುವಿಗೆ ಬೇಗ ಹಾಲುಣಿಸಬಹುದು

  • ತಾಯಿ–ಮಗುವಿನ ತಡೆರಹಿತ ಗಟ್ಟಿಸಂಬಂಧದ ಬೆಸೆಗೆ


ಮಗುವಿಗೆ ಆಗುವ ಲಾಭಗಳು

1. ಉಸಿರಾಟದ ಸಮಸ್ಯೆಗಳ ಕಡಿಮೆ ಅಪಾಯ


ಯೋನಿಯ ಮೂಲಕ ಜನನವಾಗುವಾಗ ಮಗುವಿನ ಎದೆಯು ಸಂಕುಚಿತಗೊಂಡು, ಎದೆಯಲ್ಲಿ ಇರುವ ‘ಆಮ್ನಿಯೋಟಿಕ್ ದ್ರವ’ವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಮಗುವಿನ ಶ್ವಾಸಕೋಶವು ಸ್ಪಷ್ಟವಾಗುತ್ತದೆ. ಉಸಿರಾಟದ ಸಮಸ್ಯೆಗಳ ಅಪಾಯವು ಬಹಳವಾಗಿ ಕಡಿಮೆಯಾಗುತ್ತದೆ.

2. ರೋಗಗಳಿಂದ ನೈಸರ್ಗಿಕ ರಕ್ಷಣೆ


ಯೋನಿಯ ಮೂಲಕ ಜನಿಸಿದ ಶಿಶುಗಳು ತಾಯಿಯ ಜನನ ಕಾಲುವೆಯಿಂದ ‘ಮೈಕ್ರೋಬಯೋಮ್’ ಅನ್ನು ಪಡೆಯುತ್ತವೆ. ಇದು ರಕ್ಷಣಾತ್ಮಕ ಬ್ಯಾಕ್ಟೀರಿಯಂ. ಇದು ಮಗುವನ್ನು ಹೊಟ್ಟೆಗೆ ಸೇರಿ ಹಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ ಮತ್ತು ಶಕ್ತಿಯುತವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದರಿಂದ ಮಗುವಿನ ರೋಗ ನಿರೋಧಕಶಕ್ತಿ ಹೆಚ್ಚಾಗಿ, ಮುಂದೆ ಮಗು ಪದೆ ಪದೆ ಕಾಯಿಲೆ ಬೀಳುವುದು ಕಡಿಮೆಯಾಗುತ್ತದೆ.

3. ಅರಿವಳಿಕೆ ಶೂನ್ಯ ಅಡ್ಡಪರಿಣಾಮಗಳು


ಯೋನಿಪ್ರಸವಗಳಲ್ಲಿ ತಾಯಿಗೆ ಯಾವುದೇ ಅರಿವಳಿಕೆಯ ಅಗತ್ಯವಿಲ್ಲ. ಆದ್ದರಿಂದ ಅರವಳಿಕೆ ಔಷಧಗಳ ಹಾಗೂ ಇತರೆ ಔಷಧಗಳ ಅಡ್ಡಪರಿಣಾಮ ಮಗುವಿನ ಮೇಲಾಗಲಿ, ಎದೆಹಾಲಿನ ಉತ್ಪತ್ತಿಯ ಮೇಲಾಗಲಿ ಇರುವುದಿಲ್ಲ.

4. ಸ್ತನ್ಯಪಾನ ವಿಳಂಬವಾಗುವುದಿಲ್ಲ

‘ಸಿ-ಸೆಕ್ಷನ್’ಗೆ ಒಳಗಾದ ತಾಯಂದಿರು ಹೆರಿಗೆಯಾದ ತಕ್ಷಣ ಮಗುವಿಗೆ ಹಾಲುಣಿಸಲು ಸಾಧ್ಯವಾಗುವುದಿಲ್ಲ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ. ಹೀಗಾಗಿ ಇದು ಮೊದಲ ಸ್ತನ್ಯಪಾನದ ಅವಧಿಯನ್ನು ವಿಳಂಬಗೊಳಿಸುತ್ತದೆ. ನೈಸರ್ಗಿಕ ಹೆರಿಗೆಯಲ್ಲಿ ತಾಯಿ ತನ್ನ ಮಗುವಿಗೆ ತಕ್ಷಣವೇ ಆಹಾರವನ್ನು ನೀಡಬಹುದು. ಮೊದಲ 1-2 ಗಂಟೆ ಮಗು ತುಂಬಾ ಚುರುಕಾಗಿರುತ್ತದೆ; ಹಾಲು ಕುಡಿಯುವ ಆತುರದಲ್ಲಿರುತ್ತದೆ. ಹುಟ್ಟಿ ಅರ್ಧ ಗಂಟೆಯಲ್ಲಿ ಹಾಲುಣಿಸಿದರೆ ನಂತರದಲ್ಲಿ ಮಗುವು ಸದೃಢವಾಗಿ ಆರೋಗ್ಯವಾಗಿರುತ್ತದೆ; ತಾಯಿಯ ಎದೆಯಲ್ಲಿ ಹೆಚ್ಚಿನ ಹಾಲು ಉತ್ಪತ್ತಿಯಾಗುತ್ತದೆ; ಜೊತೆಗೆ ರಕ್ತಸ್ರಾವವೂ ಕಡಿಮೆಯಾಗುತ್ತದೆ. ನಂತರದಲ್ಲಿ ಅದು ನಿದ್ದೆಗೆ ಜಾರುತ್ತದೆ. ಯಾವುದೇ ವಿಳಂಬವಿಲ್ಲದೆ ತಾಯಿ–ಮಗುವಿನ ಸಂಬಂಧ ಗಟ್ಟಿಯಾಗುತ್ತದೆ.

5. ಉತ್ತಮ ಎಪಿಜಿಎಆರ್ ಸ್ಕೋರ್

‘ಎಪಿಜಿಎಆರ್’ ಸ್ಕೋರಿಂಗ್ ಪರೀಕ್ಷೆಯ ಮೂಲಕ ಮಗುವಿನ ಶಾರೀರಿಕ ಸ್ಥಿತಿಯನ್ನು ನಿರ್ಣಯಿಸಲಾಗುತ್ತದೆ. ಇದು ಮಗುವಿನ ಅಳು, ಚಟುವಟಿಕೆ, ಸ್ಪಂದಿಸುವಿಕೆ, ಉಸಿರಾಟ ಮತ್ತು ಹೃದಯ ಬಡಿತವನ್ನು ಪರಿಶೀಲಿಸುತ್ತದೆ. ಯೋನಿಯ ಮೂಲಕ ಹೆರಿಗೆಯಾದ ಶಿಶುಗಳು ಸಿಸೆರಿಯನ್ ಮಕ್ಕಳಿಗಿಂತ ಚಟುವಟಿಕೆಗಳಲ್ಲಿ ಮೇಲುಗೈಯನ್ನು ತೋರಿಸುತ್ತವೆ.

ಅನಿವಾರ್ಯ ವೈದ್ಯಕೀಯ ಸ್ಥಿತಿ ಇಲ್ಲದಿದ್ದರೆ ಮತ್ತು ವೈದ್ಯರು ಸಿ-ಸೆಕ್ಷನ್ ಅನ್ನು ಶಿಫಾರಸು ಮಾಡದಿದ್ದರೆ, ಯೋನಿಯ ಮೂಲಕ ಸಾಮಾನ್ಯ ಹೆರಿಗೆಯನ್ನು ಆಯ್ಕೆ ಮಾಡದಿರಲು ಯಾವುದೇ ಕಾರಣವಿಲ್ಲ. ಇದು ಸಿ-ಸೆಕ್ಷನ್‌ಗಿಂತಲೂ ಹೆಚ್ಚು ಸುರಕ್ಷಿತ; ಮಾತ್ರಲ್ಲ, ತಾಯಿ–ಮಗು – ಇಬ್ಬರಿಗೂ ಲಾಭಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT