ಭಾನುವಾರ, ಜೂನ್ 26, 2022
26 °C

ದೇಹದಲ್ಲಿದೆ ಆರೋಗ್ಯದ ಅಲಾರಾಂ!

ಡಾ. ಕೆ.ಎಸ್‌. ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಬೇಸಿಗೆಯ ನಿದ್ರೆ ನಡೆಯುತ್ತಿದೆ. ಮಧ್ಯಾಹ್ನ ಮಲಗುವಂತೆ ಮಾಡುವ, ಕಣ್ಣುರೆಪ್ಪೆಗಳು ಅಂಟುಕೊಂಡಿವೆಯೇನೋ ಎಂಬಂತೆ ಭಾಸವಾಗುವ ನಿದ್ರೆ. ಅದೇ ಬೆಳಿಗ್ಗೆ ಏಳುವುದು ಈಗ ಚಳಿಗಾಲದಲ್ಲಿ ಏಳುವಷ್ಟು ಕಷ್ಟವಾದಂತಲ್ಲ. ಮಳೆ ಬರುವ ವಾತಾವರಣ, ಮೋಡ ಕವಿದಿದೆ, ಮನಸ್ಸಿಗೆ ಏಕೆ ನಿರುತ್ಸಾಹ?! ಹೊದ್ದು ಮಲಗಿಬಿಡೋಣ, ತುಂಬಾ ಕ್ರಿಯಾಶೀಲರಾದವರಿಗೂ ಹೆಚ್ಚೆಂದರೆ ಬಿಸಿ ಬಿಸಿ ಕಾಫಿ ಕುಡಿಯುತ್ತಾ, ಬೆಚ್ಚಗೆ ಹೊದ್ದು ಪುಸ್ತಕ/ ಮೊಬೈಲ್ ನೋಡುವುದೇ ಸರಿ ಎಂಬಂತೆ. ಇವೆಲ್ಲಕ್ಕೂ ಕಾರಣ ವಾತಾವರಣವೇ, ನಮ್ಮ ಮನಸ್ಸು-ಮಿದುಳುಗಳೇ?

ವಾತಾವರಣಕ್ಕೂ, ಮಿದುಳಿಗೂ ಸಂಬಂಧವಿದೆ ಎಂದರೆ ಅಚ್ಚರಿಯೆನಿಸಬಹುದು. ಆದರೆ ವಿಜ್ಞಾನ ಇದನ್ನು ದೃಢಪಡಿಸಿದೆ. ಅಷ್ಟೇ ಅಲ್ಲ, ನಿದ್ರೆ ಆರೋಗ್ಯಗಳಿಗೆ ಈ ನಂಟು ಸರಿಯಾಗಿ ಕೆಲಸ ಮಾಡುವುದು ಬಹು ಮುಖ್ಯ ಎನ್ನುವುದನ್ನೂ ನಿರೂಪಿಸಿದೆ.

ನಮ್ಮ ಮಿದುಳಿನಲ್ಲೊಂದು ಅಲಾರಾಂ ಗಡಿಯಾರವಿದೆ! ಅದೇ ಜೈವಿಕ ಗಡಿಯಾರ. ಮಿದುಳಿನ ತಳಭಾಗದಲ್ಲಿರುವ ಹೈಪೋಥ್ಯಾಲಮಸ್‍ನಲ್ಲಿ ಸೂಪ್ರಾಕೈಯಾಸ್ಮಾಟಿಕ್ ನ್ಯೂಕ್ಲಿಯಸ್ ಎಂಬ ನರಕೋಶಗಳ ಸಮೂಹವೊಂದು ಅಡಗಿ ಕುಳಿತಿದೆ. ಪ್ರತಿದಿನ ಬೆಳಿಗ್ಗೆ ಸೂರ್ಯನ ಬೆಳಕು ಅಕ್ಷಿಪಟಲದ ಮೇಲೆ ಬಿದ್ದಾಕ್ಷಣ ವಿಶೇಷ ಸಂಕೇತಗಳು ಸೂಪ್ರಾಕೈಯಾಸ್ಮ್ಯಾಟಿಕ್ ನ್ಯೂಕ್ಲಿಯಸ್‍ನ್ನು ತಲುಪುತ್ತವೆ. ಅದು ಪೈನಿಯಲ್ ಗ್ರಂಥಿಯನ್ನು ಪ್ರಚೋದಿಸಿ, ‘ಮೆಲಟೋನಿನ್' ಎಂಬ ಹಾರ್ಮೋನನ್ನು ಸ್ರವಿಸುವಂತೆ ಮಾಡುತ್ತದೆ. ಸಂಜೆಯಾದಂತೆ ಮೆಲಟೋನಿನ್‌ನ ಪ್ರಮಾಣ ಹೆಚ್ಚುತ್ತದೆ. ಮೆಲಟೋನಿನ್‌ನ ಪರಿಣಾಮವೇ ದೇಹದ ತಾಪಮಾನ ಕಡಿಮೆಯಾಗಿ, ನಿದ್ರೆ ಮಾಡುವುದನ್ನು ಪ್ರೇರೇಪಿಸುತ್ತದೆ.
ಸೂರ್ಯನ ಬೆಳಕು-ಹೊರಗಿನ ವಾತಾವರಣಗಳೆಲ್ಲವೂ ನಮ್ಮ ಮಿದುಳಿನ ಮೇಲೆ ವಿವಿಧ ಪರಿಣಾಮಗಳನ್ನು ಉಂಟುಮಾಡುತ್ತವೆ. ಅದರೊಂದಿಗೆ ಪ್ರಕೃತಿಯೇ ಜೀವರಾಶಿಗೊಂದು ಲಯವನ್ನು ತಾನೇ ನಿರ್ದಿಷ್ಟವಾಗಿರಿಸಿದೆ. ಮಾನವ ದೇಹದಲ್ಲಿ ನಿದ್ರೆ-ಎಚ್ಚರಗಳ ಲಯ ಹೊರಗಿನ ಸಂಪರ್ಕವಿಲ್ಲದೆಯೂ ಸರಿಯಾಗಿಯೇ ನಡೆಯುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಈ ಲಯವನ್ನೇ ‘ಸರ್ಕಾಡಿಯನ್ ರಿದಂ’ ಎಂದು ವಿಜ್ಞಾನ ಗುರುತಿಸುತ್ತದೆ. ದೇಹದ ಪ್ರತಿಯೊಂದು ಅಂಗ, ಜೀವಕೋಶಗಳಲ್ಲಿ ಮಿಲಯನ್‍ಗಟ್ಟಲೆ ಚಿಕ್ಕ ಚಿಕ್ಕ ‘ಟೈಮ್ ಮೆಶೀನ್’ಗಳು ಇವೆ. ನಿರ್ದಿಷ್ಟ ಪ್ರೊಟೀನ್ ಕಣಗಳಿಂದ ಇವು ಮಾಡಲ್ಪಟ್ಟಿವೆ. ಮಿದುಳಿನಲ್ಲಿರುವ ‘ಮಾಸ್ಟರ್ ಗಡಿಯಾರ’ ಇವೆಲ್ಲಕ್ಕೂ ಆಗಾಗ ‘ಕೀ’ ಕೊಡುತ್ತಿರುತ್ತದೆ. ಹಾಗಾಗಿಯೇ ನಮ್ಮ ದೇಹದಲ್ಲಿ ಆಗಾಗ ನಾವು ಅನುಭವಿಸುವ ಹಸಿವು, ನಿದ್ರೆ, ಏಕಾಗ್ರತೆಗಳು ಒಂದೇ ರೀತಿಯಾಗಿರದೆ ದಿನಪೂರ್ತಿ ಏರಿಳಿತಗಳನ್ನು ಕಾಣುತ್ತವೆ.

‘ಜೀವಲಯ’ವನ್ನು ಅರ್ಥ ಮಾಡಿಕೊಳ್ಳುವುದು, ಅದನ್ನು ಮನೆಯ ಗಡಿಯಾರವನ್ನು ‘ಸರಿ’ಯಾಗಿಡುವಂತೆ ‘ಸೆಟ್’ ಮಾಡಿಟ್ಟುಕೊಳ್ಳುವುದು, ದೈಹಿಕ-ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯಕ. ಇದರ ಬಹು ಮುಖ್ಯ ಉದಾಹರಣೆಗಳೆಂದರೆ ನಿದ್ರೆಯ ಅಭ್ಯಾಸ ಮತ್ತು ಆಹಾರ ಸೇವಿಸುವ ಕ್ರಮ. ಹದಿಹರೆಯದ ಮಕ್ಕಳಲ್ಲಿ ಯುವಕ-ಯುವತಿಯರಲ್ಲಿ ಸಾಮಾನ್ಯವಾಗಿ ಗಮನಿಸುವಂಥ ಅಭ್ಯಾಸಗಳು ಎರಡು. ಮೊದಲನೆಯದು ಮಲಗುವಾಗ, ಹಾಸಿಗೆಯ ಮೇಲೆ ಅರ್ಧ ಮಲಗಿ, ಬಹು ಕಾಲ ಮೊಬೈಲ್ ಹಿಡಿದು ನೋಡುವುದು. ಎರಡನೆಯದು ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಏಳುವುದು. ಇದರಿಂದ ನಿದ್ರಾಹೀನತೆಯಷ್ಟೇ ಅಲ್ಲ, ವಿವಿಧ ಆರೋಗ್ಯದ ಸಮಸ್ಯೆಗಳು ಮುಂದೆ ಕಟ್ಟಿಟ್ಟ ಬುತ್ತಿ. ಈ ಎರಡೂ ಅಭ್ಯಾಸಗಳು ನೇರವಾಗಿ ಜೀವಲಯದ ತಾಳ ತಪ್ಪಿಸುತ್ತವೆ.

ಮಿದುಳಿನ ಮಾಸ್ಟರ್ ಗಡಿಯಾರ ಬಹು ಸೂಕ್ಷ್ಮವಾಗಿ ಸ್ಪಂದಿಸುವುದು ಯಾವುದೇ ರೀತಿಯ ಬೆಳಕಿಗೆ. ಹಾಗಾಗಿ ಮೊಬೈಲ್ ಬೆಳಕು, ರಾತ್ರಿ ಎಚ್ಚರವಿರುವುದು, ಬೆಳಿಗ್ಗೆ ಮಲಗಿರುವುದು ಅದಕ್ಕೆ ಗೊಂದಲ ಉಂಟು ಮಾಡುತ್ತದೆ. ಮಾಸ್ಟರ್ ಗಡಿಯಾರ ತಾಳ ತಪ್ಪಿದರೆ, ದೇಹದ ತುಂಬ ಇರುವ ಮಿಲಿಯನ್‍ಗಟ್ಟಲೆ ಮಿನಿ ಗಡಿಯಾರಗಳೂ ದಾರಿ ತಪ್ಪುತ್ತವೆ. ಬೆಳವಣಿಗೆ-ಮುಟ್ಟು-ಹೃದಯಸಂಬಂಧಿ ಪ್ರಕ್ರಿಯೆಗಳು-ಹಸಿವು – ಈ ಎಲ್ಲವೂ ಏರುಪೇರಾಗುತ್ತವೆ. ಕೊನೆಗೆ ಯುವಜನರು ಬಹುವಾಗಿ ತಲೆಕೆಡಿಸಿಕೊಳ್ಳುವ ದೇಹದ ಸೌಂದರ್ಯ ಮತ್ತು ತೂಕಕ್ಕೂ ಜೀವಲಯಕ್ಕೂ ನಿಕಟ ಸಂಬಂಧವಿದೆ. ಯುವಜನರಲ್ಲಿ ಆಹಾರ ಸೇವಿಸುವ ಕ್ರಮವೂ ಜೀವಲಯದ ವಿರುದ್ಧವಾಗಿರಬಹುದು. ಬೆಳಿಗ್ಗೆ ತಡವಾಗಿ ಏಳುವ ಕಾರಣ ತಿಂಡಿ ತಿನ್ನದಿರುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ನಿದ್ರೆಯನ್ನು ಹಾಳುಗೆಡುವ ಅತಿ ಮಸಾಲೆ-ಎಣ್ಣೆಯುಕ್ತ ಆಹಾರಗಳು ಸಮಸ್ಯೆಗಳನ್ನು ಹೆಚ್ಚಿಸಬಲ್ಲವು. ಹಾಗಾಗಿ ಜೀವಲಯವನ್ನು ತಾಳ ತಪ್ಪದಂತೆ ಕಾಯ್ದುಕೊಳ್ಳಲು ಕೆಲವು ಸರಳ ಸೂತ್ರಗಳನ್ನು ಪಾಲಿಸುವುದು ಸೂಕ್ತ.

ಸೂರ್ಯನೊಡನೆ ಸ್ನೇಹ: ಸಹಜ ಬೆಳಕನ್ನು ಪ್ರತಿದಿನ ಬೆಳಿಗ್ಗೆ ಎದ್ದು ಅನುಭವಿಸುವುದು ಜೀವಲಯ ಕಾಯ್ದುಕೊಳ್ಳುವ ಒಂದು ಪ್ರಬಲ ಸಾಧನ.
ನಿಯಮಿತವಾದ ನಿದ್ರಾ ದಿನಚರಿಯನ್ನು ರೂಢಿಸಿಕೊಳ್ಳುವುದು - ರಾತ್ರಿ 8 ಗಂಟೆಗಳ ಕಡ್ಡಾಯ ನಿದ್ರೆ. ಯಾವುದೇ ರೀತಿಯ ಒತ್ತಡಗಳ ನಡುವೆಯೂ, ಅವೆಲ್ಲವನ್ನೂ ಬದಿಗಿಟ್ಟು ಸರಿಯಾದ ಸಮಯಕ್ಕೆ ನಿದ್ರೆ ಮಾಡುವ ದಿಟ್ಟತನ ಬೆಳೆಸಿಕೊಳ್ಳಬೇಕು. ಇದು ಜೀವಲಯವನ್ನು ಸರಿಯಾಗಿ ನಡೆಯುವಂತೆ ಮಾಡಿ, ಜೀವಲಯವು ನಿದ್ರೆಯನ್ನು ಪ್ರಚೋದಿಸುವುದರಲ್ಲಿ ಯಶಸ್ವಿಯಾಗುತ್ತದೆ. ಹೀಗೆ ನಿರಾಳವಾದ, ಆಳವಾದ ನಿದ್ರೆ ನಿಮ್ಮದಾಗುತ್ತದೆ.

ಕನಿಷ್ಠ 30 ನಿಮಿಷಗಳ ವ್ಯಾಯಾಮ ಪ್ರತಿನಿತ್ಯ ಮಾಸ್ಟರ್ ಗಡಿಯಾರಕ್ಕೆ ಕೀಲಿಗೆ ಎಣ್ಣೆ ಹಾಕಿದ ರೀತಿ ಸುಗಮವಾಗಿ ನಡೆಯುವಂತೆ ಮಾಡುತ್ತದೆ.
 

ಹಾಸಿಗೆಗೆ ಮಲಗಲು ಹೋಗುವ ಮುನ್ನ

ದೀಪಗಳನ್ನು ಆರಿಸುವುದು - ಇಂದಿನ ದಿನಗಳಲ್ಲಿ ವಿಶೇಷವಾಗಿ ‘ದೀಪ’ವೆಂದರೆ ಮೊಬೈಲ್ / ಕಂಪ್ಯೂಟರ್ ತೆರೆಗಳು. ಇವುಗಳನ್ನು ಹಾಸಿಗೆಯಿಂದ ಸಾಧ್ಯವಾದಷ್ಟು ದೂರ, ಕಡ್ಡಾಯವಾಗಿ ಮಲಗುವ ಕನಿಷ್ಠ ಅರ್ಧ ಗಂಟೆ ಮೊದಲು ಆರಿಸಿ ಬಿಡಿ.

ಮಧ್ಯಾಹ್ನದ ನಿದ್ರೆಯ ಅಭ್ಯಾಸವನ್ನು ಆದಷ್ಟು ಕಡಿಮೆಯಾಗಿಸುವುದು. 20 ನಿಮಿಷಗಳ ‘ಪವರ್ ನ್ಯಾಪ್’ - ‘ಶಕ್ತಿಯ ಕಿರುನಿದ್ರೆ’ಯನ್ನುಮಾಡಿ ಪುನಶ್ಚೇತನಗೊಳ್ಳುವ ಅಭ್ಯಾಸ ನಿಮ್ಮದಾದರೆ ಮಾತ್ರ ತೊಂದರೆಯಿಲ್ಲ. ಅದಕ್ಕಿಂತ ಹೆಚ್ಚು ಮಧ್ಯಾಹ್ನದ ನಿದ್ರಾಪ್ರಿಯರು ನೀವಾದರೆ ಎಚ್ಚರ, ಎಚ್ಚರ!

ಜೀವಲಯವನ್ನು ಈ ಸರಳ ಅಭ್ಯಾಸಗಳ ಮೂಲಕ ಕಾಪಾಡಿಕೊಳ್ಳುವುದು ಆರೋಗ್ಯದ ಆನಂದಕ್ಕೆ ಸುಲಭ ಹಾದಿ ಎಂದು ನೆನಪಿಡಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು