ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೈ ಹಿಡಿದಳು ಗಾಯತ್ರಿ

Last Updated 28 ಫೆಬ್ರುವರಿ 2021, 10:31 IST
ಅಕ್ಷರ ಗಾತ್ರ

ಯೋಗ ವಿಜ್ಞಾನದಂತೆ ಮುದ್ರಾ ವಿಜ್ಞಾನವೂ ಆರೋಗ್ಯ ಕಾಯುವಲ್ಲಿ ಅತ್ಯಂತ ಪರಿಣಾಮಕಾರಿಯೆನಿಸಿದೆ. ಈ ಮುದ್ರಾ ವಿಜ್ಞಾನದಲ್ಲಿ ಕ್ಯಾನ್ಸರ್‌ ನಿವಾರಣಾ ಗಾಯತ್ರಿ ಮುದ್ರೆಗಳು ಕ್ಯಾನ್ಸರ್‌ ಕೋಶಗಳನ್ನು ನಿವಾರಿಸುವಲ್ಲಿ, ಕ್ಯಾನ್ಸರ್‌ ಕೋಶಗಳು ಉತ್ಪತ್ತಿಯಾಗದಂತೆ ನಿಗ್ರಹಿಸುವಲ್ಲಿ ಕಾರ್ಯನಿರ್ವಹಿಸಲಿದೆ. ಕ್ಯಾನ್ಸರ್‌ ನಿವಾರಣಾ ಗಾಯತ್ರಿ ಮುದ್ರೆಗಳನ್ನು ಮುಂದಿಟ್ಟುಕೊಂಡು ದೆಹಲಿಯ ಮುದ್ರಾ ತಜ್ಞ ಕೇಶವ್‌ ದೇವ್ ಸಂಶೋಧನೆಯನ್ನೂ ನಡೆಸುತ್ತಿದ್ದಾರೆ. ನಾನು ಕೂಡ ಅದನ್ನು ಅನುಸರಿಸಿ ಪ್ರತಿಫಲ ಕಂಡಿದ್ದೇನೆ,

***

ಕ್ಯಾನ್ಸರ್‌ ಪಾಸಿಟಿವ್‌ ರಿಪೋರ್ಟ್‌ ಕೈಸೇರಿದ ಮೇಲೆ ನಾವೆಷ್ಟೇ ಅರ್ಜಂಟ್‌ ಮಾಡಿದರೂ ತಕ್ಷಣಕ್ಕೆ ಚಿಕಿತ್ಸೆ ಆರಂಭಿಸಲು ಸಾಧ್ಯವಾಗದು. ಇಲ್ಲಿ ಚಿಕಿತ್ಸೆಯಷ್ಟೇ ನಮ್ಮ ತಾಳ್ಮೆಯೂ ಮುಖ್ಯ. ಕ್ಯಾನ್ಸರ್ ಚಿಕಿತ್ಸೆಯೇ ಒಂದು ಸುದೀರ್ಘ ತಪಸ್ಸು ಎಂದರೂ ತಪ್ಪಾಗಲಾರದು. ಚಿಕಿತ್ಸೆಗೆ ಮೊದಲು ಬಯಾಪ್ಸಿ ರಿಪೋರ್ಟ್‌ ನೋಡ್ಬೇಕು. ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದ ನಂತರವೇ ಚಿಕಿತ್ಸೆಗೆ ಪ್ಲಾನ್‌ ಮಾಡಲಾಗುವುದು. ಅಂತಹ ಬಯಾಪ್ಸಿ ಪ್ರಕ್ರಿಯೆ ಹೇಗೆ ನಡೆಯಿತು ಅನ್ನೋದನ್ನು ಹಿಂದಿನ ವಾರ ಓದಿದ್ರಲ್ಲ?

ಬಯಾಪ್ಸಿ ರಿಪೋರ್ಟ್‌ ಬರೋಕೆ ಕಮ್ಮಿ ಅಂದ್ರೂ ಒಂದು ವಾರ ಬೇಕು. ಅದು ಬೆಂಗಳೂರಿನಿಂದ ಬರಬೇಕಿತ್ತು. ಅಲ್ಲಿವರೆಗೂ ಏನು ಮಾಡಲಿ? ಕಪಾಟಿನಲ್ಲಿ ಬಿಮ್ಮಗೆ ಸೇರಿಕೊಂಡಿದ್ದ ಪುಸ್ತಕಗಳನ್ನು ತಿರುವಿ ಹಾಕಿದೆ. ಪುಸ್ತಕಗಳ ಸಾಲಿನಲ್ಲಿ ಒಂದೊಂದೇ ಪುಸ್ತಕಗಳನ್ನು ಸರಿಸುತ್ತ ಬಂದಾಗ ಮುದ್ರಾ ವಿಜ್ಞಾನ ಮತ್ತು ಆರೋಗ್ಯ (ಲೇ.ಸುಮನ್‌ ಚಿಪ್ಳೂಣಕರ್‌) ಪುಸ್ತಕ ಗಮನ ಸೆಳೆಯಿತು. ಹಾಗೆ ಆ ಪುಸ್ತಕದಲ್ಲಿ ಕ್ಯಾನ್ಸರ್‌ಗೆ ಏನಾದ್ರೂ ಪರಿಹಾರ ಇದೆಯಾ ಎಂದು ತಡಕಾಡಿದೆ. ಪರಿವಿಡಿಯಲ್ಲಿ ಕಣ್ಣಾಡಿಸಿದೆ. ಪರಿವಿಡಿಯ ಎರಡನೇ ಪುಟದ ಕೊನೆಯಲ್ಲಿ, ‘ಕ’ ಅಕ್ಷರ ವಿಭಾಗದಲ್ಲಿ ನನ್ನ ದೃಷ್ಟಿ ಅಲ್ಲೇ ನಿಂತಿತು. ಕ್ಯಾನ್ಸರ್ ನಿವಾರಣಾ ಗಾಯತ್ರಿ ಮುದ್ರೆಗಳು (ಪುಟಗಳು 84–88) ಕಂಡಿತು. ಕುತೂಹಲದಿಂದ, ಅಷ್ಟೇ ಲಗುಬಗೆಯಿಂದ ಪುಟ 84ನ್ನು ತಿರುವಿದೆ. ವಾವ್‌... ಸಿಕ್‌ಬಿಡ್ತಲ್ಲಾ... ಎಂದು ಒಳಗೊಳಗೇ ಖುಷಿ. ಮುದ್ರೆಗಳನ್ನು ಹೇಗೆ ಮಾಡೋದು ಎಂದು ಬೇಗಬೇಗ ಓದಿದೆ. ಒಟ್ಟೂ 32 ಮುದ್ರೆಗಳು. ಮೊದಲು 24 ಮುದ್ರೆಗಳು, ನಂತರ ಗಾಯತ್ರಿ ಮಂತ್ರ ಪಠಣ, ಆನಂತರ ಎಂಟು ಮುದ್ರೆಗಳನ್ನು ಮಾಡಬೇಕು. ಈ ಮುದ್ರೆಗಳನ್ನು ದೆಹಲಿಯ ಮುದ್ರಾ ತಜ್ಞ ಕೇಶವ ದೇವ್‌ ಅವರು ಸಮರ್ಥಿಸಿರುವ ಉಲ್ಲೇಖ ಅಲ್ಲಿತ್ತು. ಅವರು ಈ ಕ್ಯಾನ್ಸರ್‌ ನಿವಾರಣಾ ಗಾಯತ್ರಿ ಮುದ್ರೆಗಳ ಮೇಲೆ ಸಂಶೋಧನೆಯನ್ನೂ ಕೈಗೊಂಡಿದ್ದಾರೆ ಎಂಬ ಅಂಶವೂ ಇತ್ತು. ನಾನೂ ಯಾಕೆ ಈ ಮುದ್ರೆಗಳನ್ನು ಟ್ರೈ ಮಾಡಬಾರದು ಎಂದು ತಕ್ಷಣಕ್ಕೆ ಯೋಚಿಸಿದೆ.

ಗಾಯತ್ರಿ ಮಂತ್ರ ಗೊತ್ತಿತ್ತು. ಆದರೆ ಅದನ್ನು ಹೆಂಗಸರು ಪಠಿಸಬಾರದು ಎಂಬ ಮೌಢ್ಯವೊಂದು ತಲೆಯಲ್ಲಿ ಯಾವಾಗಲೋ ಸೇರಿಕೊಂಡಿತ್ತು. ಇಲ್ಲಿ ಗಾಯತ್ರಿ ಒಬ್ಬ ಹೆಣ್ಣಾದರೂ ಅವಳ ಹೆಸರಿನ ಮಂತ್ರವನ್ನು ಮಹಿಳೆಯರು ಪಠಿಸುವಂತಿಲ್ಲ ಎಂಬ ನಿರ್ಬಂಧ ಯಾವ ಕಾರಣಕ್ಕೆ ಎಂಬುದನ್ನು ಅರಿಯುವ ಸಾಹಸಕ್ಕೆ ನಾನು ಯಾವತ್ತೂ ಹೋಗಿರಲಿಲ್ಲ. ಆದರೆ ಈಗ ಮುದ್ರೆಯನ್ನು ನಾನು ಮಾಡುವುದು ಸರಿಯೇ ಎಂಬ ಯೋಚನೆಯೂ ಸುಳಿಯಿತು. ಇರಲಿ ಎಂದು ಮತ್ತೆರಡು ಬಾರಿ ಓದಿದೆ. ಮುದ್ರೆಗಳ ನಡುವೆ ಗಾಯತ್ರಿ ಮಂತ್ರಗಳನ್ನು ಕನಿಷ್ಠ ಹತ್ತು ಬಾರಿ, ಸಮಯ ಇದ್ದರೆ ನೂರು ಬಾರಿ ಇಲ್ಲವೇ ಸಾವಿರ ಬಾರಿಯಾದರೂ ಪಠಿಸಬಹುದು ಎಂದು ಬರೆದಿತ್ತು.

ಇದು ನನ್ನ ಬದುಕಿನ ಪ್ರಶ್ನೆ. ಏನಾದರೂ ಸರಿ. ಗಾಯತ್ರಿ ಮುದ್ರೆಗಳನ್ನು ಮಾಡುವುದೇ ಸರಿ ಎಂಬ ಗಟ್ಟಿ ನಿರ್ಧಾರದೊಂದಿಗೆ ನಾನು ಅಂದು ಮಧ್ಯಾಹ್ನವೇ ಆ ಮುದ್ರೆಗಳನ್ನು ಮಾಡಲು ಶುರುಹಚ್ಚಿಕೊಂಡೆ. ದಿನಕ್ಕೆ ಮೂರು ಬಾರಿ, ನೂರು ಮಂತ್ರೋಚ್ಚಾರಗಳೊಂದಿಗೆ ಮಾಡಿದೆ. ಎರಡು ದಿನವಾಗುತ್ತಲೇ ಪುಸ್ತಕ ನೋಡದೇ ಸ್ವಯಂ ಮಾಡಲು ರೂಢಿಯಾಯಿತು. ಏಕಾಗ್ರತೆ ಮೈಗೂಡಿಸಿಕೊಂಡು ವಿಶ್ವಾಸದಿಂದ ಮುಂದುವರಿಸಿದೆ. ಮಂತ್ರದ ಪಠಣದ ವೇಳೆ ಮೈಯೊಳಗೆ ಒಂದು ಅಲೆಯ ಸಂಚಾರ (ವೈಬ್ರೇಷನ್‌) ಆದಂತ ಅನುಭವವಾಯಿತು. ಅದರ ಜೊತೆಗೆ ವಿಚಿತ್ರ ವೇದನೆಯೂ ಆಯಿತು. ಎಷ್ಟು ಸಮಯ ಮಾಡುತ್ತಿದ್ದೇನೋ ಅಷ್ಟೂ ಸಮಯ ಕ್ಯಾನ್ಸರ್‌ ಗಂಟುಗಳು ಇರುವ ಜಾಗಗಳಲ್ಲಿ ವಿಲಕ್ಷಣ ನೋವು ಗಮನಕ್ಕೆ ಬಂತು. ಗಾಯತ್ರಿ ಮಂತ್ರೋಚ್ಚಾರ ನಿಲ್ಲಿಸುತ್ತಲೇ ಆ ನೋವು ಮಾಯವಾಗುತ್ತಿತ್ತು. ಒಂದು ವಾರ ಹೀಗೆ ಕಳೆಯಿತು. ನೋವಾದರೂ ಸರಿ, ಮಾಡುತ್ತಲೇ ಇರುವೆ ಎಂದು ತೀರ್ಮಾನಿಸಿ ದಿನಕ್ಕೆ ಮೂರು ಬಾರಿ ಮುದ್ರೆಗಳನ್ನು ಮಾಡುತ್ತಲೇ ಹೋದೆ. ವಾರಕ್ಕೆ ಬರಬೇಕಿದ್ದ ಬಯಾಪ್ಸಿ ರಿಪೋರ್ಟ್‌ ಬರಲೇ ಇಲ್ಲ. ನಾನು ಗಾಯತ್ರಿ ಮುದ್ರೆ ಮಾಡಲು ಆರಂಭಿಸಿ ಏಳು ದಿನಗಳ ಕಳೆದು ಹೋಗಿದ್ದವು. ಎಂಟನೇ ದಿನದಿಂದ ಎಡಭಾಗದಲ್ಲಿದ್ದ ಗಂಟು ಮಾಯವಾಗಿತ್ತು. ಆರಂಭದಲ್ಲಿ ಆ ಜಾಗದಲ್ಲಿ ಒತ್ತಿಕೊಂಡರೆ ನೆನೆಸಿದ ಕಡ್ಲೆಕಾಳಿನಷ್ಟು ಗಾತ್ರದಲ್ಲಿ ಕೈಗೆ ಹತ್ತುತ್ತಿದ್ದ ಗಂಟು ಅಲ್ಲಿರಲಿಲ್ಲ. ಜೊತೆಗೆ ಮಂತ್ರ ಹೇಳುವಾಗ ಅನುಭವಕ್ಕೆ ಬರುತ್ತಿದ್ದ ನೋವು ಕೂಡ ಏನೋ ಆಶಾದಾಯಕವೆನಿಸಿದೆ. ಮನೆಯಲ್ಲಿ ಅಮ್ಮನಿಗೆ, ಗಿರೀಶನಿಗೆ ಈ ವಿಷಯ ಹೇಳಿದೆ. ಗಾಯತ್ರಿ ಮುದ್ರೆಗಳ ಮೇಲೆ ಬಲವಾದ ನಂಬಿಕೆ ಮೂಡಿತು. ಗಾಯತ್ರಿ ಮಂತ್ರದಲ್ಲಿ ಇಷ್ಟೊಂದು ಶಕ್ತಿ ಇದೆಯಾ ಎಂದು ನನಗೆ ನಾನೇ ಪ್ರಶ್ನಿಸಿಕೊಂಡೆ. ಗಾಯತ್ರಿ ಮುದ್ರೆ ಆರಂಭಿಸಿದ ನಂತರದ ಫಲಿತಾಂಶ ಕಂಡು ನನ್ನೊಳಗೆ ಅಚ್ಚರಿಗೊಂಡೆ. ಮೂರು ಹೊತ್ತು ನಿಷ್ಠೆಯಿಂದ ಗಾಯತ್ರಿ ಮುದ್ರೆಯನ್ನು ಮುಂದುವರಿಸಿದೆ. ಜೊತೆಗೆ ಪ್ರಾಣಾಯಾಮ, ಧ್ಯಾನವನ್ನು ಮಾಡುತ್ತ ಮನಸ್ಸನ್ನು ಪ್ರಶಾಂತವಾಗಿರುವಂತೆ ನೋಡಿಕೊಂಡೆ. ಇವೆಲ್ಲವೂ ನನ್ನ ಮನಸ್ಸನ್ನು ಶಾಂತಗೊಳಿಸುವುದರ ಜೊತೆಜೊತೆಗೆ ಮನಸ್ಸು ಸಕಾರಾತ್ಮಕವಾಗಿ ಯೋಚಿಸುವಂತೆ ಬುನಾದಿ ಹಾಕಿದವು.

ಅಂತೂ 10ನೇ ದಿನಕ್ಕೆ ಅಂದರೆ ನ.25ರಂದು ಬಯಾಪ್ಸಿ ರಿಪೋರ್ಟ್‌ ಬಂದಿತು. ಬಲಸ್ತನದಲ್ಲಿ ಕ್ಯಾನ್ಸರ್‌ ನಾಲ್ಕನೇ ಹಂತಕ್ಕೆ ಎಂಟ್ರಿ ಪಡೆದಿತ್ತು. ಎಡಭಾಗದಲ್ಲಿ ಆರಂಭಿಕ ಹಂತದಲ್ಲಿತ್ತು.ರಿಪೋರ್ಟ್‌ ತರಲು ಹೋದಾಗ ವಿಷಯವನ್ನು ಡಾ.ಸುಜಾತಾ ಮೇಡಂ ಅವರ ಹತ್ತಿರ ಹಂಚಿಕೊಂಡೆ. ಅವರೂ ಅಚ್ಚರಿಪಟ್ಟು ಹುಬ್ಬೇರಿಸಿದರು. ಅಷ್ಟೇ ಅಲ್ಲ; ನನ್ನ ಅನುಭವಕ್ಕೆ ಪುಷ್ಠಿ ನೀಡುವಂತೆ ಒಂದು ಘಟನೆಯನ್ನು ಅವರೂ ಹೇಳಿದರು. ಅದೇನೆಂದರೆ, ಕೊನೆಯ ಹಂತದಲ್ಲಿದ್ದ ಚರ್ಮ ಕ್ಯಾನ್ಸರ್‌ ರೋಗಿಯೊಬ್ಬರು ಸೂಜಿ ಚಿಕಿತ್ಸೆಯಿಂದ ಗುಣಮುಖರಾದ ಅಪರೂಪದ ಸಂಗತಿಯನ್ನು ಬಿಚ್ಚಿಟ್ಟರು. ಟ್ರಿಟ್‌ಮೆಂಟ್‌ ಜೊತೆಜೊತೆಗೆ ಗಾಯತ್ರಿ ಮುದ್ರೆಗಳನ್ನು ಮಾಡು, ಬಿಡಬೇಡ ಎಂದು ಸಲಹೆಯನ್ನೂ ನೀಡಿದರು.

ಬಯಾಪ್ಸಿ ರಿಪೋರ್ಟ್‌ಅನ್ನು ಡಾ. ದೇಸಾಯಿ ಅವರಿಗೆ ತೋರಿಸಿ, ಅಲ್ಲೇ ಚಿಕಿತ್ಸೆ ಮುಂದುವರೆಸುವುದಾ ಎಂಬ ಮಾತಿಗೆ, ಡಾ. ಸುಜಾತಾ ಅವರು, ‘ಎಸ್‌ಡಿಎಂಗೆ ಡಾ.ಪ್ರಸಾದ ಗುನಾರಿ ಅವರೇ ವಿಸಿಟಿಂಗ್‌ ಡಾಕ್ಟರ್‌. ಅವರು ಎಚ್‌ಸಿಜಿ ಎನ್‌ಎಂಆರ್‌ನಲ್ಲಿ ಅಂಕಾಲೋಜಿ. ಇವರೇ ಅಲ್ಲಿಗೆ ಹೋಗೋ ಡಾಕ್ಟರ್‌ ಆದ್ರೆ, ಯಾಕೆ ಎಚ್‌ಸಿಜಿಯಲ್ಲೇ ಟ್ರೀಟ್‌ಮೆಂಟ್‌ ತಗೋಬಾರ್ದು’ ಎಂಬ ಪರ್ಯಾಯ ಸಲಹೆ ಕೊಟ್ಟರು.

ನನಗೂ ಅದು ಸರಿ ಎನಿಸಿ, ಹಾಗೇ ಮಾಡ್ತಿನಿ ಎಂದೆ. ಆದರೂ ಡಾ.ದೇಸಾಯಿ ಅವರನ್ನು ಭೇಟಿ ಮಾಡಲು ಎಸ್‌ಡಿಎಂಗೆ ಹೋದೆ. ಅಲ್ಲಿ‘ಡಾಕ್ಟರ್‌ ಇವತ್ತು ಸಿಗಲ್ಲ. ನಾಳೆ ಬನ್ನಿ‘ ಎಂಬ ಮಾತು ನನಗೆ ನಿರಾಸೆಯನ್ನುಂಟು ಮಾಡಿತು. ಪೆಚ್ಚು ಮುಖ ಮಾಡಿ ಅವರ ಕ್ಯಾಬಿನ್‌ ಕಡೆಯಿಂದ ಹೊರಟರೆ ಎದುರಿಗೆ ಡಾ.ದೇಸಾಯಿ ಅವರೇ ಸಿಗಬೇಕಾ? ಅಚ್ಚರಿಯಾಯಿತು. ದೇವರೇ ಎದುರು ಬಂದಂತಾಯಿತು. ತಕ್ಷಣ, ರಿಪೋರ್ಟ್‌ ಅನ್ನು ಅವರ ಕೈಗಿಟ್ಟೆ. ಅವರು ನಮ್ಮನ್ನು ಕರೆದುಕೊಂಡು ಅವರ ಕ್ಯಾಬಿನ್‌ಗೆ ಬಂದರು. ರಿಪೋರ್ಟ್‌ ನೋಡಿದವರೆ, ‘ಬಲಭಾಗದ ಗಂಟು ನಾಲ್ಕನೇ ಸ್ಟೇಜ್‌ಗೆ ಹೋಗ್ತಿದೆ. ಎಡಭಾಗದ್ದು ಆರಂಭಿಕ ಹಂತ. ಸರ್ಜರಿ ಮೂಲಕ ಬಲಭಾಗದ ಸ್ತನವನ್ನು ಸಂಪೂರ್ಣ ತೆಗೆದು ಹಾಕಲಾಗುವುದು. ಅದೇ ಸಂದರ್ಭದಲ್ಲಿ ಎಡಭಾಗದ ಸ್ತನದಲ್ಲಿ ಗಂಟಿರುವ ಜಾಗದಲ್ಲಷ್ಟೇ ಹೋಲ್‌ ಮಾಡಿ, ಗಂಟನ್ನು ತೆಗೆದುಹಾಕಲಾಗುವುದು’ ಎಂದರು. ಜೊತೆಗೆ ನನಗೆ ಭವಿಷ್ಯದಲ್ಲಿ ಕ್ಯಾನ್ಸರ್‌ ಮರುಕಳಿಸುವ ಸಂಭವ ಶೇ 66ರಷ್ಟಿದ್ದು, ಅದಕ್ಕೂ ಇಂಜೆಕ್ಷನ್‌ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು. ಅವರ ಮಾತಿಗೆಲ್ಲ ತಲೆಯಾಡಿಸುತ್ತ ಆಯ್ತು ಸರ್‌ ಎಂದೆ.

ಅಲ್ಲಿಂದ ಹೊರಟು ಸಂಜೆ ಡಾ.ಪ್ರಸಾದ ಗುನಾರಿ ಅವರನ್ನು ಎಚ್‌ಸಿಜಿ ಎನ್‌ಎಂಆರ್‌ನಲ್ಲಿ ಭೇಟಿ ಮಾಡಿದೆ. ಬೆಳಿಗ್ಗೆಯಿಂದ ರೋಗಿಗಳನ್ನು ತಪಾಸಿಸಿ, ಎಲ್ಲರನ್ನೂ ಬೀಳ್ಕೊಟ್ಟ ಅವರ ಆಸ್ಪತ್ರೆಯಲ್ಲಿ ಪ್ರಶಾಂತ ವಾತಾವರಣ ಮನೆಮಾಡಿತ್ತು. ಡಾ.ಪ್ರಸಾದ ಅವರ ಚೇಂಬರ್‌ ಹೊರಗಿದ್ದ ಸೆಕ್ಯುರಿಟಿಗೆ ಹೇಳಿದೆ, ‘ಡಾ.ಪ್ರಸಾದ್‌ ಅವರನ್ನು ಕಾಣಬೇಕಿತ್ತು. ಡಾ.ಸುಜಾತಾ ಗಿರಿಯನ್‌ ಅವರ ಕಡೆಯವರು ಅಂತ ಹೇಳಿ’ ಅಂದೆ. ಅದಾಗಲೇ ಸುಜಾತಾ ಮೇಡಂ ಪ್ರಸಾದ್‌ ಡಾಕ್ಟರ್‌ಗೆ ಕರೆ ಮಾಡಿ ನನ್ನ ವಿಷಯ ತಿಳಿಸಿದ್ದರು. ಆತ್ಮೀಯತೆಯಿಂದ ಬರಮಾಡಿಕೊಂಡ ಡಾ.ಪ್ರಸಾದ ರಿಪೋರ್ಟ್‌ಗಳನ್ನೆಲ್ಲ ನೋಡಿ, ಪ್ರೋಟೊಕಾಲ್‌ ರೆಡಿ ಮಾಡಿದ್ರು.

‘ಕ್ಯಾನ್ಸರ್‌ ಹರಡಿಲ್ಲ ಅಂದ್ರೆ ಗುಣಪಡಿಸಬಹುದು. ಹರಡಿದ್ದರೆ ಕಂಟ್ರೋಲ್‌ನಲ್ಲಿರಬೇಕು‘ ಎಂದರು. 8 ಕಿಮೋ, ಸರ್ಜರಿ, ನಂತರ ರೆಡಿಯೆಷನ್‌, ಆ ನಂತರ ಹಾರ್ಮೊನ್‌ಥೆರಪಿ ಎಂದು ಪ್ಲಾನ್‌ ಮಾಡಿದ್ರು. ‘ಯಾವುದಕ್ಕೂ ಕ್ಯಾನ್ಸರ್‌ ಸ್ಥಿತಿಗತಿ ಹೇಗಿದೆ. ಹರಡಿದೆಯೇ? ಇಲ್ಲವೆ ಎಂದು ತಿಳಿಯಲು ಪೆಟ್‌ಸ್ಕ್ಯಾನ್‌ ಮಾಡೋಣ. ಅದರ ರಿಪೋರ್ಟ್‌ ನೋಡಿದ ಮೇಲೆಯೇ ಟ್ರೀಟ್‌ಮೆಂಟ್‌ ಆರಂಭಿಸೋಣ’ ಎಂದರು.

ನಾನು, ಗಿರೀಶ ತಲೆಯಾಡಿಸಿದೆವು. ಪೆಟ್‌ಸ್ಕ್ಯಾನ್‌ಗೆ ನ.29ರಂದು ಡೇಟ್‌ ಫಿಕ್ಸ್‌ ಮಾಡಿದ್ರು. ಸರ್ಜರಿಯಾದ್ರು ನಂಗೆ ಗೊತ್ತಿತ್ತು. ಆದರೆ ಈ ಕಿಮೋ, ರೇಡಿಯೇಶನ್‌, ಪೆಟ್‌ಸ್ಕ್ಯಾನ್ ಇವೆಲ್ಲ ನನಗೆ ಹೊಸದು. ಯಾಕೆಂದರೆ ನಮ್ಮ ಕುಟುಂಬದಲ್ಲಿ ಯಾರಿಗೂ ಕ್ಯಾನ್ಸರ್‌ ಬಂದಿರಲಿಲ್ಲ. ಅಲ್ಲಿ ಇಲ್ಲಿ ಓದಿದ್ದು ಬಿಟ್ಟರೆ ಅದರ ನೇರ ಜ್ಞಾನ ನನಗಿರಲಿಲ್ಲ. ವೈದ್ಯಕೀಯ ವಿಜ್ಞಾನ ಈ ಮುದ್ರಾ ವಿಜ್ಞಾನವನ್ನು ನಂಬದು. ಆದರೆ ಒಂದು ವಾರದಲ್ಲೇ ಕಡಲೆ ಕಾಳಿನಷ್ಟು ಗಾತ್ರದ ಕ್ಯಾನ್ಸರ್‌ ಗಂಟನ್ನು ಕರಗಿಸಿದ ಗಾಯತ್ರಿ ಮುದ್ರೆ (ಮುದ್ರಾ ವಿಜ್ಞಾನ) ಮೇಲೆ ಅದಾಗಲೇ ಬಲವಾದ ನಂಬಿಕೆ ಬೇರೂರಿತ್ತು. ಗಾಯತ್ರಿ ನನ್ನ ಕೈಬಿಡೋದಿಲ್ಲ. ನಾನು ಚಿಕಿತ್ಸೆ ಜೊತೆಗೆ ಗಾಯತ್ರಿ ಮುದ್ರೆಯನ್ನು ಮಾಡಬೇಕು ಎಂಬ ನಿರ್ಧಾರವನ್ನು ಗಟ್ಟಿಗೊಳಿಸಿದೆ.

ಇದಕ್ಕಾಗಿ ಗಾಯತ್ರಿ ಮುದ್ರೆ ಮಹತ್ವದ ಕುರಿತು ಮಹತ್ವವನ್ನು, ಮಾಹಿತಿಯನ್ನು ನಾನಿಲ್ಲಿ ಹಂಚಿಕೊಳ್ಳದಿದ್ದರೆ ಮನಸ್ಸು ಕೇಳದು.

ಯೋಗಾಸನ, ಪ್ರಾಣಾಯಾಮಗಳಂತೆ ಮುದ್ರಾ ವಿಜ್ಞಾನವೂ ಭಾರತೀಯ ಯೋಗದಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಕೃತಿದತ್ತ ಈ ಮುದ್ರಾಯೋಗದಲ್ಲಿ ನಮ್ಮ ಕೈಬೆರಳುಗಳಷ್ಟೇ ಬಳಕೆಯಾಗುವುದು ವಿಶೇಷ.

ಗಾಯತ್ರಿ ಮಂತ್ರದೊಂದಿಗೆ 32 ಮುದ್ರೆಗಳನ್ನು ಮಾಡುವುದರಿಂದ ಕ್ಯಾನ್ಸರ್‌ ಆಕ್ರಮಣವನ್ನು ತಡೆಗಟ್ಟಬಹುದು ಎಂಬುದು ದೆಹಲಿಯ ಮುದ್ರಾ ತಜ್ಞ ಕೇಶವ ದೇವ್ ಅವರ ಸಮರ್ಥನೆಯಾಗಿದೆ. ಅದನ್ನು ನಿತ್ಯವೂ ಪಾಲಿಸಿದ ನನಗೆ ಅದರ ಪ್ರತಿಫಲ ಸಿಕ್ಕಿದೆ ಎಂದರೆ ಅಚ್ಚರಿಯಾಗುವುದು ಸಹಜ.

ಗಾಯತ್ರಿ ಮಂತ್ರದ ಮೊದಲು 24 ಮುದ್ರೆಗಳನ್ನು ಮಾಡಬೇಕು. ನಂತರ 10 (100 ಅಥವಾ ಸಾವಿರ ಬಾರಿಯಾದರೂ ಆಗಬಹುದು)ಬಾರಿ ಗಾಯತ್ರಿ ಮಂತ್ರವನ್ನು ಶಾಸ್ತ್ರಬದ್ಧವಾಗಿ ಪಠಿಸಬೇಕು. ಆ ಪಠಣ ಹೇಗಿರಬೇಕು ಅಂದರೆ ಮಂತ್ರವನ್ನು ಉಚ್ಚರಿಸುವಾಗ ಅದರ ತರಂಗದಲೆಗಳು (ವೈಬ್ರೇಷನ್‌) ದೇಹದಲ್ಲಿ ವ್ಯಾಪಿಸುವುದು ನಮ್ಮ ಅನುಭವಕ್ಕೆ ಬರಬೇಕು. ಇಂಥ ಅನುಭವ ಹೊಂದಲು ತನ್ಮಯತೆಯೂ ಮುಖ್ಯವೆನಿಸಲಿದೆ. ಗಾಯತ್ರಿ ಮಂತ್ರೋಚ್ಚಾರಣೆ ನಂತರ ಎಂಟು ಮುದ್ರೆಗಳನ್ನು ಮಾಡಬೇಕು. ಈ ಎಲ್ಲ 32 ಮುದ್ರೆಗಳನ್ನು ಮಾಡುವಾಗಲೂ ಎರಡು ಶ್ಲೋಕಗಳನ್ನು ಹೇಳುವುದು ಕಡ್ಡಾಯ. ಯಾವುದೇ ಕಾರಣಕ್ಕೂ ತಪ್ಪು ತಪ್ಪಾಗಿ ಉಚ್ಚರಿಸಬಾರದು.

ಪ್ರಾರಂಭದ 24 ಮುದ್ರೆಗಳ ಜೊತೆ ಪಠಿಸಬೇಕಾದ ಶ್ಲೋಕ ಹೀಗಿದೆ.
‘ಸುಮುಖಂ ಸಂಪುಟಂ ಚೈವ ವಿತತಂ ವಿಸ್ತೃತಂ ತಥಾ
ದ್ವಿಮುಖಂ ತ್ರಿಮುಖಂ ಚೈವ ಚತುಃ ಪಂಚ ಮುಖಂ ತಥಾ
ಷಣ್ಮುಖಾ ಅಧೋ ಮುಖಂ ಚೈವ ವ್ಯಾಪಕಾಂಜಲಿಂ ತಥಾ
ಶಕಟಂ ಯಮಪಾಶಂಚ ಗ್ರಂಥಿತಂ ಚೋನ್ಮುಖೋನ್ಮುಖಂ
ಪ್ರಲಂಬಂ ಮುಷ್ಠಿಕಂ ಚೈವ ಮತ್ಸ್ಯ: ಕೂರ್ಮೋವರಾಹಕಂ
ಸಿಂಹಾಕ್ರಾಂತಂ ಮಹಾಕ್ರಾಂತಂ ಮುದ್ಗರಂ ಪಲ್ಲವಂ ತಥಾ||1–24|

ಈಗ ಕನಿಷ್ಠ ಹತ್ತು ಬಾರಿ ಗಾಯತ್ರಿ ಮಂತ್ರ

‘ಓಂ–ಭೂರ್ಭಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್‌' ಪಠಿಸಬೇಕು.
ನಂತರದಲ್ಲಿ ಎಂಟು ಮುದ್ರೆಗಳನ್ನು (25–32) ಮಾಡುವಾಗ ‘ಸುರಭಿರ್ಜ್ಞಾನ ವೈರಾಗ್ಯಂ ಯೋನಿಃ ಶಂಖೋತ ಪಂಕಜಂ ಲಿಂಗಂ ನಿರ್ವಾಣಕಂ ಚೈವ ಜಪಾಂತೇಷ್ಟೌ ಪ್ರದರ್ಶಯೇತ್‌ ಓಂ ಶಾಂತಿಃ ಶಾಂತಿಃ ಶಾಂತಿಃ’||25–32 ||–ಈ ಮಂತ್ರವನ್ನು ಪಠಿಸಬೇಕು.

ಮುದ್ರೆ ಸಹಿತ ಗಾಯತ್ರಿ ಜಪ ಮಾಡಿದಿದ್ದರೆ ಅದು ಪರಿಣಾಮ ಬೀರದು ಎಂದು ಮುದ್ರಾ ವಿಜ್ಞಾನ (ಲೇಖಕಿ: ಸುಮನ್‌ ಚಿಪ್ಳೂಣ್‌ಕರ್‌) ದಲ್ಲಿ ಹೇಳಲಾಗಿದೆ. ನಮ್ಮ ಬೆನ್ನು ಹುರಿಯಲ್ಲಿ 32 ಮಣಿಗಳಿದ್ದು ಅವುಗಳನ್ನು ಕಶೇರುಕಗಳೆನ್ನುವರು. 32 ಮುದ್ರೆಗಳನ್ನು ಮಾಡುವುದು ಕೆಲವೇ ಕ್ಷಣಗಳಾದರೂ ಅವುಗಳ ಪ್ರಭಾವ ಅದ್ಭುತವಾದದ್ದು. ಈ ಮುದ್ರೆಗಳು 32 ಕಶೇರುಕಗಳನ್ನು ಆರೋಗ್ಯವಾಗಿರುವುದರ ಜೊತೆಗೆ ರಕ್ತಪ್ರವಹಿಸುವ ನರಗಳನ್ನು, ಜ್ಞಾನವಾಹಿ ನಾಡಿಗಳನ್ನು ಪರಿಶುದ್ಧವಾಗಿರುತ್ತದೆ. ಮುದ್ರೆಗಳ ಪ್ರಭಾವದಿಂದ ದೇಹದಲ್ಲಿ ಗಂಟುಗಳಾಗುವುದಿಲ್ಲ. ಆದ್ದರಿಂದ ಕ್ಯಾನ್ಸರ್‌ ಸಂಭವಿಸುವುದಿಲ್ಲ ಎಂಬುದನ್ನು ಮುದ್ರಾ ವಿಜ್ಞಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಗಾಯತ್ರಿ ಮುದ್ರೆಯನ್ನು ದಿನದಲ್ಲಿ ಮೂರು ಹೊತ್ತು ಅಂದರೆ ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ವೇಳೆ ಮಾಡುವುದು ಒಳ್ಳೆಯದು.

(ಮುದ್ರೆಗಳ ಹೆಚ್ಚಿನ ಮಾಹಿತಿಗಾಗಿ ಲೇಖಕಿ: ಸುಮನ್‌ ಚಿಪ್ಳೂಣ್‌ಕರ್‌ ಅವರ ಮುದ್ರಾವಿಜ್ಞಾನ ಪುಸ್ತಕ ಅಧ್ಯಯನ ಮಾಡಬಹುದು)

(ಮುಂದಿನ ವಾರ ಪೆಟ್ (PET)ಸ್ಕ್ಯಾನ್‌ಗೆ ಒಳಪಟ್ಟಿದ್ದು...)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT