ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ, ಅದು ಪಾಠವೂ ಹೌದು

Published 5 ಜೂನ್ 2023, 23:31 IST
Last Updated 5 ಜೂನ್ 2023, 23:31 IST
ಅಕ್ಷರ ಗಾತ್ರ

ರಮ್ಯಾ ಶ್ರೀಹರಿ

ಜೀವನದಲ್ಲಿ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ. ಅದರಲ್ಲೇ ಜೀವನದ ಸಾರ್ಥಕತೆಯನ್ನು ಕಾಣಬೇಕೆಂದುಕೊಳ್ಳುತ್ತೇವೆ. ಆದರೆ ಮಕ್ಕಳು ಆಟದಲ್ಲಿ ಸಂತೋಷವಾಗಿರುವುದನ್ನು ಕಂಡಾಗ ‘ಈ ಆಟದಿಂದ ಅವರ ಭವಿಷ್ಯಕ್ಕೆ ಏನಾದರೂ ಉಪಯೋಗವಿದೆಯೇ?’, ‘ಆಟದಿಂದ ಪಾಠಕ್ಕೆ ತೊಂದರೆಯಾದೀತಾ ಹೇಗೆ?’ ಎಂದೆಲ್ಲಾ ಯೋಚಿಸುತ್ತೇವೆ.

ಮಕ್ಕಳಿಗೆ ಆಟದ ಅಗತ್ಯವಿದೆ ಎಂದು ನಾವು ಹೇಳುವಾಗ ಮುಖ್ಯವಾಗಿ ಆಟವು ಅವರ ದೈಹಿಕ, ಮಾನಸಿಕ ಆರೋಗ್ಯವನ್ನು ಹೇಗೆ ಸುಸ್ಥಿತಿಯಲ್ಲಿಡುತ್ತದೆ, ಬೇರೆ ಮಕ್ಕಳೊಡನೆ ಬೆರೆಯುವುದನ್ನು ಹೇಗೆ ಕಲಿಸಿಕೊಡುತ್ತದೆ, ಏಕಾಗ್ರತೆ, ಸೃಜನಶೀಲತೆ, ಬುದ್ಧಿಮತ್ತೆ - ಈ ಎಲ್ಲದರ ವಿಕಾಸಕ್ಕೆ ಆಟ ಹೇಗೆ ಪೂರಕ ಎಂದೆಲ್ಲ ಮಾತನಾಡುತ್ತಾ ಒಂದು ಸೂಕ್ಷ್ಮವಾದ ಪ್ರಮುಖ ವಿಷಯವನ್ನೇ ಮರೆತುಬಿಡುತ್ತೇವೆ!

ಆಟದಲ್ಲಿ ಮಕ್ಕಳು ಸಂಭ್ರಮಿಸುತ್ತಾರೆ, ಖುಷಿಯಿಂದಿರುತ್ತಾರೆ, ಕುಣಿದು ಕುಪ್ಪಳಿಸಿ ‘ಈ ಕ್ಷಣವಷ್ಟೇ ಸತ್ಯ’ ಎಂಬಂತೆ ವರ್ತಮಾನದಲ್ಲಿರುತ್ತಾರೆ; ಆಟದಲ್ಲಿ ಸೋತಾಗ ಅಳುತ್ತಾರೆ, ಗೆದ್ದಾಗ ಪ್ರಪಂಚವನ್ನೇ ಗೆದ್ದಂತೆ ಬೀಗುತ್ತಾರೆ; ಆಟದಲ್ಲಿ ದುಃಖವಿದೆ, ಸುಖವಿದೆ, ಸಿಟ್ಟು-ಕೋಪ, ಮತ್ಸರ, ಹತಾಶೆ, ತುಂಟತನ, ಮೋಸ, ಜಗಳ, ಬಾಂಧವ್ಯ ಎಲ್ಲವೂ ಇದೆ.

ಆಟವೆಂದರೆ ಜೀವನ, ಮಕ್ಕಳು ಆಟವಾಡುವಾಗ ಜೀವನವನ್ನು ಅದರ ಅನೇಕ ಛಾಯೆಗಳಲ್ಲಿ ಕಣ್ಣಾರೆ ಕಂಡು ಮನಃಪೂರ್ವಕವಾಗಿ ಅನುಭವಿಸುತ್ತಿರುತ್ತಾರೆ. ಜೀವನವನ್ನು ಇಷ್ಟು ಹತ್ತಿರದಿಂದ ಕಂಡು, ಬದುಕನ್ನು ಆಲಿಂಗಿಸಿಕೊಳ್ಳುವ ಆಟದಲ್ಲಿ ಅವರು ತಮ್ಮನ್ನು ತಾವು ತಾದಾತ್ಮ್ಯದಿಂದ ತೊಡಗಿಸಿಕೊಳ್ಳುವುದನ್ನು ನಾವೂ ನೋಡಿ ಆನಂದಿಸಿ, ಅದಕ್ಕಾಗಿ ಅವರನ್ನು ಅಭಿನಂದಿಸಬಾರದೇಕೆ? ಅವರ ಇರುವಿಕೆಗೆ, ಇರುವಿಕೆಯ ಚೆಲುವನ್ನು ಆಸ್ವಾದಿಸುವ ಅವರ ಚೈತನ್ಯಕ್ಕೆ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಿಸಬಾರದೇಕೆ?

ನಾವು ಜೀವನದಲ್ಲಿ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ. ಅದರಲ್ಲೇ ಜೀವನದ ಸಾರ್ಥಕತೆಯನ್ನು ಕಾಣಬೇಕೆಂದುಕೊಳ್ಳುತ್ತೇವೆ. ಆದರೆ ಮಕ್ಕಳು ಆಟದಲ್ಲಿ ಸಂತೋಷವಾಗಿರುವುದನ್ನು ಕಂಡಾಗ ‘ಈ ಆಟದಿಂದ ಅವರ ಭವಿಷ್ಯಕ್ಕೆ ಏನಾದರೂ ಉಪಯೋಗವಿದೆಯೇ?’, ‘ಆಟದಿಂದ ಪಾಠಕ್ಕೆ ತೊಂದರೆಯಾದೀತಾ ಹೇಗೆ?’ ಎಂದೆಲ್ಲಾ ಯೋಚಿಸುತ್ತೇವೆ.

‘ಮೊದಲು ಪಾಠ, ನಂತರ ಆಟ’, ‘ಮೊದಲು ಕೆಲಸ, ನಂತರ ಸಂತೋಷ’, ‘ಸುಮ್ಮನೆ ಸಂತೋಷವಾಗಿರುವುದು ಸಲ್ಲದು, ಏನನ್ನಾದರೂ ಸಾಧಿಸಿ ಸಂತೋಷವಾಗಿರುವುದಕ್ಕೆ ಅರ್ಹತೆ ಪಡೆದುಕೊಳ್ಳಬೇಕು’ ಎಂದು ಅವರ ಜೀವನದ ಆದ್ಯತೆಗಳನ್ನು ಪೋಷಕರು ಪರೋಕ್ಷವಾಗಿ ನಿರ್ಧರಿಸುತ್ತಿರುತ್ತಾರೆ. ಇದು ಮಕ್ಕಳು ಮುಂದೆ ತಮ್ಮ ಕೆಲಸ ಮತ್ತು ಜೀವನದ ನಡುವಿನ ಸಮತೋಲನವನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಪ್ರಭಾವಿಸುತ್ತದೆ.

ಮಕ್ಕಳು ಪಾಠದಲ್ಲಿ ಏನೆಲ್ಲಾ ಕಲಿಯುತ್ತಾರೆ! ಕಣ್ಣಿಗೇ ಕಾಣದ ಗ್ರಹ, ನಕ್ಷತ್ರ, ಅಣು, ಪರಮಾಣು, ಪ್ರಕೃತಿಯ ನಿಯಮಗಳು, ಇಂದ್ರಿಯಾನುಭವಕ್ಕೇ ನಿಲುಕದ ಗಣಿತದ ಪರಿಕಲ್ಪನೆಗಳು, ನಾಗರಿಕತೆಯ ಹುಟ್ಟು, ಸಾವು, ಯುದ್ಧ, ಸಾಮಾಜಿಕ ಕ್ರಾಂತಿ – ಹೀಗೆ ಎಷ್ಟೆಲ್ಲಾ ಇದೆ. ಆದರೆ ತಮ್ಮ ದೇಹದ ಬಗ್ಗೆ, ದೇಹದ ಮತ್ತು ಮನಸ್ಸಿನ ನಂಟಿನ ಬಗ್ಗೆ ಅವರಿಗೆಷ್ಟು ಗೊತ್ತು? ಮನುಷ್ಯನ ದೇಹ-ಮನಸ್ಸಿನ ರಚನೆ ಮತ್ತು ಕಾರ್ಯವೈಖರಿಯ ಬಗ್ಗೆ ವಿಜ್ಞಾನದ ಪಾಠವಿರಬಹುದು. ಆದರೆ ತಮ್ಮ ವೈಯಕ್ತಿಕ ಅನುಭವಗಳಿಂದ ತಮ್ಮ ಸ್ವಂತ ದೇಹದ ಮತ್ತು ಮನಸ್ಸಿನ ಬಗ್ಗೆ ಅವರು ಕಲಿತಿರುವುದೇನು?

ಆಟವಾಡುವಾಗ ಹೃದಯದ ಬಡಿತ ಒಮ್ಮೆಲೇ ಜೋರಾಗಿ ಮತ್ತೆ ಸಮಸ್ಥಿತಿಗೆ ಬರುವುದನ್ನು, ಉಸಿರಾಟದ ಏರುಪೇರನ್ನು, ದೇಹದಲ್ಲೆಲ್ಲಾ ರಕ್ತ ಸಂಚಾರವಾಗುವುದನ್ನು, ದೇಹಕ್ಕಿರುವ ಬಲ, ಚಲಿಸುವ, ಒತ್ತಡವನ್ನು ಸಹಿಸುವ, ಬಾಗಿ ಬಳುಕುವ ಅದರ ಗುಣ, ಸೋಲು–ಗೆಲುವುಗಳಿಗೆ ದೇಹ ಸ್ಪಂದಿಸುವ ರೀತಿ – ಹೀಗೆ ಆಟದಲ್ಲಿ ಮಕ್ಕಳು ತಮ್ಮ ಮನವೆಂಬ ಸಣ್ಣ ಗೂಡನ್ನು ತೊರೆದು ದೇಹವೆಂಬ ವಿಶಾಲ ಆಕಾಶದಲ್ಲಿ ವಿಹರಿಸುತ್ತಿರುತ್ತಾರೆ; ದೇಹದ ಕಣಕಣದೊಂದಿಗೂ ಸಂಪರ್ಕದಲ್ಲಿರುತ್ತಾರೆ; ಆಟವನ್ನು ಹೇಗೋ ಬದುಕನ್ನೂ ಹಾಗೆ ದೇಹದಲ್ಲಿ ಆಗುವ ಏರುಪೇರುಗಳೊಂದಿಗೆ ಅರ್ಥಮಾಡಿಕೊಳ್ಳುವ ಅವಕಾಶ ಅವರಿಗಿರುತ್ತದೆ. ಮನಸ್ಸಿಗೆ ನಿಲುಕದೆಷ್ಟೋ ಸತ್ಯಗಳನ್ನು ದೇಹ ಕ್ಷಣಮಾತ್ರದಲ್ಲಿ ಗ್ರಹಿಸಿರುತ್ತದೆ ಎನ್ನುವುದನ್ನು ಇತ್ತೀಚಿನ ಅನೇಕ ಮನೋವೈಜ್ಞಾನಿಕ ಅಧ್ಯಯನಗಳು ಸಾಬೀತುಪಡಿಸಿವೆ.

ಮನಸ್ಸು ಭೂತ–ಭವಿಷ್ಯಗಳಲ್ಲಿ ಅಲೆದಾಡುತ್ತದೆ; ಒಮ್ಮೊಮ್ಮೆ ನಿಷ್ಕ್ರಿಯವೂ ಆಗುತ್ತದೆ. ಆದರೆ ದೇಹ ಹಾಗಲ್ಲ; ಅದು ಪ್ರತಿಕ್ಷಣವೂ ವರ್ತಮಾನದಲ್ಲೇ ನೆಲೆಯಾಗಿರುವಂಥದ್ದು. ಆಟ ಎನ್ನುವುದು ವರ್ತಮಾನದ ಎಚ್ಚರದ ಸ್ಥಿತಿಯೊಂದಿಗಿನ ಸಂಬಂಧ; ನಮ್ಮ ಇರುವಿಕೆ ನಮ್ಮ ಅನುಭವಕ್ಕೆ ಬರುವ ಕ್ಷಣ. ಹಾಗಾಗಿಯೇ ಆಟ ಸ್ವಚ್ಛವಾದ, ತಂಪಾದ, ಹರಿಯುವ ನೀರಿನಲ್ಲಿ ಮಿಂದುಬಂದಂತಹ ಉಲ್ಲಾಸವನ್ನು ನೀಡುತ್ತದೆ, ಆಟ ಎನ್ನುವುದು (ಮನಸಿನಲ್ಲಿ ಸಹಜವಾಗಿ ಆಗುವಂತೆ) ಹಳೆಯ ವಿಚಾರಗಳ ಪುನರಾವರ್ತನೆಯಲ್ಲ ಬದಲಾಗಿ ಕಾಲದ ಹರಿಯುವಿಕೆಯಲ್ಲಿ ಒಂದಾಗುವ ಪ್ರಕ್ರಿಯೆ, ಈ ಅರ್ಥದಲ್ಲಿ ನೋಡಿದಾಗ ಆಟ ಎನ್ನುವುದು ನಮ್ಮ ಅಸ್ತಿತ್ವದ ನಿಜವನ್ನು ಸಂಭ್ರಮಿಸುವ ಕ್ರಿಯೆ.

ಮಗುವಿನ ಅಂತರಂಗದ ವಿಕಾಸಕ್ಕೆ ಪಾಠವೆಷ್ಟು ಮುಖ್ಯವೋ, ಆಟವೂ ಅಷ್ಟೇ ಮುಖ್ಯ; ಒಮ್ಮೊಮ್ಮೆ ಈ ಎರಡರ ನಡುವಿನ ಸಮತೋಲನ ತಪ್ಪಿಯೂ ಹೋಗುತ್ತದೆ. ಆಟ–ಪಾಠ ಒಂದಕ್ಕೊಂದು ಪೂರಕವಾಗಿರುವಂತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲವು ವಿಚಾರಗಳು ಉಪಯುಕ್ತವಾಗಬಹುದು:

1. ಕಲಿಕೆ ಬುದ್ಧಿಗೆ ಮಾತ್ರ ಸಂಬಂಧಪಟ್ಟಿದ್ದು ಎನ್ನುವ ಕಲ್ಪನೆಯಿಂದ ಹೊರಬಂದಾಗ ಕಲಿಕೆಗಿರುವ ಅಗಾಧ ಹರವಿನ ಅರಿವಾಗುತ್ತದೆ. ಆಟದ ಅನುಭವಗಳ ವೈವಿಧ್ಯವನ್ನು ಒಮ್ಮೆ ಮನಸ್ಸಿಗೆ ತಂದುಕೊಳ್ಳಿ - ದೇಹಕ್ಕೆ ವಿಶಿಷ್ಟವಾದ ಅನುಭವಗಳಿಗೆ ದಾರಿಮಾಡಿಕೊಡುವ ಫುಟ್ಬಾಲ್, ಕ್ರಿಕೆಟ್, ಬಾಸ್ಕೆಟ್ಬಾಲ್ ಮುಂತಾದ ಕ್ರೀಡೆಗಳು, ಮಣ್ಣಿನ ಸ್ಪರ್ಶ, ಘಮ, ಬಣ್ಣ ನೀಡುವ ಆನಂದವನ್ನು ಅನುಭವಿಸುತ್ತಾ ಮಣ್ಣಿನಾಕೃತಿಗಳನ್ನು ಮಾಡಿ, ಅಳಿಸಿ, ಹೊಸದಾಗಿ ರಚಿಸುವ ಮಣ್ಣಿನಾಟ, ಆಟಿಕೆಗಳಿಂದ ಆಡುವ ಆಟಗಳು, ಉದ್ಯಾನವನದಲ್ಲಿ ಆಡುವ ಜಾರುಬಂಡೆ, ಜೋಕಾಲಿಯಂತಹ ಮೋಜಿನ ಆಟಗಳು, ಬೇರೆ ಮಕ್ಕಳೊಡನೆ ಸೇರಿ ನಿಯಮಗಳನ್ನು ಕಲಿತು, ಅವಕ್ಕೆ ಬದ್ಧರಾಗಿ, ಕೆಲವೊಮ್ಮೆ ಮಾರ್ಪಡಿಸಿಕೊಂಡು ಆಡುವ ಆಟಗಳು, ಈಜಾಡುವುದು, ಸೈಕ್ಲಿಂಗ್ ಮುಂತಾದ ಒಬ್ಬರೇ ಆಡಬಹುದಾದ ಆಟಗಳು, ಚಿಕ್ಕ ಮಕ್ಕಳು ಆಡುವ ಕಾಲ್ಪನಿಕ ಆಟಗಳು, ಟೀಚರ್-ಮಕ್ಕಳು, ಕಳ್ಳ-ಪೊಲೀಸ್ ಪಾತ್ರಗಳಾಗಿ ರೂಪಾಂತರಗೊಳ್ಳುವ ಕಲೆಗೂ ಆಟಕ್ಕೂ ಇರುವ ನಂಟನ್ನು ಅದರ ಪ್ರಾರಂಭಿಕ ಹಂತದಲ್ಲಿ ಪರಿಚಯಿಸುವ ಆಟಗಳು - ಎಷ್ಟೆಲ್ಲಾ ಅನುಭವಗಳು! ಇಷ್ಟೊಂದು ಬಗೆಬಗೆಯ ಅನುಭವಗಳ ಮೇಲೆ ಬೆಳಕುಚೆಲ್ಲುವಂತಹ ಮಾತು-ಮಂಥನ ಮಕ್ಕಳ, ಪೋಷಕರ, ಶಿಕ್ಷಕರ ನಡುವೆ ನಡೆದರೆ ಅದು ಯಾವ ಕಲಿಕೆಗೆ ಕಡಿಮೆಯಾದೀತು?

2. ಮಕ್ಕಳು ಆಟಕ್ಕೆ ತೆರಳುವ ಮುನ್ನ ಅವರನ್ನು ಬೆಂಬಲಿಸುವ ‘ತೃಪ್ತಿಯಿಂದ ಆಡಿಕೊಂಡು ಬಾ’, ‘ಆಟವನ್ನು ಆಸ್ವಾದಿಸು’ ಎನ್ನುವ ಮಾತುಗಳನ್ನು ಪೋಷಕರು ಹೇಳಿಕಳಿಸುವುದು, ಆಟದಿಂದ ಬಂದಮೇಲೆ ನಗುಮುಖದಿಂದ ಬರಮಾಡಿಕೊಂಡು ಉಪಚರಿಸುವುದು ಮಕ್ಕಳಿಗೆ ತಮ್ಮ ಖುಷಿಯಲ್ಲಿ ಪೋಷಕರೂ ಭಾಗಿಯಾಗಿದ್ದಾರೆಂಬ ವಿಶ್ವಾಸವನ್ನು ಮೂಡಿಸುತ್ತದೆ.

3. ಆಟ ಎನ್ನುವುದು ಪಾಠದಿಂದ ತಪ್ಪಿಸಿಕೊಳ್ಳುವ ಒಂದು ನೆಪವಾಗದಂತೆ ಕೂಡ ಎಚ್ಚರ ವಹಿಸಬೇಕಾಗುತ್ತದೆ. ಇದಕ್ಕೆ ಆಟ ಮತ್ತು ಪಾಠದ ನಡುವೆ ಸಮಯ ವಿಂಗಡಣೆ ಮಾಡಿಕೊಳ್ಳುವುದಷ್ಟೇ ಅಲ್ಲ, ಅದನ್ನು ಅನುಸರಿಸಲು ದೃಢಮನಸ್ಸು ಕೂಡ ಬೇಕಾಗುತ್ತದೆ. ಈ ವಿಚಾರದಲ್ಲಿ ಪೋಷಕರ ಕಟ್ಟುನಿಟ್ಟಿನ ವರ್ತನೆ ಅವಶ್ಯಕ. ಮಕ್ಕಳು ತಾವೇ ಸ್ವಯಂಪ್ರೇರಿತರಾಗಿ ಆಟದಿಂದ ಮನೆಗೆ ಮರಳಿ ಓದುವುದಕ್ಕೆ ಕುಳಿತುಕೊಳ್ಳಲು ಪೋಷಕರು ಮಾರ್ಗದರ್ಶಕರಾಗಬೇಕಾಗುತ್ತದೆ.

4. ಮಕ್ಕಳು ಯಾರೊಂದಿಗೆ ಎಲ್ಲಿ ಆಟವಾಡುತ್ತಿದ್ದಾರೆ; ಸ್ನೇಹಿತರ ಮನೆ, ಅವರ ಪೋಷಕರ ಪರಿಚಯ; ಯಾವ ಬಗೆಯ ಆಟಗಳನ್ನಾಡುತ್ತಾರೆ; ಆಟದ ಸಮಯದಲ್ಲಿ ಗ್ಯಾಡ್ಜೆಟ್‌ಗಳ ಬಳಕೆ ಮಾಡುತ್ತಿದ್ದಾರೆಯೇ; ಅವರುಗಳ ನಡುವಿನ ಬಾಂಧವ್ಯ ಹೇಗಿದೆ; ಜಗಳಗಳನ್ನು ಹೇಗೆ ಬಿಡಿಸಿಕೊಳ್ಳುತ್ತಾರೆ; ಒಬ್ಬರಿಗೊಬ್ಬರು ಹೇಗೆ ಮಾತನಾಡಿಸಿಕೊಳ್ಳುತ್ತಾರೆ –  ಈ ಎಲ್ಲದರ ಬಗ್ಗೆ ಪೋಷಕರು ಮಾಹಿತಿಯನ್ನು ಹೊಂದಿರಬೇಕು.

5. ಮಕ್ಕಳು ಉತ್ಸಾಹ, ಕಾತರಗಳಿಂದ ಆಟಕ್ಕೆ ತೆರಳುತ್ತಾರೆ; ಆಡುವಾಗ ಅವರ ಈ ಹುಮ್ಮಸ್ಸು ಮುಗಿಲುಮುಟ್ಟುತ್ತದೆ. ವಾಪಸ್ಸು ಮನೆಗೆ ಬರುವಾಗ ಒಲ್ಲದ ಮನಸ್ಸಿನಿಂದಲೇ ಬರಬಹುದು ಅಥವಾ ಆಡಿ ದಣಿದು ಸಂತಸಪಟ್ಟ ಸಂತೃಪ್ತಿಯಿರಬಹುದು. ಇನ್ನೂ ಕೆಲವೊಮ್ಮೆ ಆಟದಲ್ಲಿ ಆದ ಬೇಸರವನ್ನು ಮನೆಗೆ ಹೊತ್ತು ತರುವುದು, ಅದೇ ಗುಂಗಿನಲ್ಲಿ ಓದುವುದನ್ನು ನಿರ್ಲಕ್ಷಿಸುವುದೂ ಇರಬಹುದು. ಅದೆಲ್ಲ ಏನೇ ಇದ್ದರೂ ಎಲ್ಲ ಭಾವನೆಗಳನ್ನು ಒಂದು ಹದಕ್ಕೆ ತಂದುಕೊಂಡು ಮನಸ್ಸನ್ನು ಓದಿನಲ್ಲಿ ತೊಡಗಿಸುವುದು ಕಡ್ಡಾಯ. ಅದಲ್ಲದೆ ಬೇರೆ ದಾರಿಯಿಲ್ಲ ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಾಗ ಸಹಜವಾಗಿ ಓದಿನಲ್ಲಿ ಶಿಸ್ತು ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT