ಬುಧವಾರ, ಸೆಪ್ಟೆಂಬರ್ 29, 2021
20 °C

ಗರ್ಭಿಣಿಯರಿಗೆ ಕಾರಣವಿಲ್ಲದೇ ಆಗುವ ಮೂಡ್‌ಆಫ್‌; ಹೊರಬರಲು ಇಲ್ಲಿವೆ ಟಿಪ್ಸ್!

ಡಾ.ಚಂದ್ರಿಕಾ ಆನಂದ್ Updated:

ಅಕ್ಷರ ಗಾತ್ರ : | |

ಗರ್ಭಿಣಿ

ಕೆಲ ದೈಹಿಕ ಬದಲಾವಣೆಯಿಂದ ಉಂಟಾಗುವ ಮೂಡ್‌ಆಫ್ ಅಥವಾ ಜಡತ್ವವನ್ನು ಹೋಗಲಾಡಿಸಲು ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. 

ಬಹುತೇಕ ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ಮೂಡ್‌ಆಫ್ ಆಗುತ್ತಿರುತ್ತಾರೆ. ಇದು ಸೋಮಾರಿತನಕ್ಕೆ ಎಡೆ ಮಾಡಿ ಜಡತ್ವಕ್ಕೆ ತಿರುಗುವ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ ಅವರಿಗೂ ಸಹ ತಿಳಿಯುವುದಿಲ್ಲ. ಆದರೆ, ಇದೇ ಮೂಡ್‌ಆಫ್‌ನಿಂದ ಜಡತ್ವವನ್ನು ಮೈಗೂಡಿಸಿಕೊಳ್ಳುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ತೊಂದರೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಮೂರನೇ ಮಾಸಿಕದಲ್ಲಿ ಇಂಥ ಸೋಮಾರಿತನ ಬೇಡವೆಂದರೂ ಮೈಗಂಟುತ್ತದೆ. ಬೊಜ್ಜು, ಕೆಲಸದ ಒತ್ತಡ, ಕಿರಿಕಿರಿ ವಾತಾವರಣ, ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳನ್ನು ಹೊಂದಿರುವ ಮಹಿಳೆಯರಿಗೆ ಇಂತಹ ಕಿರಿಕಿರಿ ಸಾಮಾನ್ಯ. 

ಮೂಡ್‌ಆಫ್‌ಗೆ ಕಾರಣವೇನು?

* ದೈಹಿಕ ಅಸ್ವಸ್ಥತೆ, ನೋವು, ವಾಂತಿ
* ಕೆಲಸದ ಒತ್ತಡ
* ಮೊಬೈಲ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿಕೊಂಡಿರುವುದು
* ಕುಟುಂಬ ಹಾಗೂ ಸಮಾಜದ ಮೂಢನಂಬಿಕೆಗಳ ಭಯ
* ಗರ್ಭಪಾತ, ಪ್ರಸವಪೂರ್ವ ಹೆರಿಗೆಯ ಭಯ 

ಜಡತ್ವದಿಂದಾಗುವ ಆರೋಗ್ಯ ಸಮಸ್ಯೆಗಳೇನು?

ಸಾಮಾನ್ಯವಾಗಿ ಗರ್ಭಿಣಿಯರಿಗೆ ಆಗಾಗ್ಗೆ ಮೂಡ್‌ಆಫ್ ಆಗುತ್ತಿರುತ್ತದೆ. ಇದರಿಂದ ಜಡತ್ವ ಸಹ ಮೈಗಂಟಿಕೊಳ್ಳುತ್ತದೆ. ಜಡತ್ವ ಬಂದ ಗರ್ಭಿಣಿಯರು, ಸಹಜ ಸ್ಥಿತಿಯತ್ತ ಮರಳದಿದ್ದರೆ ಹೆಚ್ಚು ಸಮಸ್ಯೆ ಅನುಭವಿಸಬೇಕಾಗಬಹುದು. ಬೊಜ್ಜು, ಟೈಪ್2 ಡಯಾಬಿಟಿಸ್, ಹೃದ್ರೋಗದಂತಹ ಸಮಸ್ಯೆಗಳು ಬರುವ ಸಾಧ್ಯತೆಯನ್ನು ಅಧ್ಯಯನದ ಮೂಲಕ ದೃಢಪಡಿಸಲಾಗಿದೆ. ಅದರಲ್ಲೂ ಡಯಾಬಿಟಿಸ್ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಇದರಿಂದ ನಾರ್ಮಲ್ ಡೆಲಿವರಿಗಿಂತ ಸಿಜೇರಿಯನ್‌ಗೆ ಆಸ್ಪದ ನೀಡಲಿದೆ. 

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಶೇ 15.5 ಸಿಜೇರಿಯನ್ ಪ್ರಮಾಣವು ಶೇ 23.6ಕ್ಕೆ ಏರಿಕೆಯಾಗಿದೆ. ಅದರಲ್ಲೂ ನಗರ ಪ್ರದೇಶದ ಗರ್ಭಿಣಿಯರಿಗೇ ಹೆಚ್ಚು ಸಿಜೇರಿಯನ್ ಆಗುತ್ತಿದೆ ಎನ್ನಲಾಗಿದೆ. 

ಮೂಡ್‌ಆಫ್‌ನಿಂದ ಹೊರಬರಲು ಇಲ್ಲಿವೆ ಟಿಪ್ಸ್–
 ‌
ಕೆಲ ದೈಹಿಕ ಬದಲಾವಣೆಯಿಂದ ಉಂಟಾಗುವ ಮೂಡ್‌ಆಫ್ ಅಥವಾ ಜಡತ್ವವನ್ನು ಹೋಗಲಾಡಿಸಲು ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. 

* ಗರ್ಭಿಣಿಯಾದ ಬಳಿಕ ಹೆಚ್ಚು ವಿಶ್ರಾಂತಿ ಪಡೆಯದೇ ಮನೆಯಲ್ಲಿ ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಂಡು, ತಮ್ಮನ್ನು ಹೆಚ್ಚು ಕ್ರಿಯಾಶೀಲತೆಯಾಗಿ ಇಟ್ಟುಕೊಳ್ಳಬೇಕು.
* ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ.
* ಕೆಲಸದಲ್ಲಿ ನಿರತರಾಗಿರುವ ಮಹಿಳೆಯರು ಕನಿಷ್ಠ 30 ನಿಮಿಷಗಳಿಗೊಮ್ಮೆ ಎದ್ದು ಓಡಾಡುತ್ತಿರಬೇಕು. 
* ಹೆಚ್ಚು ಆಯಾಸ ನೀಡುವ ವ್ಯಾಯಮ ಮಾಡದೇ, ತಜ್ಞರ ಸಲಹೆ ಮೇರೆಗೆ ವ್ಯಾಯಾಮ, ಯೋಗ ಮಾಡಿ.
* ಹೆಚ್ಚು ಜನರೊಂದಿಗೆ ಬೆರೆತು ಸಂತಸದಿಂದಿರಿ.
* ಸಾಧ್ಯವಾದಷ್ಟು ಯಾವುದಾದರು ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಕ್ರಿಯಾಶೀಲರಾಗಿರಿ.
* ಹೆಚ್ಚು ನೀರು ಕುಡಿಯುವುದು ಹಾಗೂ ಪೌಷ್ಠಿಕಯುಕ್ತ ಆಹಾರ ಸೇವನೆ ಮಾಡಿ.
* ಸಂಗೀತ ಕೇಳುವುದು, ನಿಮಗೆ ಹಿತವೆನಿಸುವ ಕೆಲಸದಲ್ಲಿ ತೊಡಗಿಕೊಳ್ಳುವುದು, ಪತಿಯೊಂದಿಗೆ ಹೆಚ್ಚು ಸಮಯ ಕಳೆಯುವುದು.

ವ್ಯಾಯಾಮದ ಬಗ್ಗೆ ಎಚ್ಚರ ಇರಲಿ: ಸಾಮಾನ್ಯವಾಗಿ ಗರ್ಭಿಣಿಯರು ವ್ಯಾಯಮ ಮಾಡಬೇಕು ಎಂಬ ಆತುರದಲ್ಲಿ ಹೆಚ್ಚು ಭಾರ ಇರುವ ಅಥವಾ ಕಷ್ಟಕರವಾದ ಭಂಗಿಯಲ್ಲಿ ವ್ಯಾಯಮ ಮಾಡಬಹುದು. ಇದು ಅಪಾಯಕ್ಕೂ ಎಡೆ ಮಾಡಿಕೊಡಬಹುದು. ಕೆಲವೊಮ್ಮೆ ರಕ್ತಸ್ರಾವ, ಉಸಿರಾಟದ ಸಮಸ್ಯೆ, ಎದೆ ನೋವು, ಕಣಕಾಲಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಹೀಗಾಗಿ ವ್ಯಾಯಾಮ, ಏರೋಬಿಕ್ಸ್, ಯೋಗ, ಜಿಮ್ನಾಸ್ಟಿಕ್‌ನಂಥಹ ದೈಹಿಕ ಚಟುವಟಿಕೆ ಮೊದಲು ವೈದ್ಯರ ಸಲಹೆ ಮೇರೆಗೆ ಮಾಡುವುದು ಒಳಿತು.

(ಲೇಖಕಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ,ಫೋರ್ಟಿಸ್ ಆಸ್ಪತ್ರೆ )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು