ಸೋಮವಾರ, ಆಗಸ್ಟ್ 15, 2022
21 °C
ಕೊರೊನಾ ಬಗ್ಗೆ ಒಂದಷ್ಟು ತಿಳಿಯೋಣ

ಮಧುಮೇಹ: ಅಸ್ವಸ್ಥತೆಗೆ ಸ್ವಯಂ ಚಿಕಿತ್ಸೆ ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಧುಮೇಹ ಕಾಯಿಲೆ ಇರುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಕೋವಿಡ್ ಪೀಡಿತರಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾಗುವ ಸಾಧ್ಯತೆ ಇರುತ್ತದೆ. ಈ ವೇಳೆ ವೈರಾಣು ಉಂಟುಮಾಡುವ ತೀವ್ರತೆಯನ್ನು ಗುರುತಿಸಿ, ಚಿಕಿತ್ಸಾ ವಿಧಾನವನ್ನು ನಿರ್ಧರಿಸಿದಲ್ಲಿ ಅಪಾಯವನ್ನು ಸುಲಭವಾಗಿ ತಡೆಯಲು ಸಾಧ್ಯ’ ಎಂದು ವೈದ್ಯರು ತಿಳಿಸಿದ್ದಾರೆ. 

ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರಲ್ಲಿ ಬಹುತೇಕರು ಮಧುಮೇಹ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆ ಉಳ್ಳವರಾಗಿದ್ದಾರೆ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಹೆಚ್ಚಿನ ಅಪಾಯ ಇರಲಿದೆ. ಹಾಗಾಗಿ ಕೋವಿಡ್‌ಗೆ ಲಸಿಕೆ ಬರುವವರೆಗೂ ಮಧುಮೇಹ ಕಾಯಿಲೆ ಇರುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಪೌಷ್ಟಿಕ ಆಹಾರ ಸೇವಿಸುವ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ತಜ್ಞರು ಸೂಚಿಸಿದ್ದಾರೆ.

‘ಮಧುಮೇಹ ರೋಗಿಗಳಿಗೆ ಕೊರೊನಾ ಸೋಂಕು ತಗುಲಿದಲ್ಲಿ ಅವರು ಚೇತರಿಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ನ್ಯುಮೋನಿಯಾ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮಧುಮೇಹ ರೋಗಿಗಳು ಹೆಚ್ಚಿನ ಜಾಗೃತೆ ವಹಿಸಬೇಕು. ಗ್ಲುಕೋ ಮೀಟರ್ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಪಥ್ಯಾಹಾರವನ್ನು ಸಮರ್ಪಕವಾಗಿ ಅನುಸರಿಸಬೇಕಾಗುತ್ತದೆ. ಸಿರಿಧಾನ್ಯಗಳು ಹಾಗೂ ಹಸಿರು ತರಕಾರಿಗಳನ್ನು ಒಳಗೊಂಡ ಆಹಾರ ಪದಾರ್ಥ ಮತ್ತು ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು’ ಎಂದು ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ತಜ್ಞ ಡಾ. ಸಂಜಯ್ ಕಂಬಾರ್ ತಿಳಿಸಿದರು.

‘ಮನೆಯಲ್ಲಿಯೇ ನಿಯಮಿತವಾಗಿ ಪ್ರತಿನಿತ್ಯ 45 ನಿಮಿಷಗಳು ವ್ಯಾಯಾಮ ಮಾಡಬೇಕು. ಮಧುಮೇಹಕ್ಕೆ ಪಡೆಯುವ ಔಷಧಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಮಧುಮೇಹ ಕಾಯಿಲೆ ಇರುವವರಿಗೆ ಕೊರೊನಾ ಸೋಂಕು ತಗುಲಿದಲ್ಲಿ ರೋಗದ ತೀವ್ರತೆಯನ್ನು ನಿರ್ಧರಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾದಲ್ಲಿ ಆಸ್ಪತ್ರೆಗೆ ತೆರಳಬೇಕು. ಇಲ್ಲವಾದಲ್ಲಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ಕೋವಿಡ್‌ ಪೀಡಿತರಾದ ಮಧುಮೇಹಿಗಳಲ್ಲಿ ಶೇ 98 ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕು ತಗುಲಿದಾಗ ಭಯ ಪಡುವ ಬದಲು ಆರೈಕೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಮಧುಮೇಹದ ಔಷಧವನ್ನು ಮುಂದುವರಿಸುವ ಜತೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಪೂರಕ ಔಷಧಗಳನ್ನು ಪಡೆಯಬಹುದಾಗಿದೆ. ವೈರಾಣುವು ಎರಡನೇ ಬಾರಿ ದಾಳಿ ಮಾಡಿದಲ್ಲಿ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುವ ಸಾಧ್ಯತೆ ಇರುತ್ತದೆ. ಆಗ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅಥವಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು