ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿ, ಬಾಣಂತಿಯರಿಗೆ ಬೇಡ ಆತಂಕ

ಕೊರೊನಾ ವೈರಸ್ ರಿಯಾಲಿಟಿ ಚೆಕ್
Last Updated 16 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ವಿರುದ್ಧ ಹೋರಾಟಕ್ಕೆ ಸರ್ಕಾರಿ ಆಸ್ಪತ್ರೆಗಳು ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆಂದು ಪರಿಶೀಲಿಸಲುಮೂಡಲಪಾಳ್ಯ ಭೈರವೇಶ್ವರನಗರದ ವಾರ್ಡ್‌ ನಂ 127ನಲ್ಲಿರುವ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿನ ವೈದ್ಯ– ಸಿಬ್ಬಂದಿ ಗರ್ಭಿಣಿಯರು ಹಾಗೂ ಬಾಣಂತಿ– ಮಗುವಿನ ತಪಾಸಣೆಯಲ್ಲಿ ನಿರತರಾಗಿದ್ದರು.

‘ಕೆಮ್ಮು ನೆಗಡಿಯಾದರೆ ಸಾಕು ನಮಗೂ ಕೋವಿಡ್–19 ಬಂದಿದೆಯೇ ಎಂದು ಜನರು ಹೆದರಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಹೀಗೆ ಆಸ್ಪತ್ರೆಗೆಬರುವವರಿಗೆಲ್ಲ ‘ಕೋವಿಡ್–19’ ಪರೀಕ್ಷೆ ಮಾಡುವುದಿಲ್ಲ. ಮೊದಲು ವ್ಯಕ್ತಿಯ ಹಿನ್ನೆಲೆ ಕೇಳುತ್ತೇವೆ. ಅವರು ವಿದೇಶಕ್ಕೆ ಪ್ರಯಾಣ ಮಾಡಿರುವ ಬಗ್ಗೆ ಅಥವಾ ಬೇರೆ ಯಾವುದಾದರೂ ಊರುಗಳಿಗೆ ಹೋಗಿ ಬಂದಿದ್ದಾರೆ, ಎಷ್ಟು ದಿನದ ಹಿಂದೆ ಪ್ರಯಾಣ ಮಾಡಿದ್ದರೆ ಎಂದೆಲ್ಲ ಮಾಹಿತಿ ಸಂಗ್ರಹಿಸುತ್ತೇವೆ. ಈ ಮಾಹಿತಿ ಜತೆಗೆ ಕೊರೊನಾ ಸೋಂಕು ತಗುಲಿರುವ ಲಕ್ಷಣಗಳು ಕಂಡು ಬಂದರೆ ಮಾತ್ರ ರಕ್ತ ಪರೀಕ್ಷೆಗೆ ಕಳಿಸುತ್ತೇವೆ’ ಎನ್ನುತ್ತಾರೆ ಭೈರವೇಶ್ವರನಗರ ಹೆರಿಗೆ ಆಸ್ಪತ್ರೆಯ ವೈದ್ಯ ಚೇತನ್‌. ‘ಇಂಥ ಯಾವ ಲಕ್ಷಣಗಳೂ ಇಲ್ಲದಿದ್ದರೆ ಸಾಮಾನ್ಯ ಕೆಮ್ಮು, ನೆಗಡಿಗೆ ಕೊಡುವ ಚಿಕಿತ್ಸೆ, ಔಷಧ ಕೊಟ್ಟು ಕಳುಹಿಸುತ್ತೇವೆ‘ ಎಂದು ಮಾತು ಸೇರಿಸುತ್ತಾರೆ ಅವರು.

ಈ ಹೆರಿಗೆ ಆಸ್ಪತ್ರೆಯಲ್ಲಿ ಆರು ಮಂದಿ ವೈದ್ಯರು, 15 ಮಂದಿ ಸಿಬ್ಬಂದಿ ಇದ್ದಾರೆ. ಕೆಮ್ಮು, ನೆಗಡಿ, ಜ್ವರ, ರಕ್ತದೊತ್ತಡ, ನಾಯಿ ಕಚ್ಚಿದವರಿಗೆ ಚಿಕಿತ್ಸೆ ಇದೆ. ಫಿಸಿಷಿಯನ್, ಮಕ್ಕಳ ವೈದ್ಯರು, ಅರಿವಳಿಕೆ ವೈದ್ಯರು, ಸ್ತ್ರೀರೋಗ ತಜ್ಞರಿದ್ದಾರೆ. 30 ರಿಂದ 40 ಮಕ್ಕಳು ಪ್ರತಿ ಗುರುವಾರ ಚುಚ್ಚುಮದ್ದಿಗಾಗಿ ಬರುತ್ತಾರೆ. ನಿತ್ಯ 10 ರಿಂದ 20 ಮಂದಿ ಹೆರಿಗೆಗೆ ದಾಖಲಾಗುತ್ತಾರೆ. ನಾರ್ಮಲ್ ಡೆಲಿವರಿ, ಸಿ–ಸೆಕ್ಷನ್ ಡೆಲಿವರಿ ಮಾಡುವ ಆಪರೇಷನ್ ಥಿಯೇಟರ್‌ ಕೂಡ ಇದೆ. ಮೂರ ರಿಂದ ಐದು ದಿನಗಳವರೆಗೆ ಬಾಣಂತಿ ಹಾಗೂ ಮಗುವನ್ನು ಇಲ್ಲಿ ಇರಿಸಿಕೊಳ್ಳುತ್ತಾರೆ.

ಆಸ್ಪತ್ರೆಯಲ್ಲೇ ಬಾಣಂತಿಯರಿಗೆ ಊಟ ನೀಡುತ್ತಿದ್ದು, ಹೊರಗಿನ ವರು ಬಾಣಂತಿ ಕೊಠಡಿಗೆ ಬರದಂತೆ ಎಚ್ಚರವಹಿಸಲಾಗುತ್ತಿದೆ. ಮನೆಯವರು ಮಗು ನೋಡಬೇಕಾದರೂ ಆಸ್ಪತ್ರೆಯ ನಿಯಮ ಗಳನ್ನೇ ಪಾಲಿಸಬೇಕು. ಬಾಣಂತಿ ಮಗುವನ್ನು ಮನೆಗೆ ಕರೆದುಕೊಂಡು ಹೋದ ನಂತರ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ.

ನೂರಾರು ಮಂದಿ ಸೇರುವ ಈ ಆಸ್ಪತ್ರೆ ಆವರಣದಲ್ಲಿ ‘ಕೊರೊನಾ ಹೆಲ್ಪ್‌ಲೈನ್‌’ ಡೆಸ್ಕ್‌ ಆರಂಭಿಸಿದ್ದಾರೆ. ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಜನಸಂದಣಿ ಇರದಂತೆ ನೋಡಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ಹ್ಯಾಂಡ್ ಸ್ಯಾನಿಟೈಸರ್‌ ಬಳಸಿ ಫೈಲ್‌ ಹಾಗೂ ಇತರೆ ವಸ್ತುಗಳನ್ನು ಮುಟ್ಟಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗಂಟೆಗೊಮ್ಮೆ ನೆಲ, ಟೇಬಲ್‌ಗಳನ್ನು ಒರೆಸುತ್ತಾರೆ. ಹಾಸಿಗೆ ಮೇಲಿನ ಹೊದಿಕೆಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರುತ್ತಾರೆ.

‘ರೋಗಿಗಳಿಗೂ ಧೈರ್ಯತುಂಬಿ, ಪ್ರಾಥಮಿಕ ಚಿಕಿತ್ಸೆ ನೀಡುತ್ತಿ ದ್ದೇವೆ. ಮೊದಲಿಗಿಂತ ಹೆಚ್ಚು ಸ್ವಚ್ಛತೆಗೆ ಒತ್ತು ನೀಡಿದ್ದೇವೆ. ಈವರೆಗೆ ಕೋವಿಡ್–19 ಸೋಂಕು ಪಾಸಿಟಿವ್ ಪ್ರಕರಣಗಳಿಲ್ಲ. ಸೋಂಕಿನ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನಿಲ್ಲಿಸಿಲ್ಲ. ಈಗ 24 ಗಂಟೆಯೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಅರವಳಿಕೆ ತಜ್ಞೆ ವಿನುತಾ.

‘ಅನಗತ್ಯ ಭಯ ಬೇಡ, ಕೋವಿಡ್–19 ಹರಡದಂತೆ ಜಾಗೃತರಾಗಿರೋಣ’ ಎನ್ನುತ್ತಿದ್ದಾರೆ ವೈದ್ಯರು.

***

ಹೆಚ್ಚು ಜನ ಸೇರುವುದು ಬೇಡ

ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ವ್ಯಕ್ತಿಯಿಂದ ವ್ಯಕ್ತಿಗೆ ಬೇಗ ರೋಗಗಳು ಹರಡುವುದರಿಂದ ಆಸ್ಪತ್ರೆಗೆ ಭೇಟಿ ನೀಡುವವರ ಮೇಲೆ ನಿಗಾ ಇಡಲಾಗಿದೆ. ಅನಗತ್ಯವಾಗಿ ಹೆಚ್ಚು ಜನ ಸೇರುವುದು ಬೇಡ ಎಂದು ತಿಳಿಸುತ್ತಿದ್ದೇವೆ.

ಡಿ. ಮಂಜುಳಾ, ವೈದ್ಯಕೀಯ ಅಧೀಕ್ಷಕರು, ಭೈರವೇಶ್ವರನಗರ ಹೆರಿಗೆ ಆಸ್ಪತ್ರೆ

***

ಸ್ವಚ್ಛತೆಗೆ ಹೆಚ್ಚು ಒತ್ತು

ಆಸ್ಪತ್ರೆ ಆವರಣ, ಓಪಿಡಿಯಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಆಸ್ಪತ್ರೆ ಸಿಬ್ಬಂದಿಗೆ, ರೋಗಿಗಳಿಗೂ ಮಾಸ್ಕ್‌ ಧರಿಸಲು ತಿಳಿಸಿದ್ದೇವೆ. ಹ್ಯಾಂಡ್‌ ಸ್ಯಾನಿಟೈಸರ್‌ ಇಟ್ಟಿದ್ದೇವೆ. ಸಾಮಾನ್ಯ ಔಷಧಿಗಳೊಂದಿಗೆ ಕಾಲರಾ, ಎಚ್‌1ಎನ್‌1ಗೂ ನಮ್ಮ ಕೇಂದ್ರದಲ್ಲಿ ಔಷಧಿ ಇದೆ.

ಶೋಭಾ ಎನ್‌., ವೈದ್ಯಕೀಯ ಅಧೀಕ್ಷಕರು, ಜಗಜೀವನ್ ರಾಮ್ ಹೆರಿಗೆ ಆಸ್ಪತ್ರೆ, ಚಾಮರಾಜಪೇಟೆ

***

ವಿಶೇಷ ತರಬೇತಿ

ಸ್ವಚ್ಛತೆ ಬಗ್ಗೆ ಸರ್ಕಾರ ನೀಡಿರುವ ನಿಯಮಗಳನ್ನು ಅನ್ನು ಪಾಲಿಸುತ್ತಿದ್ದೇವೆ. ಎಲ್ಲಾ ಸಿಬ್ಬಂದಿಗೂ ಕೋವಿಡ್–19 ನಿಯಂತ್ರಣ ಕುರಿತು ವಿಶೇಷ ತರಬೇತಿ ನೀಡಿದ್ದೇವೆ. ಸಾರ್ವಜನಿಕರಿಗೂ ಮಾಹಿತಿ ನೀಡುತ್ತಿದ್ದೇವೆ.

ಡಾ. ಲತಾ, ವೈದ್ಯಕೀಯ ಅಧೀಕ್ಷಕರು, ಹಲಸೂರು ಹೆರಿಗೆ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT