ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಜೀವಕ್ಕೆ ಬೇಕು ಸಂಪರ್ಕ ಸೇತು!

Last Updated 19 ಜೂನ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌, ಐಸೊಲೇಶನ್‌ನಿಂದಾಗಿ ವೃದ್ಧರು ಮನೆಯೊಳಗೇ ಇರಬೇಕಾಗಿರುವುದು ಅನಿವಾರ್ಯ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಇನ್ನಷ್ಟು ಒಂಟಿತನ ಅನುಭವಿಸುತ್ತಿದ್ದಾರೆ. ಇದರಿಂದ ಪಾರಾಗುವುದು ಹೇಗೆ?

70 ಸಮೀಪಿಸುತ್ತಿರುವ ಮೂರ್ತಿ ದಂಪತಿಗೆ ಒಂಟಿತನ (ಐಸೊಲೇಶನ್‌) ಹೊಸದೇನಲ್ಲ. ನಿವೃತ್ತಿಯ ನಂತರ ದಿನದ ಬಹುಪಾಲು ಅವಧಿಯನ್ನು ಮನೆಯಲ್ಲೇ ಕಳೆಯುತ್ತಿದ್ದರೂ ಸಮೀಪದ ಕಿರಾಣಿ ಅಂಗಡಿ, ಔಷಧದ ಅಂಗಡಿ, ಕೆಲವೊಮ್ಮೆ ಕಾಫಿ ಶಾಪ್‌ಗೆ ಹೋಗುತ್ತಿದ್ದುದುಂಟು. ನಿತ್ಯ ಸಂಜೆ ಒಂದು ಗಂಟೆ ಸಮೀಪದ ಪಾರ್ಕ್‌ಗೆ ತೆರಳಿ ಸಮವಯಸ್ಕರೊಂದಿಗೆ ಹರಟೆ ಹೊಡೆದು ನವಚೈತನ್ಯದೊಂದಿಗೆ ಮನೆಗೆ ಮರಳುವುದು ದಿನಚರಿಯಾಗಿತ್ತು. ಆದರೆ ಈಗ ಮೂರು ತಿಂಗಳಿಂದ ಇವಕ್ಕೆಲ್ಲ ಕಡಿವಾಣ ಬಿದ್ದಿದೆ. ಬೇರೆ ನಗರದಲ್ಲಿರುವ ಮಗ ದಿನಸಿ, ತರಕಾರಿ, ಔಷಧ ಆನ್‌ಲೈನ್‌ನಲ್ಲಿ ಸರಬರಾಜಾಗುವಂತೆ ನೋಡಿಕೊಂಡಿದ್ದಾನೆ. ಅಕ್ಕಪಕ್ಕದವರು ನೆರವಿನ ಹಸ್ತ ಚಾಚಿದ್ದಾರೆ– ಆದರೆ ಪೋನ್‌ ಮೂಲಕ ‘ಏನಾದರೂ ಬೇಕಾದರೆ ಹೇಳಿ ಅಂಕಲ್‌’ ಎಂಬ ಮಾತಿನೊಂದಿಗೆ ಮುಕ್ತಾಯವಾಗಿಬಿಡುತ್ತದೆ ಮಾತುಕತೆ.

ಈ ರೀತಿಯ ದೈಹಿಕ, ಭಾವನಾತ್ಮಕ, ಸಾಂಸ್ಕೃತಿಕ ಪ್ರತ್ಯೇಕತೆಯ ಜೊತೆಗೆ ಮಾನಸಿಕ ನೆಮ್ಮದಿ ನೀಡುವ ವ್ಯಕ್ತಿಗಳ ಜೊತೆಗಿನ ನೇರ ಸಂಪರ್ಕದಿಂದ ದೂರವಾಗಿರುವ ಮೂರ್ತಿ ದಂಪತಿಯ ಆರೋಗ್ಯದಲ್ಲೂ ಏರುಪೇರಾಗುತ್ತಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌, ‘ಸೆಲ್ಫ್‌ ಐಸೋಲೇಶನ್‌’ನಿಂದಾಗಿ ಮೂರ್ತಿಯವರಂತಹ ಹಲವಾರು ಹಿರಿಯ ನಾಗರಿಕರು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತೆ ಚಡಪಡಿಸುತ್ತಿದ್ದಾರೆ. ಎಷ್ಟೋ ಕಡೆ ವೃದ್ಧ ದಂಪತಿ ಮಾತ್ರ ಬದುಕು ಸಾಗಿಸುತ್ತಿದ್ದಾರೆ, ಅಂಥವರಿಗೆ ಇದು ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಹೊಡೆತ ನೀಡಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ‘ಆದಷ್ಟೂ ಮನೆಯಲ್ಲೇ ಇರಿ, ಅದರಲ್ಲೂ 60ಕ್ಕಿಂತ ಮೇಲ್ಪಟ್ಟ ಹಿರಿಯರು ದೈಹಿಕ ಅಂತರ ಕಾಪಾಡಿಕೊಳ್ಳುವುದು ಎಲ್ಲರಿಗಿಂತ ಹೆಚ್ಚು ಅಗತ್ಯ. ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು’ ಎಂಬ ಸಲಹೆಯಿಂದಾಗಿ ಮೊದಲೇ ಒಂಟಿಯಾಗಿ ಬಾಳುತ್ತಿರುವವರು ಐಸೊಲೇಶನ್‌ನಿಂದಾಗಿ ಇನ್ನಷ್ಟು ಒಂಟಿತನ ಅನುಭವಿಸುತ್ತಿದ್ದಾರೆ. ಕುಟುಂಬ ಸದಸ್ಯರ ಜೊತೆ ಇರುವವರೂ ಕೂಡ ಈಗ ಲಾಕ್‌ಡೌನ್‌ ಸಡಿಲವಾಗಿರುವುದರಿಂದ ಮಕ್ಕಳು ಕಚೇರಿಗೆ ಹೋದ ನಂತರ ಒಂಟಿಯಾಗಿರಬೇಕಾಗುತ್ತದೆ, ಸಾಮಾಜಿಕ ಸಂಪರ್ಕವಿಲ್ಲದೇ ನಲುಗುತ್ತಿದ್ದಾರೆ.

ಸಂಘಜೀವಿ

ಈ ಸಾಮಾಜಿಕ ಪ್ರತ್ಯೇಕತೆ, ಒಂಟಿತನವನ್ನು ಕೇವಲ ಒಣ ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮನುಷ್ಯ ಮೊದಲಿನಿಂದಲೂ ಸಂಘಜೀವಿ. ಇತರರ ಕಾಳಜಿ, ವಾತ್ಸಲ್ಯ, ಪ್ರೀತಿ ಎಲ್ಲವೂ ಹುಟ್ಟಿನಿಂದಲೇ ನಮಗೆ ಬೇಕು. ಇವೆಲ್ಲ ನಿರಂತರವಾಗಿ ಸಿಗದಿದ್ದರೆ ಮಾನಸಿಕ ಆರೋಗ್ಯ ಹಳಿ ತಪ್ಪುವುದು ಸಹಜ.

ಕಷ್ಟದ ಕಾಲದಲ್ಲಂತೂ ಕನಿಷ್ಠ ಒಬ್ಬರ ಜೊತೆ ನಿರಂತರ ಸಂಪರ್ಕದಲ್ಲಿದ್ದರೂ ಸಾಕು, ಎಲ್ಲವನ್ನೂ ಮರೆಯುವಂತಹ ಶಕ್ತಿ ಸಂಚಯವಾಗುವುದಂತೂ ನಿಜ. ಬದುಕಲು, ಚೈತನ್ಯ ಉಕ್ಕುವಂತೆ ಮಾಡಲು ಈ ಬಾಂಧವ್ಯ ಬೇಕೇಬೇಕು. ಆ ಬಾಂಧವ್ಯ ತಂದೆ– ತಾಯಿ, ಸಂಗಾತಿ, ಪ್ರೇಯಸಿ/ ಪ್ರಿಯತಮ, ಸ್ನೇಹಿತರು, ಮಕ್ಕಳು.. ಹೀಗೇ ಯಾರದೇ ರೂಪದಲ್ಲಿರಲಿ, ಎಲ್ಲವನ್ನೂ ಕಳೆದುಕೊಂಡಾಗ ಕೈ ಹಿಡಿದೆತ್ತಲು ನೆರವಾಗುವುದಂತೂ ಹೌದು.

ಕಷ್ಟ– ಸುಖದ ಮಾತುಗಳು

ಈ ‘ಐಸೊಲೇಶನ್‌’ ಎನ್ನುವುದು ವಯಸ್ಸಾದವರಿಗೆ ಅತ್ಯಂತ ದಾರುಣ ಎನ್ನಬಹುದು. ಈ ಕೋವಿಡ್‌– 19 ಪಿಡುಗು ಶುರುವಾದಾಗ ಮನೆಯೆಂಬ ಪಂಜರದೊಳಗೆ ಬಂಧಿಯಾಗುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಚೆನ್ನಾಗಿ ಅರ್ಥವಾಗಿದೆ. ಇದು ಎಲ್ಲರಿಗೂ ಅತ್ಯಂತ ಕಠಿಣವಾದ ಸವಾಲಿದ್ದಂತೆ. ಅದರಲ್ಲೂ ಬದುಕಿನ ಕಡೆಯ ದಿನಗಳಲ್ಲಿ ಇರುವಂಥವರಿಗೆ ಕಷ್ಟ– ಸುಖ ಹೇಳಿಕೊಳ್ಳಲು, ಮಾತುಕತೆ ನಡೆಸಲು ಬೇರೆ ವ್ಯಕ್ತಿಗಳು ಇರದ ಹಿರಿಯ ನಾಗರಿಕರಿಗೆ ಈ ಐಸೊಲೇಶನ್‌ ಎನ್ನುವುದು ಬಹು ದೊಡ್ಡ ಹೊಡೆತ ನೀಡಿದೆ.

ಬದುಕೆಂಬ ದಾರಿಯಲ್ಲಿ ವ್ಯಕ್ತಿಗೆ ವಯಸ್ಸಾದಂತೆ ಸಾಮಾಜಿಕ ಸಂಪರ್ಕಗಳೂ ಕಡಿಮೆಯಾಗುತ್ತವೆ. ನಿವೃತ್ತಿ ನಂತರ ಸಹೋದ್ಯೋಗಿಗಳಿಂದ ದೂರವಾಗುತ್ತಾರೆ, ಹಳೆಯ ಸ್ನೇಹಿತರಿಗೆ ಗುಡ್‌ಬೈ ಹೇಳಬೇಕಾಗುತ್ತದೆ. ಕಾಯಿಲೆಯಿಂದ ಓಡಾಡಲು ಕಷ್ಟವಾದರಂತೂ ಬದುಕೇ ಬೇಡವಾಗುವಂತಹ ಸಂದರ್ಭ. ಕಾರಣ ಏನೇ ಇರಲಿ, ವಯಸ್ಸಾದವರಿಗೆ ಐಸೋಲೇಶನ್‌ ಎನ್ನುವುದು ಬಹಳ ದುರ್ಬರ.

ವೃದ್ಧಾಶ್ರಮದಲ್ಲಿ ಇರುವವರು, ಮನೆಯಲ್ಲೇ ಇದ್ದರೂ ಕುಟುಂಬದ ಇತರ ಸದಸ್ಯರ ಜೊತೆ ಬೆರೆಯದೆ ತಮ್ಮದೇ ಒಂಟಿಲೋಕ ಸೃಷ್ಟಿಸಿಕೊಂಡವರು ಬೇರೆಯವರಿಗೆ ತಮ್ಮ ಅಗತ್ಯವಿಲ್ಲ ಎಂಬ ಭಾವನೆಯಿಂದ ಕುಗ್ಗುವುದು ಸಹಜ. ಇದಲ್ಲದೇ ಈ ಒಂಟಿತನ ಎನ್ನುವುದು ಜ್ಞಾಪಕ ಶಕ್ತಿ ಕುಗ್ಗಲು ಕಾರಣ. ಅಲ್ಝಮೆರ್‌, ಖಿನ್ನತೆ, ಬೊಜ್ಜು, ರೋಗ ನಿರೋಧಕ ಶಕ್ತಿ ಕುಂದಲು ಕಾರಣ. ಇದು ಅಧಿಕ ರಕ್ತದೊತ್ತಡ, ಹೃದ್ರೋಗ, ಸಾವಿಗೆ ಎಡೆ ಮಾಡಿಕೊಡಬಲ್ಲದು.

ಹೀಗಾಗಿ ವೃದ್ಧರಲ್ಲಿ ಬಹುತೇಕ ಮಂದಿ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ಕೆಲವು ಸಮಯ ಮಾತನಾಡಲು ಆಸಕ್ತಿ ತೋರುತ್ತಾರೆ.

ಒಂಟಿತನದ ಅಪಾಯಗಳು

* ಬೇಗ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು

* ಮರೆವಿನ ರೋಗ ಡೆಮೆನ್ಶಿಯ ಉಂಟಾಗುವ ಸಾಧ್ಯತೆ
ಶೇ 50ರಷ್ಟು ಅಧಿಕ

* ಸಾಮಾಜಿಕವಾಗಿ ದೂರವಾಗಿರುವುದರಿಂದ ಹೃದ್ರೋಗದ ಅಪಾಯವೂ ಜಾಸ್ತಿ

* ಖಿನ್ನತೆ, ಆತಂಕ, ನಿದ್ರಾಹೀನತೆ ಹೆಚ್ಚು.

ಮನಶ್ಶಾಸ್ತ್ರದ ಪ್ರಕಾರ, ನಮ್ಮ ಮನಸ್ಸಿನಲ್ಲೇ ಕಾಯಿಲೆಗೆ ಔಷಧ, ಆರೈಕೆ ಇರುತ್ತದೆ. ಬದುಕಬೇಕು ಅಥವಾ ಸಾಯಬೇಕು ಎನ್ನುವ ಬಯಕೆ ಉಳಿದೆಲ್ಲ ಅಂಶಗಳನ್ನು ಹಿಂದಿಕ್ಕುತ್ತದೆ. ಬದುಕಬೇಕೆಂಬ ಬಯಕೆಯನ್ನು ಈ ಒಂಟಿತನ ಎಂಬುದು ಕಡಿಮೆ ಮಾಡುತ್ತದೆ. ಇದು ದೀರ್ಘಾವಧಿ ಬದುಕಿನ ಕುರಿತ ಹೋರಾಟವನ್ನೇ ಕಸಿದು ಬಿಡುತ್ತದೆ. ಇದು ವ್ಯಕ್ತಿಯ ನೋವನ್ನು ಸಕಾಲದಲ್ಲಿ ತಡೆಯುವ ಅವಕಾಶವನ್ನೇ ಕಸಿದು ಬಿಡುತ್ತದೆ.

ಒಂಟಿತನ ಕಡಿಮೆ ಮಾಡಲು..

* ಈ ಒಂಟಿತನ ನೀಗಲು ಸಾಮಾಜಿಕ ಸಂಪರ್ಕಗಳೇ ಬೇಕು. ಕುಟುಂಬದ ಸದಸ್ಯರ ಸಾಮಿಪ್ಯ, ಸ್ನೇಹಿತರ ಜೊತೆ ಹಾಗೂ ಸಮುದಾಯದಲ್ಲಿ ಒಡನಾಟ ಬೇಕಾಗುತ್ತದೆ.

* ಫೋನ್‌ ಕೈಗೆತ್ತಿಕೊಳ್ಳಿ. ಸ್ನೇಹಿತರು, ಬಂಧುಗಳ ಜೊತೆ ಮಾತನಾಡಿ. ಹೆಚ್ಚು ಸಮಯದವರೆಗೆ ಸಂಭಾಷಣೆ ಮುಂದುವರಿಸುವ ಅಗತ್ಯವೂ ಇಲ್ಲ. ಆತ್ಮೀಯವಾಗಿ ಒಂದೈದು ನಿಮಿಷದ ಮಾತುಕತೆಯೇ ಸಾಕಾಗುತ್ತದೆ. ಸಾಧ್ಯವಾದರೆ ವಿಡಿಯೊ ಕರೆ ಮಾಡಿ ಮಾತನಾಡಿ. ವಾಟ್ಸ್‌ಆ್ಯಪ್‌ ಬಳಸುವುದನ್ನು ಕಲಿಯಬಹುದು.

* ಮನೆಯಲ್ಲೇ ನಡೆದಾಡಬಹುದು, ಚೆಸ್‌, ಕೇರಂನಂತಹ ಬೋರ್ಡ್‌ ಗೇಂ ಆಡಬಹುದು.

* ತುರ್ತು ಸ್ಥಿತಿ ಎದುರಾದರೆ ಸಹಾಯವಾಣಿ ಬಳಸಿ.

* ಉಳಿದವರೂ ಕೂಡ ನಿಮಗೆ ಗೊತ್ತಿರುವಂತಹ ಒಂಟಿ ವೃದ್ಧರಿಗೆ ನೆರವು ನೀಡುವುದು ಬಹಳ ಮುಖ್ಯ. ನಿಮ್ಮ ಕಟ್ಟಡದಲ್ಲಿರುವ ಅಥವಾ ನೆರೆಯಲ್ಲಿರುವ, ಸಂಬಂಧಿಕರಲ್ಲಿರುವ ವೃದ್ಧರನ್ನು ಭೇಟಿಯಾಗಿ ನೆರವಿನ ಹಸ್ತ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT