ಭಾನುವಾರ, ಮೇ 29, 2022
31 °C

ಏನಾದ್ರೂ ಕೇಳ್ಬೋದು | ಪತ್ನಿಯೇ ಪ್ರೇಯಸಿ ಆಗದಿದ್ದರೆ…

ನಡಹಳ್ಳಿ ವಸಂತ್ Updated:

ಅಕ್ಷರ ಗಾತ್ರ : | |

ಪುರುಷ. ಇತ್ತೀಚೆಗೆ ಮದುವೆಯಾಗಿದೆ. ಸಂಗಾತಿಯೊಡನೆ ಮಿಲನದಲ್ಲಿ ನಿಮಿರುದೌರ್ಬಲ್ಯ ಮತ್ತು ಶೀಘ್ರಸ್ಖಲನ ಸಮಸ್ಯೆ. ಎರಡು ವರ್ಷಗಳ ಹಿಂದೆ ಪ್ರೇಯಸಿಯೊಂದಿಗೆ ಈ ಸಮಸ್ಯೆಗಳಿರಲಿಲ್ಲ. ದೈಹಿಕವಾಗಿ ಆರೋಗ್ಯವಾಗಿದ್ದೇನೆ. ಔಷಧಿಗಳ ಅಗತ್ಯವಿದೆಯೇ? ಪರಿಹಾರವೇನು?

ಹೆಸರು ಊರು ತಿಳಿಸಿಲ್ಲ.

ನಿಮ್ಮ ಪತ್ರದಲ್ಲಿಯೇ ಸಮಸ್ಯೆಗೆ ಪರಿಹಾರವಿರುವುದನ್ನು ಗಮನಿಸಿ. ಪತ್ನಿಯನ್ನು ನೀವಿನ್ನೂ ಪ್ರೇಯಸಿಯನ್ನಾಗಿ ಮಾಡಿಕೊಂಡಿಲ್ಲ. ಹೀಗೆ ಮಾಡಲು ನಿಮ್ಮ ಮನಸ್ಸಿನಲ್ಲಿರುವ ಹಿಂಜರಿಕೆಗಳೇನಿರಬಹುದು? ಪತ್ನಿಯೆದುರು ನಿಮ್ಮ ಮನಸ್ಸನ್ನು ತೆರೆಯಲು ಕಷ್ಟಪಡುತ್ತಿದ್ದೀರಲ್ಲವೇ? ಪತ್ನಿಯ ಲೈಂಗಿಕ ಆಸಕ್ತಿಯ ಕುರಿತಾಗಿ ತಿಳಿದುಕೊಳ್ಳದೆ ಅವರನ್ನು ತೃಪ್ತಿಪಡಿಸುವ ಜವಾಬ್ದಾರಿಯನ್ನು ನೀವು ತೆಗೆದುಕೊಂಡಿರಬಹುದೇ? ಪರಸ್ಪರ ಲೈಂಗಿಕತೆಯ ಪರಿಚಯವೇ ಇಲ್ಲದಿರುವಾಗ ತಪ್ಪು ಕಲ್ಪನೆಗಳಿಂದ ಆತಂಕ ಮೂಡುವುದು ಸಹಜ. ನಿಮ್ಮ ಸಮಸ್ಯೆಗಳಿಗೆ ಕಾರಣ ನಿಮ್ಮೊಳಗಿರುವ ಆತಂಕ. ನಿಮಗೆ ಯಾವುದೇ ಔಷಧಿಗಳ ಅಗತ್ಯವಿಲ್ಲ. ವಾಸ್ತವವಾಗಿ ಅಂತಹ ಔಷಧಿಗಳು ಇಲ್ಲ. ಇಬ್ಬರೂ ನಿಮ್ಮ ಲೈಂಗಿಕತೆಯ ಕುರಿತಾಗಿ ಮುಕ್ತವಾಗಿ ಮಾತನಾಡುವುದು ಖಾಯಮ್ಮಾದ ಪರಿಹಾರ ನೀಡುತ್ತದೆ. ಪತ್ನಿ ಪ್ರೇಯಸಿಯಾದಾಗ ಸಮಸ್ಯೆಗಳು ಮಾಯವಾಗುತ್ತವೆ. ಅಗತ್ಯವಿದ್ದರೆ ಲೈಂಗಿಕ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

***

*60 ವರ್ಷದ ಪುರುಷ. ಆರೋಗ್ಯವಾಗಿದ್ದೇನೆ. ಶೀಘ್ರಸ್ಖಲನವನ್ನು ಹೋಗಲಾಡಿಸಲು ಪತ್ರಿಕೆಯ ಜಾಹೀರಾತುಗಳಲ್ಲಿ ಬರುವ ಕಾಮೋತ್ತೇಜಕ ಔಷಧಿಗಳನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆಯೇ? ಇವುಗಳಿಂದ ಅಡ್ಡಪರಿಣಾಗಮಳಿವೆಯೇ? ಲೈಂಗಿಕ ಕ್ರಿಯೆಯ ನಂತರ ಹಸ್ತಮೈಥುನ ಮಾಡಿಕೊಳ್ಳಬಹುದೇ?

ಹೆಸರು ಊರು ತಿಳಿಸಿಲ್ಲ.

ಪತ್ರಿಕೆಗಳಲ್ಲಿ ಪ್ರಚಾರಮಾಡುವ ಯಾವುದೇ ಮಾತ್ರೆ ಮುಲಾಮುಗಳು ಕಾಮೋತ್ತೇಜನಕ್ಕಾಗಲೀ ಶೀಘ್ರಸ್ಖಲನಕ್ಕಾಗಲೀ ಉಪಯುಕ್ತವಾದದ್ದು ಎಂದು ವೈಜ್ಞಾನಿಕವಾಗಿ ಸಿದ್ಧವಾಗಿರುವುದಿಲ್ಲ. ಅವುಗಳನ್ನು ಔಷಧಿಗಳೆಂದು ನಂಬಿ ಸೇವಿಸಿದಾಗ (ಪ್ಲಾಸಿಬೋ ಎಫೆಕ್ಟ್‌) ಕೆಲವರಿಗೆ ತಾತ್ಕಾಲಿಕವಾಗಿ ಸಹಾಯವಾಗಬಹುದು. ಇಳಿವಯಸ್ಸಿನಲ್ಲಿ ಲೈಂಗಿಕ ಆಸಕ್ತಿಗೆ ಪೂರಕವಾಗುವುದು ಸಂಗಾತಿಯ ಜೊತೆಗಿನ ಬಾಂಧವ್ಯ. ನಿಮ್ಮ ಲೈಂಗಿಕಶಕ್ತಿಯ ಕುರಿತಾದ ಅನುಮಾನಗಳು ಮತ್ತು ನಿಮ್ಮದೇ ದೇಹದ ರೂಪ ಆಕಾರಗಳ ಬಗೆಗಿನ ಹಿಂಜರಿಕೆಯಿಂದ ಮೂಡುವ ಆತಂಕ ಶೀಘ್ರಸ್ಖಲನಕ್ಕೆ ಕಾರಣವಾಗಬಹುದು. ನಿಮ್ಮ ಪತ್ರದಲ್ಲಿ ಪತ್ನಿಯ ಆಸಕ್ತಿ ಮತ್ತು ಆರೋಗ್ಯದ ಬಗೆಗೆ ಯಾವುದೇ ಮಾಹಿತಿಯಿಲ್ಲ. ಅಂತರಂಗವನ್ನು ಪತ್ನಿಯ ಮುಂದೆ ತೆರೆದಿಟ್ಟು ಅವರನ್ನೂ ನಿಮ್ಮ ಸುಖಾನುಭವದ ಪಾಲುದಾರರನ್ನಾಗಿ ಮಾಡಿಕೊಳ್ಳಿ. ಆಗ ಲೈಂಗಿಕತೆಯ ಹೊಸಜಗತ್ತು ನಿಮಗೆ ತೆರೆದುಕೊಳ್ಳುತ್ತದೆ. ಹಸ್ತಮೈಥುನ ಎಲ್ಲಾ ಸಂದರ್ಭಗಳಲ್ಲಿಯೂ ಸಂಪೂರ್ಣ ಆರೋಗ್ಯಕರ.

***

54 ವರ್ಷದ ಪುರುಷ. ವಾಹನ ಚಾಲಕ. ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ಶಿಶ್ನದ ಉದ್ರೇಕವೂ ಕಡಿಮೆಯಾಗಿದೆ. ತಿಂಗಳಿಗೊಮ್ಮೆ ಪತ್ನಿಯ ಜೊತೆ ಸೇರುವ ಉಪಾಯವನ್ನು ಹೇಳಿ.

ಹೆಸರು ಊರು ತಿಳಿಸಿಲ್ಲ.

ದೇಹ ಮಧ್ಯವಯಸ್ಸಿನ ಕಡೆ ಸರಿದಂತೆ ಹಾರ್ಮೋನ್‌ಗಳ ಸೃಜನೆ ಕಡಿಮೆಯಾಗುವುದಲ್ಲದೆ ಜೀವನದ ಆದ್ಯತೆಗಳೂ ಬದಲಾಗುತ್ತವೆ. ಆಗ ಲೈಂಗಿಕ ಆಸಕ್ತಿ ಹಿನ್ನೆಲೆಗೆ ಸರಿಯಬಹುದು. ಹಾಗಾಗಿ ಉದ್ರೇಕ ಕಡಿಮೆಯಾಗುವುದು ಸಹಜ. ಇದರ ಅರ್ಥ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ ಎಂದಾಗಬೇಕಿಲ್ಲ. ನಿಯಮಿತವಾದ ಆಹಾರ ವ್ಯಾಯಮಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಾಧ್ಯವಾದಾಗಲೆಲ್ಲಾ ಪತ್ನಿಯ ಜೊತೆ ಸರಸವಾಗಿ ಸಮಯ ಕಳೆಯಿರಿ. ಪರಸ್ಪರ ಅಪ್ಪುಗೆ ಚುಂಬನ ಕೇವಲ ಸಂಭೋಗದ ಉದ್ದೇಶ ಹೊಂದಿದ್ದರೆ ಲೈಂಗಿಕ ಆಸಕ್ತಿ ಮೂಡದೆ ಹೋಗಬಹುದು. ಸಮಯ ಸಿಕ್ಕಾಗಲೆಲ್ಲಾ ಏಕಾಂತದಲ್ಲಿ ಸ್ಪರ್ಶಸುಖವನ್ನು ಅನುಭವಿಸಿ. ಪತ್ನಿಯ ಜೊತೆ ಹೆಚ್ಚಿನ ಸಮಯವನ್ನು ಸರಸವಾಗಿ ಕಳೆದರೆ ಲೈಂಗಿಕ ಆಸಕ್ತಿ ಸಹಜವಾಗಿ ಮೂಡುತ್ತದೆ.

ಏನಾದ್ರೂ ಕೇಳ್ಬೋದು...
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು