ಮಂಗಳವಾರ, ಡಿಸೆಂಬರ್ 1, 2020
23 °C
ಕೊರೊನಾ ಒಂದಷ್ಟು ತಿಳಿಯೋಣ

ಕೋವಿಡ್: ವಾಸಿಯಾದರೂ ಕಾಡುವ ಕಾಯಿಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಕೆಲವರಿಗೆ ಉಸಿರಾಟ, ಸಂಧಿ ನೋವು, ದೃಷ್ಟಿ ದೋಷ, ನೆನಪಿನ ಶಕ್ತಿ ನಾಶ ಸೇರಿದಂತೆ ವಿವಿಧ ಸಮಸ್ಯೆ ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಗುಣಮುಖರಾದರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಕೋವಿಡ್‌ ಸೋಂಕು ಹೆಚ್ಚಿನ ಅಪಾಯ ಉಂಟುಮಾಡಲಿದೆ ಎನ್ನುವುದು ವೈದ್ಯಕೀಯ ಸಂಶೋ ಧನೆಗಳಿಂದ ದೃಢಪಟ್ಟಿದೆ. ಕಾಯಿಲೆ ಇರುವವರು ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಗಳು ಬೀರುವ ಸಾಧ್ಯತೆಗಳಿರುತ್ತವೆ. ಕೆಲವರಿಗೆ ಸೋಂಕು ಮರುಕಳಿಸಬಹುದು ಎಂದು ತಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಚೇತರಿಸಿಕೊಂಡವರಿಗೆ ಪುನರ್ವಸತಿ ಕೇಂದ್ರಗಳನ್ನು ಕೂಡ ರಾಜ್ಯದಲ್ಲಿ ಪ್ರಾರಂಭಿಸಲಾಗುತ್ತಿದೆ.

‘ಕೋವಿಡ್‌ ಶ್ವಾಸಕೋಶದ ಜತೆಗೆ ವಿವಿಧ ಅಂಗಗಳ ಮೇಲೆ ಕೂಡ ದಾಳಿ ನಡೆಸಲಿದೆ. ಚೇತರಿಸಿಕೊಂಡ ಬಳಿಕ ಕೆಲ ದಿನಗಳು ಅವರ ಆರೋಗ್ಯದ ಮೇಲೆ ನಿಗಾ ಇಡಬೇಕಾಗುತ್ತದೆ. ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅಂತಹವರು ಸೂಕ್ತ ಆರೈಕೆಗೆ ಒಳಪಡಬೇಕು. ಉಸಿರಾಟದ ಸಮಸ್ಯೆ, ಜ್ವರ, ತಲೆನೋವು, ದೃಷ್ಟಿದೋಷ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಕೆಲ ಗುಣಮುಖರು ಆಸ್ಪತ್ರೆಗೆ ಬರುತ್ತಿದ್ದಾರೆ’ ಎಂದು ಜಯನಗರದ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಎಂ.ಕೆ. ರಾಘವೇಂದ್ರ  ತಿಳಿಸಿದರು.

ವೃದ್ಧರಿಗೆ ಹೆಚ್ಚಿನ ಅಪಾಯ: ‘ಕೋವಿಡ್ ಪೀಡಿತರು ಗುಣಮುಖರಾದರೂ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವರ ಶ್ವಾಸಕೋಶ ಗಟ್ಟಿಯಾಗುತ್ತದೆ. ಇನ್ನೂ ಕೆಲವರಿಗೆ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆಸ್ಪತ್ರೆಯಿಂದ ಮನೆಗೆ ತೆರಳುವಾಗಲೇ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಆಹಾರ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಅದನ್ನು ನಿಯಮಿತವಾಗಿ ಪಾಲಿಸಬೇಕು’ ಎಂದರು.

‘ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಏರುಪೇರಾದಲ್ಲಿ ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಪಡುವುದು ಉತ್ತಮ. ವೃದ್ಧರು ಹಾಗೂ ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳುಳ್ಳವರಿಗೆ ಹೆಚ್ಚಿನ ಅಪಾಯ ಇರಲಿದೆ. ಹಾಗಾಗಿ ಲಸಿಕೆ ಅಥವಾ ಔಷಧ ತಯಾರಾಗುವವರೆಗೂ ಹೆಚ್ಚಿನ ಕಾಳಜಿ ವಹಿಸಬೇಕು’ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು