ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ತೀವ್ರ ಸ್ವರೂಪದ ಕೊರೊನಾ ಪರಿಣಾಮ

Last Updated 26 ನವೆಂಬರ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಬಹಳಷ್ಟು ಮಂದಿ ಯಾವುದೇ ಲಕ್ಷಣಗಳಿಲ್ಲದೆ ಅಥವಾ ಲಘುವಾದ ಲಕ್ಷಣಗಳನ್ನು ಹೊಂದಿದ್ದರೆ ಮತ್ತೆ ಕೆಲವರು ತೀವ್ರವಾದ ತೊಂದರೆಗಳನ್ನು ಅನುಭವಿಸುತ್ತಾರೆ ಅಥವಾ ಕೊರೊನಾ ನೆಗೆಟಿವ್‌ ಬಂದರೂ ಮರಣ ಹೊಂದುತ್ತಾರೆ. ಈ ವ್ಯತ್ಯಾಸಗಳಿಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ ಬೇರೆ ಆರೋಗ್ಯದ ತೊಂದರೆಗಳಿರುವ, ಮುಖ್ಯವಾಗಿ ಮಧುಮೇಹದಿಂದ ಬಳಲುತ್ತಿರುವ ಹಿರಿಯ ನಾಗರಿಕರು ತೀವ್ರತರವಾದ ಸೋಂಕಿನಿಂದ ಬಳಲುವುದು ಸಾಮಾನ್ಯ.

ವೈರಸ್ ದೇಹವನ್ನು ಪ್ರವೇಶಿಸಿ ಸಂಖ್ಯೆಯಲ್ಲಿ ವೃದ್ಧಿಸತೊಡಗಿದಾಗ ದೇಹದ ರೋಗನಿರೋಧಕ ವ್ಯವಸ್ಥೆಯು ಕಾರ್ಯಪ್ರವೃತ್ತವಾಗುತ್ತದೆ. ವೈರಸ್‌ ಹತೋಟಿಗೋಸ್ಕರ ಇರುವ ರಕ್ತಕಣಗಳಿಂದ ಹಲವಾರು ರಾಸಾಯನಿಕಗಳು ರಕ್ತವನ್ನು ಸೇರುತ್ತವೆ. ಈ ರಾಸಾಯನಿಕಗಳನ್ನು ಸೈಟೊಕೈನ್‌ಗಳೆಂದು ಹೆಸರಿಸಲಾಗಿದೆ. ಅಧಿಕ ಪ್ರಮಾಣದಲ್ಲಿ ಸೈಟೊಕೈನ್‌ಗಳು ಉತ್ಪತ್ತಿಯಾದಾಗ (ಸೈಟೊಕೈನ್ ಸ್ಟಾರ್ಮ್) ಅವುಗಳಿಂದಲೇ ರಕ್ತದೊತ್ತಡ ಕಡಿಮೆಯಾಗಿ, ಅಂಗಾಂಗ(ಮೂತ್ರಜನಕಾಂಗಗಳು, ಹೃದಯ, ಯಕೃತ್ತು, ಮೆದುಳು)ಗಳ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗಬಹುದು.

ವೈರಸ್‌ಗಳೂ ನಿಗದಿತ ಅಂಗಾಂಗಗಳ (ಶ್ವಾಸಕೋಶ, ಹೃದಯ, ಮೆದುಳು) ಮೇಲೆ ತಮ್ಮ ದಾಳಿಯನ್ನು ನಡೆಸಿದಾಗ ಈ ಪ್ರಕ್ರಿಯೆಯೂ ಅಂಗಗಳ ಕಾರ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದಲ್ಲದೆ ರಕ್ತವೂ ಅಂಗಾಂಗಗಳ ರಕ್ತನಾಳಗಳ ಒಳಗೆ ಹೆಪ್ಪುಗಟ್ಟಿ ಅವುಗಳ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ ಎನ್ನುತ್ತಾರೆ ಬೆಂಗಳೂರಿನ ವೈದ್ಯೆ (ಜನರಲ್‌ ಮೆಡಿಸಿನ್‌) ಡಾ. ಉಮಾಮಹೇಶ್ವರಿ ಎನ್‌.

ಈ ಅಂಗಾಂಗಗಳ ಕಾರ್ಯಕ್ಷಮತೆ ಹಲವರಲ್ಲಿ ದಿನಗಳೆದಂತೆ ಉತ್ತಮವಾಗಬಹುದಾದರೂ ಇನ್ನು ಕೆಲವರಲ್ಲಿ ತಿರುಗಿ ಬರಲಾಗದ ಸ್ಥಿತಿಯನ್ನು ತಲುಪಬಹುದು. ವೈರಸ್ / ಸೈಟೊಕೈನ್ ಸ್ಟಾರ್ಮ್ ನಿಂದಾಗಿ ಅಂಗಾಂಗಗಳು ಮರಳಿ ಬರಲಾಗದಷ್ಟು ಘಾಸಿಹೊಂದಿದ್ದರೆ ರಿಪೋರ್ಟ್ ನೆಗೆಟಿವ್ ಬಂದ ನಂತರವೂ ರೋಗಿಯ ಪರಿಸ್ಥಿತಿ ಹದಗೆಟ್ಟಿರುತ್ತದೆ ಅಥವಾ ಸಾವು ಸಂಭವಿಸಬಹುದು. ಗಂಟಲ ದ್ರವದಲ್ಲಿ ವೈರಸ್ ಪತ್ತೆ ಹಚ್ಚುವ ಪರೀಕ್ಷೆ( RT PCR) ರೋಗವನ್ನು ಪತ್ತೆ ಹಚ್ಚುವುದರಲ್ಲಿ ಸಹಕಾರಿ. ಆದರೆ ಅಂಗಾಂಗಗಳ ಕಾರ್ಯ ಕ್ಷೀಣಿಸಿದಾಗ ರೋಗಿಯ ಪರಿಸ್ಥಿತಿಯನ್ನು ತಿಳಿಸಲು ಇದರಿಂದ ಸಾಧ್ಯವಿಲ್ಲ ಎನ್ನುತ್ತಾರೆ ಡಾ. ಉಮಾಮಹೇಶ್ವರಿ.

ತೀವ್ರವಾದ ಸೋಂಕನ್ನು ಮೊದಲೇ ಕಂಡು ಹಿಡಿಯಬಹುದೇ ಎಂಬ ಪ್ರಶ್ನೆ ಸಹಜ. ನಿಗದಿತ ದಿನಗಳ ಅಂತರದಲ್ಲಿ ಮಾಡುವ ಕೆಲವು ರಕ್ತಪರೀಕ್ಷೆಗಳಿಂದ ಇದು ಸಾಧ್ಯವಿದೆ. ರಕ್ತದ ಫೆರಿಟಿನ್, ಸಿ ರಿಯಾಕ್ಟಿವ್ ಪ್ರೊಟೀನ್‌(CRP), ಐಲ್ - 6 ಇವುಗಳ ಪ್ರಮಾಣಗಳನ್ನು ಆಗಾಗ ಪರೀಕ್ಷೆ ಮಾಡುತ್ತಿರಬೇಕು. ಇದರ ಜೊತೆಗೆ ಅಂಗಾಂಗಗಳ ಕಾರ್ಯಕ್ಷಮತೆಯನ್ನು ತಿಳಿಸುವ ಪರೀಕ್ಷೆಗಳೂ ಅವಶ್ಯ. ಇವುಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಸರಿಯಾದ ಸಮಯದಲ್ಲಿ ಸೂಕ್ತ ಔಷಧಿಗಳನ್ನು ಕೊಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT