ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ – 19: ಕ್ಯಾನ್ಸರ್‌ ರೋಗಿಗಳು ಎಷ್ಟು ಸುರಕ್ಷಿತ?

Last Updated 1 ಮೇ 2020, 19:45 IST
ಅಕ್ಷರ ಗಾತ್ರ

ಕೋವಿಡ್‌–19 ಪಿಡುಗಿನ ಈ ಸಂದರ್ಭದಲ್ಲಿ ಕ್ಯಾನ್ಸರ್‌ ರೋಗಿಗಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿಯಮಿತ ಚಿಕಿತ್ಸೆಯನ್ನು ಸದ್ಯಕ್ಕೆ ಮುಂದೂಡಬೇಕೆ, ಆಸ್ಪತ್ರೆಗೆ ನೀಡುವ ಭೇಟಿಯಿಂದ ಸೋಂಕು ಹರಡಬಹುದೇ ಇವೇ ಮೊದಲಾದ ಅನುಮಾನಗಳಿಗೆ ಇಲ್ಲಿದೆ ಉತ್ತರ.

ಕೊರೊನಾ ಸೋಂಕು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಹರಡಿದ್ದು, ಮನುಷ್ಯನ ಜೀವಕ್ಕೆ ಕುತ್ತು ತಂದಿದೆ. ಕೋವಿಡ್‌–19 ಪಿಡುಗು ಬೇರೆ ಕಾಯಿಲೆ ಇರುವವರಿಗೆ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅದರಲ್ಲೂ ಈ ಸಂದರ್ಭದಲ್ಲಿ ಕ್ಯಾನ್ಸರ್‌ ರೋಗಿಗಳನ್ನು ಆರೈಕೆ ಮಾಡುವುದು ಕ್ಯಾನ್ಸರ್‌ ತಜ್ಞರಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾರಣ ಕೊರೊನಾ ಸೋಂಕಿನ ವಿರುದ್ಧ ಹೋರಾಡುವಷ್ಟು ರೋಗ ನಿರೋಧಕ ಶಕ್ತಿ ಕ್ಯಾನ್ಸರ್‌ ರೋಗಿಗಳಲ್ಲಿ ಇಲ್ಲದಿರುವುದು. ಮೊದಲನೆಯದಾಗಿ ಈ ಕ್ಯಾನ್ಸರ್‌ ಕಾಯಿಲೆಯೇ ಅಂತಹದ್ದು. ಜೊತೆಗೆ ಅದರ ಚಿಕಿತ್ಸೆಗೆ ಬಳಸುವಂತಹ ಸ್ಟೆರಾಯ್ಡ್‌ ಡೋಸ್‌, ಕಿಮೊಥೆರಪಿಯ ಔಷಧ, ವಿಕಿರಣ ಚಿಕಿತ್ಸೆ ಹಾಗೂ ಇಮ್ಯುನ್‌ ಮಾಡ್ಯುಲೇಟರ್‌ ಇದಕ್ಕೆ ಕಾರಣ ಎನ್ನಬಹುದು.

ಸವಾಲುಗಳು

ಬದಲಾದ ಈಗಿನ ಸಂದರ್ಭದಲ್ಲಿ ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಯು ಎರಡು ಬಗೆಯ ಸವಾಲನ್ನು ಎದುರಿಸಬೇಕಾಗಿದೆ. ಮೊದಲನೆಯದು, ಕ್ಯಾನ್ಸರ್‌ ಪೀಡಿತರಲ್ಲಿ ಕಡಿಮೆಯಾಗಿರುವ ವ್ಯಾಧಿ ಕ್ಷಮತೆಯಿಂದ ಕೊರೊನಾ ಸೋಂಕು ತಗುಲುವ ಸಂಭವ ಹೆಚ್ಚು. ಜೊತೆಗೆ ಸೋಂಕು ತಗುಲಿದರೆ ಅದರ ತೀವ್ರತೆಯೂ ಹೆಚ್ಚಾಗಬಹುದು.

ಎರಡನೆಯದು, ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊರೊನಾ ಸೋಂಕು ತಗುಲಿದರೆ ಸಮಸ್ಯೆಗಳು ಉಲ್ಬಣಿಸಬಹುದು, ಅಂದರೆ ಐಸೊಲೇಶನ್‌, ತೀವ್ರ ನಿಗಾ ಘಟಕ ಹಾಗೂ ವೆಂಟಿಲೇಶನ್‌ ವ್ಯವಸ್ಥೆಗಳು ಬೇಕಾಗಬಹುದು. ಬಹುಶಃ ಈ ವರ್ಗದವರಲ್ಲಿ ಸಾವಿನ ಸಾಧ್ಯತೆ ಹೆಚ್ಚು ಎಂಬುದನ್ನು ಕೂಡ ಅಲ್ಲಗಳೆಯುವಂತಿಲ್ಲ. ಮತ್ತೊಂದು ಸವಾಲೆಂದರೆ ಕ್ಯಾನ್ಸರ್‌ ಚಿಕಿತ್ಸೆಯನ್ನು ಮುಂದುವರಿಸುವುದು.

ಕೊರೊನಾ ಸೋಂಕು ತಗುಲದಂತೆ ಸಾಮಾನ್ಯ ಜನರು ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಾರೋ ಅದನ್ನೇ ಕ್ಯಾನ್ಸರ್‌ ರೋಗಿಗಳು ಹಾಗೂ ಅವರನ್ನು ಆರೈಕೆ ಮಾಡುವವರು ತೆಗೆದುಕೊಳ್ಳಬೇಕು. ಮನೆಯೊಳಗೇ ಇರುವುದು, ಸ್ಯಾನಿಟೈಸರ್‌ನಿಂದ ಪದೆ ಪದೆ ಕೈ ತೊಳೆಯುವುದು ಇತ್ಯಾದಿ. ಹೊರಗಡೆ ಅಥವಾ ಆಸ್ಪತ್ರೆಗೆ ಹೋಗಬೇಕಾದಾಗ ಮುಖಗವಸು ಧರಿಸುವುದು ಕಡ್ಡಾಯ. 100.3 ಡಿ.ಫ್ಯಾ.ಕ್ಕಿಂತ ಹೆಚ್ಚು ಜ್ವರವಿದ್ದರೆ, ಉಸಿರಾಡಲು ಕಷ್ಟವಾದರೆ, ಕೆಮ್ಮಿದ್ದರೆ, ಮೂಗು ಸೋರುತ್ತಿದ್ದರೆ ಅಥವಾ ಎದೆಯಲ್ಲಿ ಕಫ ಕಟ್ಟಿಕೊಂಡಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಆಸ್ಪತ್ರೆ ಭೇಟಿ: ಎಚ್ಚರಿಕೆ ಅಗತ್ಯ

ಆಸ್ಪತ್ರೆಗೆ ಭೇಟಿ ನೀಡುವಾಗ ಕ್ಯಾನ್ಸರ್‌ ರೋಗಿಗಳು ಬೇರೆಯವರಿಗಿಂತ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಮೊದಲೇ ಭೇಟಿಯ ಸಮಯ ನಿಗದಿಪಡಿಸಿಕೊಂಡು ಹೋದರೆ ಇತರ ರೋಗಿಗಳ ಅಥವಾ ಆಸ್ಪತ್ರೆಗೆ ಭೇಟಿ ನೀಡಿದವರಿಂದ ಅಂತರ ಕಾಯ್ದುಕೊಳ್ಳಬಹುದು. ಜೊತೆಗೆ ಸಹಾಯಕ್ಕೆ ಒಬ್ಬರನ್ನು ಮಾತ್ರ ಕರೆದುಕೊಂಡು ಹೋಗಿ. ತುರ್ತು ಚಿಕಿತ್ಸೆಯ ಅಗತ್ಯವಿರದಿದ್ದರೆ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಿ. ಇಂತಹ ಸಂದರ್ಭದಲ್ಲಿ ವೈದ್ಯರ ಜೊತೆ ಫೋನ್ ಮೂಲಕ ಅಥವಾ ವಿಡಿಯೊ ಕರೆ ಮೂಲಕ ಮಾತನಾಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು. ಅಗತ್ಯ ಚಿಕಿತ್ಸೆಯನ್ನು ಎಂದಿನಂತೆ ಪಡೆಯಬಹುದು. ಕ್ಯಾನ್ಸರ್‌ ರೋಗಿಗಳಿಗೆ ಜ್ವರವಿದ್ದರೆ ಅಥವಾ ಇತ್ತೀಚೆಗೆ ಕೆಮ್ಮು ಶುರುವಾದರೆ ಕೊರೊನಾ ಸೋಂಕಿದೆಯೇ ಎಂದು ತಪಾಸಣೆ ನಡೆಸುವುದು ಒಳಿತು.

ಕ್ಯಾನ್ಸರ್‌ ಚಿಕಿತ್ಸೆ ಹೇಗೆ?

ಸದ್ಯಕ್ಕಿರುವ ಸವಾಲೆಂದರೆ ಕ್ಯಾನ್ಸರ್‌ ಚಿಕಿತ್ಸೆಯನ್ನು ಹೇಗೆ ಮುಂದುವರಿಸಬೇಕು ಎನ್ನುವುದು. ಕೆಲವೊಂದು ಚಿಕಿತ್ಸಾ ಕ್ರಮಗಳನ್ನು ಈ ಸಂದರ್ಭದಲ್ಲಿ ಮುಂದೂಡಬಹುದು. ಕೆಲವೊಮ್ಮೆ 6–8 ವಾರಗಳ ಕಾಲ ಮುಂದೂಡಿದರೆ ರೋಗಿಯ ಆರೋಗ್ಯದ ಮೇಲೆ ಅಂತಹ ಹಾನಿಕಾರಕ ಪರಿಣಾಮವೇನೂ ಉಂಟಾಗಲಾರದು. ನಿಗದಿತ ಸಮಯಕ್ಕೆ ತೆಗೆದುಕೊಳ್ಳಬೇಕಾದ ಚಿಕಿತ್ಸೆಗಳನ್ನು ಕೆಲವು ವಾರಗಳ ನಂತರ ತೆಗೆದುಕೊಳ್ಳಬಹುದು. ಈ ಕೊರೊನಾ ಸೋಂಕಿನ ಸಂದರ್ಭದಲ್ಲಿ ಕೀಮೊಥೆರಪಿ ಹಾಗೂ ವಿಕಿರಣ ಚಿಕಿತ್ಸೆಯಂಥವು ರೋಗಿಯಿಂದ ರೋಗಿಗೆ ಬದಲಾಗಬಹುದು. ಇದು ಆಯಾ ರೋಗಿಯ ಸ್ಥಿತಿ ಮತ್ತು ಅವಶ್ಯಕತೆಯನ್ನು ಅವಲಂಬಿಸಿದೆ. ಚಿಕಿತ್ಸೆಯನ್ನು ವಿಳಂಬ ಮಾಡುವುದು, ಸಲೈನ್‌ ಮೂಲಕ ಕೊಡುವ ಚಿಕಿತ್ಸೆಯನ್ನು ಮಾತ್ರೆಗೆ ಬದಲಾಯಿಸುವುದು ಇವೆಲ್ಲ ಆಯಾ ರೋಗಿಯ ಆರೋಗ್ಯವನ್ನು ಅವಲಂಬಿಸಿದೆ. ಇಂತಹ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಚಿಕಿತ್ಸೆ ನೀಡುತ್ತಿರುವ ಕ್ಯಾನ್ಸರ್‌ ತಜ್ಞರ ಜೊತೆ ರೋಗಿಯು ಮಾತನಾಡುವುದು ಒಳ್ಳೆಯದು.

(ಲೇಖಕರು ಸೀನಿಯರ್‌ ಕನ್ಸಲ್ಟೆಂಟ್‌, ಮೆಡಿಕಲ್‌ ಕ್ಯಾನ್ಸರ್‌ ತಜ್ಞರು, ಎಚ್‌ಸಿಜಿ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT