ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಇನ್ನೂ ಹೋಗಿಲ್ಲ...ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ!

Last Updated 29 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ. ಬೇಜವಾಬ್ದಾರಿ ಸಮಾಜ ಅದನ್ನು ಬರಮಾಡಿಕೊಳ್ಳುತ್ತದೆ. ಅವಜ್ಞೆ ಹೆಚ್ಚಿದಷ್ಟೂ ಅವು ವೇಗವಾಗಿ, ತೀಕ್ಷ್ಣವಾಗಿ ಬರುತ್ತವೆ.

ಜಾಗತಿಕ ವಿದ್ಯಮಾನಗಳನ್ನು ಗಮನಿಸುವ ಜನರನ್ನು ಒಂದು ಮಹತ್ವದ ಪ್ರಶ್ನೆ ಕಾಡುತ್ತಿದೆ: ಈಗ ಯುರೋಪನ್ನು ಬಾಧಿಸುತ್ತಿರುವ ನವೀನ ಕೋವಿಡ್-19 ವೈರಸ್ ತಳಿ ಭಾರತದಲ್ಲೂ ಮೂರನೆಯ ಅಲೆಗೆ ಕಾರಣವಾಗಬಹುದೇ? ‘ಹೌದು’ ಅಥವಾ ‘ಇಲ್ಲ’ ಎನ್ನುವುದು ಪ್ರಜೆಗಳ ನಿಯಂತ್ರಣದಲ್ಲಿದೆ ಎಂಬುದು ಸತ್ಯ. ಪ್ರಪಂಚದ ಯಾವುದೇ ಸರ್ಕಾರವೂ ಎಷ್ಟೇ ಕಟ್ಟುನಿಟ್ಟಿನ ಕಾಯಿದೆಗಳನ್ನು ಮಾಡಿದರೂ, ಜನರ ಸಹಕಾರವಿಲ್ಲದೆ ಅದು ಸಫಲವಾಗದು. ಒಂದು ಜಾಗತಿಕ ಪಿಡುಗಿನ ನಿಯಂತ್ರಣದಲ್ಲಿ ಸರ್ಕಾರದ ಪಾತ್ರಕ್ಕಿಂತಲೂ ಜನರ ಶಿಸ್ತುಬದ್ಧ ನಡವಳಿಕೆಯೇ ಮುಖ್ಯ.

ತಳಿ ರೂಪಾಂತರ ಯಾವುದೇ ವೈರಸ್‌ನ ಸಹಜ ಗುಣ. ಇಂತಹ ರೂಪಾಂತರಿ ತಳಿ ಅಧಿಕ ರೋಗಕಾರಕವೂ ಆಗಿರಬಹುದು; ಇಲ್ಲವೇ ಶಕ್ತಿಹೀನವೂ ಆಗಬಹುದು. ಕೋವಿಡ್-19 ರೂಪಾಂತರಗೊಳ್ಳುವುದು ಮನುಷ್ಯರ ದೇಹದಲ್ಲಿ. ಹೀಗಾಗಿ, ಅಧಿಕ ಮಂದಿ ಕಾಯಿಲೆಗೆ ಈಡಾದರೆ ವೈರಸ್ ರೂಪಾಂತರದ ಸಾಧ್ಯತೆಗಳು ಹೆಚ್ಚಾಗುತ್ತವೆ. ಒಮ್ಮೆ ರೂಪಾಂತರ ಹೊಂದಿದರೆ ಇನ್ನೂ ಹೆಚ್ಚು ಜನರು ಕಾಯಿಲೆಗೆ ತುತ್ತಾಗುತ್ತಾರೆ. ಆಗ ವೈರಸ್ ಮತ್ತೊಮ್ಮೆ ರೂಪಾಂತರ ಹೊಂದಬಹುದು. ಇದೊಂದು ವಿಷಮ ಆವರ್ತನ ಚಕ್ರ. ಯಾವುದೋ ಒಂದು ಹಂತದಲ್ಲಿ ಈ ಚಕ್ರವನ್ನು ಮುರಿಯಬೇಕು. ಅತ್ಯಂತ ಸಫಲವಾಗಿ ಈ ಚಕ್ರವನ್ನು ಭಿನ್ನ ಮಾಡುವ ಸಾಧ್ಯತೆ ಇರುವುದು ಕಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ. ಅಂದರೆ ಎಷ್ಟು ಕಡಿಮೆ ಜನರಿಗೆ ಕಾಯಿಲೆ ತಗಲುತ್ತದೋ ವೈರಸ್ ರೂಪಾಂತರ ಹೊಂದುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ.

ಹೀಗಾಗಿ, ವೈರಸ್ ಹರಡುವಿಕೆಯನ್ನು ಮಿತಗೊಳಿಸುವುದು ಬಹಳ ಮುಖ್ಯ. ಇದಕ್ಕೆ ಸಂಯಮಶೀಲ ವರ್ತನೆ ಅಗತ್ಯ. ಮೂರನೆಯ ಅಲೆಯನ್ನು ತಡೆಯಬೇಕೆಂದರೆ ಕೆಲವು ಹೆಜ್ಜೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಕೋವಿಡ್-19 ಪಿಡುಗು ಈಗಲೂ ಜೀವಂತವಾಗಿದೆ ಎಂಬ ಎಚ್ಚರಿಕೆ ಇರಬೇಕು. ಕೋವಿಡ್-ಪೂರ್ವ ಕಾಲ ಇನ್ನೂ ಬಂದಿಲ್ಲ. ಹೀಗಾಗಿ, ಹೆಚ್ಚು ಜನಸಂದಣಿ ಸರಿಯಲ್ಲ; ಜಾತ್ರೆಗಳು, ಸಮಾರಂಭಗಳು, ಮಾಲ್‌ಗಳು ಮೊದಲಾದುವುಗಳಿಗೆ ಈಗ ಸಮಯ ಉಚಿತವಲ್ಲ ಎಂಬುದನ್ನು ಜನರೇ ಅರಿಯಬೇಕು. ಸರ್ಕಾರದ ಒತ್ತಾಯಗಳಿಂದ ಜನರ ಪ್ರತಿರೋಧ ಬೆಳೆಯುತ್ತದೆ. ಅದನ್ನು ಮನಗಂಡ ಸರ್ಕಾರಗಳು ಈ ವಿಷಯಗಳಲ್ಲಿ ಮೃದುಧೋರಣೆ ತಳೆಯುತ್ತವೆ. ಆದರೆ ಸರ್ಕಾರದ ಮೃದುಧೋರಣೆ ಅಶಿಸ್ತಿಗೆ ಆಹ್ವಾನವಾಗಬಾರದು.

ಮೂರನೆಯ ಅಲೆ ಬಂದರೆ ಅತ್ಯಂತ ಅಧಿಕ ಸಂಕಟಕ್ಕೆ ಒಳಗಾಗುವವರು ಸಾಮಾನ್ಯಪ್ರಜೆಗಳೇ ಎಂಬುದು ನಮ್ಮ ಗಮನದಲ್ಲಿರಬೇಕು. ಸರ್ಕಾರದ ನೀತಿ ಹೇಗೆಯೇ ಇದ್ದರೂ, ನಾವು ವೈಯಕ್ತಿಕ ಮತ್ತು ಸಮಷ್ಟಿ ಶಿಸ್ತನ್ನು ಪಾಲಿಸುವುದು
ಬಹಳ ಮುಖ್ಯ.

ಪ್ರಯಾಣ ಮಾಡದಿರುವುದು ಲೇಸು

ಸಾಂಕ್ರಾಮಿಕ ಕಾಯಿಲೆಯೊಂದು ಸಾಕಷ್ಟು ವ್ಯಾಪಿಸಿರುವಾಗ, ಪ್ರತಿಯೊಬ್ಬರನ್ನೂ ಕಾಯಿಲೆಯ ವಾಹಕರಂತೆಯೇ ಪರಿಗಣಿಸಬೇಕು. ಯಾರಿಂದ ರೋಗ ಹರಡಬಹುದು ಎಂದು ನಿಖರವಾಗಿ ಹೇಳಲಾಗದು. ಆದ್ದರಿಂದ, ಪರಕೀಯರೊಡನೆ ಬೆರೆಯದಿರುವುದು ಸೂಕ್ತ. ತೀರಾ ಅಗತ್ಯವಲ್ಲದಿದ್ದರೆ ಯಾವುದೇ ಪ್ರಯಾಣವೂ ಸಲ್ಲದು. ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೆ, ಅದನ್ನು ಬಳಸಿಕೊಳ್ಳಬೇಕು.

ಕೋವಿಡ್-19 ಆರಂಭದಿಂದಲೂ ವೈಯಕ್ತಿಕ ಸ್ವಚ್ಛತೆಗೆ ಇಂಬು ನೀಡಲಾಗಿದೆ. ಈಗಲೂ ಅದನ್ನು ತಪ್ಪದೇ ಪಾಲಿಸಬೇಕು. ಬಿರುಸಾದ ಮಳೆಯಲ್ಲಿ ಸಂಚರಿಸುವ ವೇಳೆ ನಮ್ಮನ್ನು ಅತ್ಯಂತ ಹೆಚ್ಚು ಕಾಪಾಡುವುದು ನಾವು ಹಿಡಿದಿರುವ ಕೊಡೆ. ಅಂತೆಯೇ, ಸಮಾಜದಲ್ಲಿ ಕಾಯಿಲೆ ಎಷ್ಟೇ ವ್ಯಾಪಿಸಿದ್ದರೂ, ವೈಯಕ್ತಿಕ ರಕ್ಷಣೆ ಕಾಯಿಲೆಯಿಂದ ನಮ್ಮನ್ನು ದೂರವಿಡಬಲ್ಲದು. ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಕಡ್ಡಾಯ ಮಾಸ್ಕ್ ಧಾರಣೆ; ಆರು ಅಡಿ ವೈಯಕ್ತಿಕ ಅಂತರ; ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆದು ಸ್ವಚ್ಛವಿಡುವುದು; ವೈಯಕ್ತಿಕ ನೈರ್ಮಲ್ಯ; ಇತರರನ್ನು ಸುರಕ್ಷಿತವಾಗಿ ಇರುವಂತೆ ಪ್ರೇರೇಪಿಸುವುದು; ಎಚ್ಚರಿಕೆಯ ಅಂಶಗಳನ್ನು ಕುಟುಂಬ ಸದಸ್ಯರ ಜೊತೆ ಕಾಲಕಾಲಕ್ಕೆ ಚರ್ಚಿಸುತ್ತಾ ಅವರನ್ನು ಸನ್ನದ್ಧರಾಗಿ ಇಡುವುದು; ರೋಗದ ಮೊದಲ ಲಕ್ಷಣಗಳು ಕಂಡ ಒಡನೆಯೇ ಅಂತಹವರನ್ನು ಇತರರಿಂದ ಪ್ರತ್ಯೇಕಿಸುವುದು; ವೈದ್ಯರ ಸಲಹೆ ಪಡೆದು ಪರೀಕ್ಷೆ, ಚಿಕಿತ್ಸೆ ಮಾಡಿಸುವುದು – ಮೊದಲಾದ ಎಚ್ಚರಗಳು ಸದಾ ಇರಬೇಕು. ಇದರಲ್ಲಿ ಯಾವ ರೀತಿಯ ವಿನಾಯತಿಯೂ ಸಲ್ಲದು.

ಮಕ್ಕಳನ್ನು ಶಾಲೆಗೆ ಕಳುಹಿಸಬಹುದೇ?

ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಆಯಾ ದೇಶದ, ಪ್ರಾಂತ್ಯದಲ್ಲಿ ಇರುವ ಕಾಯಿಲೆಯ ಮಟ್ಟವನ್ನು ಅನುಸರಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದೆ. ಕಾಯಿಲೆಯ ಹರಡುವಿಕೆ ಯಾವ ಪ್ರಾಂತ್ಯಗಳಲ್ಲಿ ಅಧಿಕವೋ, ಅಂತಹ ಎಡೆಗಳಲ್ಲಿ ಶಾಲೆಗಳು ತೆರೆಯದಿರುವುದೇ ಲೇಸು. ಇಂತಹ ಪ್ರದೇಶಗಳಲ್ಲಿ ದೂರಶಿಕ್ಷಣ, ಆನ್‌ಲೈನ್ ತರಗತಿಗಳು ಯಾವ ಕಾರಣಕ್ಕೂ ಕೊನೆಯಾಗಬಾರದು ಎಂಬ ಕಳಕಳಿಯಿದೆ. ಶಾಲೆಯ ನಿರ್ವಾಹಕರಿಗೆ, ಶಿಕ್ಷಕರಿಗೆ ಕೋವಿಡ್-19 ಕಾಯಿಲೆಯ ಪ್ರಸರಣದ ಬಗ್ಗೆ ಸೂಕ್ತ ಶಿಕ್ಷಣ, ಮಾರ್ಗದರ್ಶನ, ಸಹಾಯವಾಣಿ ಸೌಲಭ್ಯ ನೀಡಿ, ಶಾಲೆಯನ್ನು ಕಾಯಿಲೆರಹಿತ ಪ್ರಾಂತ್ಯವನ್ನಾಗಿ ಪರಿವರ್ತಿಸುವಲ್ಲಿ ಸಹಕಾರ ನೀಡಬೇಕಿದೆ. ಇದನ್ನು ಆಯಾ ಪ್ರಾಂತ್ಯದ ಶಿಕ್ಷಣಾಧಿಕಾರಿಗಳು, ಶಾಲೆಗಳ ನಿರ್ವಾಹಕರು ವಿಶ್ಲೇಷಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ಕೋವಿಡ್-19 ಇನ್ನೂ ಕೊನೆಯಾಗಿಲ್ಲ; ಸದ್ಯದಲ್ಲೇ ಕೊನೆಯಾಗುವುದೂ ಇಲ್ಲ; ಮೂರನೆಯ ಅಲೆಗೆ ಮುಕ್ತಾಯವೂ ಅಲ್ಲ. ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ. ಬೇಜವಾಬ್ದಾರಿ ಸಮಾಜ ಅದನ್ನು ಬರಮಾಡಿಕೊಳ್ಳುತ್ತದೆ. ಅವಜ್ಞೆ ಹೆಚ್ಚಿದಷ್ಟೂ ಅವು ವೇಗವಾಗಿ, ತೀಕ್ಷ್ಣವಾಗಿ ಬರುತ್ತವೆ. ಶಿಸ್ತನ್ನು ಪಾಲಿಸದಿದ್ದರೆ ಮತ್ತೆಮತ್ತೆ ಬರುತ್ತಲೇ ಇರುತ್ತವೆ. ಈ ಮಾತಿಗೆ ಈಗಾಗಲೇ ಯುರೋಪಿನ ಅನೇಕ ದೇಶಗಳು ಸಾಕ್ಷಿಯಾಗಿವೆ; ಸಂಯಮರಹಿತ ಸಮಾಜಗಳು ತಮ್ಮ ಸರದಿಗಾಗಿ ಕಾದಿವೆ. ನಮ್ಮ ದೇಶ ಮತ್ತೊಂದು ಅಲೆಗೆ ತುತ್ತಾಗದಿರುವುದು ಸಾರ್ವಜನಿಕರ ಕಟ್ಟೆಚ್ಚರದಲ್ಲಿದೆ.

ಲಸಿಕೆ

ಕೋವಿಡ್-19 ಲಸಿಕೆ ಪ್ರಮುಖವಾದ ಹೆಜ್ಜೆ. ಇದು ರೂಪಾಂತರ ತಳಿಯ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ; ಲಸಿಕೆಗಳು ಕೋವಿಡ್-19 ವೈರಸ್ ಹರಡುವಿಕೆಯನ್ನು ನಿಯಂತ್ರಿಸುತ್ತವೆ ಎಂಬುದು ನಿರ್ವಿವಾದ. ಲಸಿಕೆಯಿಂದ ಉತ್ಪತ್ತಿಯಾದ ಸಂರಕ್ಷಣೆ ಹೊಸ ತಳಿಯ ವಿರುದ್ಧವೂ ಸಾಕಷ್ಟು ಪ್ರಭಾವ ಬೀರಬಲ್ಲದು ಎಂದು ತಜ್ಞರ ಅಭಿಮತ. ಲಸಿಕಾಕರಣ ಅಧಿಕವಾದಷ್ಟೂ ಮೂರನೆಯ ಅಲೆಯ ಸಾಧ್ಯತೆ ಕಡಿಮೆಯಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ಶೀಘ್ರವಾಗಿ ಎರಡು ಬಾರಿ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳುವುದು ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT