ಸೋಮವಾರ, ಮಾರ್ಚ್ 1, 2021
28 °C

ಕೊರೊನಾ ಒಂದಿಷ್ಟು ತಿಳಿಯೋಣ: ಲಕ್ಷಣರಹಿತರೆ? ಆಕ್ಸಿಮೀಟರ್‌ ಮೂಲಕ ಪರೀಕ್ಷಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಲಕ್ಷಣಗಳಿವೆ ಎನಿಸಿದ ತಕ್ಷಣ ಮೊದಲು ಮಾಡುವ ಕೆಲಸವೆಂದರೆ ಫಿಜಿಷಿಯನ್‌ಗೆ ಕರೆ ಮಾಡಿ ಕ್ಲಿನಿಕ್‌ಗೋ ಅಥವಾ ಆಸ್ಪತ್ರೆಗೋ ಧಾವಿಸುವುದು. ಆದರೆ ಫಿಜಿಷಿಯನ್‌ ತಕ್ಷಣಕ್ಕೆ ಸಿಗದಿದ್ದರೆ, ಲಕ್ಷಣಗಳ ಮೇಲೆ ತೀವ್ರತೆಯನ್ನು ಅಳೆದು ವೈದ್ಯರ ಬಳಿ ಹೋಗುವ ಬಗ್ಗೆ ನೀವೇ ನಿರ್ಧರಿಸಬಹುದು ಎನ್ನುತ್ತಾರೆ ತಜ್ಞರು.

ಇದಕ್ಕಾಗಿ ನೀವು ಪಲ್ಸ್‌ ಆಕ್ಸಿಮೀಟರ್‌ ಖರೀದಿಸಬೇಕಾಗುತ್ತದೆ ಎನ್ನುತ್ತಾರೆ ಅಮೆರಿಕದ ಮಸಾಚುಸೆಟ್ಸ್‌ ವಿಶ್ವವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಪ್ರೊ. ರಾಬರ್ಟ್‌ ಬಾಲ್ಡರ್‌.

ಕೋವಿಡ್‌–19 ಪ್ರಕರಣಗಳನ್ನು ಅವಲೋಕಿಸಿದರೆ ಶೇ 80ರಷ್ಟು ಪ್ರಕರಣಗಳಲ್ಲಿ ಲಕ್ಷಣಗಳು ಗೋಚರಿಸುವುದಿಲ್ಲ ಅಥವಾ ತೀರಾ ಸಣ್ಣಪುಟ್ಟ ಲಕ್ಷಣಗಳಿರುತ್ತವೆ. ಅಂಥವರು ಮನೆಯಲ್ಲೇ ವಿಟಮಿನ್‌ ಸಿ ಮತ್ತು ಡಿ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಆಕ್ಸಿಮೀಟರ್‌ನಲ್ಲಿ ಪರೀಕ್ಷೆ ಮಾಡಿಕೊಂಡಾಗ ಆಮ್ಲಜನಕದ ಮಟ್ಟ ಶೇ 93ರಷ್ಟಿದ್ದರೆ ಯಾವುದೇ ಭಯವಿಲ್ಲ. ಆದರೆ ಇದಕ್ಕಿಂತ ಕಡಿಮೆ ಇದ್ದರೆ ಅಪಾಯಕಾರಿ. ಹಾಗೆಯೇ ಉಸಿರಾಡಲು ಕಷ್ಟವಾದಾಗ ಅಂದರೆ ‘ಡಿಸ್ನಿಯ’ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ಧಾವಿಸುವುದು ಕಡ್ಡಾಯ ಎಂದು ಅವರು ವಿಶ್ವವಿದ್ಯಾಲಯದ ಜರ್ನಲ್‌ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ. ನಿಮ್ಮ ಶ್ವಾಸೋಚ್ಛಾಸದ ವೇಗದ ಮೇಲೆ ಉಸಿರಾಟದ ಸಮಸ್ಯೆಯನ್ನು ಗುರುತಿಸಬಹುದು. ನಿಮಿಷಕ್ಕೆ 30ಕ್ಕೂ ಅಧಿಕ ಸಲ ಗಾಳಿಯನ್ನು ಒಳಗೆಳೆದುಕೊಂಡರೆ ಉಸಿರಾಡಲು ಕಷ್ಟವಾಗುತ್ತಿದೆ ಎಂದೇ ಅರ್ಥ. ಆಗ ತುರ್ತು ಚಿಕಿತ್ಸೆಗೆ ಒಳಪಡಬೇಕಾಗುತ್ತದೆ ಎಂದಿರುವ ಬಾಲ್ಡರ್‌, ಪ್ರಾಥಮಿಕ ಪರೀಕ್ಷೆಗಳನ್ನೂ ಹೆಸರಿಸಿದ್ದಾರೆ.

ತುರ್ತು ಚಿಕಿತ್ಸೆಗ ಹೋದಾಗ ಮೊದಲು ಆಕ್ಸಿಮೀಟರ್‌ ಮೂಲಕ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅಳೆಯಲಾಗುತ್ತದೆ. ಶ್ವಾಸಕೋಶಕ್ಕೆ ಸೋಂಕು ತಗುಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಎದೆಯ ಎಕ್ಸ್‌ರೇ ಅಥವಾ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ. ರಕ್ತ ಗರಣೆಗಟ್ಟಿದೆಯೇ ಎಂಬುದನ್ನು ಅರಿಯಲು ರಕ್ತಪರೀಕ್ಷೆ ನಡೆಸಲಾಗುತ್ತದೆ. ಆದರೆ ಈ ವೈರಸ್‌ಗೆ ಇನ್ನೂ ಸರಿಯಾದ ಔಷಧ ಕಂಡುಹಿಡಿದಿಲ್ಲ. ಹೀಗಾಗಿ ಜ್ವರದ ಔಷಧದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡಲು ಚಿಕಿತ್ಸೆ ನೀಡಬೇಕಾಗುತ್ತದೆ.

ತೀವ್ರತರದ ಕೋವಿಡ್‌ಗೆ ಒಳಗಾಗುವ ಸಾಧ್ಯತೆ ಇದ್ದವರಿಗೆ ಇಂತಹ ಚಿಕಿತ್ಸೆ ನೀಡಬಹುದು. ಆದರೆ ಲಘುವಾದ ಲಕ್ಷಣಗಳಿದ್ದರೆ ಫಿಜಿಷಿಯನ್‌ ಜೊತೆ ಮಾತನಾಡಿ ಚಿಕಿತ್ಸೆ ಪಡೆದರೆ ಸಾಕು. ಹಾಗೆಯೇ ಕುಟುಂಬದ ವೈದ್ಯರಿದ್ದರೆ
ಇನ್ನೂ ಉತ್ತಮ. ಹಾಗೆಯೇ ಆತಂಕವಿದ್ದಾಗಲೂ ಉಸಿರಾಟ ಕ್ರಿಯೆಯಲ್ಲಿ ಏರುಪೇರಾಗುತ್ತದೆ. ಹೀಗಾಗಿ ಆಕ್ಸಿಮೀಟರ್‌ ಮೂಲಕ ಮೊದಲು ಮನೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಬಾಲ್ಡರ್ ಲೇಖನದಲ್ಲಿ ವಿವರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು