ಗುರುವಾರ , ಜನವರಿ 28, 2021
27 °C

ಶೇಕಡ 80ರಷ್ಟು ಕೋವಿಡ್‌ ಪ್ರಕರಣಗಳಿಗೆ ‘ಸೂಪರ್‌ಸ್ಪ್ರೆಡರ್‌’ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದುವೆ ಸಮಾರಂಭಗಳು, ಪ್ರತಿಭಟನೆ, ಚುನಾವಣೆ ರ‍್ಯಾಲಿಗಳು ಈ ಕೋವಿಡ್‌–19 ಸಂದರ್ಭದಲ್ಲಿ ‘ಸೂಪರ್‌ಸ್ಪ್ರೆಡರ್‌’ ತಾಣಗಳಾಗಿವೆ. ಅಂದರೆ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಗಳು ಅಧಿಕ. ಅದರಲ್ಲೂ ಚಳಿಗಾಲ ಆರಂಭವಾಗಿರುವುದರಿಂದ ಹೊರಗಡೆಗಿಂತ ಸಭೆ– ಸಮಾರಂಭಗಳು ಹಾಲ್‌ನೊಳಗೆ ನಡೆಯುವುದು ಹೆಚ್ಚು. ಈ ಸಂದರ್ಭದಲ್ಲಿ ಸೋಂಕು ಇನ್ನೂ ಹೆಚ್ಚಾಗಬಹುದು. ಹಾಗೆಯೇ ಭಾರತದಲ್ಲಿ ನಡೆದ ಅಧ್ಯಯನವೊಂದು ಶೇಕಡ 5ರಷ್ಟು ಸೋಂಕಿತರು ಶೇಕಡ 80ರಷ್ಟು ದ್ವಿತೀಯ ಸೋಂಕಿತರಿಗೆ ಕಾರಣರಾಗಿರುವುದನ್ನು ವರದಿ ಮಾಡಿದೆ.

ಈ ಸೂಪರ್‌ಸ್ಪ್ರೆಡರ್‌ ಯಾರು, ಎಷ್ಟು ಮಂದಿಗೆ ಹರಡಬಲ್ಲರು, ವೈರಸ್‌ ಲೋಡ್‌ ಎಷ್ಟಿರುತ್ತದೆ.. ಇವೇ ಮೊದಲಾದ ಪ್ರಶ್ನೆಗಳಿಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್‌ ಚೆಸ್ಟ್‌ ಫಿಜಿಷಿಯನ್‌ ಡಾ. ವಸುನೇತ್ರ ಕಾಸರಗೋಡ್ ಅವರು ಉತ್ತರಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಅಸಾಮಾನ್ಯ ರೀತಿಯಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಸೂಪರ್ ಸ್ಪ್ರೆಡರ್ ಎಂಬ ಪದದಿಂದ ಕರೆಯಲಾಗುತ್ತದೆ. ಕೊರೊನಾ ಸೋಂಕಿತನೊಬ್ಬ ಎಷ್ಟು ಜನರಿಗೆ ಸೋಂಕು ಹರಡಬಲ್ಲ ಎಂಬುದನ್ನು ವಿಜ್ಞಾನಿಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಮತ್ತು ಎಷ್ಟು ಮಂದಿ ಸೂಪರ್‌ಸ್ಪ್ರೆಡರ್ ಆಗಿದ್ದಾರೆ ಎಂಬುದನ್ನು ಕೂಡ ಮಾಪನ ಮಾಡಲು ಸಾಧ್ಯವಾಗಿಲ್ಲ. ಆದರೆ, ಸಾಮಾನ್ಯವಾಗಿ ಹೇಳುವುದಾದರೆ, ಸೋಂಕಿತನೊಬ್ಬ ಸರಾಸರಿ ಎರಡರಿಂದ ಮೂರು ಮಂದಿಗೆ ಈ ಸೋಂಕನ್ನು ಹರಡಬಹುದು. ಇದಕ್ಕಿಂತ ಜಾಸ್ತಿ ಮಂದಿಗೆ ಹರಡಿದರೆ ಆತನನ್ನು/ ಆಕೆಯನ್ನು ಸೂಪರ್‌ಸ್ಪ್ರೆಡರ್‌ ಎನ್ನಬಹುದು.

ಭಾರತದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಶೇ 80 ರಷ್ಟು ಸೋಂಕು ಪ್ರಕರಣಗಳಿಗೆ ಶೇ 5 ರಿಂದ 10 ರಷ್ಟು ಮಂದಿ ಸೂಪರ್ ಸ್ಪ್ರೆಡರ್‌ಗಳು ಕಾರಣ ಎಂಬುದು ತಿಳಿದು ಬಂದಿದೆ.

ಯಾವ ಅಂಶ ಈ ಸೂಪರ್‌ಸ್ಪ್ರೆಡರ್‌ಗಳು ಸೋಂಕು ಹರಡಲು ಕಾರಣ ಎಂಬುದರ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಮುಖ್ಯವಾಗಿ, ಅಧಿಕ ವೈರಲ್ ಲೋಡ್, ಕಡಿಮೆ ಪ್ರಮಾಣದ ಗುಣಲಕ್ಷಣಗಳು, ಕೆಮ್ಮುವಾಗ, ಮಾತನಾಡುವಾಗ ಅಥವಾ ಸೀನುವಾಗ ಸ್ರವಿಸುವ ಅಧಿಕ ಹನಿ ಈ ಸೂಪರ್‌ಸ್ಪ್ರೆಡ್‌ರ್‌ಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ತುಂಬಾ ಎಚ್ಚರಿಕೆಯಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮಾತನಾಡುವಾಗ ಎಂಜಲನ್ನು ರಾಚದಂತೆ ತಡೆಗಟ್ಟುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು. ಹಾಗೆಯೇ ಸಂಪರ್ಕಿತರನ್ನು ತಕ್ಷಣಕ್ಕೆ ಕಂಡುಹಿಡಿಯುವುದು ಕೂಡ ಮುಖ್ಯ. ಇದರ ಜತೆಗೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಸೋಂಕನ್ನು ಆರಂಭಿಕ ಹಂತದಲ್ಲಿಯೇ ನಿರ್ಮೂಲನೆ ಮಾಡಿ ರೋಗ ಗಂಭೀರ ಸ್ಥಿತಿಗೆ ತಿರುಗುವುದನ್ನು ತಡೆಗಟ್ಟಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು