ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನಿಂದಲೂ ಹರಡುತ್ತೆ ಕೊರೊನಾ ವೈರಾಣುಗಳು

ಸೋಂಕಿನ ಕುರಿತು ಜಂಟಿ ಅಧ್ಯಯನ l ಫ್ಲೋ ಜರ್ನಲ್‌ನಲ್ಲಿ ಫಲಿತಾಂಶ ಪ್ರಕಟ
Last Updated 21 ಜೂನ್ 2022, 19:20 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ತಾರಕಕ್ಕೇರಿದ ಸಂದರ್ಭದಲ್ಲಿ ಕೆಮ್ಮುವುದು ಮತ್ತು ಸೀನುವುದರಿಂದ ಸಿಡಿಯುವ ಹನಿ ಗಳಿಂದಾಗಿ ವೈರಾಣುಗಳು ಹರಡುತ್ತವೆ ಎಂದು ತಜ್ಞರು ಬಲವಾಗಿ ನಂಬಿದ್ದರು. ಆದರೆ, ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ವ್ಯಕ್ತಿಗಳು ಪರಸ್ಪರ ಮಾತನಾಡುವುದರಿಂದಲೂ ವೈರಾಣುಗಳು ಹರಡುತ್ತವೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌) ಏರೋಸ್ಪೇಸ್‌ ಎಂಜಿನಿಯರಿಂಗ್ ವಿಭಾಗ, ಸ್ಟಾಕ್‌ಹೋಮ್‌ನ ನಾರ್ಡಿಕ್‌ ಇನ್ಸ್‌ಟಿಟ್ಯೂಟ್‌ ಆಫ್‌ ಥಿಯರಿಟಿಕಲ್‌ ಫಿಸಿಕ್ಸ್ (ಎನ್‌ಒಆರ್‌ಡಿಐಟಿಎ) ಮತ್ತು ಬೆಂಗಳೂರಿನ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಥಿಯರಿಟಿಕಲ್‌ ಸೈನ್ಸಸ್ (ಐಸಿಟಿಎಸ್‌) ಈ ಕುರಿತು ಜಂಟಿ ಅಧ್ಯಯನ ನಡೆಸಿವೆ. ಇದರ ಫಲಿತಾಂಶ ‘ಫ್ಲೋ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ವ್ಯಕ್ತಿಗಳು ಪರಸ್ಪರ ಮಾತನಾಡುವಾಗಲೂ ಉಗುಳಿನ ಮೂಲಕ ಕಣ್ಣಿಗೆ ಕಾಣದಷ್ಟು ಸೂಕ್ಷ್ಮರೂಪದ ಹನಿಗಳು ಚಿಮ್ಮಿ ವಾತಾವರಣದಲ್ಲಿ ಸೇರುತ್ತವೆ. ಮೋಡದೋಪಾದಿಯಲ್ಲಿ ದಟ್ಟಣೆಯಿಂದ ಕೂಡಿರುವ ಈ ಸೂಕ್ಷ್ಮ ಹನಿಗಳು ವೈರಾಣುಗಳನ್ನು ಒಯ್ಯಬಲ್ಲವೇ ಎಂಬ ಕುತೂಹಲ ವಿಜ್ಞಾನಿಗಳನ್ನು ಕಾಡಿತ್ತು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮಾತನಾಡುವಾಗ ಸಿಡಿಯುವ ಹನಿಗಳ ಚಲನವಲನದ ಬಗ್ಗೆ ಮೂರೂ ಸಂಸ್ಥೆಗಳು ಸೇರಿ ಕಂಪ್ಯೂಟರ್‌ ಸಿಮ್ಯುಲೇಷನ್‌ ಮೂಲಕ ವಿಶ್ಲೇಷಣೆ ನಡೆಸಿವೆ.

ಭಾರತೀಯ ವಿಜ್ಞಾನ ಸಂಸ್ಥೆಯ ಏರೊಸ್ಪೇಸ್‌ ಎಂಜನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್‌ ಸೌರಭ್‌ ದಿವಾನ್‌ ಅವರು ಅಧ್ಯಯನದ ಕುರಿತು ಪ್ರತಿಕ್ರಿಯಿಸಿ, ಮಾತನಾಡುವುದು ಅತ್ಯಂತ ಸಂಕೀರ್ಣ ಚಟುವಟಿಕೆ. ವ್ಯಕ್ತಿಗಳು ಮಾತನಾಡುವಾಗ ತಾವು ವೈರಾಣುವನ್ನು ಹರಡಿಸುತ್ತಿದ್ದೇವೆ ಎಂಬ ಅರಿವೂ ಇರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಆರಂಭದಲ್ಲಿ ತಜ್ಞರು ಸೀನುವುದು ಮತ್ತು ಕೆಮ್ಮುವುದರಿಂದಲೇ ವೈರಾಣು ಹರಡುತ್ತದೆ ಎಂದು ನಂಬಿದ್ದರು. ಬಳಿಕ ರೋಗ ಲಕ್ಷಣವಿಲ್ಲದೇ ವೈರಾಣು ಹರಡುವಿಕೆಯಿಂದಲೂ ಕೋವಿಡ್‌ ಹರಡುತ್ತದೆ ಎಂಬುದು ಸ್ಪಷ್ಟವಾಯಿತು. ಆದರೆ ಮಾತನಾಡುವಾಗ ಹೊಮ್ಮುವ ಉಗುಳಿನ ಹನಿಗಳಿಂದಲೂ ವೈರಾಣು ಹರಡುತ್ತವೆ ಎಂಬ ಬಗ್ಗೆ ವಿಶ್ವದಲ್ಲಿ ನಡೆದಿರುವ ಅಧ್ಯಯನಗಳು ಅತ್ಯಂತ ಕಡಿಮೆ ಎಂದು ಅವರು ಹೇಳಿದ್ದಾರೆ.

ದೃಶ್ಯದಿಂದ ಸಾಬೀತಾದ ಅಧ್ಯಯನ

ಮಾಸ್ಕ್‌ ಇಲ್ಲದೇ ಎರಡು, ನಾಲ್ಕು ಮತ್ತು ಆರು ಅಡಿಗಳ ಅಂತರದಲ್ಲಿ ನಿಂತು ಪರಸ್ಪರ ಇಬ್ಬರು ವ್ಯಕ್ತಿಗಳು ಸುಮಾರು ಒಂದು ನಿಮಿಷ ಮಾತನಾಡುವ ದೃಶ್ಯವನ್ನು ಸೆರೆ ಹಿಡಿಯಲಾಯಿತು. ಮಾತಿನ ಸಂದರ್ಭದಲ್ಲಿ ಇಬ್ಬರೂ ವ್ಯಕ್ತಿಗಳಿಂದ ಚಿಮ್ಮುವ ಹನಿಗಳ ಹರಡುವಿಕೆಯ ಪ್ರಮಾಣವನ್ನು ಅಂದಾಜು ಮಾಡಲಾಯಿತು. ಇದರಿಂದ ಗೊತ್ತಾದ ಅಂಶವೆಂದರೆ, ಇಂತಹ ಮಾತುಕತೆಯಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಅತ್ಯಧಿಕ. ಇಬ್ಬರು ವ್ಯಕ್ತಿಗಳ ಬಾಯಿಯಿಂದ ಎಷ್ಟು ಪ್ರಮಾಣದಲ್ಲಿ ಎಂಜಲಿನ ಹನಿಗಳು ಚಿಮ್ಮುತ್ತವೆ ಎಂಬುದರ ಆಧಾರದಲ್ಲಿ ವೈರಾಣು ಹರಡುವಿಕೆಯೂ ನಿರ್ಧಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT