ಮಂಗಳವಾರ, ಜೂನ್ 28, 2022
28 °C

ಕೋವಿಡ್-19 ಭೀತಿ | ಸ್ಯಾನಿಟೈಸರ್‌, ಮಾಸ್ಕ್‌ಗೆ ಡಿಮ್ಯಾಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ವೈರಸ್‌ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ನಗರದ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಸ್ಯಾನಿಟೈಸರ್‌ (ಕೈತೊಳೆಯುವ ದ್ರಾವಣ) ಮತ್ತು ಮಾಸ್ಕ್‌ ತರುವಂತೆ ಸೂಚಿಸಲಾಗಿದೆ. ಮಕ್ಕಳ ಜತೆ ನೋಟಿಸ್‌ ಕಳಿಸಲಾಗಿದೆ. ಕೆಲವು ಶಾಲೆಗಳಲ್ಲಿ ಮೌಖಿಕವಾಗಿ ತಿಳಿಸಿದ್ದರೆ, ಇನ್ನೂ ಕೆಲವು ಶಾಲೆಗಳು ಮಕ್ಕಳ ಡೈರಿಯಲ್ಲೇ ಬರೆದು ಕಳಿಸಿದ್ದಾರೆ.

ಹೆಚ್ಚಿನ ಪೋಷಕರು ಮೆಡಿಕಲ್‌ ಶಾಪ್‌ಗಳಿಗೆ ದೌಡಾಯಿಸಿದ ಕಾರಣ ಬುಧವಾರ ಸಂಜೆ ಹೊತ್ತಿಗೆ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ ಖಾಲಿಯಾಗಿದ್ದವು. ಗುರುವಾರ ಬೆಳಿಗ್ಗೆಯಿಂದಲೇ ಗ್ರಾಹಕರು ಮೆಡಿಕಲ್‌ ಶಾಪ್‌ಗಳಿಗೆ ಎಡತಾಕುತ್ತಿರುವುದು ಕಂಡುಬಂತು. ಕೆಲವು ಔಷಧಿ ಮಳಿಗೆಗಳ ಮುಂದೆ ‘ಓಟ್‌ ಆಫ್‌ ಸ್ಟಾಕ್‌’ ಬೋರ್ಡ್‌ ನೇತು ಹಾಕಲಾಗಿತ್ತು.

ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಮಕ್ಕಳನ್ನು ಶಾಲೆಗಳಿಂದ ವಾಪಸ್‌ ಮನೆಗೆ ಕಳುಹಿಸಲಾಗುತ್ತಿದೆ. ಕಚೇರಿ ಉದ್ಯೋಗಿಗಳಿಗೆ ರಜೆ ನೀಡಲಾಗುತ್ತಿದೆ.  ಸಿಲಿಕಾನ್ ಸಿಟಿಯ ಕೆಲವು ಐ.ಟಿ ಕಂಪನಿಗಳು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ (ವರ್ಕ್‌ ಫ್ರಮ್‌ ಹೋಮ್‌) ಸೂಚಿಸಿವೆ. ಮನೆಯಿಂದ ಹೊರಗಡೆ ಕಾಲಿಡಲು ಹೆದರುತ್ತಿರುವ ಕೆಲವು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ನಗರದ ಕೆಲವು ಖಾಸಗಿ ಕಚೇರಿಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ ಇಡಲಾಗಿದೆ. ಒಳ ಪ್ರವೇಶಿಸುವ ಎಲ್ಲರಿಗೂ ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. 

‘ಜನರಿಗೆ ಕೋವಿಡ್‌ ವೈರಸ್‌ ಭೀತಿ ಹೆಚ್ಚಾಗಿದೆ. ಜನರು ಕೇವಲ ಒಂದೆರೆಡಲ್ಲ, ಬಾಕ್ಸ್‌ಗಟ್ಟಲೇ ಕೈತೊಳೆಯುವ ದ್ರಾವಣ ಮತ್ತು ಮಾಸ್ಕ್‌ಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಕೊರತೆ ಎದುರಾಗಿದೆ’ ಎನ್ನುತ್ತಾರೆ ಮಲ್ಲೇಶ್ವರದ ನ್ಯೂ ಪುಷ್ಯಮಿ ಮೆಡಿಕಲ್‌ ಸ್ಟೋರ್‌ ಮಾಲೀಕ ಸುರೇಶ್‌ ತುಕಾರಾಂ. 

ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗೆ ಏಕಾಏಕಿ ಬೇಡಿಕೆ ಹೆಚ್ಚಾದ ಕಾರಣ ವಿತರಕರು ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಗ್ರಾಹಕರು ಹತ್ತಾರು ಮೆಡಿಕಲ್‌ ಸ್ಟೋರ್‌ಗಳನ್ನು ಸುತ್ತುತ್ತಿದ್ದಾರೆ. ‘ನಮ್ಮ ಅಂಗಡಿಗೆ ಬಂದ ಅನೇಕ ಗ್ರಾಹಕರು ಬರಿಗೈಯಲ್ಲಿ ಮರಳಿದ್ದಾರೆ. ಇನ್ನೂ ಸ್ಟಾಕ್‌ ಬಂದಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ‘ ಎಂದರು ಸುರೇಶ್.

ಕುದುರಿದ ಬೇಡಿಕೆ: ಸಾಮಾನ್ಯ ದಿನಗಳಲ್ಲಿ ₹8ರಿಂದ ₹10ಕ್ಕೆ ಮಾರಾಟವಾಗುತ್ತಿದ್ದ ಸಾದಾ ಸರ್ಜಿಕಲ್‌ ಮಾಸ್ಕ್‌ಗಳು ಈಗ ₹25ರಿಂದ ₹40 ಮಾರಾಟವಾಗುತ್ತಿವೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್‌ಗಳ ಬೆಲೆ ಕೂಡ ದಿಢೀರ್‌ ಗಗನಕ್ಕೇರಿದೆ. ಸಿಂಗಲ್‌ ಲೇಯರ್‌ ಸರ್ಜಿಕಲ್‌ ಮಾಸ್ಕ್‌ ತಯಾರಿಸಲು ಕೇವಲ 60 ಪೈಸೆ ಖರ್ಚಾಗುತ್ತದೆ. ಇದು ಸಾಮಾನ್ಯ ದಿನಗಳಲ್ಲಿ ₹5ರಿಂದ ₹8 ಮಾರಾಟವಾಗುತ್ತಿತ್ತು. ಈ ಮೊದಲು ₹100ರಿಂದ ₹150 ಮಾರಾಟವಾಗುತ್ತಿದ್ದ ಗುಣಮಟ್ಟದ ಸಿ 95 ಮಾಸ್ಕ್‌ಗಳು ಈಗ ₹400–₹500 ಬಿಕರಿಯಾಗುತ್ತಿವೆ. ಎನ್‌ 95 ಮಾಸ್ಕ್‌ ಬೆಲೆ ₹1,800–₹2,000!

‘ಜನರು ಅನಗತ್ಯವಾಗಿ ಭಯ ಬೀಳುತ್ತಿದ್ದಾರೆ. ಮಾಧ್ಯಮಗಳು ಕೂಡ ಅವರಲ್ಲಿ ಭೀತಿ ಹುಟ್ಟಿಸುತ್ತಿವೆ. ಪರಿಸ್ಥಿತಿಯ ಲಾಭ ಪಡೆದು ಮಾಸ್ಕ್‌,  ಮಾಫಿಯಾಗಳು ಡಬಲ್‌ ಲಾಭ ಮಾಡಿಕೊಳ್ಳುತ್ತಿವೆ’ ಎನ್ನುವುದು ಸುರೇಶ್‌ ಅವರ ಅಭಿಪ್ರಾಯ.

‘ಯಶವಂತಪುರ, ಪೀಣ್ಯ ದಾಸರಹಳ್ಳಿ, ಬೊಮ್ಮನಹಳ್ಳಿ ಬನ್ನೇರುಘಟ್ಟ ಹಾಗೂ ಹೊಸೂರು ರಸ್ತೆಯಲ್ಲಿರುವ ಕಾರ್ಖಾನೆಗಳ ಗೋದಾಮುಗಳಲ್ಲಿ ಹಲವು ದಿನಗಳಿಂದ ಬಿದ್ದಿದ್ದ ಮಾಸ್ಕ್‌ಗಳ ರಾಶಿ ಖಾಲಿಯಾಗಿವೆ. ಚೀನಾ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಕೋವಿಡ್‌ ವೈರಸ್‌ ಕಂಡು ಬಂದ ತಕ್ಷಣ ಅಲ್ಲಿಂದ ಭಾರಿ ಬೇಡಿಕೆ ಬಂದಿತ್ತು. ನಮ್ಮ ದಾಸ್ತಾನಿನಲ್ಲಿದ್ದ ಹೆಚ್ಚಿನ ಮಾಸ್ಕ್‌ಗಳನ್ನು ಪೆಸಿಫಿಕ್‌ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ. ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೂ ಭಾರಿ ಬೇಡಿಕೆ ಬರುತ್ತಿದೆ. ಸ್ಥಳೀಯ ಮಾರುಕಟ್ಟೆಗೆ ಪೂರೈಸಲು ನಮ್ಮ ಬಳಿ ಸ್ಟಾಕ್‌ ಇಲ್ಲ’ ಎನ್ನುತ್ತಾರೆ ಮಾಸ್ಕ್‌ ತಯಾರಿಸುವ ಕಂಪನಿಯ ಮ್ಯಾನೇಜರ್‌ ದಾಸೇಗೌಡ. 

ಸಿಟಿಬಸ್‌ಗಳಲ್ಲಿ ಮುನ್ನೆಚ್ಚರಿಕೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ತನ್ನ ಎಲ್ಲ ಸಿಬ್ಬಂದಿಗೂ ಮಾಸ್ಕ್‌ ವಿತರಿಸಿದೆ. 

ಪ್ರತಿ ದಿನವೂ ಬಿಎಂಟಿಸಿ ಸಿಬ್ಬಂದಿ ಬಸ್‌ ಸೀಟು, ಹ್ಯಾಂಡಲ್‌, ಕಂಬಗಳನ್ನು ಬಿಸಿನೀರು ಮತ್ತು ಡೆಟ್ಟಾಲ್‌ನಿಂದ ಸ್ವಚ್ಛಗೊಳಿಸುತ್ತಿದ್ದಾರೆ. ಪ್ರತಿನಿತ್ಯ ಶುಚಿತ್ವ ಕಾಪಾಡುವುದನ್ನು ಕಡ್ಡಾಯಗೊಳಿಸಿ ಬಿಎಂಟಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವಿಮಾನ ನಿಲ್ದಾಣದಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಬಸ್‌ಗಳಲ್ಲಿ ಧೂಮೀಕರಣ ಮಾಡಲಾಗುತ್ತಿದೆ.

ಎಲ್ಲಾ ಮಾಸ್ಕ್‌ಮಯ!

ರಾಜ್ಯಾದ್ಯಂತ ಬುಧವಾರದಿಂದ ಪಿಯು ಪರೀಕ್ಷೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಹೋಟೆಲ್‌ ಸಿಬ್ಬಂದಿ, ಪೆಟ್ರೋಲ್‌ ಬಂಕ್‌ ಉದ್ಯೋಗಿಗಳು ಕೂಡ ಮಾಸ್ಕ್ ಧಾರಿಗಳಾಗಿದ್ದಾರೆ. ರೈಲು, ಬಸ್‌, ಮೆಟ್ರೊಗಳಲ್ಲಿ ಪ್ರಯಾಣಿಸುತ್ತಿದ್ದವರೂ ಮಾಸ್ಕ್‌ ಮೊರೆ ಹೋಗಿದ್ದಾರೆ. ಕೆಲವರಿಗೆ ಕರವಸ್ತ್ರ, ವೇಲ್‌ಗಳೇ ‘ಮಾಸ್ಕ್‌‘ಗಳಾಗಿವೆ.

ಚೀನಾ ಆಹಾರ ಖಾದ್ಯಗಳಿಗೆ ಬೇಡಿಕೆ ದಿಢೀರ್‌ ಕುಸಿದಿದೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಚೀನಾ ಹೋಟೆಲ್‌, ರೆಸ್ಟೋರೆಂಟ್‌ಗಳು ಖಾಲಿ ಹೊಡೆಯುತ್ತಿವೆ. ಗ್ರಾಹಕರು ಇತ್ತ ಹೆಜ್ಜೆ ಹಾಕುತ್ತಿಲ್ಲ.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಶೇ 25ರಷ್ಟು ವಹಿವಾಟು ಕುಸಿದಿದೆ ಎನ್ನುತ್ತಾರೆ ಚೀನಾ ರೆಸ್ಟೋರೆಂಟ್‌ಗಳ ಮಾಲೀಕರು.  

ಅನಗತ್ಯ ಭಯ ಬೇಡ

ಶೀತ, ಜ್ವರ, ಗಂಟಲು ನೋವಿನಿಂದ ಬಳಲುತ್ತಿರುವವರು ಇದು ಕೋವಿಡ್‌ ರೋಗಲಕ್ಷಣ ಎಂದು ಭಯಬೀಳುತ್ತಿದ್ದಾರೆ.  ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ದುಂಬಾಲು ಬೀಳುತ್ತಿದ್ದಾರೆ. ಆದರೆ ಕೋವಿಡ್‌ 19 ಬಗ್ಗೆ ಭಯ ಬೇಡ. ವಿದೇಶಗಳಿಂದ ಹಿಂದಿರುಗಿದವರಲ್ಲಿ ಇದು ಕಾಣಿಸಿಕೊಳ್ಳಬಹುದು. ಈಗ ಹವಾಮಾನ ವೈಪರೀತ್ಯದಿಂದ ಕೆಮ್ಮು, ಕಫ ಕಾಣಿಸಿಕೊಳ್ಳುತ್ತದೆ. ಕೆಮ್ಮುವ, ಸೀನುವ ವ್ಯಕ್ತಿಯಿಂದ ದೂರವಿರಿ. ದೂರದ ಪ್ರಯಾಣ ತಪ್ಪಿಸಿ.

- ಡಾ. ರಘು ಜೆ., ಸಕ್ರಾ ವರ್ಲ್ಡ್‌ ಆಸ್ಪತ್ರೆ

ಸಂಖ್ಯೆ ಹೆಚ್ಚಾಗಿದೆ

ಈಗ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗದ ಭೀತಿಯಿಂದ ಜನರು ಫೋನ್‌ ಕರೆ ಮಾಡಿ ಮಾಹಿತಿ ಕೇಳುತ್ತಲೇ ಇದ್ದಾರೆ. ದಿನಕ್ಕೆ ನೂರು ಕರೆ ಬರುತ್ತದೆ. ಇನ್‌ಫ್ಲೂಯೆಂಜಾ, ಎಚ್‌1ಎನ್‌1 ಕೂಡ ಪ್ರಕರಣಗಳು ಪತ್ತೆಯಾಗಿವೆ.

- ಡಾ. ದೀಪಕ್‌ ಬಲಾನಿ, ಮುಖ್ಯಸ್ಥರು, ಸಕ್ರಾ ವರ್ಲ್ಡ್‌ ಆಸ್ಪತ್ರೆಯ ವೈದ್ಯಕೀಯ ಸೇವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು