ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ಚಿಕಿತ್ಸೆ: ಇರಲಿ ಎಚ್ಚರಿಕೆ

Last Updated 19 ಜೂನ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಉಗುಳಿನಿಂದ ಹರಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ದಂತ ಸಮಸ್ಯೆಗೆ ಪರಿಹಾರ ‍‍‍ಪಡೆಯುವುದು ಹೇಗೆ?

ಕೊರೊನಾ ಸೋಂಕು ಮುಖ್ಯವಾಗಿ ಉಗುಳು, ಶಾರೀರಿಕ ದ್ರವ, ಕೆಮ್ಮುವುದರಿಂದ ಹೊರಹೊಮ್ಮುವ ಹನಿಗಳಿಂದ ಹರಡುತ್ತದೆ ಎಂಬುದು ಗೊತ್ತೇ ಇದೆ. ಜೊತೆಗೆ ಅಂತಹ ಹನಿಗಳಿಂದ ಸೋಂಕಿತವಾದ ವಸ್ತುಗಳ ಮೇಲ್ಮೈ ಸಂಪರ್ಕದಿಂದ ಹರಡಬಹುದಾಗಿದೆ. ದಂತ ಚಿಕಿತ್ಸೆಗಳನ್ನು ನೀಡುವಾಗ ಇಂತಹ ಹನಿಗಳು ಚಿಮ್ಮುವುದರಿಂದ ಸೋಂಕು ಹರಡುವ ಸಾಧ್ಯತೆ ಅಧಿಕ.

ಈ ದಂತ ಚಿಕಿತ್ಸೆಯಲ್ಲಿ ಹಲವು ಬಗೆಯ ಪರಿಕರಗಳನ್ನು ಉಪಯೋಗಿಸಲಾಗುತ್ತದೆ. ನೀರನ್ನು ಚಿಮ್ಮಿಸುವಂತಹ ಸಲಕರಣೆಗಳು ಬಾಯಿಯಲ್ಲಿರುವ ದ್ರವವನ್ನು ಆಚೆ ಸಿಡಿಸುವುದು ಸಹಜ. ಇದರಿಂದ ಸುತ್ತಮುತ್ತಲಿನ ವಾತಾವರಣವು ದ್ರವದ ಹನಿ(ಏರೋಸೋಲ್‌)ಗಳಿಂದ ಕಲುಷಿತವಾಗುವ ಸಂಭವ ಹೆಚ್ಚು. ಹೀಗಾಗಿ ದಂತ ವೈದ್ಯರಲ್ಲದೆ ಚಿಕಿತ್ಸೆಯನ್ನು ತೆಗೆದುಕೊಳ್ಳುವ ವ್ಯಕ್ತಿ, ವೈದ್ಯರ ಸಹಾಯಕರು ಹಾಗೂ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ.

ಹಲವು ದಂತ ತುರ್ತು ಪರಿಸ್ಥಿತಿಗಳಾದ ಅಪಘಾತಗಳು, ತೀವ್ರ ಹಲ್ಲುನೋವು, ರಕ್ತಸ್ರಾವ, ಕೀವು, ಊತ, ಸೆಲುಲೈಟಿಸ್, ಫ್ರಾಕ್ಚರ್‌ಗಳು ಮುಂತಾದ ತೊಂದರೆಗಳು ಸಂಭವಿಸಿದಾಗ ತುರ್ತುಚಿಕಿತ್ಸೆಯ ಅವಶ್ಯಕತೆಯಿರುತ್ತದೆ. ಇದಲ್ಲದೆ ಸಣ್ಣ ಪುಟ್ಟ ಹುಳುಕು ಹಲ್ಲುಗಳಿಗೆ ತೆಗೆದುಕೊಳ್ಳುವ ಪುನಶ್ಚೇತನ ಚಿಕಿತ್ಸೆಗಳು, ರೂಟ್ ಕೆನಾಲ್ ನಂತರದ ಕ್ಯಾಪಿಂಗ್, ಅಲ್ಟ್ರಾಸೋನಿಕ್ ಕ್ಲೀನಿಂಗ್, ಬ್ಲೀಚಿಂಗ್, ವಕ್ರದಂತ ಚಿಕಿತ್ಸೆಗಳು, ಕೃತಕ ದಂತ ಪಂಕ್ತಿ ಚಿಕಿತ್ಸೆ, ಟೂಥ್‌ ಜಿವೆಲ್‌ಗಳು, ಇಂಪ್ಲಾಂಟ್‌ಗಳು ಮುಂತಾದ ಚಿಕಿತ್ಸೆಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡುವುದು ಉತ್ತಮ.

ದಂತ ಚಿಕಿತ್ಸೆಗಳನ್ನು ಪಡೆಯುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮ.

*ದಂತ ವೈದ್ಯರು ಟೆಲಿಟ್ರಯಾಜಿಂಗ್ ಅಂದರೆ ರೋಗಿಗಳನ್ನು ಫೋನ್ ಮೂಲಕ ಅವರ ಪ್ರಯಾಣದ ಇತಿಹಾಸ ಮುಂತಾದವುಗಳ ಬಗ್ಗೆ ಮಾಹಿತಿ ತೆಗೆದುಕೊಂಡು ನಂತರ ಚಿಕಿತ್ಸೆಗೆ ಆಯ್ಕೆಮಾಡಿಕೊಳ್ಳುವುದು.

*ಟೆಲಿಮೆಡಿಸಿನ್ ಮೂಲಕ ಸಣ್ಣ ಪುಟ್ಟ ದಂತ ಸಮಸ್ಯೆಗಳಿಗೆ ಪರಿಹಾರ ನೀಡಬಹುದು.

*ಫೋನ್‌ಗಳ ಮೂಲಕ ಸಣ್ಣ ಪುಟ್ಟ ಸಮಸ್ಯೆಗಳಿಗೆ ತೆಗೆದುಕೊಳ್ಳುವಂತಹ ಔಷಧಿಗಳ ಬಗ್ಗೆ ಮಾಹಿತಿ ನೀಡಬಹುದು.

*ತೀವ್ರತರ ಸಮಸ್ಯೆಗಳಿಗೆ ಮುಂಜಾಗರೂಕತಾ ಕ್ರಮಗಳೊಂದಿಗೆ ಚಿಕಿತ್ಸೆ ನೀಡಬಹುದು.

*ಸಣ್ಣದಾದ ಹಲ್ಲುನೋವು ಅಥವಾ ಹುಳುಕು ಹಲ್ಲಿನ ಸಮಸ್ಯೆಗಳಿಗೆ ಮನೆಮದ್ದಾದ ಲವಂಗವನ್ನು ಒತ್ತಿ ಹಿಡಿಯುವುದರಿಂದ ಅಥವಾ ಲವಂಗದ ಎಣ್ಣೆಯನ್ನು ಹತ್ತಿಗೆ ಹಾಕಿ ಅದನ್ನು ಹುಳುಕಾದ ಹಲ್ಲಿನಿಂದ ಕಚ್ಚಿ ಹಿಡಿದರೆ ನೋವು ಶಮನವಾಗುವುದು.

*ವಸಡಿನ ರಕ್ತಸ್ರಾವ ಮುಂತಾದ ಸಮಸ್ಯೆಗಳಿಗೆ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸಬಹುದು. ಒಂದು ಲೋಟ ನೀರಿಗೆ ಅರ್ಧ ಚಮಚ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಸಂದುಗಳಲ್ಲಿ ಶೇಖರವಾದ ಆಹಾರ ಹೊರಬರುವುದಲ್ಲದೆ ಬಾಯಿಯಲ್ಲಿ ರೋಗ ಉಂಟು ಮಾಡಬಲ್ಲ ಬ್ಯಾಕ್ಟೀರಿಯಾದ ಪ್ರಮಾಣ ಕುಂದುತ್ತದೆ. ಶೇ 3ರಷ್ಟು ಹೈಡ್ರೋಜನ್ ಪೆರಾಕ್ಸೈಡ್‌ ಅನ್ನು ಸಮಪ್ರಮಾಣದ ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ವಸಡಿನ ಸೋಂಕು ಹಾಗೂ ರಕ್ತಸ್ರಾವವನ್ನು ಕಡಿಮೆ ಮಾಡಬಹುದಾಗಿದೆ.

*ಬಾಯಿಹುಣ್ಣು ಮುಂತಾದ ಸಮಸ್ಯೆಗಳಿಗೆ ಲೋಳೆಸರ, ಅರಿಸಿನ ಮುಂತಾದ ಮನೆಯಲ್ಲೇ ಸಿಗುವಂತಹ ವಸ್ತುಗಳಿಂದ ಪರಿಹಾರ ಪಡೆಯಬಹುದಾಗಿದೆ.

*ದವಡೆಯ ಜಾಯಿಂಟ್‌ಗಳಲ್ಲಿ ಕಂಡುಬರುವ ಸಮಸ್ಯೆಗಳಿಗೆ ಐಸ್‌ಪ್ಯಾಕ್‌ನಿಂದ 5–10 ನಿಮಿಷಗಳು ಒತ್ತಿ ಹಿಡಿದ ನಂತರ ಬಿಸಿ ಶಾಖವನ್ನು 5–10 ನಿಮಿಷ ಮುಂದುವರಿಸಿದರೆ ಕೀಲು ನೋವಿನಿಂದ ನಿವಾರಣೆ ಪಡೆಯಬಹುದಾಗಿದೆ.

*ಹಲ್ಲುಗಳು ಅತಿಯಾಗಿ ಸವೆದು ಸಂವೇದನೆ ಹೆಚ್ಚಾದ ಸಮಸ್ಯೆಯಿಂದ ಬಳಲುವವರು ಅತಿ ಶೀತ ಅಥವಾ ಅತಿ ಬಿಸಿ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಹಲ್ಲುಗಳ ಸಂವೇದನೆಯನ್ನು ಕಡಿಮೆ ಮಾಡುವ ಟೂಥ್‌ಪೇಸ್ಟ್‌ ಬಳಸಬಹುದಾಗಿದೆ.

ತೀವ್ರತರದ ನೋವಿಗೆ, ಕೀವು, ಊತ, ಆಘಾತಗಳು ಮುಂತಾದ ತುರ್ತು ಚಿಕಿತ್ಸೆ ಅವಶ್ಯಕವಿದ್ದಲ್ಲಿ ದಂತ ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ. ದಂತ ಚಿಕಿತ್ಸಾಲಯಗಳಿಗೆ ತುರ್ತು ಸೇವೆಗಳಿಗೆ ಭೇಟಿ ನೀಡುವುದು ಉತ್ತಮವಾಗಿದ್ದು ಸಣ್ಣ ಪುಟ್ಟ ತೊಂದರೆಗಳಿಗೆ ಟೆಲಿಮೆಡಿಸಿನ್ ಅಥವಾ ಮನೆ ಮದ್ದಿನ ಮೊರೆ ಹೋಗುವುದು ಒಳಿತು.

(ಲೇಖಕಿ: ದಂತ ಆರೋಗ್ಯ ಅಧಿಕಾರಿ, ಜನರಲ್‌ ಆಸ್ಪತ್ರೆ, ಗುಂಡ್ಲುಪೇಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT