ಶನಿವಾರ, ನವೆಂಬರ್ 28, 2020
25 °C

ಮಧುಮೇಹ: ಹಬ್ಬದಲ್ಲಿ ಇರಲಿ ಕೊಂಚ ಎಚ್ಚರ

ಅಮೃತ Updated:

ಅಕ್ಷರ ಗಾತ್ರ : | |

Prajavani

ದೀಪಾವಳಿಯೆಂದರೆ ಹೊಸ ಉಡುಪಿನ ಸರಬರ, ದೀಪಾವಳಿಯೆಂದರೆ ಬೆಳಕಿನ ಝಗಮಗ, ಅಷ್ಟೇ ಅಲ್ಲ, ಈ ಹಬ್ಬವೆಂದರೆ ಸಿಹಿ ತಿನಿಸುಗಳಿರುವ ಭೂರಿ ಭೋಜನ. ಸಕ್ಕರೆ ಧಾರಾಳವಾಗಿರುವ ತರಾವರಿ ಸಿಹಿ ತಿಂಡಿಗಳು, ಅದಕ್ಕೆ ಜೊತೆಯಾಗಿ ಕರಿದ ಖಾರದ ಖಾದ್ಯ.. ಒಟ್ಟಿನಲ್ಲಿ ನಾಲಿಗೆಯ ರುಚಿಗೆ ಏನೋ ಬೇಕೋ ಅದನ್ನು ತಯಾರಿಸಿಕೊಂಡು ಅಥವಾ ಅಂಗಡಿಗಳಿಂದ ಖರೀದಿಸಿ ಸವಿದರೇನೇ ಹಬ್ಬದ ಸಡಗರ ಕಳೆಗಟ್ಟಿದಂತೆ. ಆದರೆ ಈ ಅನಾರೋಗ್ಯಕರ ಆಹಾರ ಸೇವನೆ ಮಧುಮೇಹ ಇರುವವರಿಗೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿಬಿಡುತ್ತದೆ.

ಉಪವಾಸ ಇರುವಾಗ (ಎಫ್‌ಬಿಎಸ್‌) 120 ಎಂಜಿ/ ಡಿಎಲ್‌, ಉಪಾಹಾರ ಸೇವಿಸಿದ ಎರಡು ತಾಸುಗಳ ನಂತರ (ಪಿಪಿಬಿಎಸ್‌)180 ಎಂಜಿ/ ಡಿಎಲ್‌ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಯ್ದುಕೊಂಡವರಿಗೆ ಹಬ್ಬಗಳ ಸಂದರ್ಭದಲ್ಲಿ ಈ ಮಟ್ಟ ಶೇ 18– 20ರಷ್ಟು ಜಾಸ್ತಿಯಾದ ನಿದರ್ಶನಗಳಿವೆ ಎನ್ನುತ್ತದೆ ಬೀಟಾ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆ. ನವರಾತ್ರಿಯಿಂದ ಹಿಡಿದು ದೀಪಾವಳಿ ಹಬ್ಬದವರೆಗೂ ಈ ಸಿಹಿ ತಿನಿಸುಗಳ ಸೇವನೆ ಮುಂದುವರಿದರೆ ಸಹಜವಾಗಿಯೇ ರಕ್ತದಲ್ಲಿನ ಗ್ಲುಕೋಸ್‌ ಮಟ್ಟ ಜಾಸ್ತಿಯಾಗುತ್ತದೆ.

ಹೀಗಾಗಿ ಈ ದೀಪಾವಳಿ ಸಂದರ್ಭದಲ್ಲಿ ಮಧುಮೇಹಿಗಳು ಆಹಾರ ಸೇವಿಸುವಾಗ, ಅದು ಸಿಹಿ ಇರಲಿ ಅಥವಾ ಹೆಚ್ಚು ಕಾರ್ಬೊಹೈಡ್ರೇಟ್‌ ಅಂಶವಿರುವ ಇತರ ಖಾದ್ಯಗಳಿರಲಿ, ಕೊಂಚ ಕಾಳಜಿ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

* ಆಹಾರವನ್ನು ದಿನಕ್ಕೆ 2–3 ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದಕ್ಕಿಂತ ಅದೇ ಆಹಾರವನ್ನು ಸ್ವಲ್ಪ ಸ್ವಲ್ಪವಾಗಿ 4–5 ಬಾರಿ ಸೇವಿಸಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಜೊತೆಗೆ ನಿಮಗೆ ಅಗತ್ಯವಿದ್ದಷ್ಟು ಆಹಾರವೂ ದೇಹಕ್ಕೆ ಸೇರುತ್ತದೆ.

* ಆರೋಗ್ಯಕರ ಆಹಾರದ ಪಟ್ಟಿ ಮಾಡಿಕೊಳ್ಳಿ. ಬಾದಾಮಿ, ಅಕ್ರೂಟ್‌ನಂತಹ ಒಣ ಹಣ್ಣುಗಳನ್ನು ಸೇವಿಸಿ. ಜಾಸ್ತಿ ಫ್ರಕ್ಟೋಸ್‌ ಇಲ್ಲದ ಹಣ್ಣಿನ ಕೆಲವು ಹೋಳುಗಳನ್ನು ತಿನ್ನಬಹುದು. ಉದಾಹರಣೆಗೆ ಪೇರಳೆ ಹಣ್ಣು. ಹೆಚ್ಚು ಸಕ್ಕರೆ ಅಂಶವಿರುವ ಸಾಂಪ್ರದಾಯಿಕ ಸಿಹಿ ತಿನಿಸಿನ ಬದಲು ಕೊಂಚವೇ ಬೆಲ್ಲ ಹಾಕಿದ ಅಥವಾ ಸ್ಟೀವಿಯ ಸೇರಿಸಿದ ಖಾದ್ಯ ತಿನ್ನಬಹುದು. ಅದಕ್ಕೂ ಕೂಡ ಮಿತಿ ಹಾಕಿಕೊಳ್ಳಿ.

* ಸಾಕಷ್ಟು ಪ್ರಮಾಣದಲ್ಲಿ ನೀರು ಅಥವಾ ಇನ್ನಿತರ ದ್ರವಾಹಾರ ಸೇವಿಸಿ. ಏಕೆಂದರೆ ದೇಹಕ್ಕೆ ಸಾಕಷ್ಟು ಶಕ್ತಿ ನೀಡಲು ಇದು ಅಗತ್ಯ. ಯಾವುದೇ ಕಾರಣಕ್ಕೂ ಸಿಹಿ ಬೆರೆತ ಪಾನೀಯ ಕುಡಿಯಬೇಡಿ. ಊಟ ಮಾಡುವುದು ತಡವಾದರೆ ಎಳನೀರನ್ನು ಕುಡಿಯಬಹುದು, ನೀರಿಗೆ ಉಪ್ಪು ಮತ್ತು ಲಿಂಬೆ ರಸ ಸೇರಿಸಿ ಕುಡಿಯಬಹುದು. ಸಣ್ಣ ತುಂಡು ಡಾರ್ಕ್‌ ಚಾಕೊಲೇಟ್‌ ಮೆಲ್ಲಬಹುದು. ಇದರಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ.

* ಹಬ್ಬದ ಸಂದರ್ಭದಲ್ಲಿ ಚಿತ್ರಾನ್ನ, ಮೊಸರನ್ನ ಮಾಡುವುದು ಸಂಪ್ರದಾಯ. ಆದರೆ ಬಿಳಿ ಅಕ್ಕಿ ಬಳಸದೇ ಕಂದು ಅಕ್ಕಿ ಅಥವಾ ಸಿರಿಧಾನ್ಯಗಳಾದ ಸಾಮೆ, ಊದಲು, ಬರಗು ಮೊದಲಾದವು ಗಳಿಂದ ಮಾಡಿದ ಅನ್ನವನ್ನು ಇದಕ್ಕೆ ಬಳಸಬಹುದು.

* ಸಿಹಿಯನ್ನು ತಿನ್ನುವ ಹಾಗಿಲ್ಲ ಎಂದು ಕೆಲವರು ಕರಿದ ಬಜ್ಜಿ, ಬೋಂಡಾವನ್ನು ಹೆಚ್ಚಿಗೆ ತಿಂದು ಜಿಹ್ವಾ ಚಾಪಲ್ಯ ತಣಿಸಿಕೊಳ್ಳುತ್ತಾರೆ. ಆದರೆ ಎಣ್ಣೆಯಲ್ಲಿ ಕರಿದ ಇಂತಹ ತಿಂಡಿಗಳಿಂದಲೂ ಆರೋಗ್ಯ ಕೈಕೊಡುತ್ತದೆ. ಇದರ ಬದಲು ಹಬೆಯಲ್ಲಿ ಬೇಯಿಸಿದ ಖಾರದ ಕಡಬನ್ನು ತಿನ್ನಬಹುದು.

* ಬೆಳಿಗ್ಗೆ ಅಥವಾ ಸಂಜೆ ಒಂದು ತಾಸು ವೇಗದ ನಡಿಗೆ, ಲಘು ವ್ಯಾಯಾಮದ ಜೊತೆಗೆ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದನ್ನು ಮರೆಯಬೇಡಿ.

* ತೀರಾ ಸಿಹಿ ತಿನ್ನಬೇಕೆಂಬ ಬಯಕೆಯಾದರೆ ನಿಮ್ಮ ವೈದ್ಯರ ಜೊತೆ ಮಾತನಾಡಿ, ಹೇಗೆ ಸಮತೋಲನ ಆಹಾರ ಸೇವಿಸಬೇಕು, ಕ್ಯಾಲರಿಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಸಲಹೆ ಪಡೆದುಕೊಳ್ಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.