ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯ ನರರೋಗದಿಂದ ನಿಮಿರುವಿಕೆ ಸಮಸ್ಯೆ

Last Updated 11 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ನಿಮಿರುವಿಕೆಯ ಸಮಸ್ಯೆ (ಇಡಿ) ಮತ್ತು ಬಾಹ್ಯ ನರರೋಗದ ನಡುವಿನ ಸ್ಪಷ್ಟ ಸಂಪರ್ಕವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ಇಡಿ ಮೇಲಿನ ಬಾಹ್ಯ ನರಮಂಡಲದಲ್ಲಿ ಹಾನಿಗೊಳಗಾದ ನರಗಳ ಪ್ರಭಾವವನ್ನು ಅಂದಾಜು ಮಾಡಲಾಗಿತ್ತಷ್ಟೆ. ಆದರೆ 90 ರೋಗಿಗಳ ಮೇಲೆ ನಡೆಸಲಾದ ಹೊಸ ಅಧ್ಯಯನದಲ್ಲಿಈ ಎರಡರ ನಡುವೆ ಇರುವ ಸ್ಪಷ್ಟ ಸಂಬಂಧವನ್ನು ಕಂಡುಕೊಳ್ಳಲಾಗಿದೆ.

ಮಧುಮೇಹ, ಆಘಾತ ಅಥವಾ ಅನಾರೋಗ್ಯದಿಂದ ಬಾಹ್ಯ ನರರೋಗ ಉಂಟಾಗಬಹುದು. ಇದರ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುವ ಪುರುಷರು ಇಡಿ ಸಮಸ್ಯೆಯನ್ನು ಹೊಂದಿರುತ್ತಾರೆ ಮತ್ತು ಇದಕ್ಕೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವಿರುತ್ತದೆ ಎಂಬುದು ಸಾಬೀತಾಗಿದೆ.ಬಾಹ್ಯ ನರರೋಗವು ಮೆದುಳು ಮತ್ತು ಬೆನ್ನುಹುರಿಯ ಹೊರಗಿನ ಯಾವುದೇ ನರಗಳ ಹಾನಿಯನ್ನು ಒಳಗೊಂಡಿರುತ್ತದೆ. ಮೆದುಳಿನಿಂದ ಬೆನ್ನುಹುರಿಗೆ ಮತ್ತು ದೇಹದ ಉಳಿದ ಭಾಗಗಳಿಗೆ ಸಂದೇಶಗಳನ್ನು ಸಾಗಿಸುವ ನರಗಳು ಹಾನಿಗೊಳಗಾಗುವ ಅಥವಾ ರೋಗಪೀಡಿತವಾಗುವುದನ್ನು ಇದು ಸೂಚಿಸುತ್ತದೆ.

ಬಾಹ್ಯ ನರಗಳು ಮೆದುಳು ಮತ್ತು ಬೆನ್ನುಹುರಿಯನ್ನು ಸ್ನಾಯುಗಳು, ಚರ್ಮ ಮತ್ತು ಆಂತರಿಕ ಅಂಗಗಳಿಗೆ ಸಂಪರ್ಕಿಸುವ ಒಂದು ಸಂಕೀರ್ಣವಾದ ಜಾಲವನ್ನು ರೂಪಿಸಿರುತ್ತವೆ. ಈ ನರಗಳಿಗೆ ಹಾನಿಯುಂಟಾದಾಗ ಮೆದುಳು ಮತ್ತು ದೇಹದ ಇತರ ಭಾಗಗಳ ನಡುವಿನ ಸಂವಹನಕ್ಕೆ ಅಡ್ಡಿಯುಂಟಾಗುತ್ತದೆ. ಇದರಿಂದ ಮೆದುಳು ಹಾಗೂ ಶಿಶ್ನಕ್ಕೆ ಸಂಪರ್ಕ ಕಲ್ಪಿಸುವ ನರಗಳಿಗೆ ಹಾನಿಯುಂಟಾದಾಗ ಅದು ನಿಮಿರುವಿಕೆಯ ಸಮಸ್ಯೆಗೆ ಸಹ ಕಾರಣವಾಗಬಹುದು.

ಈ ಎರಡರ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸಿರುವ ಸಂಶೋಧನೆಯು ಇಡಿ ರೋಗಿಗಳಿಗೆ ಪೆಲ್ವಿಕ್‌ ಪ್ರದೇಶದಲ್ಲಿ ನ್ಯೂರೋಫಿಸಿಯೋಲಾಜಿಕಲ್ ಪರೀಕ್ಷೆಗಳನ್ನು ನಡೆಸುವುದರ ಮಹತ್ವವನ್ನು ಒತ್ತಿಹೇಳುತ್ತದೆ.

ಶೇ 69ರಷ್ಟು ಪುರುಷರು ನರರೋಗ ಲಕ್ಷಣಗಳನ್ನು ಹೊಂದಿರುತ್ತಾರೆಂದು ನ್ಯೂರೋಫಿಸಿಯೋಲಾಜಿಕಲ್ ಪರಿಶೋಧನೆಯು ದೃಢಪಡಿಸಿದೆ. ಅವರಲ್ಲಿ ಶೇ 61ರಷ್ಟು ಜನರು ಕೆಲವು ರೀತಿಯ ಬಾಹ್ಯ ನರರೋಗಗಳನ್ನು ಹೊಂದಿದ್ದರೆ, ಎಂಟು ಪ್ರತಿಶತದಷ್ಟು ಜನರು ಮೈಲೋಪತಿ- ಬೆನ್ನುಹುರಿಯ ಸಮಸ್ಯೆಗಳನ್ನು ಹೊಂದಿರುತ್ತಾರೆ ಎನ್ನುತ್ತದೆ ಅಧ್ಯಯನ. ಕೇವಲ ಶೇ 38ರಷ್ಟು ರೋಗಿಗಳು ಪಾಲಿನ್ಯೂರೋಪತಿ ಸಮಸ್ಯೆಯನ್ನು ಹೊಂದಿರುತ್ತಾರೆ. ಇದು ದೇಹದ ಹಲವಾರು ಬಾಹ್ಯ ನರಗಳು ಏಕಕಾಲದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಸಂಭವಿಸುತ್ತದೆ.

ಹಾಗೆಯೇ ಸಂವೇದನಾ ಪ್ರತಿಕ್ರಿಯೆ ಬದಲಾವಣೆಗಳು ಕೈ ಅಥವಾ ಕಾಲಿಗಿಂತ ಶಿಶ್ನದಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ.ಸರಣಿ ನ್ಯೂರೋಫಿಸಿಯೋಲಜಿ ಪರೀಕ್ಷೆಗಳಿಗೆ ಒಳಗಾದ ರೋಗಿಗಳ ಪ್ರತಿಕ್ರಿಯೆಗಳನ್ನು ಸಂಯೋಜಿಸುವ ಮೂಲಕ ಸಂಶೋಧಕರು ಬಾಹ್ಯ ನರರೋಗವು ಇಡಿ ರೋಗಿಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ನಿರೂಪಿಸಿದ್ದಾರೆ. ‌ವೈದ್ಯರು ಇಡಿ ರೋಗಿಗಳಿಗೆ ನ್ಯೂರೋಫಿಸಿಯೋಲಜಿ ಪರೀಕ್ಷೆಗಳನ್ನು ಮಾಡಬೇಕು, ಪೆಲ್ವಿಕ್‌ ಪ್ರದೇಶದ ಬಗ್ಗೆ ನಿರ್ದಿಷ್ಟವಾಗಿ ಗಮನ ಹರಿಸಬೇಕು ಎನ್ನುವ ಅಗತ್ಯವನ್ನು ಈ ಸಂಶೋಧನೆ ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT