ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಡಯಟ್‌ ಆಗದಿರಲಿ ಅಪಾಯಕಾರಿ

Last Updated 16 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಡಯಟ್‌ ಎನ್ನುವುದು ಇತ್ತೀಚೆಗೆ ಬಹುತೇಕರು ಅನುಸರಿಸುತ್ತಿರುವ ಆಹಾರಕ್ರಮ ಎಂದೇ ವಿಶ್ಲೇಷಣೆ ಮಾಡುತ್ತಾರೆ ತಜ್ಞರು. ಉತ್ತಮ ಆರೋಗ್ಯ, ತೂಕ ಕಾಪಾಡಿಕೊಳ್ಳಲು ತಮಗೆ ಒಗ್ಗುವಂತಹ ಆಹಾರ ಸೇವನೆಗೆ ಮೊರೆ ಹೋಗುವುದು ಸಾಮಾನ್ಯ ವಿಷಯ ಎಂಬಂತಾಗಿಬಿಟ್ಟಿದೆ. ಆದರೆ ಸರಿಯಾದ ಅರಿವು, ತಜ್ಞರ ಸಲಹೆಯಿಲ್ಲದೇ ಅನುಸರಿಸುವ ಡಯಟ್‌ ಕೆಲವೊಮ್ಮೆ ಜೀವಕ್ಕೇ ಅಪಾಯವೊಡ್ಡಬಹುದು. ಇತ್ತೀಚೆಗೆ ಕಿಟೊಜೆನಿಕ್‌ ಡಯೆಟ್‌ನ ಅಡ್ಡ ಪರಿಣಾಮದಿಂದ ಮೃತಪಟ್ಟರೆನ್ನಲಾದ ನಟಿ ಮಿಸ್ಟಿ ಮುಖರ್ಜಿಯವರ ಪ್ರಕರಣ ಇಂತಹ ಎಚ್ಚರಿಕೆ ಗಂಟೆ ಬಾರಿಸಿದೆ. ಯಾವುದಾದರೂ ಕಾಯಿಲೆಯಿಂದ ನರಳುತ್ತಿದ್ದರಂತೂ ಈ ಡಯಟ್‌ ಮಾಡುವಾಗ ಅತ್ಯಂತ ಹುಷಾರಾಗಿರಬೇಕು.

ಕಿಟೊ ಡಯಟ್‌ನಲ್ಲಿ ಕಾರ್ಬೊಹೈಡ್ರೇಟ್‌ ಬದಲು ದೇಹದಲ್ಲಿ ಶೇಖರಗೊಂಡ ಕೊಬ್ಬನ್ನು ಎನರ್ಜಿ ಸಲುವಾಗಿ ದೇಹ ಬಳಸಿಕೊಳ್ಳುವುದರಿಂದ ತೂಕ ಒಮ್ಮೆಲೇ ಕಡಿಮೆಯಾಗುತ್ತದೆ. ಹಿಂದೆ ಮೂರ್ಛೆ ರೋಗಿಗಳಿಗೆ ಈ ಡಯಟ್‌ ಅನುಸರಿಸಲು ಹೇಳುತ್ತಿದ್ದರು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಿಂದ ಮಧುಮೇಹಿಗಳು ಅನುಸರಿಸುವುದು ಹೆಚ್ಚು. ಹಾಗೆಯೇ ತೂಕ ಕಡಿಮೆ ಮಾಡಿಕೊಳ್ಳುವುದೂ ಇದರಿಂದ ಸುಲಭ.

ಅತಿಯಾದ ಡಯಟ್‌ ಅಪಾಯಕಾರಿ
‘ಕಿಟೊಜೆನಿಕ್‌ ಡಯಟ್‌ ಎಂದರೆ ಕೊಬ್ಬು ಜಾಸ್ತಿ ಇರುತ್ತದೆ. ಕನಿಷ್ಠ ಪ್ರೊಟೀನ್‌ ಹಾಗೂ ಕಡಿಮೆ ಅಥವಾ ಯಾವುದೇ ಕಾರ್ಬೊಹೈಡ್ರೇಟ್‌ ಇಲ್ಲದ ಆಹಾರ. ಈ ಡಯಟ್‌ ಆಹಾರ ತಿನ್ನುವ ವ್ಯಕ್ತಿಯಲ್ಲಿ ಕಿಟೊಸಿಸ್‌ ಎಂಬ ಪ್ರಕ್ರಿಯೆ ನಡೆಯುತ್ತಿರುತ್ತದೆ. ಅಂದರೆ ದೇಹವು ಶಕ್ತಿಯ ಮೂಲದ ಸಲುವಾಗಿ ಕೊಬ್ಬನ್ನು ಕರಗಿಸುತ್ತದೆ. ಆದರೆ ಇದು ಮಾನವನಲ್ಲಿ ಸಹಜವಾದ ಪ್ರಕ್ರಿಯೆಯಲ್ಲ. ಇದರಿಂದ ಉತ್ಪನ್ನವಾಗುವ ಗ್ಲುಕೋಸ್‌ ಆರೋಗ್ಯಕ್ಕೆ ಅಷ್ಟು ಸಹಾಯಕವಲ್ಲ. ಇದರಿಂದ ಹೃದಯದ ಅಥವಾ ಕಿಡ್ನಿ ಸಮಸ್ಯೆ ತಲೆದೋರಬಹುದು’ ಎಂದು ಎಚ್ಚರಿಸುತ್ತಾರೆ ಸಕ್ರಾ ವರ್ಲ್ಡ್‌ ಆಸ್ಪತ್ರೆಯ ಮುಖ್ಯ ಕ್ಲಿನಿಕಲ್‌ ನ್ಯೂಟ್ರಿಷನಿಸ್ಟ್‌ ರೆಡ್ಡಿ ಜ್ಯೋತ್ಸ್ನಾ.

ಆದರೆ ಒಮ್ಮೆಲೇ ತೂಕ ಕಳೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳೂ ಜಾಸ್ತಿ. ಪೌಷ್ಟಿಕಾಂಶದ ಪ್ರಮಾಣ ಕಡಿಮೆಯಾಗುವುದಲ್ಲದೇ ಅಮಿನೊ ಆಮ್ಲ, ಖನಿಜಾಂಶ, ವಿಟಮಿನ್‌ಗಳ ಕೊರತೆ ತಲೆದೋರಬಹುದು. ಇದರಿಂದ ತಲೆಗೂದಲು ಉದುರುವ ಸಮಸ್ಯೆಯಿಂದ ಹಿಡಿದು ಗಂಭೀರ ಆರೋಗ್ಯ ಸಮಸ್ಯೆಗಳೂ ತಲೆದೋರಬಹುದು. 3–4 ವಾರಗಳಿಗಿಂತ ಅಧಿಕ ಕಾಲ ಈ ಡಯಟ್‌ ಅನುಸರಿಸುವುದು ಒಳ್ಳೆಯದಲ್ಲ.

‘ಇತ್ತೀಚೆಗೆ ಬಹಳಷ್ಟು ಮಂದಿ ಗೂಗಲ್‌ನಲ್ಲಿ ಡಯಟ್‌ ಚಾರ್ಟ್‌ ಹುಡುಕಾಡಿ ತಾವೇ ಡಯಟ್‌ ಶುರು ಮಾಡುವುದು ಹೆಚ್ಚುತ್ತಿದೆ. ಅಲ್ಪಕಾಲದಲ್ಲೇ ತೂಕ ಕಳೆದುಕೊಳ್ಳುವ ಉದ್ದೇಶದಿಂದ ಶುರು ಮಾಡಿಕೊಳ್ಳುವ ಈ ಡಯಟ್‌ನಿಂದ ದೀರ್ಘಾವಧಿ ದುಷ್ಟಪರಿಣಾಮ ಉಂಟಾಗಬಹುದು. ಅನಾರೋಗ್ಯ, ಪ್ರಾಣ ಕಳೆದುಕೊಳ್ಳುವಂತಹ ಸಂದರ್ಭವೂ ಬರಬಹುದು’ ಎನ್ನುತ್ತಾರೆ ಜ್ಯೋತ್ಸ್ನಾ.

‘ಡಯಟ್‌ ಯೋಜನೆ ರೂಪಿಸಲು ಕ್ಲಿನಿಕಲ್‌ ನ್ಯೂಟ್ರಿಷನಿಸ್ಟ್‌ ಅಥವಾ ಡಯಟೀಶಿಯನ್‌ ಸಂಪರ್ಕಿಸಿ. ಎಷ್ಟು ಅವಧಿಯ ಡಯಟ್‌, ಯಾವ ಆಹಾರ ಮತ್ತು ಪಾನೀಯ ಸೇವಿಸಬೇಕು ಎಂಬುದನ್ನು ಅವರು ತಿಳಿಸಿಕೊಡುತ್ತಾರೆ. ಹಾಗೆಯೇ ಸೂಕ್ತ ದೈಹಿಕ ಚಟುವಟಿಕೆ ಮತ್ತು ರಕ್ತ ಪರೀಕ್ಷೆಗೆ ಅವರು ಸೂಚಿಸಬಹುದು’ ಎನ್ನುವ ಅವರು, ‘ಹಾಗೆಯೇ ಪ್ರೊಟೀನ್‌, ವಿಟಮಿನ್‌ ಅಥವಾ ಖನಿಜಾಂಶವಿರುವ ಸಪ್ಲಿಮೆಂಟ್‌ ಕೂಡ ವೈದ್ಯರ ಸಲಹೆಯ ಮೇಲೆ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ದ್ರವಾಹಾರದ ಡಯಟ್‌ನಿಂದ ದೇಹವನ್ನು ಶುದ್ಧೀಕರಿಸಿಕೊಳ್ಳಬಹುದು. ನೀರು, ಹಾಲು ತರಕಾರಿ ಮತ್ತು ಹಣ್ಣಿನ ರಸ, ಸ್ಮೂದಿ ಇದರಲ್ಲಿ ಸೇರಿವೆ. ಇದನ್ನು ಕೂಡ ತಜ್ಞರ ಸಲಹೆ ಪಡೆದು ಪಾಲಿಸಬೇಕು. ಕೆಲವೊಮ್ಮೆ ತಪ್ಪಾದ ಡಯಟ್‌ನಿಂದ ವಾಕರಿಕೆಯಿಂದ ಹಿಡಿದು ಹೃದಯ, ಲಿವರ್‌ ಅಥವಾ ಕಿಡ್ನಿ ಸಮಸ್ಯೆ ಕೂಡ ತಲೆದೋರಬಹುದು ಎಂದು ಜ್ಯೋತ್ಸ್ನಾ ಎಚ್ಚರಿಸುತ್ತಾರೆ.

ಹಣ್ಣು ಸೇವನೆ ಉತ್ತಮ
ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ವ್ಯಕ್ತಿ ದಿನಕ್ಕೆ ಮೂರು ಬಾರಿ ಅಂದರೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಮೂರು ಸಲ ಸಣ್ಣ ಪ್ರಮಾಣದ ತಿನಿಸು, ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಪಾನೀಯ, ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನ ಊಟದ ಮಧ್ಯೆ ಒಂದು ಹಣ್ಣನ್ನು ಸೇವಿಸುವುದು ಉತ್ತಮ.

ಹಾಗೆಯೇ ನಮ್ಮ ಸಾಂಪ್ರದಾಯಿಕ ಅಡುಗೆ ಮತ್ತು ಬೇಯಿಸುವ ವಿಧಾನ, ಕಾಪಿಡುವ ಪದ್ಧತಿಯಿಂದಾಗಿ ಆರೋಗ್ಯಕರವಾಗಿ ಇರಬಹುದು ಎಂಬುದು ಸಾಬೀತಾಗಿದೆ.
– ರೆಡ್ಡಿ ಜ್ಯೋತ್ಸ್ನಾ, ಮುಖ್ಯ ಕ್ಲಿನಿಕಲ್‌ ನ್ಯೂಟ್ರಿಷನಿಸ್ಟ್‌, ಸಕ್ರಾ ವರ್ಲ್ಡ್‌ ಆಸ್ಪತ್ರೆ

– ರೆಡ್ಡಿ ಜ್ಯೋತ್ಸ್ನಾ, ಮುಖ್ಯ ಕ್ಲಿನಿಕಲ್‌ ನ್ಯೂಟ್ರಿಷನಿಸ್ಟ್‌, ಸಕ್ರಾ ವರ್ಲ್ಡ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT