ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರಿಗೆ ಬೆಳಕು ನೀಡುವ

Last Updated 30 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಂಧತ್ವ ವಿಶ್ವದಾದ್ಯಂತ ಇರುವ ಬಹು ದೊಡ್ಡ ಸಮಸ್ಯೆ. ಭಾರತದಲ್ಲಿ ಸದ್ಯ 4.6 ದಶಲಕ್ಷದಷ್ಟು ಅಂಧತ್ವ ಹೊಂದಿರುವ ಜನರಿದ್ದು, 2020 ರ ವೇಳೆಗೆ ಇವರ ಸಂಖ್ಯೆ 10 ದಶಲಕ್ಷಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಅಂಧರ ಕಣ್ಣಿಗೆ ಬೆಳಕಾಗಬೇಕಾದ ಕಾರ್ನಿಯಾ (ಕಣ್ಣಿನ ಪಟಲ) ದಾನದ ಬಗ್ಗೆ ವಿವರಗಳನ್ನು ಕೆದಕುತ್ತ ಹೋದರೆ ಕೆಲವು ನಿರಾಶದಾಯಕ ಸಂಗತಿಗಳು ನಮ್ಮ ಕಣ್ಣ ಮುಂದೆ ಬರುತ್ತವೆ.

ಕಾರ್ನಿಯಾ ಕಸಿ ಮಾಡಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೆ, ದಾನಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ದೇಶದಲ್ಲಿ ಪ್ರಸ್ತುತ ವಾರ್ಷಿಕ 75 ಸಾವಿರದಿಂದ ಒಂದು ಲಕ್ಷದವರೆಗಿನ ಕಾರ್ನಿಯಾಗಳ ಅಗತ್ಯವಿದೆ. ಆದರೆ, ಅಂದಾಜು 22 ಸಾವಿರ ಕಾರ್ನಿಯಾಗಳನ್ನು ಮಾತ್ರ ದಾನ ಮಾಡಲಾಗುತ್ತಿದೆ. ಇನ್ನೊಂದು ಮನ ಕಲಕುವ ಸಂಗತಿಯೆಂದರೆ ಪ್ರತಿವರ್ಷ 40– 50 ಸಾವಿರ ಅಂಧತ್ವ ಪ್ರಕರಣಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿವೆ.

ಪರಿಸ್ಥಿತಿ ಹೀಗಿರುವಾಗ ಕಾರ್ನಿಯಾ ಅಂದರೆ ಸಾಮಾನ್ಯವಾಗಿ ಕರೆಯುವಂತೆ ಕಣ್ಣು ದಾನದ ಅಗತ್ಯ ಬಹಳಷ್ಟಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಿ ಹೆಚ್ಚು ಹೆಚ್ಚು ಮಂದಿ ದಾನಿಗಳು ಮುಂದೆ ಬರುವಂತೆ ಪ್ರೇರೇಪಿಸಬೇಕಾದ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ತಿಳಿವಳಿಕೆಯನ್ನೂ ನೀಡಬೇಕಾಗುತ್ತದೆ.

ಒಬ್ಬ ವ್ಯಕ್ತಿ ಸಾವನ್ನಪ್ಪಿದಾಗ ತನ್ನ ಆರೋಗ್ಯಕರ ಕಣ್ಣನ್ನು ದಾನ ಮಾಡುವ ಪ್ರಕ್ರಿಯೆ ನೇತ್ರದಾನ. ಸಾವಿನ ನಂತರ ಕಣ್ಣುಗಳನ್ನು ದಾನ ಮಾಡುವುದು ಎಂದರೆ ಕಣ್ಣಿನ ಅಗತ್ಯವಿರುವ ಲಕ್ಷಾಂತರ ಜನರ ದೃಷ್ಟಿಗೆ ಬಹುದೊಡ್ಡ ಬೆಲೆ ಕಟ್ಟಲಾಗದಂತಹ ಉಡುಗೊರೆ ನೀಡಿದಂತೆ. ಆದರೂ ಇಲ್ಲೊಂದು ಮುಖ್ಯವಾದ ವಿಷಯವನ್ನು ಹೇಳಬೇಕಾಗುತ್ತದೆ. ಕಾರ್ನಿಯಾಗೆ ಸಂಬಂಧಿಸಿದಂತೆ ಬಂದ ಅಂಧತ್ವ ಮತ್ತು ನರ ಹಾನಿಯಂತಹ ಸಮಸ್ಯೆಯಿಂದ ಅಂಧತ್ವ ಬಂದವರಿಗೆ ಮಾತ್ರ ಈ ದಾನ ಮಾಡಿದ ಕಣ್ಣುಗಳಿಂದ ಪ್ರಯೋಜನವಾಗುತ್ತದೆಯೇ ಹೊರತು ಇತರ ಸಮಸ್ಯೆಗಳಿಂದ ಕಣ್ಣನ್ನು ಕಳೆದುಕೊಂಡವರಿಗೆ ಇದರಿಂದ ಅಂತಹ ಸದ್ಬಳಕೆ ಆಗಲಾರದು.

ಯಾರೆಲ್ಲಾ ನೇತ್ರದಾನ ಮಾಡಬಹುದು?

ಕಣ್ಣುಗಳನ್ನು ಸಾವಿನ ನಂತರ ಮಾತ್ರ ದಾನ ಮಾಡಲು ಸಾಧ್ಯ.

ಒಂದು ವರ್ಷ ವಯೋಮಾನಕ್ಕಿಂತ ಹೆಚ್ಚಿರುವ ಯಾವುದೇ ವ್ಯಕ್ತಿ ನೇತ್ರದಾನ ಮಾಡಬಹುದು. ಇದಕ್ಕೆ ಯಾವುದೇ ಲಿಂಗ/ ರಕ್ತದ ಗುಂಪು/ ಧರ್ಮ ಎಂಬ ಕಟ್ಟುಪಾಡುಗಳಿಲ್ಲ.

ಸಮೀಪ ದೃಷ್ಟಿದೋಷ, ದೂರದೃಷ್ಟಿ ದೋಷ ಅಥವಾ ಆಸ್ಟಿಗ್ಮ್ಯಾಟಿಸಂನಂತಹ ವಕ್ರೀಕಾರಕ ದೋಷ ಇರುವವರು ಅಥವಾ ಕೆಟರ‍್ಯಾಕ್ಟ್ (ಕಣ್ಣಿನ ಪೊರೆ) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರೂ ತಮ್ಮ ಕಣ್ಣುಗಳನ್ನು ದಾನ ಮಾಡಬಹುದಾಗಿದೆ.

ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾದಿಂದ ಬಳಲುತ್ತಿರುವವರಿಂದಲೂ ಕಣ್ಣು ದಾನ ಸಾಧ್ಯ.

ಆದರೆ, ಏಡ್ಸ್, ಹೆಪಟೈಟಿಸ್ ಬಿ ಅಥವಾ ಸಿ, ರೇಬೀಸ್, ಸೆಪ್ಟಿಕೇಮಿಯಾ, ಕಾಲರಾ, ಮೆನಿಂಜೈಟಿಸ್ ಹೊಂದಿರುವವರು ನೇತ್ರದಾನ ಮಾಡುವಂತಿಲ್ಲ.

ಸಾವಿನ ನಂತರ ಕಣ್ಣುಗಳನ್ನು ಸಂರಕ್ಷಿಸಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಸಾವು ಸಂಭವಿಸಿದ ತಕ್ಷಣ ಕಣ್ಣುಗಳನ್ನು ಮುಚ್ಚಬೇಕು ಮತ್ತು ತೇವಾಂಶವಿರುವ ಹತ್ತಿಯ ಬಟ್ಟೆಯನ್ನು ಕಣ್ಣುಗಳ ಮೇಲಿಡಬೇಕು.

ಫ್ಯಾನ್‌ಗಳನ್ನು ಬಂದ್‌ ಮಾಡಬೇಕು.

ಐಸ್ ಕ್ಯೂಬ್‌ಗಳನ್ನು ಹಾಕಿದ ಪಾಲಿಥೀನ್ ಕವರ್‌ ಅನ್ನು ಹಣೆಯ ಮೇಲಿಡಬೇಕು.

ತಕ್ಷಣವೇ ಹತ್ತಿರದ ನೇತ್ರಬ್ಯಾಂಕ್‌ಗೆ ಮಾಹಿತಿ ನೀಡಬೇಕು.

ಸಾವು ಸಂಭವಿಸಿದ 4–6 ಗಂಟೆಯೊಳಗೆ ಕಣ್ಣುಗಳನ್ನು ತೆಗೆಯಬೇಕು. ಕಣ್ಣು ಬ್ಯಾಂಕಿನ ತಂಡವು ಮನೆ ಅಥವಾ ಆಸ್ಪತ್ರೆಯಲ್ಲಿ ಕಣ್ಣುಗಳನ್ನು ತೆಗೆಯುತ್ತದೆ. ಕಣ್ಣುಗಳನ್ನು ತೆಗೆಯುವ ಪ್ರಕ್ರಿಯೆ 10–15 ನಿಮಿಷಗಳದ್ದಾಗಿರುತ್ತದೆ. ಕಸಿ ಮಾಡಲು ಅಗತ್ಯವಾಗಿರುವ ಕಾರ್ನಿಯಾ ಭಾಗವನ್ನು ಮಾತ್ರ ತೆಗೆಯಲಾಗುತ್ತದೆಯೇ ಹೊರತು ಇಡೀ ಕಣ್ಣಿನ ಗುಡ್ಡೆಯನ್ನು ತೆಗೆಯುವುದಿಲ್ಲ ಮತ್ತು ಇದರಿಂದ ಮುಖಚರ್ಯೆಗೆ ಯಾವುದೇ ತೊಂದರೆಯಾಗುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲೆಂದು ಸ್ವಲ್ಪ ಪ್ರಮಾಣದ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ. ಈ ಕಣ್ಣು ದಾನ ಮಾಡುವವರ ಮತ್ತು ಪಡೆದುಕೊಳ್ಳುವವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುತ್ತದೆ.

ಕಣ್ಣನ್ನು ಹೊರತೆಗೆದ 72 ಗಂಟೆಗಳೊಳಗೆ ಕಸಿಯನ್ನು ಮಾಡಲೇಬೇಕಾಗುತ್ತದೆ. ಒಂದು ಜೋಡಿ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗುತ್ತವೆ. ಒಂದು ವೇಳೆ ಕಸಿಗೆ ಸೂಕ್ತವಾಗದ ಕಣ್ಣುಗಳನ್ನು ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ.
ಮತ್ತೊಬ್ಬರ ದೃಷ್ಟಿಗೆ ದಾರಿದೀಪವಾಗುವಂತಹ ಕಣ್ಣನ್ನು ದಾನ ಮಾಡುವುದರಿಂದ ಉಂಟಾಗುವ ಸಂತೋಷಕ್ಕಿಂತ ಬೇರೆ ಯಾವುದೇ ಸಂತೋಷವಿರುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಕಟ್ಟುಕಥೆಗಳು ಮತ್ತು ತಪ್ಪುಕಲ್ಪನೆಗಳು ನಮ್ಮನ್ನು ಕಣ್ಣು ದಾನದಿಂದ ಹಿಂದೆ ಸರಿಯುವಂತೆ ಮಾಡುತ್ತಿವೆ.

ಕೆಲವು ತಪ್ಪು ಕಲ್ಪನೆಗಳು

ಮಿಥ್ಯ: ದಾನಿಗಳ ಕುಟುಂಬದವರಿಗೆ ಕಣ್ಣು ದಾನ ಒಂದು ಹೆಚ್ಚುವರಿ ಹೊರೆಯಾಗುತ್ತದೆ.

ಸತ್ಯ: ಇದೊಂದು ಪರೋಪಕಾರಿ ಪ್ರಕ್ರಿಯೆ ಮತ್ತು ಸಂಪೂರ್ಣ ಉಚಿತವಾಗಿ ನಡೆಸುವ ಪ್ರಕ್ರಿಯೆ.

ಮಿಥ್ಯ: ಅಂಧರು ತಮ್ಮ ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ.

ಸತ್ಯ: ಅಂಧತ್ವ ಯಾವಾಗಲೂ ಕಾರ್ನಿಯಾದಲ್ಲಿ ಇರುವಂತಹದ್ದಲ್ಲ. ಒಂದು ವೇಳೆ ಇತರೆ ಕಾರಣಗಳಿಂದ ಅಂಧತ್ವ ಬಂದಿದ್ದರೆ ಮತ್ತು ಕಾರ್ನಿಯಾ ಆರೋಗ್ಯವಾಗಿದ್ದರೆ ಅಂತಹವರು ಕಣ್ಣುಗಳನ್ನು ದಾನ ಮಾಡಬಹುದು.

ಮಿಥ್ಯ: ಕಾರ್ನಿಯಾ ಕಸಿಯು ಒಂದು ಪ್ರಾಯೋಗಿಕ ವಿಧಾನವಾಗಿದೆ.

ಸತ್ಯ: ವಿಶ್ವದಾದ್ಯಂತ ನಿಯಮಿತವಾಗಿ ನಡೆದುಕೊಂಡು ಬಂದಿರುವ ವಿಧಾನ ಇದಾಗಿದ್ದು, ಅತ್ಯಂತ ಹೆಚ್ಚು ಪ್ರಮಾಣದ ಯಶಸ್ವಿ ಫಲಿತಾಂಶವನ್ನು ನೀಡಿದೆ.

ಮಿಥ್ಯ: ಸಂಶೋಧನೆ ಉದ್ದೇಶಕ್ಕೆ ಕಣ್ಣುಗಳ ದಾನವನ್ನು ಮಾಡಲಾಗುತ್ತದೆಯೇ ಹೊರತು, ಇದರಿಂದ ಯಾರಿಗೂ ದೃಷ್ಟಿ ಬರುವುದಿಲ್ಲ.

ಸತ್ಯ: ಕಣ್ಣು ದಾನವು ಸಾವಿರಾರು ಜನಕ್ಕೆ ದೃಷ್ಟಿ ಬರಲು ನೆರವಾಗುತ್ತದೆ. ಅಂಧತ್ವದ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ವಿಧಾನಗಳ ಮೂಲಕ ಕಸಿ ಮಾಡಿದರೆ ಇದು ಸಾಧ್ಯವಾಗುತ್ತದೆ ಮತ್ತು ಹೊಸ ಹೊಸ ಸಂಶೋಧನೆಗಳಿಗೆ ನೆರವಾಗುತ್ತದೆ.

ಮಿಥ್ಯ: ನಾನು ನನ್ನ ಕಣ್ಣುಗಳನ್ನು ದಾನ ಮಾಡಿದರೆ, ಅವುಗಳನ್ನು ಕಸಿಗೆ ಅಗತ್ಯವಿರುವ ವ್ಯಕ್ತಿಗೆ ಮಾರಿಕೊಳ್ಳಲಾಗುತ್ತದೆ.

ಸತ್ಯ: ‘ಮಾನವ ಅಂಗಾಂಗ ಕಸಿ ಕಾಯ್ದೆಯು ಅಂಗಾಂಗಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಿದೆ. ಮಾನವನ ಕಣ್ಣುಗಳನ್ನು ಮಾರಾಟ ಮಾಡಿದರೆ ಅಥವಾ ಖರೀದಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಮಿಥ್ಯ: ಸಾವಿಗೆ ಮುನ್ನ ವಾಗ್ದಾನ ಮಾಡದೇ ಇರುವವರು ತಮ್ಮ ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ.

ಸತ್ಯ: ಸಾವಿಗೆ ಮುನ್ನ ವಾಗ್ದಾನ ಮಾಡದಿದ್ದರೂ ಸಾವಿನ ನಂತರ ಅವರ ಕುಟುಂಬ ಸದಸ್ಯರು ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಕಣ್ಣುಗಳನ್ನು ದಾನ ಮಾಡಬಹುದಾಗಿದೆ. ಆದಾಗ್ಯೂ, ಸಾವನ್ನಪ್ಪಿದವರು ಕಣ್ಣು ದಾನ ಮಾಡುವ ವಾಗ್ದಾನ ಮಾಡಿದ್ದರೂ ಕಣ್ಣನ್ನು ಪಡೆಯಲು ಅವರ ಕುಟುಂಬದ ಅನುಮತಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

ನಿಮ್ಮ ಕಣ್ಣುಗಳನ್ನು ದಾನ ಮಾಡಲು ಹಿಂಜರಿಕೆ ಬೇಡ. ಜಗತ್ತನ್ನು ನೋಡಲು ಮತ್ತೊಬ್ಬರಿಗೆ ನೆರವಾಗುವುದಕ್ಕಿಂತ ಮಹತ್ವದ ಕಾರ್ಯ ಬೇರೊಂದಿಲ್ಲ. ಇಂದೇ ನಿಮ್ಮ ಕಣ್ಣುಗಳನ್ನು ದಾನ ಮಾಡುವ ವಾಗ್ದಾನ ಮಾಡಿ. ಅದೇ ರೀತಿ ಕಣ್ಣುಗಳನ್ನು ದಾನ ಮಾಡುವಂತೆ ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಪ್ರೇರೇಪಿಸಿ.

(ಲೇಖಕಿ ಕನ್ಸಲ್ಟೆಂಟ್ ಆಫ್ತಾಲ್ಮೋಲಾಜಿಸ್ಟ್,
ಡಾ.ಅಗರ್‌ವಾಲ್ ಐ ಹಾಸ್ಪಿಟಲ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT