ಬುಧವಾರ, ಸೆಪ್ಟೆಂಬರ್ 29, 2021
20 °C

ಆಹಾರ ನಿದ್ರೆ ವ್ಯಾಯಾಮ...

ಡಾ. ವಿಜಯಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

Prajavani

ವ್ಯಾಯಾಮ ಮಾಡೋದ್ರಿಂದ, ಶರೀರಕ್ಕೆ ಬಲ ಬರತ್ತೆ, ಮಾಂಸಖಂಡಗಳು ದೃಢ ಆಗತ್ತೆ, ಶರೀರದ ಕಾಂತಿ ಹೆಚ್ಚತ್ತೆ, ಚರ್ಮ ಸುಕ್ಕುಗಟ್ಟೊದಿಲ್ಲ, ಮೈ ಹಗುರವಾಗಿರತ್ತೆ, ಆಲಸ್ಯ ಇರೋದೇ ಇಲ್ಲ...

***

‘ಅಮ್ಮಾ ಜಿಮ್‌ಗೆ ಹೋಗಿ ಬರ್ತೀನಮ್ಮಾ’ ಅಂತಾ ಮಗ ಹೊರಟ. ಅಮ್ಮಾ ‘ತಿಂಡಿ ತಿಂದುಕೊಂಡು ಹೋಗಬಾರದೇ’ ಅಂತಾ ಗೊಣಗುಟ್ಟುತ್ತಾ ಇದ್ಲು. ‘ಅಲ್ಲೇ ಹೋಗಿ ಪ್ರೋಟಿನ್ ಡ್ರಿಂಕ್ ಕುಡೀತೀನಮ್ಮಾ’ ಅಂದ ಮಗ. ಅಷ್ಟರಲ್ಲಿ ಮಗಳು ಬಂದು, ‘ನಾನು 11ರಿಂದ 12 ಗಂಟೆ ಬ್ಯಾಚ್ ಯೋಗಕ್ಲಾಸ್ಗೆ ಸೇರಿದ್ದೀನಮ್ಮಾ; ಅದಕ್ಕೆ ನಾನು 10 ಗಂಟೆ ಒಳಗೇ ತಿಂಡಿ ತಿನ್ನೋಣಾಂತ ಬಂದೆ’ ಎಂದಳು. ಇದನ್ನೆಲ್ಲಾ ಕೇಳುತ್ತಿದ್ದ ಅಜ್ಜ ‘ಈ ಮಕ್ಕಳು ಏನು ಮಾಡ್ತಾ ಇದ್ದಾರೆ, ಆಹಾರ, ವ್ಯಾಯಾ ಮಕ್ಕೆ ಸಂಬಂಧವೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸ್ತಾ ಇದ್ದಾರಲ್ಲಾ’ ಅಂತಾ ಯೋಚಿಸ್ತಾ ಇದ್ದ.

ಅಜ್ಜನ ಮುಖ ನೋಡಿ ಆತನ ಸೊಸೆ ಕೇಳಿದ್ಲು: ‘ಯಾಕೆ ಮಾವ ಏನಾಯ್ತು? ಏನೋ ಯೋಚ್ನೆ ಮಾಡ್ತಾ ಕೂತ್ಕೊಂಡ್ರಿ‘. ಅದಕ್ಕೆ ಅಜ್ಜ ‘ನೋಡಮ್ಮಾ ಈ ಮಕ್ಕಳು ಆಹಾರಕ್ಕೂ ವ್ಯಾಯಾಮಕ್ಕೂ ಸಂಬಂಧನೇ ಇಲ್ದೇ ಇರೋ ಹಾಗೆ ವರ್ತಿಸ್ತಾ ಇದ್ದಾರೆ; ಹಿಂದೆ ತಿಂದ ಆಹಾರ ಜೀರ್ಣವಾಗೋಕ್ಕೂ ಮೊದಲೇ ವ್ಯಾಯಾಮ ಮಾಡೋದು ಆರೋಗ್ಯಕ್ಕೆ ಹಾನಿಕರನಮ್ಮಾ, ನಿನ್ನ ಮಕ್ಕಳಿಗೆ ನೀನಾದ್ರೂ ಹೇಳು’ ಅಂತ ಬೇಸರದಿಂಲೇ ಹೇಳಿದರು.

ಅವರ ಗುರುಗಳು ಅವರಿಗೆ ವ್ಯಾಯಾಮದ ಬಗ್ಗೆ ತಿಳಿಸುವಾಗ ಹೇಳುತ್ತಿದ್ದ ಮಾತುಗಳ ನೆನಪಿನ ಅಂಗಳಕ್ಕೆ ಜಾರಿದ್ರು, ಅಜ್ಜ.

ವ್ಯಾಯಾಮ ಮಾಡೋದ್ರಿಂದ, ಶರೀರಕ್ಕೆ ಬಲ ಬರತ್ತೆ, ಮಾಂಸಖಂಡಗಳು ದೃಢ ಆಗತ್ತೆ, ಶರೀರದ ಕಾಂತಿ ಹೆಚ್ಚತ್ತೆ, ಚರ್ಮ ಸುಕ್ಕುಗಟ್ಟೊದಿಲ್ಲ, ಮೈ ಹಗುರವಾಗಿರತ್ತೆ, ಆಲಸ್ಯ ಇರೋದೇ ಇಲ್ಲ, ಯಾವಾಗಲೂ ಲವಲವಿಕೆ ಇರ್ತ್ತದೆ, ಶರೀರ ಅಂತರಂಗ ಮತ್ತು ಬಹಿರಂಗಗಳಲ್ಲೂ ಶುದ್ಧವಾಗಿರತ್ತೆ. ಸುಸ್ತು, ಆಯಾಸ, ವಿಪರೀತ ಬಾಯಾರಿಕೆ ಮುಂತಾದವುಗಳಿಲ್ಲದೆ ಉಷ್ಣವೂ ಅಲ್ಲದ, ಶೀತವೂ ಅಲ್ಲದ ಸಮಪ್ರಕೃತಿಯ ಶರೀರವನ್ನು ಹೊಂದಬಹುದು. ಮೇಷ್ಟ್ರ ಇನ್ನೊಂದು ಮಾತು ಅಂದ್ರೆ, ಸರಿಯಾಗಿ ವ್ಯಾಯಾಮ ಮಾಡಿದವನು ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಸೌಂದರ್ಯವನ್ನು ಹೊಂದಿರುತ್ತಾನೆ ಅಂತ.

ಗರಡಿಮನೆಗೆ ಹೋಗಿ ವ್ಯಾಯಾಮ ಮಾಡಿ ಅಲ್ಲಿದ್ದ ಮಣ್ಣು ಅಂದ್ರೆ ಅಳಲೇಕಾಯಿ, ತುಳಸಿ ಮುಂತಾದ ಸುಗಂಧದ್ರವ್ಯಗಳಿಂದ ತಯಾರಿಸಿದ ಮಣ್ಣನ್ನು ಮೈಗೆಲ್ಲಾ ಉಜ್ಜಿಸಿಕೊಂಡು, ಮೈಕೈ ಎಲ್ಲಾ ತುಳಿಸಿಕೊಂಡು ಬಂದ್ರೆ ಆಗ್ತಾ ಇದ್ದ ಆನಂದಾನೇ ಆನಂದ! ಅದಕ್ಕೆ ಅಪ್ಪ ಹೇಳುತ್ತಿದ್ದ ವೈದ್ಯಕೀಯ ಗುಣಗಳು. ವ್ಯಾಯಾಮ ಮಾಡೋವ್ರು ನಿತ್ಯ ಎಣ್ಣೆ ಹಚ್ಚಿ ಅಳಲೇಕಾಯಿ, ಅರಳಿ, ಅಲ, ಬಸರಿ ಮುಂತಾದ ಮರದ ತೊಗಟೆಗಳನ್ನು ನುಣ್ಣಗೆ ಪುಡಿ ಮಾಡಿಕೊಂಡು ಅದನ್ನು ಮೈಕೈಗೆ ತಿಕ್ಕಿ ಸ್ನಾನ ಮಾಡೋದ್ರಿಂದ ಬೆವರಿನಿಂದ ಬರುವಂತಹ ಅನೇಕ ಚರ್ಮರೋಗಗಳು ಬಾರದಂತೆ ತಡೆಗಟ್ಟಿ, ಚರ್ಮ ಥಳಥಳಾಂತ ಹೊಳೆಯುವಹಾಗೆ ಮಾಡತ್ತೇಂತ. ಅಲ್ಲದೆ ಪಾದಾಘಾತ ಮಾಡಿಸ್ಕೊಂಡೋನಿಗೆ ಯಾವ ರೋಗಾನೂ ಹತ್ತಿರ ಸುಳಿಯಲ್ಲಾಂತ. ಕಲ್ಲು ತಿಂದು ಕಲ್ಲು ಅರಗಿಸ್ಕೊಳ್ಳೋ ಶಕ್ತಿ ಬರತ್ತೇಂತ. ಆದರೆ ಯಾರು ದಿನಾ ವ್ಯಾಯಾಮ ಮಾಡ್ತಾರೋ ಅವರ ಆಹಾರದಲ್ಲಿ ತುಪ್ಪ, ಜಿಡ್ಡು, ಮಾಂಸ ಹಿತವಾಗಿ ಇರಬೇಕು, ಇಲ್ಲದಿದ್ದರೆ ನರಗಳಿಗೆ ಬಲ ಕಡಿಮೆ ಆಗಿ ನರರೋಗಗಳು ಬರತ್ತೆ. ವಿಪರೀತ ಹಸಿವೆ ಇದ್ದಾಗ, ಉಪವಾಸವಿದ್ದವನು ವ್ಯಾಯಾಮ ಮಾಡಿದ್ರೆ ಕ್ಷಯರೋಗ ಬರತ್ತೇಂತ. ಹಾಗೇಂತ ಹೊಟ್ಟೆ ತುಂಬಾ ಊಟ ಮಾಡಿ ಅದು ಜೀರ್ಣ ಆಗೋ ಮೊದಲೇ ವ್ಯಾಯಾಮ ಮಾಡಿದ್ರೆ ದೇಹದಲ್ಲಿ ಅದರಲ್ಲೂ ಹೊಟ್ಟೆಯಲ್ಲಿ ಗಡ್ಡೆಗಳು ಬೆಳೀಬಹುದು; ಅದನ್ನ ಗುಣ ಮಾಡೋದು ಕಷ್ಟ ಅಂತ.

ಅಷ್ಟೇ ಅಲ್ಲ, ಕೆಲವೊಮ್ಮೆ ಊಟ ಮಾಡಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇರಬಹುದು ಅಥವಾ ಮೈಕೈ ತಿರುಗ್ಸೋದ್ರಿಂದ ಹೊಟ್ಟೆ ಅದುಮಿದ ಹಾಗೆ ಆಗಿ ವಾಂತಿ ಕೂಡ ಆಗಬಹುದು, ಕರಳು ಸುತ್ತಿ ಹಾಕಿಕೊಳ್ಳಬಹುದೂ ಅಂತಾನೂ ಹೇಳ್ತಾ ಇದ್ರು. ಅಲ್ಲದೆ ನರಕ್ಕೆ ಪೆಟ್ಟಾದ್ರೆ ತಲೆಸುತ್ತು, ಸುಸ್ತು, ಆಹಾರ ಹೊಟ್ಟೆಯಲ್ಲಿರಬೇಕಾರದೆ ಎದೆಯ ವ್ಯಾಯಾ ಮ ಮಾಡಿದಾಗ ವಪೆ ಒತ್ತಿದಂತಾಗಿ ಪುಪ್ಪುಸಕ್ಕೆ ಏಟು ಬಿದ್ದು ಗುಣ ಮಾಡಕ್ಕೆ ಕಷ್ಟ ಆಗೋ ತರಹದ ಕೆಮ್ಮು, ದಮ್ಮು, ರಕ್ತವಾಂತಿ ಆಗೋದು – ಇಂಥವೆಲ್ಲಾ ಆಗಬಹುದು. ಬೇಸಿಗೆಕಾಲದಲ್ಲಿ ಮಳೆಗಾಲದಲ್ಲಿ ಮಿತವಾಗಿ ವ್ಯಾಯಾಮ ಮಾಡಬೇಕೇ ವಿನಾ ಎಲ್ಲಾ ಕಾಲದಲ್ಲೂ ಒಂದೇ ತರಹ ವ್ಯಾಯಾಮ ಮಾಡಿದರೆ ಶರೀರದ ಧಾತುಗಳು ಬಲ ಕಳೆದುಕೊಳ್ಳುತ್ತವೆ. ಹಾಗೇಂತ ಬಿಟ್ಟು ಬಿಟ್ಟು ವ್ಯಾಯಾಮ ಮಾಡಬಾರದು ಮತ್ತು ಶರೀರದ ಶಕ್ತಿಮೀರಿ ವ್ಯಾಯಾಮ ಮಾಡೋದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ. ವ್ಯಾಯಾಮ ಮಾಡೋವ್ರು ರಾತ್ರಿ ಹಿತವಾಗಿ, ಮಿತವಾಗಿ ಆಹಾರ ಸೇವನೆ ಮಾಡಿ ಸುಖವಾದ ನಿದ್ರೆ ಮಾಡಬೇಕು. ಅದು ವ್ಯಾಯಾಮದಿಂದ ದಣಿದಿರೋ ಮಾಂಸಖಂಡಗಳಿಗೆ ಚೇತರಿಸಿಕೊಳ್ಳೋದಕ್ಕೆ ಅವಕಾಶ ಮಾಡಿಕೊಟ್ಟಂತೆ. ವಿಶ್ರಾಂತಿ ಇಲ್ಲದ ದುಡಿತ ಶರೀರ, ಇಂದ್ರಿಯ, ಮನಸ್ಸುಗಳ ಆರೋಗ್ಯವನ್ನ ಹಾಳುಮಾಡತ್ತೆ.

ಹೀಗೆ ಯೋಚಿಸ್ತಾ ನಿದ್ದೆಗೆ ಜಾರಿದ್ರು ಅಜ್ಜ...

(ಲೇಖಕಿ ಆಯುರ್ವೇದವೈದ್ಯೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು