ಸೋಮವಾರ, ಡಿಸೆಂಬರ್ 5, 2022
25 °C

Health| ಆಪ್ತರಿಗೆ ಆಪರೇಷನ್‌ ಆರೈಕೆಯಲ್ಲಿರಲಿ ಪ್ರಿಪರೇಷನ್‌

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ವಯಸ್ಸಾದಂತೆ ಶರೀರದ ಅಂಗಾಂಗಗಳ ಕಾರ್ಯಕ್ಷಮತೆ ಕುಗ್ಗುವುದು ಸಹಜ. ನಮ್ಮ ಉತ್ತಮ ಜೀವನಶೈಲಿಯಿಂದ ನಾವು ಅದನ್ನು ಸ್ವಲ್ಪ ಮಟ್ಟಿಗೆ ಮುಂದೂಡಬಹುದಾದರೂ ನಮ್ಮ ನಿಯಂತ್ರಣಕ್ಕೆ ಬಾರದ ಕಾರಣಗಳಿಂದಾಗಿ ನಾವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಒಂದಿಷ್ಟು ಸಮಸ್ಯೆಗಳು ಔಷಧೋಪಚಾರದಿಂದ ಶಮನಗೊಂಡರೆ, ಇನ್ನು ಕೆಲವಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ಕಣ್ಣಿನ ಪೊರೆಯ ಸಮಸ್ಯೆ ವಯೋಸಹಜವಾದದ್ದು. ಅದನ್ನು ಕನ್ನಡಕ ಧರಿಸುವುದರಿಂದಾಗಲಿ ಅಥವಾ ಕಣ್ಣಿಗೆ ಔಷಧದ ಹನಿಗಳನ್ನು ಹಾಕುವುದರಿಂದಾಗಲಿ ಸಹಜ ಸ್ಥಿತಿಗೆ ತರಲಾಗದು. ಕೇವಲ ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನೊಳಗೆ ಮಸೂರವನ್ನು ಅಳವಡಿಸುವುದರಿಂದ ದೃಷ್ಟಿಯನ್ನು ಸರಿಪಡಿಸಬಹುದು. ನಂತರ ಸುಮಾರು ಒಂದು ತಿಂಗಳವರೆಗೂ ಕಣ್ಣಿಗೆ ಹನಿಗಳನ್ನು ಹಾಕಿಕೊಂಡು ಆರೈಕೆ ಮಾಡಿಕೊಳ್ಳಬೇಕು.

ಮಹಿಳೆಯರಲ್ಲಿ ವಿವಿಧ ಕಾರಣಗಳಿಗಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಯೂ ನಲವತ್ತೈದು-ಐವತ್ತು ವರ್ಷಗಳ ಬಳಿಕವೇ ಬೇಕಾಗಬಹುದು. ಇನ್ನು ಪುರುಷರಲ್ಲಿ ಪ್ರೋಸ್ಟೇಟ್ ಸಮಸ್ಯೆ ಕೂಡ ವಯೋಸಹಜವಾದದ್ದೇ. ಅರವತ್ತರ ಆಸುಪಾಸಿನಲ್ಲಿ ಈ ಗ್ರಂಥಿಯು ಗಾತ್ರದಲ್ಲಿ ದೊಡ್ಡದಾಗಿ ಮೂತ್ರವಿಸರ್ಜನಾ ನಾಳದ ಸುತ್ತಲೂ ಒತ್ತಡ ಹೇರುವುದರಿಂದ ಮೂತ್ರವಿಸರ್ಜನೆಗೆ ತೊಡಕನ್ನು ಉಂಟುಮಾಡಬಹುದು. ಸೌಮ್ಯಸ್ವರೂಪದ್ದಾದರೆ ಔಷಧೋಪಚಾರದಿಂದಲೇ ಗುಣಪಡಿಸಬಹುದು. ತೀವ್ರವಾದಾಗ ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅತ್ಯಗತ್ಯ. ಈ ವಯೋಸಹಜ ಸಮಸ್ಯೆಗಳಲ್ಲದೆ, ಕೆಲವೊಮ್ಮೆ ಸುಧಾರಿತ ಜೀವನಕ್ಕಾಗಿ ಹೃದಯ, ಬೆನ್ನುಮೂಳೆ, ಮಂಡಿ ಚಿಪ್ಪು, ಸೊಂಟದ ಮೂಳೆ – ಇವುಗಳ ಶಸ್ತ್ರಚಿಕಿತ್ಸೆ ಕೂಡ ಅರವತ್ತರ ನಂತರ ಅವಶ್ಯವೆನಿಸುತ್ತವೆ. ಹಿರಿಯರಲ್ಲಿ ಮೂಳೆಗಳು ಟೊಳ್ಳಾಗುವ ಕಾರಣದಿಂದಾಗಿ ಮನೆಯಲ್ಲಿ ಅಥವಾ ರಸ್ತೆಯಲ್ಲಿ ಬಿದ್ದಾಗ ಸಣ್ಣ ಪೆಟ್ಟುಗಳು ಕೂಡ ಮೂಳೆ ಮುರಿತಕ್ಕೆ ಕಾರಣವಾಗಬಹುದು. ಕೆಲವು ಬಗೆಯ ಮೂಳೆಮುರಿತಗಳನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ಸರಿಪಡಿಸುವುದು ಸಾಧ್ಯ.

ಯಾವುದೇ ವ್ಯಕ್ತಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅವನು/ಅವಳು ಸ್ವಲ್ಪ ಕಾಲ ನಿತ್ಯಕಾರ್ಯಗಳಿಗೆ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಹಿರಿಯರಲ್ಲಿ ಇದು ಸ್ವಲ್ಪ ಹೆಚ್ಚೇ ಎನ್ನಬಹುದು. ಶಸ್ತ್ರಚಿಕಿತ್ಸೆಗೆ ಮೊದಲು ಹಾಗೂ ನಂತರ ಕೆಲ ದಿನಗಳು ಆಸ್ಪತ್ರೆಯಲ್ಲಿ ಇರಬೇಕಾದ ಪರಿಸ್ಥಿತಿ ಇರುತ್ತದೆ. ಈ ದಿನಗಳಲ್ಲಿ ಅವರಿಗೆ ಊಟ-ಉಪಹಾರದ ಪೂರೈಕೆಯನ್ನು ಮನೆಯಿಂದಲೇ ಮಾಡಬೇಕಾಗುತ್ತದೆ. (ದೊಡ್ಡ ನಗರಗಳ ಆಸ್ಪತ್ರೆಗಳಲ್ಲಿ ರೋಗಿಗೆ ಊಟವನ್ನು ಆಸ್ಪತ್ರೆಯ ವತಿಯಿಂದಲೇ ಕೊಡುತ್ತಾರೆ, ಆದರೆ ಸಣ್ಣ ಪಟ್ಟಣಗಳಲ್ಲಿ ಈ ಪದ್ಧತಿ ಇನ್ನೂ ಚಾಲ್ತಿಯಲ್ಲಿಲ್ಲ). ಆಸ್ಪತ್ರೆಯಲ್ಲಿ ಹಗಲು-ರಾತ್ರಿ ಅವರ ಜೊತೆಯಲ್ಲಿರಲು ಒಬ್ಬಿಬ್ಬರು ಬೇಕಾಗುತ್ತದೆ. ಆ ಸಮಯದಲ್ಲಿ ಶಸ್ತ್ರಚಿಕಿತ್ಸೆಗೆ ಅನುಗುಣವಾಗಿ ಅವರನ್ನು ಹಾಸಿಗೆಯಿಂದ ಎಬ್ಬಿಸಲು, ನಡೆದಾಡಿಸಲು, ಶೌಚಾಲಯಕ್ಕೆ ಕರೆದೊಯ್ಯಲು ಇನ್ನೂ ಮೊದಲಾದ ಚಟುವಟಿಕೆಗಳಿಗೆ ಇನ್ನೊಬ್ಬರ ನೆರವು ಅತ್ಯಗತ್ಯ. ಔಷಧೋಪಚಾರವನ್ನು ಅಲ್ಲಿನ ಶುಶ್ರೂಷಕರೇ ಮಾಡಿದರೂ ಇವರ ಯಾವುದೇ ಸಮಸ್ಯೆಗಳನ್ನು ಶುಶ್ರೂಷಕರಿಗೆ ತಿಳಿಸಲು, ಔಷಧಗಳನ್ನು ತಂದುಕೊಡಲು, ವೈದ್ಯರು ಭೇಟಿಗೆ ಬಂದಾಗ ಅವರು ಕೊಡುವ ಮುಂದಿನ ಆದೇಶಗಳನ್ನು ಪಾಲಿಸಲು ಅವರ ಸಹಾಯಕ್ಕೊಬ್ಬರು ಅತ್ಯವಶ್ಯ.

ಆದರೆ ಇತ್ತೀಚಿನ ದಿನಗಳಲ್ಲಿ ಒಬ್ಬ ಅಥವಾ ಇಬ್ಬರೇ ಹಿರಿಯರು ಇರುವ ಮನೆಗಳು ಹೆಚ್ಚಾಗುತ್ತಿವೆ. ಮಕ್ಕಳು ಉದ್ಯೋಗಕ್ಕಾಗಿ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ದೂರದ ಊರುಗಳಲ್ಲಿ ನೆಲೆಸಿರುವುದು ಸರ್ವೇಸಾಮಾನ್ಯ. ಹತ್ತಿರದ ಆಪ್ತಸಂಬಂಧಿಗಳೂ ದೂರದ ಊರುಗಳಲ್ಲಿ ನೆಲೆಸಿರಬಹದು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಹಿರಿಯರಿಗೆ ಶಸ್ತ್ರಚಿಕಿತ್ಸೆ ಎಂದು ಗೊತ್ತಾದಾಗ ಮಕ್ಕಳು, ಮೊಮ್ಮಕ್ಕಳು ಊರಿಗೆ ದೌಡಾಯಿಸುತ್ತಾರೆ. ಇದರ ಜೊತೆಯಲ್ಲಿಯೇ ಹತ್ತಿರದ ಸಂಬಂಧಿಗಳು ಸಹ ಸೌಜನ್ಯಕ್ಕಾಗಿಯೋ ಅಥವಾ ನಿಜವಾದ ಕಾಳಜಿಯಿಂದಲೋ ರೋಗಿಯ ಭೇಟಿಗೆಂದು ಬರುವುದಿದೆ. ಈ ರೀತಿಯ ಭೇಟಿಯನ್ನು ಎಲ್ಲರೂ ಪರಸ್ಪರ ಚರ್ಚಿಸಿ, ಪೂರ್ವ ಯೋಜನೆಯನುಸಾರ ಮಾಡಿದರೆ ಒಳ್ಳೆಯದು. ಭೇಟಿ ಮಾಡಲೆಂದು ಬರುವ ಎಲ್ಲ ನೆಂಟರು ರೋಗಿಯು ಆಸ್ಪತ್ರೆಯಲ್ಲಿ ಇರುವಾಗಲೇ ಬಂದರೆ ಆಸ್ಪತ್ರೆಯ ಸಿಬ್ಬಂದಿಗಳು ಅಲ್ಲಿನ ನಿಯಮದ ಪ್ರಕಾರ ಎಲ್ಲರಿಗೂ ಅನುಮತಿ ಕೊಡದೇ ಇರಬಹುದು. ಹಾಗಾದಾಗ ಭೇಟಿ ಮಾಡಲು ಬಂದೂ ಉದ್ದೇಶ ಈಡೇರದಂತಾಗಬಹುದು. ಅಲ್ಲದೆ, ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ಬಳಿ ಬಹಳ ಜನರು ಸುಳಿಯುವುದೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ; ಸೋಂಕು ತಗಲುವ ಸಂಭವ ಹೆಚ್ಚಾಗಬಹುದು. ಆದ್ದರಿಂದ ಅವರು ಆಸ್ಪತ್ರೆಯಲ್ಲಿರುವಾಗ ಯಾರೆಲ್ಲ ಭೇಟಿ ಮಾಡಬೇಕು, ಎಷ್ಟು ದಿನದವರೆಗೆ ಇರಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿಕೊಂಡಿದ್ದರೆ ಒಬ್ಬರಾದ ಮೇಲೆ ಮತ್ತೊಬ್ಬರಂತೆ ಬಂದು ಹೋಗಬಹುದು. ಇಬ್ಬರು ಸಂಬಂಧಿಗಳು ಅವರವರ ಉದ್ಯೋಗ ಮತ್ತು ದಿನಚರಿಗೆ ತೊಂದರೆಯಾಗದಂತೆ ಎರಡು ದಿನ ಬಿಡುವು ಮಾಡಿಕೊಂಡು ರೋಗಿಯ ಸಹಾಯಕ್ಕೆ ಬಂದು ನಿಂತರೆ, ಮುಂದಿನ ಎರಡು ದಿನಗಳಿಗೆ ಇನ್ನಿಬ್ಬರು ಸಂಬಂಧಿಗಳು ತಯಾರಾಗಬಹುದು. ಇದರಿಂದ ಇಬ್ಬರಿಗೂ, ಅಂದರೆ ರೋಗಿಗೂ ಮತ್ತು ಭೇಟಿ ಮಾಡ ಬಂದವರಿಗೂ ಒಳ್ಳೆಯದೇ. ಆಸ್ಪತ್ರೆಯ ಸಿಬ್ಬಂದಿಗಳೊಡನೆ ಗದ್ದಲ-ಗಲಾಟೆಗಳೂ ಇರುವುದಿಲ್ಲ. ರೋಗಿಗೂ ಎಲ್ಲಾ ಸಮಯದಲ್ಲಿಯೂ ಒಬ್ಬರು ಜೊತೆಯಲ್ಲಿದ್ದಂತಾಗುತ್ತದೆ.

ಇನ್ನು ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕವೂ ಒಂದಿಷ್ಟು ದಿನಗಳವರೆಗೆ ಆ ಹಿರಿಯರಿಗೆ ಮತ್ತೊಬ್ಬರ ನೆರವು ಬೇಕಾಗಿರುತ್ತದೆ. ಆ ದಿನಗಳಲ್ಲಿಯೂ ಆಪ್ತ ಸಂಬಂಧಿಕರು ಯಾರು ಯಾರು, ಯಾವ ದಿನಗಳಲ್ಲಿ ಮತ್ತು ಎಷ್ಟು ದಿನಗಳವರೆಗೆ ಬಂದು ಅವರೊಡನಿದ್ದು ಅವರಿಗೆ ನೆರವಾಗಬಹುದು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡರೆ ಆರೈಕೆ ಸುಗಮವಾಗುತ್ತದೆ. ಮನೆಯಲ್ಲಿಯೂ ಎಲ್ಲರೂ ಒಟ್ಟೊಟ್ಟಿಗೇ ಬಂದರೆ ಅದು ಒಂದಿಷ್ಟು ಇರಿಸು ಮುರುಸು –ಗೊಂದಲಕ್ಕೆ ಕಾರಣವಾಗಬಹುದು. ಅಲ್ಲದೆ, ಈ ದಿನಗಳಲ್ಲಿ ಪ್ರತಿಯೊಬ್ಬರೂ ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿರುವುದರಿಂದ ಅವರ ನಿತ್ಯದ ಕೆಲಸಗಳಿಗೂ ತೊಡಕಾಗದಂತೆ ಎರಡು ಅಥವಾ ಮೂರು ದಿನಗಳಿಗಾಗಿ ಈ ಬಗ್ಗೆ ಯೋಜನೆಯನ್ನು ಹಾಕಿಕೊಳ್ಳಬಹುದು. ಈಗ ಎಲ್ಲರ ಬಳಿಯೂ ಮೊಬೈಲ್ ಫೋನ್ ಇರುವುದರಿಂದ ಪರಸ್ಪರ ಮಾತನಾಡಿಕೊಂಡು ಪೂರ್ವ ಯೋಜನೆ ಮಾಡುವುದು ಸುಲಭ ಸಾಧ್ಯವೂ ಹೌದು. ಇದರಿಂದ ಎಲ್ಲರ ಸಮಯವೂ ಸದುಪಯೋಗವಾಗುತ್ತದೆ; ರೋಗಿಗೆ ಗರಿಷ್ಠ ಬೆಂಬಲ ಮತ್ತು ಆರೈಕೆಗಳೂ ದೊರೆತಂತಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು