ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಮಧುಮೇಹಿಗಳಲ್ಲಿ ಹೃದ್ರೋಗ

ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಮೂರೂವರೆ ಪಟ್ಟು ಅಧಿಕ
–ಡಾ. ಕಿರಣ್ ವಿ. ಎಸ್‌.
Published 5 ಫೆಬ್ರುವರಿ 2024, 22:37 IST
Last Updated 5 ಫೆಬ್ರುವರಿ 2024, 22:37 IST
ಅಕ್ಷರ ಗಾತ್ರ

ನಮ್ಮ ದೇಶದ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಮತ್ತು ಹೃದ್ರೋಗ ಪ್ರಮುಖವಾದುವು. ಇವೆರಡಕ್ಕೂ ಪರಸ್ಪರ ಸಂಬಂಧವೂ ಇದೆ. ಮಧುಮೇಹಿಗಳಲ್ಲಿ ಹೃದ್ರೋಗದ ಸಾಧ್ಯತೆ ಸಾಮಾನ್ಯ ಜನರಿಗಿಂತಲೂ ಸಾಕಷ್ಟು ಹೆಚ್ಚು. ಹೃದ್ರೋಗ ಎಂದರೆ ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯದ ಕಾರ್ಯವೈಫಲ್ಯ ಮೊದಲಾದುವು. ಮಧುಮೇಹಿಗಳಲ್ಲಿ ಈ ಎಲ್ಲ ಸಮಸ್ಯೆಗಳೂ ಸಾಮಾನ್ಯ ಜನರಿಗಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಮಧುಮೇಹಿಗಳಲ್ಲಿ ರಕ್ತದೊತ್ತಡದ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು; ಹೃದಯಾಘಾತದ ಪ್ರಮಾಣ ಶೇ. 58 ಅಧಿಕ; ಹೃದಯದ ಕಾರ್ಯವೈಫಲ್ಯ ಶೇ 12 ಹೆಚ್ಚು; ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹತ್ತು ಪಟ್ಟು ಹೆಚ್ಚಾಗಿರುತ್ತದೆ ಎಂದು ಕಂಡುಬಂದಿದೆ. ಅಂತೆಯೇ, ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಮಧುಮೇಹಿಗಳಲ್ಲಿ ಮೂರೂವರೆ ಪಟ್ಟು ಅಧಿಕವಾಗಿರುತ್ತದೆ.

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಸಕ್ಕರೆಯ ಮಟ್ಟ ಏರಿದಂತೆಲ್ಲ ರಕ್ತನಾಳಗಳಿಗೆ ಹಾನಿಯಾಗುತ್ತದೆ; ನಾಜೂಕಾದ ನರತಂತುಗಳು ಹಾಳಾಗುತ್ತವೆ; ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಚಯವಾಗಿ, ನಾಳದ ಆಂತರಿಕ ವ್ಯಾಸ ಕಿರಿದಾಗುತ್ತದೆ. ಇದರಿಂದ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ದೇಹದಲ್ಲಿ ರಕ್ತವನ್ನು ಎಲ್ಲ ಅಂಗಗಳಿಗೂ ತಲುಪಿಸುವ ಹೊಣೆ ಹೃದಯದ್ದು. ಘಾಸಿಯಾದ ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಹರಿಯುವುದಿಲ್ಲ; ಅದನ್ನು ಅಧಿಕ ಒತ್ತಡದ ಮೂಲಕ ಮುಂದಕ್ಕೆ ಸಾಗಿಸಬೇಕಾಗುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗೆಯೇ ಮುಂದುವರೆದು ರಕ್ತನಾಳಗಳು ಶಿಥಿಲವಾದರೆ ಆಯಾ ಅಂಗಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ. ಹೃದಯದ ಕೆಲಸಕ್ಕೆ ಬೇಕಾದ ರಕ್ತವನ್ನು ಸರಬರಾಜು ಮಾಡುವ ಕರೋನರಿ ರಕ್ತನಾಳಗಳು ಕೂಡ ಮಧುಮೇಹದ ಈ ಪರಿಣಾಮವನ್ನು ಅನುಭವಿಸುತ್ತವೆ. ಹೀಗೆ, ಒಂದೆಡೆ ಇತರ ರಕ್ತನಾಳಗಳ ಸಮಸ್ಯೆಯಿಂದ ಹೃದಯದ ಮೇಲೆ ಅಧಿಕ ಒತ್ತಡ; ಮತ್ತೊಂದೆಡೆ ಸ್ವಯಂ ಹೃದಯದ ರಕ್ತನಾಳಗಳ ಶೈಥಿಲ್ಯ – ಇವೆರಡೂ ಸೇರಿ ಹೃದಯದ ಒಟ್ಟಾರೆ ಕಾರ್ಯಕ್ಷಮತೆ ಕುಂಠಿತವಾಗುತ್ತದೆ.

ಮಧುಮೇಹಿಗಳಲ್ಲಿ ಹೃದ್ರೋಗದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ತಜ್ಞರು ಕೆಲವು ಸೂತ್ರಗಳನ್ನು ಶಿಫಾರಸ್ಸು ಮಾಡಿದ್ದಾರೆ. ಇವುಗಳ ಪಾಲನೆಯಿಂದ ಮಧುಮೇಹಿಗಳು ತಮ್ಮ ಹೃದಯವನ್ನು ಸುರಕ್ಷಿತವಾಗಿರಸಬಹುದು.

• ಹೃದಯದ ಸಮಸ್ಯೆ ಇರುವ ಹಲವಾರು ರೋಗಿಗಳಲ್ಲಿ ಮಧುಮೇಹ ಇರುವುದು ಪತ್ತೆಯಾಗದೇ ಇರಬಹುದು. ಅಂದರೆ, ಹೃದ್ರೋಗವೇ ಮಧುಮೇಹದ ಮೊದಲ ಚಿಹ್ನೆಯಾಗಿ ಕಾಣಬಹುದು. ಹೀಗಾಗಿ, ಹೃದ್ರೋಗ ಇರುವ ಪ್ರತಿಯೊಬ್ಬರೂ ಮಧುಮೇಹ ಪತ್ತೆಮಾಡುವ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

• ಮಧುಮೇಹದ ಪ್ರತಿಯೊಬ್ಬ ರೋಗಿಯೂ ಕಾಲಕಾಲಕ್ಕೆ ಹೃದಯದ ಕಾರ್ಯಕ್ಷಮತೆಯ ತಪಾಸಣೆ ಮಾಡಿಸುವುದು ಅಗತ್ಯ. ಹೃದ್ರೋಗದ ಚಿಹ್ನೆಗಳಿಗಾಗಿ ಕಾಯುವುದು ಸೂಕ್ತವಲ್ಲ. ಯಾವುದೇ ಕಾಯಿಲೆಯನ್ನಾದರೂ ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭ, ಸೋವಿ, ಮತ್ತು ಸರಳವಾಗುತ್ತದೆ.

• ಮಧುಮೇಹ ನಿಯಂತ್ರಣದಲ್ಲಿ ಇಲ್ಲದ ಪ್ರತಿಯೊಬ್ಬ ರೋಗಿಯನ್ನೂ ಹೃದ್ರೋಗಿಯ ರೀತಿಯಲ್ಲೇ ಪರಿಗಣಿಸಬೇಕು. ಕರೋನರಿ ರಕ್ತನಾಳಗಳ ತಪಾಸಣೆ ಮತ್ತು ಹೃದಯದ ಕಾರ್ಯಕ್ಷಮತೆಯ ಪರೀಕ್ಷೆ ಅತ್ಯಗತ್ಯ.

• ಮಧುಮೇಹದಲ್ಲಿ ಘಾಸಿಗೊಳಗಾಗುವ ಮತ್ತೊಂದು ಪ್ರಮುಖ ಅಂಗ ಮೂತ್ರಪಿಂಡಗಳು. ಶರೀರದ ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಮೂತ್ರಪಿಂಡಗಳ ಪಾತ್ರ ಹಿರಿದು. ಮಧುಮೇಹದ ಕಾರಣದಿಂದ ಮೂತ್ರಪಿಂಡಗಳು ಹಾಳಾದರೆ, ಅದರ ಪರೋಕ್ಷ ಪರಿಣಾಮವನ್ನು ಹೃದಯವೇ ಅನುಭವಿಸಬೇಕು.

• ಮಧುಮೇಹದ ಔಷಧಗಳ ಜೊತೆಗೆ ಹೃದಯದ ಸಮಸ್ಯೆಗಳನ್ನು ನಿರ್ವಹಿಸುವ ಔಷಧಗಳನ್ನೂ ಇಂತಹ ರೋಗಿಗಳು ಸೇವಿಸಬೇಕು. ಕೇವಲ ಮಧುಮೇಹದ ಔಷಧಗಳನ್ನು ಮಾತ್ರ ಸೇವಿಸುವುದು ಹೃದ್ರೋಗಕ್ಕೆ ಪರಿಹಾರವಲ್ಲ.

• ಬೊಜ್ಜು ಅಥವಾ ಅಧಿಕ ಮೈತೂಕ ಹೃದಯ ಕಾಯಿಲೆಗಳಿಗೆ ಮತ್ತೊಂದು ಪ್ರಮುಖ ಕಾರಣ ಮಧುಮೇಹಿಗಳಲ್ಲಿ ಬೊಜ್ಜಿನ ಸಾಧ್ಯತೆ ಸಾಮಾನ್ಯ ಜನರಿಗೆ ಹೋಲಿಸಿದರೆ ಎರಡರಿಂದ ಮೂರು ಪಟ್ಟು ಹೆಚ್ಚು. ಬೊಜ್ಜಿನ ನಿಯಂತ್ರಣ ಮಧುಮೇಹದ ಮೇಲೆ ಮತ್ತು ಹೃದ್ರೋಗದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಸರಿಯಾದ ಮೈತೂಕವನ್ನು ಹೊಂದುವ ಪ್ರತಿಯೊಂದು ಸುರಕ್ಷಿತ ವಿಧಾನವನ್ನೂ ಅನುಸರಿಸಲು ಮಧುಮೇಹಿಗಳನ್ನು ಪ್ರೋತ್ಸಾಹಿಸಬೇಕು.

• ನಿಯಮಿತ ವ್ಯಾಯಾಮ ಮಧುಮೇಹದ ನಿಯಂತ್ರಣದಲ್ಲಿ ಔಷಧ ಚಿಕಿತ್ಸೆಯಷ್ಟೇ ಪರಿಣಾಮಕಾರಿ. ಸಮಂಜಸ ಆಹಾರ, ಸರಿಯಾದ ಔಷಧ ಚಿಕಿತ್ಸೆ ಮತ್ತು ನಿಯಮಿತ ವ್ಯಾಯಾಮಗಳು ಮಧುಮೇಹ ಚಿಕಿತ್ಸೆಯ ಮೂರು ಅತ್ಯಗತ್ಯ ಅಂಗಗಳು. ಇವುಗಳಲ್ಲಿ ಒಂದು ಭಾಗ ಮುಕ್ಕಾದರೂ ಮಧುಮೇಹ ನಿಯಂತ್ರಣ ಅಪೂರ್ಣವೆಂದೇ ಅರ್ಥ.

• ಧೂಮಪಾನ ಮತ್ತು ಮದ್ಯಪಾನ ಮಧುಮೇಹದ ನಿಯಂತ್ರಣವನ್ನು ಏರುಪೇರಾಗಿಸುತ್ತವೆ. ಇವೆರಡೂ ಪ್ರತ್ಯೇಕವಾಗಿ ಹೃದ್ರೋಗಕ್ಕೆ ಕಾರಣವಾಗಬಲ್ಲವು. ಹೀಗಾಗಿ, ಮಧುಮೇಹಿಗಳು ಧೂಮಪಾನ ಮತ್ತು ಮದ್ಯಪಾನಗಳಿಂದ ದೂರ ಉಳಿಯುವುದು ತಮ್ಮ ಹೃದಯಕ್ಕೆ ನೀಡಬಹುದಾದ ಕಾಣಿಕೆ.

• ಮಾನಸಿಕ ಸಂತುಲನವನ್ನು ಕಾಯ್ದುಕೊಳ್ಳುವುದು ಮಧುಮೇಹಿ ಹೃದ್ರೋಗಿಗಳಲ್ಲಿ ಬಹಳ ಮುಖ್ಯ. ಮನಸ್ಸು ವ್ಯಗ್ರವಾದಷ್ಟೂ ಶರೀರದಲ್ಲಿ ಹಾರ್ಮೋನುಗಳ ಮಟ್ಟ ಏರುಪೇರಾಗುತ್ತದೆ. ಇದರ ಪರೋಕ್ಷ ಪರಿಣಾಮ ರಕ್ತದಲ್ಲಿನ ಸಕ್ಕರೆಯ ಅಂಶದ ಮೇಲೆ, ಹೃದಯದ ಗತಿಯ ಮೇಲೆ ಬೀಳುತ್ತದೆ; ರಕ್ತನಾಳಗಳಲ್ಲಿನ ಒತ್ತಡ ಏರುತ್ತದೆ. ಇಂತಹ ಒತ್ತಡಗಳು ಪ್ರತಿದಿನವೂ ಹಲವು ಬಾರಿ ಆಗುತ್ತಿದ್ದರೆ ಹೃದಯಕ್ಕೆ ಹಾನಿ ಖಚಿತ. ಮಧುಮೇಹಿಗಳು ನಿಯಮಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಮೂಲಕ ತಮ್ಮ ಮನೋವ್ಯಾಪಾರಗಳನ್ನು ಹತೋಟಿಯಲ್ಲಿ ಇಡಬೇಕು.

ಮಧುಮೇಹ ಮತ್ತು ಹೃದ್ರೋಗದ ಅವಿನಾಭಾವ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅವೆರಡನ್ನೂ ಚೆನ್ನಾಗಿ ನಿಯಂತ್ರಿಸಬಹುದು. ಇವೆರಡಕ್ಕೂ ಉತ್ತಮ ಔಷಧಗಳು ಇಂದು ಲಭ್ಯವಿವೆ. ಸೂಕ್ತ ಆಹಾರ, ಔಷಧ, ಮತ್ತು ವ್ಯಾಯಾಮಗಳ ನೆರವಿನಿಂದ ಜಗತ್ತಿನಲ್ಲಿ ಲಕ್ಷಾಂತರ ಮಧುಮೇಹಿಗಳು ತಮ್ಮ ಸಮಸ್ಯೆಯನ್ನು ಸರಾಗವಾಗಿ ನಿರ್ವಹಿಸುತ್ತಿದ್ದಾರೆ. ಇದು ಎಲ್ಲ ಮಧುಮೇಹಿಗಳೂ ತಮ್ಮ ದೈನಂದಿನ ಬದುಕಿನಲ್ಲಿ ಅನುಸರಿಸಬಹುದಾದ ಆಶಾದಾಯಕ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT