ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆಗಳು ದೇಹದ ಮೂಲಕ ವ್ಯಕ್ತಗೊಳ್ಳುವುದು ಹೇಗೆ?

Last Updated 4 ಡಿಸೆಂಬರ್ 2020, 19:50 IST
ಅಕ್ಷರ ಗಾತ್ರ

ಚೆನ್ನಾಗಿ ಬಾಳಿದವರು ದೀನ ಸ್ಥಿತಿಗೆ ಇಳಿದಾಗ ಅಥವಾ ಪುಸ್ತಕ ಓದುವಾಗ, ದೃಶ್ಯಮಾಧ್ಯಮವನ್ನು ನೋಡುವಾಗ ಅಲ್ಲಿನ ಪಾತ್ರಗಳು ಅಸಹಾಯಕತೆಯಿಂದ ನೋವನ್ನು ಅನುಭವಿಸುವಾಗ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತನಾಗುತ್ತೇನೆ. ಇದೊಂದು ಮಾನಸಿಕ ಸಮಸ್ಯೆಯೇ?

-ಶಂಕರೇಗೌಡ, ಮಂಡ್ಯ

ನಿಮ್ಮ ಬಗೆಗೆ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚುತ್ತೇನೆ. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮತ್ತು ಸುತ್ತಲೂ ನಡೆದಿದ್ದ ಘಟನೆಗಳು ನಮ್ಮೊಳಗೆ ಹಲವಾರು ಭಾವನೆಗಳನ್ನು ಬಿತ್ತಿ ಹೋಗಿರುತ್ತವೆ. ವಯಸ್ಕರಾದಂತೆ ಬಾಲ್ಯದ ಘಟನೆಗಳು ನೆನಪಾಗದಿದ್ದರೂ ಕೆಲವೊಂದು ಅನುಭವಗಳು ಮೆದುಳಿನಲ್ಲಿ ದಾಖಲಾಗಿರುವ ಭಾವನೆಗಳನ್ನು ಕೆರಳಿಸುತ್ತವೆ. ಕಣ್ಣೀರು, ಧ್ವನಿ ನಡುಗುವುದು, ಗಂಟಲು ಕಟ್ಟುವುದು ಮುಂತಾದ ದೈಹಿಕ ಸೂಚನೆಗಳ ಮೂಲಕ ನೀವು ಅಂತಹ ಭಾವನೆಗಳನ್ನು ಹೊರಹಾಕುತ್ತಿರುತ್ತೀರಿ. ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಮನೋಚಿಕಿತ್ಸಕರ ಸಹಾಯ ಪಡೆಯಬೇಕಾಗುತ್ತದೆ. ಆದರೆ ನಿಮ್ಮದು ಖಂಡಿತಾ ಮಾನಸಿಕ ಸಮಸ್ಯೆಯಲ್ಲ. ವಯಸ್ಕರು ಸಾರ್ವಜನಿಕವಾಗಿ ದುಃಖಿಸುವುದು ದೌರ್ಬಲ್ಯ ಎನ್ನುವ ತಪ್ಪುನಂಬಿಕೆಯಿದೆ. ಹಾಗಾಗಿ ನಿಮಗೆ ಎಲ್ಲರೆದುರು ಕಣ್ಣೀರಿಡುವುದು ಮುಜುಗರ ಎನ್ನಿಸಿದರೆ ಖಾಸಗಿಯಾಗಿ ಮಾಡಿ. ತೀವ್ರವಾಗಿ ಭಾವನೆಗಳು ಕಾಡಿದರೆ ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹದ ಕಡೆ ಗಮನಹರಿಸಿ ಸಡಿಲಗೊಳಿಸಿದರೆ ಒತ್ತಡ ತಾನಾಗಿಯೇ ಕಡಿಮೆಯಾಗುತ್ತದೆ.

***

25ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಪ್ರೇಯಸಿಯೊಂದಿಗೆ ಜಗಳವಾದಾಗಲೆಲ್ಲಾ ಮಾನಸಿಕ ಕಿರಿಕಿರಿಯಾಗಿ ಓದಲು ಮನಸ್ಸಾಗದೆ ಜೀವನದಲ್ಲಿ ಜಿಗುಪ್ಸೆಯಾಗುತ್ತದೆ. ಅವಳು ಒಳ್ಳೆಯವಳೇ. ಜಗಳವಾಡಬಾರದು ಎಂದುಕೊಂಡರೂ ಅವು ನಡೆದೇಹೋಗುತ್ತವೆ. ಇದರಿಂದ ಹೊರಬರುವುದು ಹೇಗೆ?

-ಹೆಸರಿಲ್ಲ, ಶಿವಮೊಗ್ಗ

ಪತ್ರದಲ್ಲಿ ಜಗಳ ಎನ್ನುವ ಶಬ್ದ ಬಳಸಿದ್ದೀರಲ್ಲವೇ? ನೀವಿಬ್ಬರೂ ಜಗಳ ಮತ್ತು ಭಿನ್ನಾಭಿಪ್ರಾಯಗಳ ನಡುವಿನ ತೆಳುವಾದ ಗೆರೆಯನ್ನು ಗುರುತಿಸುವುದನ್ನು ಕಲಿಯಬೇಕು. ಯಾವುದಾದರೂ ವಿಷಯದಲ್ಲಿನ ಭಿನ್ನಾಭಿಪ್ರಾಯದಿಂದ ಶುರುವಾಗುವುದು ಗೊತ್ತಿಲ್ಲದಂತೆಯೇ ಒಬ್ಬರನ್ನೊಬ್ಬರು ಮಾನಸಿಕವಾಗಿ ಗಾಸಿಗೊಳಿಸುವ ಜಗಳವಾಗುತ್ತದೆ. ಹಾಗಾಗಿ ಇಬ್ಬರೂ ಮೊದಲು ಚರ್ಚಿಸಬೇಕಾದ ವಿಚಾರಗಳು ಇವು. 1. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ವೈಯುಕ್ತಿಕ ದೂಷಣೆಯನ್ನು ಮಾಡದಿರುವುದು ಹೇಗೆ? 2. ಒಬ್ಬರು ಮಾಡುವ ವೈಯುಕ್ತಿಕ ದೂಷಣೆಗೆ ಇನ್ನೊಬ್ಬರು ದೂಷಣೆ ಮಾಡದೆ ಪ್ರತಿಕ್ರಿಯೆ ತೋರಿಸುವುದು ಹೇಗೆ? 3. ದೂಷಣೆಯಿಲ್ಲದೆ ಭಿನ್ನಾಭಿಪ್ರಾಯಗಳನ್ನು ಚರ್ಚಿಸುವುದು ಹೇಗೆ? 4. ದೂಷಣೆಯಿಂದ ಆಗಿರುವ ಮಾನಸಿಕ ಗಾಯಗಳನ್ನು ಆದಷ್ಟು ಬೇಗ ವಾಸಿಮಾಡಿಕೊಳ್ಳುವುದು ಹೇಗೆ? ಉತ್ತರವನ್ನು ಪ್ರೇಯಸಿಗೆ ತೋರಿಸಿ ಚರ್ಚೆಮಾಡಿ, ಜಗಳವನ್ನಲ್ಲ!

***

ಓದಿದ್ದು ಅರ್ಥಮಾಡಿಕೊಳ್ಳುವುದು ಹೇಗೆ? ಕೆಟ್ಟಚಟಗಳನ್ನು ನಿಯಂತ್ರಿಸುವುದು ಹೇಗೆ?

-ಮಲ್ಲಿಕಾರ್ಜುನ, ಊರಿನ ಹಸರಿಲ್ಲ.

ಮೆದುಳಿಗೆ ಯಾವ ವಿಚಾರ ಆಸಕ್ತಿದಾಯಕ ಎನ್ನಿಸುತ್ತದೆಯೋ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತದೆ. ಹಾಗಾಗಿ ಓದುವ ವಿಷಯಗಳಲ್ಲಿ ನಿಜವಾದ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಯಾವುದಕ್ಕೆ ನೀವು ಕೆಟ್ಟಚಟ ಎಂದು ಹೇಳುತ್ತಿದ್ದೀರೋ ಗೊತ್ತಾಗುತ್ತಿಲ್ಲ. ಹಸ್ತಮೈಥುನದ ಕುರಿತು ನೀವು ಹೇಳುತ್ತಿದ್ದರೆ ಈಗಾಗಲೇ ಸಾಕಷ್ಟು ಬಾರಿ ಉತ್ತರ ನೀಡಲಾಗಿದೆ.

***

ಮನಸ್ಸನ್ನು ಒಂದೇ ಕಡೆ ಏಕಾಗ್ರಗೊಳಿಸಲು ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ಆದರೂ ಅದು ವಿಚಲಿತವಾಗುತ್ತಿದೆ. ಏಕಾಗ್ರತೆ ಪಡೆಯುವುದು ಹೇಗೆ?

-ವೆಂಕಿ, ಊರಿನ ಹೆಸರಿಲ್ಲ.

ನಿಮಗೆ ಏಕಾಗ್ರತೆ ಬೇಕಾಗಿರುವುದು ಯಾವ ವಿಚಾರಕ್ಕಾಗಿ? ಮನಸ್ಸು ವಿಚಲಿತಗೊಳ್ಳುವುದು ಅಂದರೆ ಬೇರೆ ಯಾವುದರಲ್ಲಿ ಅದು ತಲ್ಲೀನವಾಗುತ್ತದೆ? ನಿಮ್ಮ ಸಮಸ್ಯೆಯನ್ನು ನೇರವಾಗಿ ಹೇಳದೆ ಸೂಚ್ಯವಾಗಿ ತಿಳಿಸಿದಾಗ ಉತ್ತರಿಸುವುದು ಕಷ್ಟ. ಏಕಾಗ್ರತೆ ಎನ್ನುವುದು ಎಲ್ಲರಲ್ಲೂ ಇರುವ ಸಹಜ ಶಕ್ತಿ. ನೀವೂ ಸಾಕಷ್ಟು ವಿಚಾರಗಳಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬಲ್ಲಿರಿ. ಅಂತಹ ವಿಷಯಗಳಲ್ಲಿ ನಿಮಗೆ ತೀವ್ರ ಆಸಕ್ತಿಯಿದೆ ಎಂಬುದನ್ನು ಗಮನಿಸಿ. ಇದರ ಅರ್ಥ ಏಕಾಗ್ರತೆಯ ಅಗತ್ಯವಿರುವಲ್ಲಿ ಆಳವಾದ ಆಸಕ್ತಿಯನ್ನು ಮೂಡಿಸಿಕೊಳ್ಳುವುದು ಹೇಗೆ ಎಂದು ನೀವು ಚಿಂತಿಸಬೇಕಾಗಿದೆ.

***

28ರ ಯುವಕ. ಚಿಕ್ಕ ವಯಸ್ಸಿನಿಂದ ಸುಂದರ ಹುಡುಗರನ್ನು ಕಂಡರೆ ಇಷ್ಟವಾಗುತ್ತದೆ. ನನ್ನ ಗೆಳೆಯ ಮದುವೆಯಾದರೆ ಸರಿಹೋಗುತ್ತದೆ ಎನ್ನುತ್ತಿದ್ದಾನೆ. ಇದು ನಿಜವೇ?

-ಹೆಸರು, ಊರು ತಿಳಿಸಿಲ್ಲ.

ನಿಮ್ಮ ಲೈಂಗಿಕ ಆಯ್ಕೆಗಳ ಬಗೆಗೆ ಸ್ಪಷ್ಟತೆಯಿಲ್ಲದೆ ಮದುವೆಯಾಗುವ ಪ್ರಯೋಗ ಮಾಡುವುದು ಹೆಚ್ಚಿನ ಸಂಕಷ್ಟಗಳಿಗೆ ಮುನ್ನುಡಿಯಾಗಬಹುದು. ನಿಮ್ಮ ಲೈಂಗಿಕತೆಯ ಹಗಲುಗನಸು, ಕಲ್ಪನೆಗಳು ಹುಡುಗರ ಬಗೆಗೆ ಮಾತ್ರ ಇದ್ದರೆ ನೀವು ಸಲಿಂಗ ಪ್ರೇಮಿಯಾಗಿರಬಹುದು. ಅಥವಾ ನಿಮ್ಮ ಲೈಂಗಿಕ ಕಲ್ಪನೆಗಳಲ್ಲಿ ಹುಡುಗ– ಹುಡುಗಿಯರಿಬ್ಬರಿಗೂ ಸಮಾನ ಸ್ಥಾನವಿದ್ದರೆ ನೀವು ಉಭಯಲಿಂಗ ಪ್ರೇಮಿಯಾಗಿರಬಹುದು. ಸಲಿಂಗ ಅಥವಾ ಉಭಯಲಿಂಗ ಪ್ರೇಮಿಯಾಗಿರುವುದು ಅಪರಾಧವಲ್ಲ, ಕಾಯಿಲೆಯೂ ಅಲ್ಲ. ಸಾಮಾಜಿಕವಾಗಿ ಅದು ಒಪ್ಪಿತ ನಡವಳಿಕೆಯಾಗಿಲ್ಲ. ಹಾಗಾಗಿ ಹಿಂಜರಿಕೆಗಳಿರುವುದು ಸಹಜ. ಇದನ್ನು ನಿವಾರಿಸಿಕೊಂಡು ನೀವು ಸಂತೋಷವಾಗಿ ನಿಮ್ಮ ಲೈಂಗಿಕ ಆಯ್ಕೆಗಳನ್ನು ಮಾಡಿಕೊಳ್ಳಲು ಸಾಧ್ಯವಿದೆ.

ಮದುವೆಯಾಗುವ ಕುರಿತು ಯೋಚಿಸುವ ಮೊದಲು ತಜ್ಞ ಲೈಂಗಿಕ ಚಿಕಿತ್ಸಕರೊಡನೆ ಸಮಾಲೋಚನೆ ಮಾಡಿದರೆ ಸ್ಪಷ್ಟತೆ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT