ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು ಅಂಕಣ: ಬಾಂಧವ್ಯ ಮತ್ತು ಸ್ವಂತಿಕೆಗಳ ನಡುವಿನ ಸಮತೋಲನ

ನಡಹಳ್ಳಿ ವಸಂತ್ ಅವರ ಅಂಕಣ
Published 28 ಅಕ್ಟೋಬರ್ 2023, 1:02 IST
Last Updated 28 ಅಕ್ಟೋಬರ್ 2023, 1:02 IST
ಅಕ್ಷರ ಗಾತ್ರ

* ನಾನು ಹೆತ್ತವರೊಂದಿಗೆ ವಿಶೇಷವಾಗಿ ನನ್ನ ತಾಯಿಯೊಂದಿಗೆ ತುಂಬಾ ಅಂಟಿಕೊಂಡಿದ್ದೇನೆ. ಕ್ರಮೇಣ ನನ್ನ ಸುತ್ತಲಿರುವ ಎಲ್ಲರೂ ಬದಲಾದರು. ನನ್ನ ನೆರೆಹೊರೆಯವರು ಸಂಬಂಧಿಕರು ಸಹೋದ್ಯೋಗಿಗಳು ಸ್ನೇಹಿತರು ನನ್ನ ವಿರುದ್ಧ ತಿರುಗಿಬಿದ್ದರು.  ಹೆತ್ತವರು ನನ್ನ ಬದ್ಧ ವೈರಿಗಳಾದರು. ಇಂದಿಗೂ 84 ವರ್ಷ ವಯಸ್ಸಿನ ನನ್ನ ತಾಯಿ ನನ್ನ ಪರಮ ಶತ್ರು. ನಾವು ಒಂದೇ ನಗರದಲ್ಲಿ ವಾಸಿಸುತ್ತಿದ್ದರೂ ನನ್ನ ತಾಯಿ ನನ್ನನ್ನು ಭೇಟಿಯಾಗಲು ಅಥವಾ ನನ್ನೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ. ಹಲವಾರು ಜ್ಯೋತಿಷಿಗಳು ನನ್ನ ಹಿರಿಯ ಸಹೋದರ ಮತ್ತು ಅವರ ಪತ್ನಿ ಮಾಟಮಂತ್ರ ಮಾಡಿದ್ದಾರೆ ಎಂದು ಹೇಳಿದರು. ಹೆಂಡತಿಯೊಂದಿಗಿನ ನನ್ನ ಸಂಬಂಧವೂ ಹದಗೆಟ್ಟಿದೆ. ದಯವಿಟ್ಟು ಈ ಮಾನಸಿಕ ಆಘಾತದಿಂದ ಹೊರಬರಲು ಸಲಹೆ ನೀಡಿ.

-ಹೆಸರು ಊರು ತಿಳಿಸಿಲ್ಲ.

ನಿಮ್ಮ ಪತ್ರದಲ್ಲಿ ಆಳವಾದ ನೋವಿನ ಧ್ವನಿಯಿದೆ. ಆ ನೋವಿನ ಹಿಂದೆ ಏನಿರಬಹುದು ಎಂದು ಯೋಚಿಸಿದ್ದೀರಾ? ಪರಿಚಿತರೆಲ್ಲರೂ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ, ತಾಯಿ ಮಾತನಾಡಿಸುತ್ತಿಲ್ಲ ಹಾಗೂ ಹೆಂಡತಿಯ ಜೊತೆಗಿನ ಸಂಬಂಧವೂ ಹದಗೆಟ್ಟಿದೆ ಎಂದು ಹೇಳಿದ್ದೀರಲ್ಲವೇ? ಅಂದರೆ ನಿಮಗೆ ಏಕಾಂಗಿತನ ಕಾಡುತ್ತಿರಬೇಕಲ್ಲವೇ? ಇದಕ್ಕೆ ಪರಿಹಾರ ಹುಡುಕುವ ಮೊದಲು ನಿಮ್ಮ ಎಲ್ಲಾ ಸಂಬಂಧಗಳೂ ಹದಗೆಟ್ಟಿದ್ದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಮಾನವರಿಗೆ ಎರಡು ಮೂಲ ಅಗತ್ಯಗಳಿರುತ್ತವೆ. ಮೊದಲನೆಯದು ಮನುಷ್ಯ ಸಂಪರ್ಕದ ಹಸಿವು. ಇದನ್ನು “ಬಾಂಧವ್ಯ” (Attachment) ಎಂದು ಕರೆಯೋಣ. ಬಾಲ್ಯದ ಕೌಟುಂಬಿಕ ವಾತಾವರಣದಲ್ಲಿ ಬಾಂಧವ್ಯದ ಸಹಜ ರುಚಿ ಮಕ್ಕಳಿಗೆ ಬೇಕಾಗುತ್ತದೆ. ಅದರ ಕೊರತೆಯಾದರೆ ಜೀವಮಾನವಿಡೀ ಸಂಬಂಧಗಳನ್ನು ನಿಭಾಯಿಸುವುದರಲ್ಲಿ ತೊಂದರೆಯಾಗುತ್ತದೆ. ಇನ್ನೊಂದು ಮೂಲ ಅಗತ್ಯ ನಮ್ಮತನವನ್ನು ಉಳಿಸಿಕೊಂಡು ಬದುಕುವುದು. ಇದನ್ನು “ಸ್ವಂತಿಕೆ” (Authenticity) ಎಂದು ಕರೆಯೋಣ. ಸ್ವಂತಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಬಾಂಧವ್ಯ ಕಳೆದುಕೊಳ್ಳುವ ಭಯವಿರುತ್ತದೆ. ಸ್ವಂತಿಕೆಯನ್ನು ಉಳಿಸಿಕೊಳ್ಳದಿದ್ದರೆ ಸಂಬಂಧಗಳು ಅರ್ಥಕಳೆದುಕೊಳ್ಳುತ್ತವೆ. ಹಾಗಾಗಿ ಸ್ವಂತಿಕೆ ಮತ್ತು ಬಾಂಧವ್ಯಗಳು ಮೇಲುನೋಟಕ್ಕೆ ವಿರುದ್ಧ ಶಕ್ತಿಗಳಂತೆ ಕಂಡರೂ ವಾಸ್ತವದಲ್ಲಿ ಇದು ನಿಜವಲ್ಲ.

ನೀವು ಬಾಂಧವ್ಯ ಮತ್ತು ಸ್ವಂತಿಕೆಗಳ ನಡುವಿನ ಸಮತೋಲನವನ್ನು ಸಾಧಿಸುವುದಕ್ಕೆ ಕಷ್ಟಪಡುತ್ತಿದ್ದೀರಿ. ಇದು ನಿಮ್ಮಲ್ಲಿರುವ ಕೊರತೆ ಎಂದುಕೊಳ್ಳಬೇಕಾಗಿಲ್ಲ. ಸಮತೋಲವನ್ನು ಸಾಧಿಸುವ ಕಲಿಕೆ ಬಾಲ್ಯದಲ್ಲಿ ಸಿಗದಿರುವುದರಿಂದ ಈಗ ಅದರ ಪರಿಣಾಮಗಳನ್ನು ಎದುರಿಸುತ್ತಿದ್ದೀರಿ.

ಹೆತ್ತವರೊಂದಿಗೆ ಅದರಲ್ಲೂ ಹೆಚ್ಚಾಗಿ ತಾಯಿಗೆ ಬಹಳ ಅಂಟಿಕೊಂಡಿದ್ದೇನೆ ಎಂದು ಹೇಳಿದ್ದೀರಿ. ಬಾಲ್ಯದಲ್ಲಿ ತಾಯಿಗೆ ವಿರುದ್ಧವಾಗಿ ನಡೆದುಕೊಂಡಾಗ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ನಿಮ್ಮನ್ನು ದೂರುವುದು? ಮಾತು ನಿಲ್ಲಿಸುವುದು? ಬೈಗುಳ ಅಥವಾ ದೈಹಿಕ ಹಿಂಸೆ? ಇಂತಹ ಪ್ರತಿಕ್ರಿಯೆಗಳನ್ನು ಎದುರಿಸಲಾಗದೆ ಪೋಷಕರ ಮೇಲೆ ಅವಲಂಬಿತವಾಗಿರುವ ಮಗು ಅವರಿಗೆ ಬೇಕಾದಂತೆ ಇದ್ದು ಅಂಟಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ಆಗ ಮಗುವಿಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು, ಅವುಗಳನ್ನು ನಿಭಾಯಿಸಲು ಕಲಿಯುವುದು ಮತ್ತು ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿದ್ದಾಗಲೂ ಸಂಬಂಧವನ್ನು ಉಳಿಸಿಕೊಳ್ಳುವುದು- ಇವೆಲ್ಲದರ ಕಲಿಕೆ ಸಿಗುವುದಿಲ್ಲ. ಹಾಗಾಗಿ ಬೆಳೆಯುತ್ತಾ ಬಂದಂತೆ ಅಂತವರು ಸೌಹಾರ್ದಯುತ ಸಂಬಂಧಗಳನ್ನು ಕಟ್ಟಿಕೊಳ್ಳುವುದರಲ್ಲಿ ವಿಫಲರಾಗುತ್ತಾರೆ. ಸೌಹಾರ್ದಯುತ ಸಂಬಧಗಳಲ್ಲಿ ಮಾತ್ರ ನಮ್ಮ ಮಿದುಳು ನರಮಂಡಲಗಳು ಸಮಾಧಾನ ಮತ್ತು ಸುರಕ್ಷಿತ ಭಾವನೆಗಳನ್ನು ಅನುಭವಿಸತ್ತವೆ. ಅದು ದೊರಕದಿದ್ದಾಗ ಬಾಂಧವ್ಯದ ಹಸಿವು ತೀರದೆ ಏಕಾಂಗಿತನ ಅನುಭವಿಸುತ್ತೇವೆ.

ಹಾಗಿದ್ದರೆ ಬದಲಾವಣೆಯ ಪ್ರಯತ್ನವನ್ನು ಎಲ್ಲಿಂದ ಪ್ರಾರಂಭಿಸುವುದು? ಮೊದಲು ನಿಮ್ಮ ಎಂತಹ ಮಾತು ಮತ್ತು ವರ್ತನೆಗಳಿಂದ ಸಂಬಂಧಗಳು ಹಾಳಾದವು ಎಂದು ಯೋಚಿಸಿ. ಅಂತಹ ಮಾತು ವರ್ತನೆಗಳ ಪ್ರೇರಣೆ ನಿಮ್ಮೊಳಗಿನಿಂದ ಹೇಗೆ ಬರುತ್ತಿದೆ ಎಂದು ಹುಡುಕಬೇಕು. ನೀವು ಆತ್ಮಶೋಧನೆ ಮಾಡಿಕೊಳ್ಳಲು ಸಿದ್ಧರಾಗಬೇಕು. ಎಲ್ಲಾ ಸಂಬಂಧಗಳೂ ನಿಮ್ಮ ತಪ್ಪಿನಿಂದಲೇ ಹಾಳಾಗಿದೆ ಎಂದುಕೊಳ್ಳಬೇಕಾಗಿಲ್ಲ. ಕೆಲವೊಂದು ಸಂಬಂಧಗಳು ನಮ್ಮ ಎಲ್ಲಾ ಪ್ರಾಮಾಣಿಕ ಪ್ರಯತ್ನವನ್ನು ಮೀರಿ ಹಾಳಾಗಬಹುದು. ಆದರೆ ಎಲ್ಲಾ ಸಂಬಂಧಗಳೂ ಹಾಳಾಗುತ್ತಿವೆ ಎಂದರೆ ನಾವು ಆತ್ಮಶೋಧನೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಈ ಪ್ರಯತ್ನದಲ್ಲಿ ತಜ್ಞ ಮನೋಚಿಕಿತ್ಸಕರ ಸಹಾಯವಿದ್ದರೆ ಸಹಕಾರಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT