ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಳಿನ ಅಲರ್ಜಿಯೇ? ಪಾರಾಗಲು ಹೀಗೆ ಮಾಡಿ...

Last Updated 25 ಜನವರಿ 2020, 12:40 IST
ಅಕ್ಷರ ಗಾತ್ರ

ನಿರಂತರವಾಗಿ ಸೀನುತ್ತಿದ್ದೀರಾ? ಮೂಗಿನಿಂದ ಧಾರಾಕಾರವಾಗಿ ನೀರುನೀರಾದ ಸಿಂಬಳ ಸುರಿಯುತ್ತಿದೆಯೇ? ಮೂಗಿನಲ್ಲಿ ತುರಿಕೆ, ಕಣ್ಣು ಕೆಂಪಾಗುವುದು ಅಥವಾ ನೀರು ಬರುವುದು, ಮೂಗು ಕಟ್ಟುವಿಕೆ, ಮೂಗು ತುರಿಸುವುದು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದೀರಾ?

ಹಾಗಾದರೆ ನಿಮಗೆ ಧೂಳಿನ ಅಲರ್ಜಿ ಇರಬಹುದು. ಅಂದರೆ ಧೂಳಿನಲ್ಲಿರುವ ಸೂಕ್ಷ್ಮ ಕ್ರಿಮಿ (ಡಸ್ಟ್‌ ಮೈಟ್‌)ಗಳಿಂದ ಈ ಸಮಸ್ಯೆಗಳು ತಲೆದೋರಬಹುದು. ಕೆಲವೊಮ್ಮೆ ಇದು ಆಸ್ತಮಾಗೂ ಕಾರಣವಾಗಬಹುದು.

ಮನೆಯಲ್ಲಿನ ಹಳೆಯ ಪುಸ್ತಕ ಸ್ವಚ್ಛಗೊಳಿಸಿದಾಗ, ಸೀಲಿಂಗ್ ಫ್ಯಾನ್ ಶುಚಿಗೊಳಿಸಿದಾಗ, ಅಡುಗೆಮನೆಯಲ್ಲಿ ಧೂಳು ಹೊಡೆದಾಗ, ಅಟ್ಟಗಳಲ್ಲಿನ ಹಳೆಯ ಬಟ್ಟೆ ಮತ್ತು ಮನೆಯ ಹಳೆಯ ಪೆಟ್ಟಿಗೆ ಹೊರ ತೆಗೆದಾಗ, ಮ್ಯಾಟ್, ಹಾಸಿಗೆ ಮತ್ತು ಪೀಠೋಪಕರಣಗಳ ಮೇಲೆ ಧೂಳು ಹೊಡೆದಾಗ ಇದರಲ್ಲಿ ಅಡಗಿರುವ ಕ್ರಿಮಿಗಳು ಅಲರ್ಜಿ ಉಂಟು ಮಾಡುತ್ತವೆ. ಈ ಸೂಕ್ಷ್ಮಾಣು ಅಲರ್ಜಿಯಿಂದಾಗಿ ಸೈನಸ್, ಇಸಬು, ಆಸ್ತಮಾ, ‘ಹೇ ಜ್ವರ’, ಉಬ್ಬಸ ರೋಗಗಳು ಬರಬಹುದು.

ಧೂಳು ಕ್ರಿಮಿಗಳು, ಉಣ್ಣೆ ಮತ್ತು ಜೇಡಗಳ ನಿಕಟ ಸಂಬಂಧಿಗಳು, ಸೂಕ್ಷ್ಮದರ್ಶಕವಿಲ್ಲದೆ ನೋಡಲು ಅಸಾಧ್ಯ. ಇದರಿಂದಾಗುವ ಅಲರ್ಜಿಗಿಂತ ಕಿರಿಕಿರಿ ಮತ್ತು ಯಮ ಯಾತನೆ ಮತ್ತೊಂದು ಇರಲಿಕ್ಕಿಲ್ಲ. ಧೂಳಿನ ಅಲರ್ಜಿಯಿಂದಾಗಿ ಕೆಲವೊಮ್ಮೆ ಮೂಗು ಕಟ್ಟುವಿಕೆ, ಮಲಗಲು ತೊಂದರೆ ಮತ್ತು ಉಬ್ಬಸ, ಉಸಿರಾಟದ ತೊಂದರೆ ಕಾಡಬಹುದು.

ಈ ಅಲರ್ಜಿಯ ಸಾಮಾನ್ಯ ಲಕ್ಷಣಗಳೆಂದರೆ ಸೀನು, ಸ್ರವಿಸುವ ಮೂಗು, ತುರಿಕೆ, ಕಣ್ಣು ಕೆಂಪಾಗುವುದು ಅಥವಾ ನೀರು ಬರುವುದು, ಮೂಗು ಕಟ್ಟುವಿಕೆ, ಮೂಗು ತುರಿಸುವುದು, ಬಾಯಿಯ ಮೇಲ್ಭಾಗದಲ್ಲಿ ತುರಿಕೆ, ಕಫ, ಗಂಟಲಿನಲ್ಲಿ ಕೆರೆತ, ಏರಿಳಿತದ ಜ್ವರ ಇತ್ಯಾದಿ.

ಇಸಬು ಅಂದರೆ ಚರ್ಮದ ನವೆ, ಉರಿಯೂತಕ್ಕೂ ಈ ಅಲರ್ಜಿ ಕಾರಣ. ಚರ್ಮದ ಹಾನಿಗೊಳಗಾದ ಭಾಗವು ಕೆಂಪಾಗುವುದು, ದಪ್ಪಗಾದ ಒಣಚರ್ಮದ ಪಟ್ಟಿ, ಗುಳ್ಳೆಗಳು ಮತ್ತು ಚರ್ಮದಲ್ಲಿ ಬೊಕ್ಕೆಗಳು ಏಳುವುದು, ಬಾಹ್ಯ ಸೋಂಕಿನ ಚಿಹ್ನೆಗಳು. ಇದು ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಮನೆ ಹಾಗೂ ಬೇರೆ ಸ್ಥಳಗಳಲ್ಲಿ ಇರುವ ಧೂಳಿನ ಕ್ರಿಮಿಗಳು ಸತತವಾಗಿ ದೇಹದ ಮೇಲೆ ದಾಳಿ ಮಾಡುವುದರಿಂದ ಇಸಬು ಹೆಚ್ಚುತ್ತದೆ.

‘ಹೇ ಜ್ವರ’ವನ್ನು ಅಲರ್ಜಿಕ್ ರಿನಿಟಿಸ್ ಎಂದೂ ಕರೆಯುತ್ತಾರೆ, ಇದು ಶೀತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ಉದಾಹರಣೆಗೆ ಸ್ರವಿಸುವ ಮೂಗು, ತುರಿಕೆ ಕಣ್ಣುಗಳು, ಸೀನುವಿಕೆ ಮತ್ತು ಸೈನಸ್ ಒತ್ತಡ. ಆದರೆ ಶೀತದಂತೆ, ಹೇ ಜ್ವರವು ವೈರಸ್‌ನಿಂದ ಉಂಟಾಗುವುದಿಲ್ಲ. ಹೊರಾಂಗಣ ಅಥವಾ ಒಳಾಂಗಣ ಅಲರ್ಜಿ ಪ್ರತಿಕ್ರಿಯೆಯಿಂದ ಈ ಜ್ವರ ಉಂಟಾಗುತ್ತದೆ.

ಮನೆ ಮದ್ದು

ಮಜ್ಜಿಗೆ, ಆ್ಯಪಲ್‌ ಸಿಡಾರ್‌ ವಿನೇಗರ್‌. ಒಂದು ಚಿಕ್ಕ ಚಮಚ ಆ್ಯಪಲ್‌ ಸಿಡಾರ್‌ ವಿನೇಗರ್‌ ಅನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಈ ದ್ರವ ದೇಹದಲ್ಲಿನ ಕಫದ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ದುಗ್ಧರಸಗಳ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಹಬೆಯನ್ನು ಶ್ವಾಸದ ಮೂಲಕ ಎಳೆದುಕೊಳ್ಳುವುದು ಸಹ ಧೂಳಿನ ಅಲರ್ಜಿಗೆ ಪರಿಣಾಮಕಾರಿ ಚಿಕಿತ್ಸೆ. ಇದಕ್ಕಾಗಿ ಒಂದು ಅಗಲವಾದ ಪಾತ್ರೆಯಲ್ಲಿ ಕುದಿಯುವ ನೀರನ್ನು ಇರಿಸಿ ಇದರಿಂದ ಹೊಮ್ಮುತ್ತಿರುವ ಹಬೆಯನ್ನು ಮೂಗಿನಿಂದ ಎಳೆದುಕೊಳ್ಳಬೇಕು. ಇದರಿಂದ ಮೂಗಿನ ಹೊಳ್ಳೆಗಳಲ್ಲಿರುವ ಕಫ ಕರಗಿ ಶ್ವಾಸ ತೆಗೆದುಕೊಳ್ಳುವುದು ಸುಲಭವಾಗುತ್ತದೆ.

ವಿಟಮಿನ್ ಸಿ ಹಟಮಾರಿ ಧೂಳಿನ ಅಲರ್ಜಿಯನ್ನು ನಿವಾರಿಸಲು ಅತಿ ಸುಲಭವಾದ ಕ್ರಮ. ಸಿಟ್ರಸ್ ಆಮ್ಲ ಹೆಚ್ಚು ಪ್ರಮಾಣದಲ್ಲಿರುವ ಕಿತ್ತಳೆ, ಸಿಹಿಲಿಂಬೆ ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದ್ದರೆ ದೇಹದ ರಕ್ತದಲ್ಲಿರುವ ಬಿಳಿರಕ್ತಕಣಗಳು ಉತ್ಪಾದಿಸುವ ಹಿಸ್ಟಮೈನ್ ಎಂಬ ಪೋಷಕಾಂಶ ಹೆಚ್ಚುತ್ತದೆ ಹಾಗೂ ಇದು ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಅಲ್ಲದೇ ಮೂಗು ಸೋರುವುದನ್ನು ಹಾಗೂ ಕಟ್ಟಿಕೊಂಡಿರುವುದನ್ನು ತಡೆಯುತ್ತದೆ.

ಜಲನೇತಿ

ಅಲರ್ಜಿಕ್ ರಿನಿಟಿಸ್ ಹೊಂದಿರುವ ಮಕ್ಕಳು ಮತ್ತು ವಯಸ್ಕರು ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಮೂಗಿನ ಮೂಲಕ ಎಳೆದುಕೊಂಡು ಹೊರಬಿಡುವ ಈ ಪದ್ಧತಿ ಅನುಸರಿಸಿದರೆ ಪ್ರಯೋಜನಕಾರಿ.

ಬ್ರೊಮೆಲೈನ್ ಎಂಬುದು ಪಪ್ಪಾಯಿ ಮತ್ತು ಅನಾನಸ್‌ನಲ್ಲಿ ಕಂಡುಬರುವ ಕಿಣ್ವವಾಗಿದೆ. ಇದು ಉಸಿರಾಟವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ.

ಪ್ರತಿದಿನ 2,000 ಮಿಲಿಗ್ರಾಂ ವಿಟಮಿನ್ ಸಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಬಹುದು.

ಪುದಿನ ತೈಲ: ಇದು ಶ್ವಾಸನಾಳದ ಆಸ್ತಮಾ ಮತ್ತು ಅಲರ್ಜಿಕ್ ರಿನಿಟಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ನೀಲಗಿರಿ ಎಣ್ಣೆಯನ್ನು ಆಂಟಿಮೈಕ್ರೊಬಿಯಲ್ ಆಗಿ ಅಲರ್ಜಿಯ ಸಮಯದಲ್ಲಿ ಬಳಸಬಹುದು.

ರೋಗಲಕ್ಷಣಗಳನ್ನು ಹೇಗೆ ತಡೆಯಬಹುದು?

ಧೂಳನ್ನು ಮಿತಿಗೊಳಿಸುವುದು ಉತ್ತಮ ತಂತ್ರ. ಮಲಗುವ ಕೋಣೆಯಲ್ಲಿ ಪ್ರಾರಂಭಿಸಿ. ಅಲ್ಲಿ ನೀವು ಹೆಚ್ಚಿನ ಸಮಯವನ್ನು ಕಳೆಯುತ್ತೀರಿ.ಅಲ್ಲಿ ಹಾಸಿಗೆ, ಮಂಚವನ್ನು ಸ್ವಚ್ಛಗೊಳಿಸುವಾಗ ಮುಖವಾಡ ಧರಿಸಿ.

ಹಾಸಿಗೆಯನ್ನು ಬಿಸಿಲಿನಲ್ಲಿ ಆಗಾಗ ಒಣಗಿಸಬೇಕು.

ದಿಂಬು ಹಾಗೂ ಹಾಸಿಗೆಗಳ ಮೇಲೆ ಗಾಳಿಯಾಡದ, ಪ್ಲಾಸ್ಟಿಕ್ ಕವರ್‌ಗಳನ್ನು ಹಾಕಿ.

ಫಿಲ್ಟರ್‌ಗಳು: ಧೂಳನ್ನು ಫಿಲ್ಟರ್‌ ಮಾಡಿ ಮನೆಯೊಳಗಿನ ಕ್ರಿಮಿಗಳನ್ನು ಕಡಿಮೆ ಮಾಡಬಹುದು.

ನಿಮ್ಮ ಮನೆ, ಕಚೇರಿಗಳು ಮತ್ತು ಸುತ್ತಮುತ್ತಲಿನ ಪರಿಸರವನ್ನು ಧೂಳು ಬರದಂತೆ ಸ್ವಚ್ಛವಾಗಿಡಬೇಕು.

ಹೊರಗಡೆ ಹೋಗುವಾಗ ಮೂಗನ್ನು ಮಾಸ್ಕ್ ಅಥವಾ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು.

(ಲೇಖಕರು ಫಿಸಿಶಿಯನ್‌, ಮೆಡ್‌ಆಲ್‌, ಕ್ಲುಮಾಕ್ಸ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT