ಭಾನುವಾರ, ಏಪ್ರಿಲ್ 2, 2023
31 °C

ಕೋವಿಡ್ ಭೀತಿ: ನಿರ್ವಹಣೆ ಹೀಗೆ?

ಡಾ. ಕಿರಣ್ ವಿ. ಎಸ್‌. Updated:

ಅಕ್ಷರ ಗಾತ್ರ : | |

ಕೋವಿಡ್-19 ಬಗ್ಗೆ ಆತಂಕ ಪಡದವರು ಪ್ರಾಯಶಃ ಯಾರೂ ಇಲ್ಲ! ಪ್ರತಿಯೊಬ್ಬರೂ ಕುಟುಂಬದ, ಗೆಳೆಯರ, ಸಂಬಂಧಿಗಳ, ಸಹೋದ್ಯೋಗಿಗಳ ಬಗ್ಗೆ ಚಿಂತಿತರಾಗಿಯೇ ಇರುತ್ತಾರೆ. ಜೀವನದಲ್ಲಿ ಯಾವುದೇ ವಿಪತ್ತಿನ ಬಗ್ಗೆಯೂ ಆತಂಕ ತಪ್ಪಿದ್ದಲ್ಲ. ಕೋವಿಡ್-19 ನಿರ್ಮೂಲನೆ ಕೇವಲ ವೈದ್ಯರ ಅಥವಾ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ; ಅದು ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆ. ಆತಂಕವನ್ನು ತಹಬದಿಗೆ ತಾರದೇ ಇಂತಹ ಗುರುತರ ಜವಾಬ್ದಾರಿಯ ನಿರ್ವಹಣೆ ಸಾಧ್ಯವಿಲ್ಲ. ಕೋವಿಡ್-19 ಭೀತಿಯ ನಿರ್ವಹಣೆ ಹೇಗೆ?

ಮನೋವಿಜ್ಞಾನಿಗಳು ‘ಕರೊನಾಫೊಬಿಯಾ’ ಎಂಬ ಹೊಸ ಪದವನ್ನು ಟಂಕಿಸಿದ್ದಾರೆ. ವೈರಸ್ ಸೋಂಕಿನ ಭೀತಿ; ಯಾವುದೇ ಅಸೌಖ್ಯವನ್ನೂ ಕೋವಿಡ್-19 ಎಂದುಕೊಳ್ಳುವ ಭ್ರಮೆ; ಸಮೀಪದ ಬಂಧುಗಳ ಮರಣದ ಅಥವಾ ಕೆಲಸ ಕಳೆದುಕೊಳ್ಳುವ ಆತಂಕ; ಮನೆಯಲ್ಲಿ ಯಾರಿಗಾದರೂ ಸೋಂಕು ಉಂಟಾದರೆ ‘ಅದು ತನ್ನಿಂದಲೇ ಆಯಿತು’ ಎಂಬ ಪಾಪಪ್ರಜ್ಞೆ; ಖಿನ್ನತೆ; ಅಗತ್ಯಕ್ಕಿಂತ ವಿಪರೀತ ಅಧಿಕ ಸುರಕ್ಷೆಯ ಕ್ರಮಗಳ ಪಾಲನೆ; ಯಾವುದೇ ಸಮಸ್ಯೆ ಇಲ್ಲದಿದ್ದರೂ ಆಗಾಗ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದು – ಇವೆಲ್ಲವೂ ಕರೊನಾಫೊಬಿಯಾ ಲಕ್ಷಣಗಳು.

ಕಾಯಿಲೆಯ ನಿರಂತರ ಅನಿಶ್ಚಿತತೆ, ವಾಸ್ತವದ ಅನಿರೀಕ್ಷಿತ ತಿರುವುಗಳು, ಹಠಾತ್ತನೆ ಬದಲಾದ ಜೀವನಶೈಲಿ, ಹೊಂದಿಕೊಳ್ಳಲು ಸುಲಭವಲ್ಲದ ಹೊಸ ನಿಯಮಗಳು ಯಾರನ್ನಾದರೂ ಕಂಗೆಡಿಸಬಲ್ಲವು. ಇವು ಸಮಷ್ಟಿ ಸ್ವರೂಪ ಪಡೆದುಕೊಂಡರೆ ಆತಂಕಗಳ ಹರಡುವಿಕೆ ತೀವ್ರ ವೇಗವನ್ನು ಪಡೆಯುತ್ತದೆ. ಕೋವಿಡ್-19 ಇಡೀ ಪ್ರಪಂಚಕ್ಕೇ ಹೊಸದು. ಹೀಗಾಗಿ, ನಿಯಮಗಳನ್ನು ರೂಪಿಸುವವರಿಗೂ ಸ್ಪಷ್ಟತೆ ಇರುವುದಿಲ್ಲ. ಹೊಸ ಹೊಸ ಸಂಶೋಧನೆಗಳಿಗೆ ತಕ್ಕಂತೆ ಬದಲಾಗುತ್ತಿರುವ ನಿಯಮಗಳು ಸಾಮಾನ್ಯರಲ್ಲಿ ಸಾಕಷ್ಟು ಗೊಂದಲ ಮೂಡಿಸುತ್ತವೆ. ‘ನಮ್ಮಿಂದ ಏನನ್ನೋ ಮುಚ್ಚಿಡಲಾಗುತ್ತಿದೆ’ ಎನ್ನುವ ಅನುಮಾನ ಮತ್ತಷ್ಟು ಭೀತಿಯನ್ನು ತರುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಆಗಿರುವ ಪ್ರಚಂಡ ಪ್ರಗತಿ, ‘ವಿಜ್ಞಾನಿಗಳು ಎನನ್ನು ಬೇಕಾದರೂ ಸಾಧಿಸಬಲ್ಲರು’ ಎನ್ನುವ ಮನೋಭಾವವನ್ನು ಜನರ ಮನಸ್ಸಿನಲ್ಲಿ ಹುಟ್ಟುಹಾಕಿದೆ. ಕೋವಿಡ್-19 ಕಾಯಿಲೆ ಆರಂಭವಾದಾಗಿನಿಂದ ‘ವಿಜ್ಞಾನಿಗಳು ಏನೋ ಒಂದು ದಾರಿ ಹುಡುಕುತ್ತಾರೆ’ ಎನ್ನುವ ಆಶಾಭಾವ ಜನರಲ್ಲಿತ್ತು. ಇದರ ಅಪೇಕ್ಷೆಯಲ್ಲಿ ಬಹಳ ಮಂದಿ ತಮ್ಮ ಬೇಜವಾಬ್ದಾರಿತನವನ್ನು ಮುಂದುವರೆಸಿದ್ದರು. ಆದರೆ, ಸಾಮಾನ್ಯ ಎಂದು ಭಾವಿಸಿದ್ದ ಕಾಯಿಲೆ ಯಾರ ನಿಗ್ರಹಕ್ಕೂ ಬಾರದೇ ಅಲೆಗಳಂತೆ ಅಪ್ಪಳಿಸಲು ಆರಂಭವಾಯಿತೋ, ಆಗ ಜನರಿಗೆ ಆಧಾರರಾಹಿತ್ಯ ಕಾಡಿತು. ದೊಡ್ಡ ಸ್ಥಾನಗಳಲ್ಲಿರುವ ರಾಜಕಾರಣಿಗಳು, ಹಣ ಚೆಲ್ಲಿ ಏನನ್ನಾದರೂ ಖರೀದಿಸಬಲ್ಲ ಸಿರಿವಂತರು, ಪ್ರಭಾವಿಗಳು ಕೂಡ ಕಾಯಿಲೆಗೆ ತುತ್ತಾದಾಗ ಸಾಮಾನ್ಯ ಜನರ ಭೀತಿ ಹೆಚ್ಚಾಯಿತು.

ಅನಿಯಂತ್ರಿತ ಮಾಹಿತಿ ಪ್ರವಾಹ ನಮ್ಮ ಕಾಲದ ಅಪಾಯಗಳಲ್ಲಿ ಒಂದು. ಬೇಜವಾಬ್ದಾರಿ ದೃಶ್ಯಮಾಧ್ಯಮ, ಬೇಕಾಬಿಟ್ಟಿ ಅನಧಿಕೃತ ಮಾಹಿತಿ ಹರಡಬಲ್ಲ ಸಾಮಾಜಿಕ ಮಾಧ್ಯಮಗಳು, ಅಂತರ್ಜಾಲದ ಸುಲಭ ಲಭ್ಯತೆಗಳು ಕೋವಿಡ್-19 ಬಗೆಗಿನ ಭೀತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದು ವರ್ತಮಾನದ ಸಾಮಾಜಿಕ ಮಾಧ್ಯಮಗಳು ಹರಡಿರುವ ಮೊದಲ infodemic ಎಂದು ತಜ್ಞರ ಅಭಿಪ್ರಾಯ.

ಕಠಿಣ ವಾಸ್ತವಗಳನ್ನು ಎದುರಿಸುವಾಗ ಆತಂಕಕ್ಕೆ ಒಳಗಾದರೆ ತರ್ಕ ಸಡಿಲವಾಗುತ್ತದೆ; ನಿರ್ವಹಣೆಯ ಸಾಮರ್ಥ್ಯ ಕುಂಠಿತವಾಗುತ್ತದೆ. ಕೋಪ, ಭೀತಿ, ಒತ್ತಡ, ಗೊಂದಲ, ದುಃಖಗಳು ಯಾವುದೇ ಅಹಿತಕರ ಪರಿಸ್ಥಿತಿಯಲ್ಲೂ ಸಾಮಾನ್ಯ. ಅದನ್ನು ಮೀರಿ ಪರಿಹಾರಗಳನ್ನು ಆಲೋಚಿಸುವುದೇ ಚಿಂತನೆಯ ಪಕ್ವತೆಗೆ ನಿದರ್ಶನ. ಅಧಿಕೃತ ಮಾಹಿತಿ ನೀಡಬಲ್ಲ, ವೈಜ್ಞಾನಿಕ ಮಾಹಿತಿಯ ಬಗ್ಗೆ ಚೆನ್ನಾಗಿ ಅರಿವುಳ್ಳ, ಧನಾತ್ಮಕ ಚಿಂತನೆಯ ಜನರೊಡನೆ ಸ್ಪಂದಿಸುವುದು ಉತ್ತಮ. ಅಂತಹ ಜನರನ್ನು ಗುರುತಿಸಿ, ಅವರೊಡನೆ ಮಾಹಿತಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಲಾಕ್‌ಡೌನ್ ಕಾಲದಲ್ಲೂ ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಬೇಕು. ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಧನಾತ್ಮಕ ಚಿಂತನೆ, ಕುಟುಂಬದ ಜೊತೆ ಅನ್ಯೋನ್ಯ ಮಾತುಕತೆಗಳು ಭೀತಿಯನ್ನು ಕಡಿಮೆ ಮಾಡುತ್ತವೆ. ಧೂಮಪಾನ, ಮದ್ಯಪಾನ, ಮಾದಕವಸ್ತುಗಳು ಮನಸ್ಸನ್ನು ಇನ್ನಿಲ್ಲದಂತೆ ದುರ್ಬಲವಾಗಿಸುತ್ತವೆ. ಆತಂಕ ತೀವ್ರವಾದಾಗ ಹೆಚ್ಚು ಸಮಯ ವ್ಯರ್ಥ ಮಾಡದೆ, ಯಾವುದೇ ಮುಜುಗರವಿಲ್ಲದೆ ಮನೋವೈದ್ಯರನ್ನು ಸಂಪರ್ಕಿಸಬೇಕು.

ಮಾಹಿತಿಯ ಅಗತ್ಯ ಬಿದ್ದಾಗ, ‘ಯಾವ ಅಧಿಕೃತ ಮೂಲದಿಂದ ಪಡೆಯಬೇಕು’ ಎಂದು ಮೊದಲೇ ಗುರುತಿಸಿಕೊಳ್ಳಬೇಕು. ಪ್ರಚಾರಕ್ಕಾಗಿ ಬೇಕಾಬಿಟ್ಟಿ ಮಾತನಾಡುವ, ಸಾಮಾನ್ಯ ಸಂಗತಿಗಳನ್ನೂ ದಿಗಿಲು ಹುಟ್ಟಿಸುವಂತೆ ನಿರೂಪಿಸುವ ಮಾಧ್ಯಮಗಳನ್ನು ದೂರವಿಡಬೇಕು. ಭೀತಿಯ ನಿರ್ವಹಣೆಯಲ್ಲಿ ಎಲ್ಲರಿಗೂ ಕೆಲವು ವೈಯಕ್ತಿಕ ಮಾರ್ಗಗಳು ಇರುತ್ತವೆ. ‘ಜೀವನದಲ್ಲಿ ಹಿಂದೆ ಜರುಗಿದ್ದ ಆತಂಕದ ಪ್ರಸಂಗಗಳನ್ನು ಯಾವ ಮಾರ್ಗಗಳ ಮೂಲಕ ಹತೋಟಿಗೆ ತಂದಿದ್ದೆವು’ ಎಂಬುದನ್ನು ಪರಿಶೀಲಿಸಿ, ಅದರಂತೆ ನಮ್ಮ ದಾರಿಗಳನ್ನು ರೂಪಿಸಿಕೊಳ್ಳಬೇಕು.

ನಮ್ಮ ಆತಂಕ ಮಕ್ಕಳನ್ನು ಬಾಧಿಸಬಾರದು. ಆದರೆ, ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪರಿಸ್ಥಿತಿಯನ್ನು ವಿವರಿಸಬೇಕು. ಮಕ್ಕಳ ಮಾನಸಿಕ ಅಗತ್ಯಗಳಿಗೆ ಅನುಗುಣವಾಗಿ ಅವರಿಗೆ ಸಮಯ, ಬೆಂಬಲ, ಸಾಮೀಪ್ಯ ನೀಡಬೇಕು. ಇದು ಒಗ್ಗಟ್ಟಿನ ಶಿಸ್ತಿನಿಂದ ಗೆಲ್ಲಬಹುದಾದ ಕಾಳಗ. ಇದನ್ನು ಮಣಿಸಬಲ್ಲೆವೆಂಬ ಮನೋಭಾವ ಇರಬೇಕು. ಅನಗತ್ಯ ಆತಂಕಕ್ಕೆ ಒಳಗಾಗದೇ ಸನ್ನದ್ಧರಾಗಿರುವುದು ಮುಖ್ಯ.

(ಲೇಖಕರು ವೈದ್ಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು