ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಮಕ್ಕಳ ಸ್ಕ್ರೀನ್‌ ಟೈಂ ಕಡಿಮೆ ಮಾಡುವುದು ಹೇಗೆ?

Last Updated 4 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಕೋವಿಡ್‌–19ನಿಂದಾಗಿ ಮಕ್ಕಳಿಗೆ ಶಾಲೆಯಂತೂ ಇಲ್ಲ. ಚಿಕ್ಕ ಮಕ್ಕಳಿಗೆ ಆನ್‌ಲೈನ್‌ ತರಗತಿಯೂ ಇಲ್ಲ. ಆಟಕ್ಕೆ ಹೊರಗೆಲ್ಲೂ ಕಳಿಸುವ ಹಾಗೇ ಇಲ್ಲ. ಹೀಗಾಗಿ ಮಕ್ಕಳಿಗೆ ಟಿವಿ, ಮೊಬೈಲ್ ಗೀಳು ಅಂಟಿಕೊಂಡಿದೆ. ನನ್ನ ಮಗ ಸಮರ್ಥ್‌ನಿಗೆ ಊಟ, ತಿಂಡಿ ಮಾಡುವಾಗಲೆಲ್ಲಾ ಮೊಬೈಲ್ ಬೇಕು. ಮಲಗುವಾಗಲೂ ಮೊಬೈಲ್‌ನಲ್ಲಿ ಇಲ್ಲವೇ ಟಿವಿಯಲ್ಲಿ ಕಾರ್ಟೂನ್ ನೋಡುತ್ತಲೇ ಮಲಗುತ್ತಾನೆ. ಅದನ್ನು ಹೇಗೆ ಬಿಡಿಸಬೇಕು ಎಂಬುದೇ ಅರ್ಥ ಆಗುತ್ತಿಲ್ಲ’ ಎಂದು ಗೆಳತಿ ಅನುಷಾ ಬಳಿ ಗೋಳು ತೋಡಿಕೊಂಡಿದ್ದಳು ಸ್ನೇಹಿತೆ ಪ್ರತಿಮಾ.

ಯುವ ತಲೆಮಾರಿನ ತಾಯಂದಿರಿಗೆ ಊಟ ಮಾಡಿಸುವಾಗ, ನಿದ್ದೆ ಮಾಡಿಸುವಾಗ, ಮಕ್ಕಳು ಹಟ ಮಾಡಿದಾಗ ಮೊಬೈಲ್ ನೀಡುವುದು ಇಲ್ಲವೇ ಕಾರ್ಟೂನ್‌ ಚಾನೆಲ್ ಆನ್ ಮಾಡಿ ಬಿಡುವುದು ಅಭ್ಯಾಸವಾಗಿದೆ. ಈಗಂತೂ ಕೊರೊನಾ ಸಂದರ್ಭದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಕನಿಷ್ಠ ಶಾಲೆಗೆ ಹೋದ ಸಂದರ್ಭದಲ್ಲಿ ಹಾಗೂ ಹೋಂವರ್ಕ್‌ ಮಾಡುವಾಗ ಇದಕ್ಕೆ ಮುಕ್ತಿ ಸಿಗುತ್ತಿತ್ತು. ಆದರೆ ಕೋವಿಡ್‌ನಿಂದಾಗಿ ಇಡೀ ದಿನ ಮನೆಯೊಳಗೆ ಇರಬೇಕಾದ ಪರಿಸ್ಥಿತಿ ಇರುವುದರಿಂದ ಪೋಷಕರು ಕೂಡ ಏನೂ ಮಾಡುವ ಹಾಗಿಲ್ಲ. ಬೈದರೆ ‘ಮತ್ತೇನು ಮಾಡಲಿ?’ ಎಂಬ ಪ್ರಶ್ನೆ ಮಕ್ಕಳಿಂದ.

ಇದು ಆರೋಗ್ಯಕರ ಅಭ್ಯಾಸವಲ್ಲ. ‘ಸ್ಕ್ರೀನ್ ಟೈಮ್‌’ನ ಅತಿ ಬಳಕೆಯು ಮಗುವಿನ ಕಣ್ಣಿಗೆ ಹಾನಿ ಉಂಟುಮಾಡುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ. ಆ ಕಾರಣಕ್ಕೆ ಈ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವುದು ತುಂಬಾ ಮುಖ್ಯ. ‘ಸ್ಕ್ರೀನ್ ಟೈಮ್‌’ ಇಲ್ಲದೆ, ಮನೆಯೊಳಗೇ ಇರುವ ಮಕ್ಕಳನ್ನು ಸಮಾಧಾನ ಪಡಿಸುವ ಕೆಲವೊಂದು ಮಾರ್ಗಗಳು ಇಲ್ಲಿವೆ.

ಸಮಾಧಾನಪಡಿಸಿ

ಮೊದಲು ಅಳುವ, ಹಟ ಮಾಡುವ ಮಕ್ಕಳನ್ನುಸಮಾಧಾನಪಡಿಸುವುದು ತುಂಬಾ ಮುಖ್ಯ. ಅವರ ಹಟಕ್ಕೆ ತಕ್ಕಂತೆ ನೀವು ಗದರುವುದು, ಬೈಯುವುದು ಮಾಡಿದರೆ ಅವರು ಇನ್ನಷ್ಟು ಜೋರಾಗಿ ಕಿರಿಚಾಡುವುದು, ಕೋಪ ಮಾಡಿಕೊಳ್ಳುವುದು, ಅಳುವುದು ಮಾಡುತ್ತಾರೆ. ಆ ಕಾರಣಕ್ಕೆ ಸ್ವಲ್ಪ ಹೊತ್ತು ಅವರನ್ನು ಹಾಗೇ ಬಿಡಬೇಕು. ನೀವು ಅವರಿಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದಿದ್ದರೆ ಅವರಾಗಿಯೇ ಸಮಾಧಾನ ಪಟ್ಟುಕೊಳ್ಳುತ್ತಾರೆ. ನಿಧಾನಕ್ಕೆ ಸಮಾಧಾನ ಮಾಡಿಕೊಂಡು ಅವರಾಗಿಯೇ ನಿಮ್ಮ ಮಾತು ಕೇಳುವ ಮನಸ್ಸು ಮಾಡುತ್ತಾರೆ.

ಮಕ್ಕಳೊಂದಿಗೆ ಆಟವಾಡಿ

ಮಕ್ಕಳ ಹಟದ ತಂತ್ರಗಳನ್ನು ನಿಭಾಯಿಸಲು ಅವರೊಂದಿಗೆ ಆಟವಾಡುವುದು ಉತ್ತಮ ಮಾರ್ಗ. ಮಕ್ಕಳು ಎಂದಿಗೂ ಆಟಕ್ಕೆ ಬೇಡ ಎನ್ನುವುದಿಲ್ಲ. ಅದರಲ್ಲೂ ತಂದೆ–ತಾಯಿ ತಮ್ಮೊಂದಿಗೆ ಅವರಾಗಿಯೇ ಆಡಲು ಬರುತ್ತಾರೆ ಎಂದರೆ ಮಕ್ಕಳು ತುಂಬಾನೇ ಖುಷಿ ಪಡುತ್ತಾರೆ.

‘ಕೊರೊನಾದಿಂದಾಗಿ ಹೊರಗೆ ಹೇಗೆ ಆಟವಾಡುವುದು ಎಂಬ ಚಿಂತೆ ಬೇಡ. ಮನೆಯೊಳಗೇ ಬೋರ್ಡ್‌ ಗೇಮ್‌ಗಳು, ಅಚ್ಚುಮಣ್ಣಿನಲ್ಲಿ ಗೊಂಬೆಗಳನ್ನು ತಯಾರಿಸುವುದು ಹೀಗೆ ಆಟಗಳನ್ನು ಆಡುವ ಮೂಲಕ ಅವರೊಂದಿಗೆ ಬೆರೆಯಬಹುದು. ಅಲ್ಲದೇ ಅವರನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಅವರನ್ನು ಬ್ಯುಸಿಯಾಗಿ ಇಡಬಹುದು, ಅಲ್ಲದೇ ಅವರು ಕ್ರಿಯಾಶೀಲರೂ ಆಗುತ್ತಾರೆ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಡಾ.ಪ್ರಮೀಳಾ ಎಸ್‌.

ಸಂಗೀತವೂ ಮದ್ದು

ಕೆಲವು ಮಕ್ಕಳಿಗೆ ಸಂಗೀತ ಬಹಳ ಇಷ್ಟವಾಗುತ್ತದೆ. ಅಲ್ಲದೇ ಅವರು ಸಂಗೀತಕ್ಕೆ ಬೇಗನೇ ಪ್ರತಿಕ್ರಿಯೆ ನೀಡುತ್ತಾರೆ. ಇದರಿಂದ ಮಕ್ಕಳನ್ನು ಸುಲಭವಾಗಿ ಸಮಾಧಾನ ಪಡಿಸಬಹುದು. ಅವರ ಇಷ್ಟದ ಸಂಗೀತವನ್ನು ಕೇಳಿಸಿ. ಅವರು ಎಷ್ಟೇ ಹಟ ಮಾಡುತ್ತಿದ್ದರು ನಿಧಾನಕ್ಕೆ ಅವರಷ್ಟಕ್ಕೆ ಅವರೇ ಸಮಾಧಾನಗೊಳ್ಳುತ್ತಾರೆ. ತಾವು ಯಾವ ಕಾರಣಕ್ಕೆ ಅಳುತ್ತಿದ್ದೇವೆ ಎಂಬುದನ್ನು ಮರೆತು ಬಿಡುತ್ತಾರೆ.

ಪರ್ಯಾಯ ದಾರಿ ಹುಡುಕಿ

ಮಕ್ಕಳು ಹೇಳುವ ಮಾತುಗಳನ್ನು ಎಚ್ಚರದಿಂದ ಕೇಳಿಸಿಕೊಳ್ಳಿ. ಈ ಕ್ಷಣಕ್ಕೆ ಅವರಿಗೆ ಇಷ್ಟವಾಗುವ ಬೇರೆ ಎರಡು ಪರ್ಯಾಯಗಳನ್ನು ತಿಳಿಸಿ. ನೀವು ಬೇಡ ಎಂದು ಹೇಳಿದ ವಸ್ತುಗಳಿಗಿಂತ ಬೇರೆ ಆಯ್ಕೆ ಅದಾಗಿರಲಿ. ಒಂದು ವೇಳೆ ಮಕ್ಕಳು ಅವರಾಗಿಯೇ ಏನನ್ನಾದರೂ ನಿಮಗೆ ಒಪ್ಪುವಂತಹ ವಸ್ತುಗಳ ಬೇಡಿಕೆ ಇಟ್ಟರೆ ಅದನ್ನು ಕೊಟ್ಟು ಸಮಾಧಾನ ಪಡಿಸಿ.

ಪ್ರೀತಿಯಿಂದ ಅಪ್ಪಿಕೊಳ್ಳಿ

ಒಂದು ಆತ್ಮೀಯ ಅಪ್ಪುಗೆಗೆ ಎಲ್ಲಾ ದುಃಖವನ್ನು ಮರೆಸುವ ಶಕ್ತಿಯಿದೆ. ಅದು ಮಕ್ಕಳ ಮೇಲೂ ಜಾದೂ ಮಾಡಬಹುದು.

‘ಮಗುವನ್ನು ಅಪ್ಪಿ ಮುದ್ದಾಡುವುದರಿಂದ ಮಗು ಎಲ್ಲವನ್ನೂ ಮರೆಯುತ್ತದೆ. ಅದು ಮಕ್ಕಳನ್ನು ಸಮಾಧಾನ ಪಡಿಸಲು ಸಹಾಯ ಮಾಡುತ್ತದೆ, ಅಲ್ಲದೇ ಮಗುವಿನ ಮನಸ್ಸಿನ ನೋವನ್ನು ಕಡಿಮೆ ಮಾಡುತ್ತದೆ’ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT