ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಒಡೆಯದಿರಲಿ ಮನಸ್ಸು

Last Updated 4 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬಂಧನವದೇನಲ್ಲ ಜೀವಜೀವ ಪ್ರೇಮ
ಒಂದೆನಿಲೆ ಜೀವವರೆ ಬೆರೆತರಳೆ ಪೂರ್ಣ |
ದಂದುಗವನ್ ಅರೆಗೈದು ಸಂತಸವನಿಮ್ಮಡಿಪ
ಬಾಂಧವ್ಯ ದೈವಕೃಪೆ - ಮಂಕುತಿಮ್ಮ ||

ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳಿರುವ ಈ ಮಾತು ಅದೆಷ್ಟು ಅರ್ಥಪೂರ್ಣವಾಗಿದೆ ನೋಡಿ. ಎಷ್ಟೋ ಬಾರಿ ನಾವು ಗೊಣಗಿಕೊಳ್ಳುತ್ತೇವೆ. ಸಂಸಾರವನ್ನು ಬಂಧನವೆಂದು ಕರೆದು ಹೀಗಳೆಯುತ್ತೇವೆ. ಆದರೆ ಮನುಷ್ಯ ಒಬ್ಬಂಟಿಯಾಗಿ ಬದುಕಲಾರ. ಅದಕ್ಕಾಗಿಯೇ ಗುಂಡಪ್ಪನವರು ಒಂದೆ ನಿಲೆ ಜೀವವರೆ ಎನ್ನುತ್ತಾರೆ. ಒಂಟಿಜೀವಿ ಇಡಿಯಾಗಲಾರ. ಮನುಷ್ಯನು ಸಮಾಜದ ಇತರ ಜನಸಮುದಾಯದೊಂದಿಗೆ ಬೆರೆತು ಅಲ್ಲಿನ ಕಷ್ಟ-ಸುಖಗಳನ್ನು ತನ್ನದಾಗಿಸಿಕೊಂಡಾಗಲೇ ಸಂಪೂರ್ಣನಾಗುತ್ತಾನೆ. ರಕ್ತ-ಸಂಬಂಧಿಗಳಿರಲಿ ಅಥವಾ ಭಾವಬಂಧುಗಳಿರಲಿ ಅಥವಾ ನೆರೆಕೆರೆಯ ನಂಟಿರಲಿ – ಅವೆಲ್ಲವೂ ಸಂತಸವನ್ನು ಹೆಚ್ಚಿಸುವ ನಿಟ್ಟಿನಲಿ ಗಟ್ಟಿಕೊಂಡಿರುತ್ತವೆ.

ಮಾನವಜೀವಗಳ ಸಂಬಂಧವನ್ನು ಗುಂಡಪ್ಪನವರು ದೈವಕೃಪೆ ಎಂದು ಕರೆದಿದ್ದಾರೆ. ಪ್ರತಿಯೊಬ್ಬ ಮನುಷ್ಯ ತನ್ನ ಸುತ್ತಲಿನ ಇತರರೊಂದಿಗೆ ಒಂದಿಲ್ಲ ಒಂದು ಕಾರಣದಿಂದ ಸಂವಹನ ಮಾಡುತ್ತಲೇ ಇರುತ್ತಾನೆ. ಮಾತು, ವರ್ತನೆ, ಭೇಟಿ, ಸಹವಾಸ, ಕೊಡು-ಕೊಳ್ಳುವಿಕೆ – ಇವೆಲ್ಲವೂ ಸಂವಹನದ ರೂಪಗಳೇ ಆಗಿವೆ. ದುಡ್ಡು-ಕಾಸು, ಒಡವೆ-ಆಸ್ತಿ, ಮಮತೆ-ವಾತ್ಸಲ್ಯ, ಪ್ರೀತಿ-ಸ್ನೇಹ ಇವೆಲ್ಲವನ್ನೂ ಮನುಷ್ಯಸಂಬಂಧದಲ್ಲಿ ಪರಸ್ಪರರಿಗೆ ಕೊಡು-ಕೊಳ್ಳುವಿಕೆಯ ಭಾಗವಾಗಿ ಬಳಸುತ್ತೇವೆ. ಮನುಷ್ಯನ ವರ್ತನೆ ಅಥವಾ ಮಾತು ಆಯಾ ಸಂದರ್ಭದಲ್ಲಿನ ಆತನ ಮನಃಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ.

ಮಾತಿನಲ್ಲಿ ಬಳಕೆಯಾಗುವ ಶಬ್ದಗಳು ಅರ್ಥದಷ್ಟೇ ಅಪಾರ್ಥವನ್ನೂ ಹೊರಡಿಸಬಲ್ಲವು. ಈ ಕಾರಣದಿಂದಲೇ ಮಾನವ ಸಂಬಂಧಗಳಲ್ಲಿ ಪ್ರೀತಿ-ಪ್ರೇಮದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದ್ವೇಷ-ಅಸೂಯೆಗಳನ್ನು ಕಾಣುತ್ತೇವೆ. ತನಗೆ ದೊರಕದಿರುವ ಅಮೂಲ್ಯವಾದ ಸಂಗತಿಯೊಂದು ನಮ್ಮ ಆಪ್ತರ ಪಾಲಾದಾಗ ಮನುಷ್ಯ ಹೊಟ್ಟೆಕಿಚ್ಚನ್ನು ಅನುಭವಿಸುತ್ತಾನೆ. ಯಾವುದಾದರೂ ಕ್ಷುಲ್ಲಕವಾದ ಕಾರಣಗಳಿಗಾಗಿ ಪರಸ್ಪರರಲ್ಲಿ ವಿರಸ ಹುಟ್ಟಿಕೊಳ್ಳುತ್ತದೆ. ಈ ವಿರಸ ಎನ್ನುವುದು ವಿಷವಿದ್ದಂತೆ. ಇದಕ್ಕೆ ಸಂಬಂಧವೊಂದು ಬಲಿಯಾದರೆ ಇಬ್ಬರೂ ವ್ಯಕ್ತಿಗಳು ನೋವುಣ್ಣುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ವೈಯಕ್ತಿಕ ನೆಲೆಯನ್ನು ಮೀರಿ ಸಾಮುದಾಯಿಕ ಹಂತಕ್ಕೂ ಹೋಗುತ್ತದೆ. ಆಗ ಇಬ್ಬರು ವ್ಯಕ್ತಿಗಳ ನಡುವಿನ ಅಸಮಾಧಾನದಿಂದ ಇಡೀ ಊರು ದ್ವೇಷದ ದಳ್ಳುರಿಗೆ ಸಿಲುಕಿ ಎರಡು ಹೋಳಾಗುತ್ತದೆ. ಸದಾ ಕಾಲ ಜಗಳ-ಬಡಿದಾಟಗಳಿಂದ ಆ ಊರಿನ ಶಾಂತಿಯೇ ನಾಶವಾಗುತ್ತದೆ. ಸುಖ-ಸಂತೋಷದಿಂದ ನೆಮ್ಮದಿ ಕಾಣಬೇಕಾದ ಸಮುದಾಯವು ಪರಸ್ಪರರನ್ನು ನೋಯಿಸುವ ಜಿದ್ದಿಗೆ ಬಿದ್ದು ಇಡೀ ಊರನ್ನೇ ಸಂಕಟದ ಬೆಂಕಿಯಲ್ಲಿ ಬೀಳಿಸುತ್ತದೆ. ಮಹಾಭಾರತದ ದಾಯಾದಿ ಕಲಹವೇ ಇದಕ್ಕೆ ಉದಾಹರಣೆ.

ದುರ್ಯೋಧನ-ಭೀಮರ ವೈಯಕ್ತಿಕ ದ್ವೇಷ ಪಾಂಡವ-ಕೌರವರ ನಡುವೆ ರೋಷದ ದಳ್ಳುರಿಯನ್ನೇ ಸೃಷ್ಟಿಸಿ ಆ ಕಾಲದ ಸಮಸ್ತ ಭರತ ಖಂಡದಲ್ಲಿರುವ ಕ್ಷತ್ರಿಯರೆಲ್ಲರನ್ನೂ ಯುದ್ಧದ ಬೆಂಕಿಗೆ ಆಹುತಿ ಮಾಡಿತು.

ಪ್ರಾಚೀನ ಕಾವ್ಯಗಳು ನಮಗೆ ಪಾಠವಾಗಬೇಕು. ಮನುಷ್ಯ ಸಂಬಂಧಗಳಲ್ಲಿ ದ್ವೇಷಭಾವನೆ ಹುಟ್ಟಿದರೆ ಅದನ್ನು ಬೆಳೆಯಗೊಡಬಾರದು. ಆಗಾಗ ಪ್ರೀತಿ-ವಾತ್ಸಲ್ಯದ ಮಳೆ ಸುರಿಯುತ್ತಿದ್ದರೆ ಅಹಿತಕರ ಭಾವದ ಬೆಂಕಿ ನಂದಿಹೋಗುತ್ತದೆ. ಜಗಳ-ಮುನಿಸು ಇವೆಲ್ಲವೂ ಮಾನವನ ಸಹಜಭಾವಗಳು. ಆದರೆ ಇಂತಹ ನಕಾರಾತ್ಮಕ ಸಂಗತಿ ಘಟಿಸಿದಾಗ ತಾಳ್ಮೆ ಬೇಕೇ ಬೇಕು. ಸ್ವಲ್ಪ ದಿನಗಳ ಕಾಲ ತಟಸ್ಥವಾಗಿದ್ದರೆ ಮನಸ್ಸು ತಿಳಿಯಾಗುತ್ತದೆ. ಕೊಳದಲ್ಲಿ ಕಲ್ಲು ಬಿದ್ದು ಅಲೆಗಳು ಚೆಲ್ಲಾಪಿಲ್ಲಿಯಾದಾಗ ಕೆಸರು ಮೇಲೆದ್ದು ಬಂದು ರಾಡಿಯಾಗಿರುತ್ತದೆ. ಆದರೆ ಇದು ತಾತ್ಕಾಲಿಕ ಹೊಲಸು. ಸ್ವಲ್ಪ ಕಾಲ ಸುಮ್ಮನೆ ಇದ್ದರೆ ಕೆಸರು ಮತ್ತೆ ತಳ ಸೇರುತ್ತದೆ. ಮೇಲಿನ ನೀರು ತಿಳಿಯಾಗುತ್ತದೆ. ಮತ್ತೆ ಶುದ್ಧವಾದ ಸಲಿಲ ನಮ್ಮ ಬಳಕೆಗೆ ಪ್ರಾಪ್ತವಾಗುತ್ತದೆ. ಸಿಟ್ಟಿನ ವಶಕ್ಕೆ ಮನಸ್ಸನ್ನು ಕೊಟ್ಟರೆ ಅದು ಅನಾಹುತವನ್ನೇ ಸೃಷ್ಟಿಸುತ್ತದೆ. ಆಗ ಕೆಲವೊಂದು ಅನಾಹುತಗಳು ಸಂಭವಿಸಬಹುದು. ಅವುಗಳ ಪರಿಣಾಮಗಳು ಶಾಶ್ವತವಾದ ಹಾನಿಯನ್ನು ಉಂಟುಮಾಡಬಹುದು. ಬದುಕಿಡೀ ಒಬ್ಬರ ಮುಖ ಒಬ್ಬರು ನೋಡಿಕೊಳ್ಳದ ರಕ್ತಸಂಬಂಧಿಗಳು ನಮ್ಮ ನಡುವೆ ಇದ್ದಾರೆ. ಸಣ್ಣ-ಪುಟ್ಟ ಕಾರಣಗಳಿಗಾಗಿ ವಿರಸ ಎಂಬ ವಿಷ ಕುಡಿದು ಕಹಿಯಾಗಿಯೇ ಆಯುಷ್ಯವನ್ನು ಕಳೆದವರಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಾವು ಯಾವ ಕಾರಣಕ್ಕಾಗಿ ಜಗಳ ಆಡಿದೆವು ಎಂಬುದು ಕೂಡ ನೆನಪಿನಲ್ಲಿ ಉಳಿಯದೇ ಅಂತಹುದರಲ್ಲೂ ದ್ವೇಷವನ್ನು ತಲೆತಲಾಂತರವಾಗಿ ಮುಂದುವರೆಸಿಕೊಂಡು ಹೋಗುವ ಮೂರ್ಖರೂ ಇದ್ದಾರೆ.

ನಕಾರಾತ್ಮಕ ಭಾವಗಳಾದ ದ್ವೇಷ-ಅಸೂಯೆ-ಕೋಪ-ಆಕ್ರೋಶಗಳು ಮೊದಲು ಅದನ್ನು ಹೊತ್ತ ಮನಸ್ಸನ್ನು ವಿಷಮಯವಾಗಿಸುತ್ತವೆ. ಮನಸ್ಸು ವಿಷವಾದಾಗ ಆ ವ್ಯಕ್ತಿಯ ದೇಹದ ಮೇಲೆಯೂ ಅದು ಕಹಿಯಾದ ಪರಿಣಾಮವನ್ನು ಬೀರುತ್ತದೆ. ಆತನ ಆರೋಗ್ಯವೂ ಏರು-ಪೇರಾಗುತ್ತದೆ. ಅದಕ್ಕಾಗಿಯೇ ಚೆಂಬೆಳಕಿನ ಕವಿ ಕಣವಿಯವರು ಹೀಗೆ ಪ್ರಾರ್ಥಿಸುತ್ತಾರೆ: ‘ಅಲ್ಲಸಲ್ಲದ ವಿಷಯ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ ಸೊಲ್ಲುಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ.’

ನಕಾರಾತ್ಮಕ ಭಾವವು ನಮ್ಮ ಮನಸ್ಸಿಗೆ ಬರುವುದೆಷ್ಟು ಸಹಜವೋ ಅಷ್ಟೇ ಸಹನೆಯಿಂದ ನಾವದನ್ನು ದೂರ ತಳ್ಳಲಿಕ್ಕೆ ಪ್ರಯತ್ನಿಸಬೇಕು. ನಮ್ಮ ಸಂಬಂಧಗಳಲ್ಲಿ ನಾವು ಪರಸ್ಪರರಿಗೆ ಎಷ್ಟೊಂದು ಪ್ರೀತಿ-ಮಮತೆಗಳನ್ನು ಕೊಟ್ಟುಕೊಂಡಿರುತ್ತೇವೆ. ಆ ಮಧುರ ನೆನಪಿನ ಸಿಹಿಯನ್ನು ನೆನಪಿಸಿಕೊಂಡರೆ ಧನಾತ್ಮಕ ಭಾವ ತಾನೇತಾನಾಗಿ ಉಕ್ಕುತ್ತದೆ. ಆಗ ವಿಷಮ ವಿಪರೀತ ಭಾವಗಳು ದೂರವಾಗುತ್ತವೆ. ವೀ. ಸೀತಾರಾಮಯ್ಯ ಹೇಳುವಂತೆ ‘ಮೃದು ಸೌಹಾರ್ದವು ನೋವಿಗೆ ಕರಗದೆ ಸಾಹ್ಯಕೆ ನುಗ್ಗದೆ ನಿಂತೀತೆ?’

ಕೋಪದಲಿ ಬಿರುಸುಗೊಂಡ ಮನಸ್ಸು ಮತ್ತೆ ಸೌಹಾರ್ದ ಹುಟ್ಟಿದಾಗ ಮೃದುವಾಗುತ್ತದೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಸುಲಭವಾಗುತ್ತದೆ. ದುಃಖವನ್ನು ಹಂಚಿಕೊಂಡಾಗ ಹಗುರವಾದಂತೆ ಸಂತೋಷ ಹಂಚಿಕೊಂಡು ವೃದ್ಧಿಯಾಗುತ್ತದೆ. ನಮ್ಮವರಿಗಾಗಿ ನಾವು ಸ್ಪಂದಿಸತೊಡಗಿದಾಗ ಮನಸ್ಸುಗಳೆಲ್ಲ ಶ್ರುತಿಗೊಂಡ ವೀಣೆಯಂತಾಗಿ ಜೀವ ಜೀವಾಳದಲಿ ಖುಷಿಯ ಓಂಕಾರ ಮೊಳಗುತ್ತದೆ. ಮಮತೆ ಮಳೆಗರೆದರೆ ಎಂಥ ಬರಡು ಎದೆಯಲ್ಲಿಯೂ ಚೈತನ್ಯದ ಬಂಗಾರ ತೆನೆಯೊಡೆಯುತ್ತದೆ. ತಾಳ್ಮೆಯ ಕೋಲೂರಿಕೊಂಡು ಮೆಲ್ಲಗೆ ಹೆಜ್ಜೆಯಿಡುವ ಮೂಲಕ ಸಂಬಂಧಗಳ ನಾಜೂಕು ಹಾದಿಯಲ್ಲಿ ನಡೆಯಬೇಕಿದೆ. ಏಕೆಂದರೆ ಸಣ್ಣ ಅಜಾಗರೂಕತೆಯಿಂದ ಕೈ ಜಾರಿ ಒಡೆದುಕೊಂಡರೆ ಅಪರೂಪದ ಬಂಧಗಳು ಶಿಥಿಲಗೊಂಡು ಬಾಳಿನರಮನೆ ನೆಲಕ್ಕುರುಳಿ ಒಣಮರಭೂಮಿಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT