ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದೊತ್ತಡದ ಮಾತ್ರೆಯಿಂದ ಕೊರೊನಾ ಸೋಂಕಿತರಿಗೆ ಅನುಕೂಲ: ಹೊಸ ಸಂಶೋಧನೆ

Last Updated 24 ಆಗಸ್ಟ್ 2020, 15:41 IST
ಅಕ್ಷರ ಗಾತ್ರ

ನವದೆಹಲಿ:ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ನೀಡುವ ಔಷಧವು ಕೋವಿಡ್–19 ಸೋಂಕಿನಿಂದ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.ಮಾತ್ರವಲ್ಲದೆ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಸೋಂಕನ್ನು ನಿಯಂತ್ರಿಸಲು ಈ ಔಷಧಗಳುಪರಿಣಾಮಕಾರಿ ಎಂದುಅಧ್ಯಯನವೊಂದು ತಿಳಿಸಿದೆ.

ಲಂಡನ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾಅಧಿಕ ರಕ್ತದೊತ್ತಡನಿಯಂತ್ರಣಕ್ಕೆ ಬಳಸುವಆಂಟಿ-ಹೈಪರ್ಟೆನ್ಸಿವ್ ಔಷಧಿತೆಗೆದುಕೊಳ್ಳುವ ಸುಮಾರು 28 ಸಾವಿರ ಸೋಂಕಿತರ ಮೇಲೆ ಅಧ್ಯಯನ ನಡೆಸಿದೆ.

ಅಧ್ಯಯನದ ವರದಿಯನ್ನು ಪ್ರಕಟಿಸಿರುವ ಅಥೆರೊಸ್ಕ್ಲೆರೋಸಿಸ್‌ ನಿಯತಕಾಲಿಕೆಯು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿ ತೆಗೆದುಕೊಳ್ಳುವ ಕೋವಿಡ್‌–19 ಸೋಂಕಿತರಲ್ಲಿ ಆರೋಗ್ಯ ಹದಗೆಡುವ ಮತ್ತು ಸಾವಿನ ಪ್ರಮಾಣವು ಕಡಿಮೆಯಾಗಿರುತ್ತದೆ ಎಂದು ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ನಡೆಸಿದ ಒಟ್ಟು 19 ವರದಿಗಳ ಅಂಕಿಅಂಶಗಳ ಆಧಾರದಲ್ಲಿ ಸಂಶೋಧಕರುಔಷಧಿಯ ಪರಿಣಾಮದ ಬಗ್ಗೆ ವಿಶ್ಲೇಷಿಸಿದ್ದಾರೆ. ಕೋವಿಡ್–19ಗೆ ಸಂಬಂಧಿಸಿದ ಅತಿದೊಡ್ಡ ಅಧ್ಯಯನ ಇದಾಗಿದೆ ಎಂದೂ ಹೇಳಿದ್ದಾರೆ.

‘ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್–19 ಸೋಂಕಿನಿಂದತೀವ್ರ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿದಿದ್ದೆವು. ಸೋಂಕಿನ ಆರಂಭದ ದಿನಗಳಲ್ಲಿ, ಅಧಿಕ ರಕ್ತದೊತ್ತಡದ ರೋಗಿಗಳಿಗೆ ನೀಡುವ ನಿರ್ದಿಷ್ಟವಾದ ಔಷಧವು ಕೆಟ್ಟ ಪರಿಣಾಮ ಬೀರಬಹುದೆಂಬ ಆತಂಕವಿತ್ತು’ಎಂದು ಯುಇಎನ ನಾರ್ವಿಚ್‌ ವೈದ್ಯಕೀಯ ಶಾಲೆಯ ಸಂಶೋಧಕ ವಾಸಿಲಿಯೊಸ್ ವಾಸ್ಸಿಲಿಯೌ ಹೇಳಿದ್ದಾರೆ.

‘ಮೂರನೇ ಒಂದು ಭಾಗದಷ್ಟು ಕೋವಿಡ್–19 ಸೋಂಕಿತರು ಆಂಟಿ-ಹೈಪರ್ಟೆನ್ಸಿವ್ ಔಷಧವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೆವು. ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಸೋಂಕಿನ ಅಪಾಯ ಹೆಚ್ಚಬಹುದು ಎಂದು ತಿಳಿದಿದ್ದೆವು.ಆದರೆ, ತುಂಬಾ ಮುಖ್ಯವಾದ ಸಂಗತಿ ಎಂದರೆ ಕೋವಿಡ್–19 ಸೋಂಕಿತರ ಮೇಲೆಈ ಔಷಧವು ದುಷ್ಪರಿಣಾಮ ಉಂಟುಮಾಡಿದೆ ಅಥವಾ ಸಾವಿಗೆ ಕಾರಣವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ’ ಎಂದು ತಿಳಿಸಿದ್ದಾರೆ.

ಬದಲಾಗಿ,ಆಂಟಿ-ಹೈಪರ್ಟೆನ್ಸಿವ್ ಔಷಧವು ಕೋವಿಡ್–19 ಸೋಂಕಿತರನ್ನು ಐಸಿಯುಗೆ ತೆಗೆದುಕೊಂಡು ಹೋಗಬೇಕಾದ, ವೆಂಟಿಲೇಟರ್‌ನಲ್ಲಿ ಇರಿಸಬೇಕಾದ ಮತ್ತು ಸಾವಿನಂತ ನಿರ್ಣಾಯಕ ಸನ್ನಿವೇಶವನ್ನು ತಪ್ಪಿಸುತ್ತದೆ ಎಂಬುದು ಅವರ ಅಭಿಪ್ರಾಯ.

ಈ ಔಷಧಿಯನ್ನು ತೆಗೆದುಕೊಳ್ಳುವವರ ಸಾವಿನ ಪ್ರಮಾಣವು ಇತರರಿಗಿಂತ 0.67 ಪಟ್ಟು ಕಡಿಮೆ ಇದೆ ಎಂದು ಈ ಅಧ್ಯಯನದಲ್ಲಿ ತಿಳಿದುಬಂದಿದೆ.

‘ಸೋಂಕಿತರು ಈಗಾಗಲೇ ಈ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಮುಂದುವರಿಸುವಂತೆ ಶಿಫಾರಸು ಮಾಡಲು ಸಾಕಷ್ಟು ಪುರಾವೆಗಳನ್ನು ನಮ್ಮ ಸಂಶೋಧನೆಯು ಒದಗಿಸುತ್ತದೆ’ ಎಂದೂ ವಾಸ್ಸಿಲಿಯೌ ಸಮರ್ಥಿಸಿಕೊಂಡಿದ್ದಾರೆ.

‘ಆದಾಗ್ಯೂ ಎಲ್ಲ ಸೋಂಕಿತರಿಗೆ ಈ ಔಷಧಿಗಳನ್ನು ನೀಡಲು ಪ್ರಾರಂಭಿಸುವುದರಿಂದ ಸೋಂಕನ್ನು ನಿಯಂತ್ರಿಸಬಹುದೇ ಎಂಬುದನ್ನು ನಿರ್ಧರಲಾಗದು. ಏಕೆಂದರೆ ಔಷಧಿಯು ಪ್ರತಿಕ್ರಿಯಿಸುವ ರೀತಿ ವಿಭಿನ್ನವಾಗಿರಬಹುದು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT