ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ಯುನೋಥೆರಪಿ ಚಿಕಿತ್ಸೆ: ಕ್ಯಾನ್ಸರ್‌ ರೋಗಿಗಳ ಆಶಾಕಿರಣ

ಡಾ. ಮುರಲೀ ಮೋಹನ್ ಚೂಂತಾರು
Published 9 ಏಪ್ರಿಲ್ 2024, 0:55 IST
Last Updated 9 ಏಪ್ರಿಲ್ 2024, 0:55 IST
ಅಕ್ಷರ ಗಾತ್ರ

ಇಮ್ಯುನೋಥೆರಪಿ. ಇದೊಂದು ಹೊಸತಾದ ಚಿಕಿತ್ಸಾ ವಿಧಾನವಾಗಿದ್ದು, ಹೆಚ್ಚಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಚಿಕಿತ್ಸಾ ಪದ್ಧತಿಯ ಮೂಲಕ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಶಕ್ತಿಯುತವಾಗಿ ಮಾಡಿ, ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ಪತ್ತೆ ಹಚ್ಚಿ, ಅದನ್ನು ನಾಶ ಮಾಡುವಂತೆ ಪ್ರಚೋದಿಸುತ್ತಾರೆ. ಹಲವಾರು ರೀತಿಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಇಮ್ಯುನೋಥೆರಫಿಯನ್ನು ಕೆಲವೊಮ್ಮೆ ಕಿಮೋಥೆರಪಿ ಜೊತೆಗೆ ಅಥವಾ ಇನ್ನಾವುದೇ ಕ್ಯಾನ್ಸರ್ ಚಿಕಿತ್ಸೆ ಜೊತೆಗೂ ಬಳಸುತ್ತಾರೆ. ಇದು ಕೆಲವರು ವ್ಯಕ್ತಿಗಳಲ್ಲಿ ಫಲಿತಾಂಶ ನೀಡುತ್ತದೆ ಮತ್ತು ಕೆಲವರಿಗೆ ಯಾವುದೇ ಪರಿಣಾಮ ಬೀರದೇ ಇರಬಹುದು. ಒಟ್ಟಿನಲ್ಲಿ ಈ ಚಿಕಿತ್ಸಾ ಪದ್ಧತಿಯ ಯಶಸ್ಸಿನ ಅನುಪಾತ ಶೇ.15ರಿಂದ 20. ಹೆಚ್ಚಿನ ಸಂದರ್ಭಗಳಲ್ಲಿ ಇಮ್ಯುನೋಥೆರಪಿಯನ್ನು ಮುಂದುವರಿದ ಹಂತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಾತ್ರ ಬಳಸಲಾಗುತ್ತದೆ. ಸರ್ಜರಿ ಸಾಧ್ಯವಾಗದ ರೋಗಗಳಲ್ಲಿ ಅಥವಾ ಸರ್ಜರಿಯನ್ನು ಮಾಡಿಯೂ ಧನಾತ್ಮಕ ಫಲಿತಾಂಶ ದೊರಕದೆ ಇರಬಹುದಾದ ರೋಗಿಗಳಿಗೆ ಹೆಚ್ಚಾಗಿ ಈ ಚಿಕಿತ್ಸಾ ಪದ್ಧತಿಯನ್ನು ರೋಗವನ್ನು ನಿಯಂತ್ರಿಸಲು ಒಳಸಲಾಗುತ್ತದೆ. ಇಮ್ಯುನೋಥೆರಪಿಯಿಂದ ಪೂರ್ತಿಯಾಗಿ ಕ್ಯಾನ್ಸರ್ ರೋಗದಿಂದ ವಿಮುಕ್ತಗೊಳಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ರೀತಿಯ ಕ್ಯಾನ್ಸರ್‌ಗಳಲ್ಲಿ ಆಶಾದಾಯಕ ಫಲಿತಾಂಶ ದೊರಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯೋಗಗಳು ಮತ್ತು ಪ್ರಾರಂಭಿಕ ಚಿಕಿತ್ಸೆಗಳು ನಡೆಯುತ್ತಿದ್ದು, ವೈದ್ಯರಿಗೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಆಶಾದಾಯಕ ದಾರಿಯನ್ನು ತೆರೆದಿದೆ.

ನಾಲ್ಕನೇ ಹಂತದ ಕ್ಯಾನ್ಸರ್ ಇರುವ ರೋಗಿಗಳಿಗೆ ಇಮ್ಯುನೋಥೆರಪಿಯಿಂದ ಉತ್ತಮ ಜೀವನಶೈಲಿ ಮತ್ತು ರೋಗದ ಲಕ್ಷಣಗಳಿಂದ ಒಂದಷ್ಟು ಮುಕ್ತಿ ದೊರಕಿರುವುದಂತೂ ನಿಜ. ಹಾಗೆಂದ ಮಾತ್ರಕ್ಕೆ ಕಿಮೋಥೆರಪಿಗಿಂತ ಇಮ್ಯುನೋಥೆರಪಿ ಒಳ್ಳೆಯದು ಎಂಬರ್ಥವಲ್ಲ. ಕಿಮೋಥೆರಪಿಯಲ್ಲಿ ಕೆಲವೊಂದು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದುಂಟು. ಕೂದಲು ಉದುರುವಿಕೆ, ವಾಕರಿಕೆ, ರಕ್ತಕಣಗಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಗುವುದು ಕಿಮೋಥೆರಪಿಯಲ್ಲಿ  ಸಾಮಾನ್ಯ. ಇದಕ್ಕೆ ಹೋಲಿಸಿದಲ್ಲಿ ಇಮ್ಯುನೋಥೆರಪಿಯು ಕಿಮೋಥೆರಪಿಗಿಂತ ಉತ್ತಮ ಎಂಬ ಅಭಿಪ್ರಾಯ ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಇದೆ. ಆದರೆ ಯಾವ ರೀತಿಯ ಚಿಕಿತ್ಸೆ ಯಾವಾಗ ಹೇಗೆ ಕೊಡಬೇಕು ಎಂಬುದನ್ನು ವೈದ್ಯರು ರೋಗಿಯ ಪರಿಸ್ಥಿತಿಯನ್ನು ಗಮನಿಸಿ ನಿರ್ಧರಿಸುತ್ತಾರೆ.

ಯಾವಾಗ ಬಳಸುತ್ತಾರೆ?:

1. ಯಕೃತ್ತಿನ ಕ್ಯಾನ್ಸರ್, ಮಿದುಳಿನ ಕ್ಯಾನ್ಸರ್
2. ಮೂತ್ರಪಿಂಡದ ಕ್ಯಾನ್ಸರ್, ಮೂತ್ರಚೀಲದ ಕ್ಯಾನ್ಸರ್
3. ಶ್ವಾಸಕೋಶ, ಬಾಯಿ ಮತ್ತು ಗಂಟಲು, ಹೊಟ್ಟೆ, ಗರ್ಭಾಶಯದ ಕ್ಯಾನ್ಸರ್
4. ಮರುಕಳಿಸಿದ ಕ್ಯಾನ್ಸರ್ ಮತ್ತು ಕಿಮೋಥೆರಪಿ

ಈ ಎಲ್ಲ ಕ್ಯಾನ್ಸರ್‌ಗಳಲ್ಲಿ ಆರಂಭಿಕ ಹಂತದಲ್ಲಿ ಸರ್ಜರಿಯನ್ನು ಮುಖ್ಯವಾಗಿ ಬಳಸುತ್ತಾರೆ. ಆದರೆ ಮುಂದುವರಿದ 4ನೇ ಹಂತದಲ್ಲಿ ಇಮ್ಯುನೋಥೆರಪಿಯನ್ನು ಬಳಸುತ್ತಾರೆ.

ಯಾವುದು ಉತ್ತಮ?

ಕಿಮೋಥೆಯಪಿಯಲ್ಲಿ ಬಳಸುವ ಔಷಧಗಳು ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ಗುರುತಿಸಿ ನಾಶಪಡಿಸುತ್ತದೆ. ಆದರೆ ಇಮ್ಯುನೋಥೆರಪಿಯಲ್ಲಿ ಕ್ಯಾನ್ಸರ್ ರೋಗಿಗಳ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಧೃಡಗೊಳಿಸಿ ದೇಹವೇ ಕ್ಯಾನ್ಸರ್ ಜೀವಕೋಶಗಳನ್ನು ಎದುರಿಸಿ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಒಂದಕ್ಕಿಂತ ಇನ್ನೊಂದು ಉತ್ತಮ ಎಂಬುದಕ್ಕಿಂತ ಕೆಲವೊಮ್ಮೆ ಎರಡನ್ನೂ ಬಳಸಿ ರೋಗಿಯ ದೇಹಸ್ಥಿತಿಯನ್ನು ಉತ್ತಮಪಡಿಸಲಾಗುತ್ತದೆ. ಈ ಮೊದಲೆಲ್ಲಾ 4ನೇ ಹಂತದ ಕ್ಯಾನ್ಸರ್‌ಗಳಲ್ಲಿ (ಸರ್ಜರಿ ಮಾಡಲು ಸಾಧ್ಯವಿಲ್ಲದ ಹಂತ) ಕೇವಲ ಕಿಮೊಥೆರಪಿ ನೀಡಲಾಗುತ್ತಿತ್ತು. ಇಮ್ಯುನೋಥೆರಪಿಯಿಂದಾಗಿ ಕ್ಯಾನ್ಸರ್ ರೋಗಿಗಳ ಬದುಕಿ ಉಳಿಯುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಸಮಸ್ಯೆ ಏನು?:
1. ಇಮ್ಯುನೋಥೆರಪಿ ಚಿಕಿತ್ಸೆ ಬಹಳ ದುಬಾರಿ ಆರೋಗ್ಯ. ಪ್ರತಿ ಸಲದ ಚುಚ್ಚುಮದ್ನು ಕನಿಷ್ಠ ಒಂದೂವರೆ ಲಕ್ಷದಿಂದ ಐದು ಲಕ್ಷದವರೆಗೆ ಆಗುತ್ತದೆ. ಸುಮಾರು ಒಂದರಿಂದ ಎರಡು ವರುಷಗಳವರೆಗೆ ಈ ಚುಚ್ಚುಮದ್ದನ್ನು ನಿರಂತರವಾಗಿ ನೀಡಬೇಕಾಗುತ್ತದೆ.
2. ಎಲ್ಲ ಕೇಂದ್ರಗಳಲ್ಲಿ ಈ ಚಿಕಿತ್ಸೆ ದೊರಕುವುದಿಲ್ಲ. ನುರಿತ ತಜ್ಞ ಮತ್ತು ಪರಿಣತವೈದ್ಯರ ಮಾರ್ಗದರ್ಶನದಲ್ಲಿ ಈ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುತ್ತದೆ.
3. ಕಿಮೊಥೆರಪಿಯಷ್ಟು ಅಡ್ಡಪರಿಣಾಮ ಇಲ್ಲದಿದ್ದರೂ ಇಮ್ಯುನೋಥೆರಪಿಯಲ್ಲಿ ಕೆಲವೊಮ್ಮೆ ಥೈರಾಯ್ಡ್ ತೊಂದರೆ, ಚರ್ಮದಲ್ಲಿ ಗುಳ್ಳೆಗಳು, ಅತಿಸಾರ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.
4. ಇಮ್ಯುನೋಥೆರಪಿ ಚಿಕಿತ್ಸೆ ನಿಲ್ಲಿಸಿದ ಬಳಿಕ ಕ್ಯಾನ್ಸರ್ ಜೀವಕೋಶಗಳು ಮತ್ತೆ ಕ್ರಿಯಾಶೀಲವಾಗುವ ಸಾಧ್ಯತೆ ಇರುತ್ತದೆ.

ಕೊನೆಮಾತು:
ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ಕ್ಯಾನ್ಸರ್ ಬಂದಿದೆ ಎಂದು ತಿಳಿದ ಕೂಡಲೇ ಮಾನಸಿಕವಾಗಿ ಕುಗ್ಗಿ, ಅರ್ಧಜೀವವನ್ನು ಬಿಟ್ಟಿರುತ್ತಾರೆ. ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು. ಆದರೆ ನಮ್ಮ ಕನಸುಗಳನ್ನು, ಆಸೆಗಳನ್ನು ಮತ್ತು ಆತ್ಮವಿಶ್ವಾಸವನ್ನು ಕೊಲ್ಲಲ್ಲು ಕ್ಯಾನ್ಸರ್ ಸಾಧ್ಯವಿಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು. ಇತ್ತೀಚಿನ ವರದಿಗಳ ಪ್ರಕಾರ, ಆರಂಭಿಕ ಹಂತದ ಎದೆಗೂಡಿನ ಕ್ಯಾನ್ಸರ್‌ಗೆ ಇಮ್ಯುನೋಥೆರಪಿ ನೀಡಿ ಐದು ವರ್ಷಗಳು ಬದುಕಿ ಉಳಿಯುವ ಸಾಧ್ಯತೆ ಶೇ. 80ರಷ್ಟಾಗಿದೆ ಆಗಿದೆ ಎಂಬುದು ಆಶಾದಾಯಕ ವಿಚಾರ. ಈ ನಿಟ್ಟಿನಲ್ಲಿ ಇಮ್ಯುನೋಥೆರಪಿ ಜನರಲ್ಲಿ, ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT