ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day 2021 | ಸಮೃದ್ಧ ಆರೋಗ್ಯದ ಯೋಗಕ್ಕಾಗಿ ಯೋಗ

ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಗೆ ಕಾಲೇಜು ಹಂತದಲ್ಲೇ ಯೋಗ ಕಲಿಕೆ ಅಗತ್ಯ
Last Updated 21 ಜೂನ್ 2021, 2:08 IST
ಅಕ್ಷರ ಗಾತ್ರ

ಗಾಳಿ, ನೀರು, ಆಹಾರ ಎಲ್ಲವೂ ಕಲುಷಿತವಾಗಿರುವಆಧುನಿಕ ಕಾಲದಲ್ಲಿ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವುದೇ ದೊಡ್ಡ ಸವಾಲು. ಇದಕ್ಕಾಗಿ ನಮ್ಮ ದೇಶದ ಜನರು ಮಾತ್ರವಲ್ಲ, ವಿದೇಶಗಳ ಜನರು ಕೂಡ ಯೋಗದ ಮೊರೆ ಹೋಗಿದ್ದಾರೆ. ಯೋಗ ಎಂದಾಕ್ಷಣ ದೇಹಕ್ಕೆ ನೀಡುವ ಕಸರತ್ತು ಎಂದು ಭಾವಿಸುವುದೇ ಹೆಚ್ಚು. ಆದರೆ ಇದು ದೇಹ ಮತ್ತು ಮನಸ್ಸನ್ನು ಸಂಯೋಗಗೊಳಿಸಿ ಒಂದೆಡೆ ಹಿಡಿದಿಡುವ ಪ್ರಕ್ರಿಯೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ದೇಹವನ್ನು ‘ರಥಂ ವಿದ್ಧಿ’ ಎಂದು ಕರೆಯುತ್ತಾನೆ. ಈ ರಥದ ಸಾರಥಿಯೇ ಬುದ್ಧಿ ಅಥವಾ ನಮ್ಮ ಮಿದುಳು. ರಥದ ಕುದುರೆಗಳಿಗೆ ಹಾಕಿರುವ ಲಗಾಮು ನಮ್ಮ ಮನಸ್ಸು. ಓಡುತ್ತಿರುವ ಕುದುರೆಗಳೇ ಇಂದ್ರಿಯಗಳು ಮತ್ತು ರಥದಲ್ಲಿ ಕುಳಿತ ಸಾರಥಿಯೇ ನಾವು ಅಥವಾ ನಮ್ಮ ಆತ್ಮ. ಲಗಾಮು ಸಾರಥಿಯ ಹಿಡಿತದಲ್ಲಿ ಇದ್ದರೆ, ಕುದುರೆಗಳು ಸರಿಯಾದ ದಾರಿಯಲ್ಲಿ ಓಡುತ್ತವೆ. ಮನಸ್ಸನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ನಿರ್ದಿಷ್ಟ ಗುರಿಯತ್ತ ಸಾಗಿದರೆ ಮಾತ್ರ ವ್ಯಕ್ತಿ ಸಾಧನೆ ಮಾಡಬಲ್ಲ. ಇದಕ್ಕಾಗಿ ಇರುವ ಸೂಕ್ತ ಮಾರ್ಗವೇ ಯೋಗಾಭ್ಯಾಸ. ಪತಂಜಲಿ ಮುನಿಗಳಿಂದ ಭಾರತದ ಮಣ್ಣಿನಲ್ಲೇ ಜನಿಸಿ ಬೆಳೆದ ಈ ಅಮೂಲ್ಯ ಜ್ಞಾನವನ್ನು ಇಂದು ಜಗತ್ತಿನ ಎಲ್ಲ ಜನರು ಅನುಸರಿಸುತ್ತಿದ್ದಾರೆ ಎನ್ನುವುದೇ ಅತಿದೊಡ್ಡ ಹೆಮ್ಮೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಗೆ ಜೂನ್ 21 ರಂದು ಯೋಗ ದಿನ ಆಚರಿಸುವಂತೆ ಸಲಹೆ ನೀಡಿದ್ದು, ಅದರಂತೆ 2015 ರಿಂದ ಪ್ರತಿ ವರ್ಷ ಯೋಗ ದಿನ ಆಚರಿಸಲಾಗುತ್ತಿದೆ. ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘ ದಿನವಾಗಿದ್ದು, ಇದೇ ದಿನ ಯೋಗಕ್ಕೆ ಗೌರವ ಸಲ್ಲಿಸುವುದು ಪ್ರಕೃತಿಮಾತೆಗೆ ಗೌರವ ಸಲ್ಲಿಸುವ ಸಂಕೇತ.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗವಿಜ್ಞಾನವನ್ನೂ ಕಲಿಸಬೇಕಿದೆ. ಇದಕ್ಕಾಗಿ ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮದಲ್ಲೇ ಯೋಗ ಅಧ್ಯಾಯ ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ನಿದರ್ಶನಗಳಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಗೆ ಕಾಲೇಜು ಹಂತದಲ್ಲೇ ಯೋಗ ಕಲಿಕೆ ಅಗತ್ಯ.

ಯೋಗವು ಕೇವಲ ಕಲಿಕೆಯಾಗಿ ಉಳಿಯದೆ, ವೃತ್ತಿಪರತೆಯ ಸ್ಥಾನ ಪಡೆಯುತ್ತಿದೆ. ಇದನ್ನು ಗಮನದಲ್ಲಿರಿಸಿ, ವೈದ್ಯಕೀಯ ಕಾಲೇಜುಗಳಲ್ಲಿ ಯೋಗವಿಜ್ಞಾನ ಪದವಿ ಪರಿಚಯಿಸಿ, ವೈದ್ಯರಂತೆ, ಯೋಗವಿಜ್ಞಾನ ವೈದ್ಯರನ್ನು ಸಮಾಜಕ್ಕೆ ನೀಡುವ ಚಿಂತನೆಯೂ ನಮ್ಮ ಮುಂದಿದೆ. ಕೇಂದ್ರ ಸರ್ಕಾರ ಯೋಗಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಕಲ್ಪಿಸಿರುವುದರಿಂದ ಈ ಕ್ಷೇತ್ರವನ್ನು ಯುವಜನರು ವೃತ್ತಿಯಾಗಿ ಸ್ವೀಕರಿಸುವಂತೆ ಪ್ರೋತ್ಸಾಹಿಸಬೇಕಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ಅಲೋಪಥಿ ಹಾಗೂ ಆಯುರ್ವೇದ ವೈದ್ಯ ಪದ್ಧತಿ ಬಳಸಿ 600 ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಇದೇ ಮಾದರಿಯಲ್ಲಿ ಅಲೋಪಥಿ ಹಾಗೂ ಭಾರತೀಯ ವೈದ್ಯ ಪದ್ಧತಿ, ಯೋಗ ಪದ್ಧತಿಯನ್ನೊಳಗೊಂಡ ಸಮಗ್ರ ವೈದ್ಯ ಪದ್ಧತಿ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ವೈದ್ಯ ಪದ್ಧತಿಗಳ ನಡುವಿನ ವಿವಾದಕ್ಕಿಂತ ಎರಡೂ ಪದ್ಧತಿಗಳ ಲಾಭ ಪಡೆಯುವ ಸಂಯೋಜಿತ ಚಿಕಿತ್ಸೆ ಈಗಿನ ಕಾಲಕ್ಕೆ ಉತ್ತಮ.

ಕೋವಿಡ್ ನಂತರದ ಕಾಲ:

ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್

ಕೋವಿಡ್ ಸಾಂಕ್ರಾಮಿಕ ನಮ್ಮನ್ನು ಆವರಿಸಿಕೊಂಡು ಮಾನಸಿಕ, ದೈಹಿಕ ಆರೋಗ್ಯಕ್ಕೆ ಮಾಡಿರುವ ಹಾನಿ ಅಪಾರ. ಆರ್ಥಿಕ ನಷ್ಟ, ಉದ್ಯೋಗ ನಷ್ಟದಿಂದಾದ ಬದಲಾವಣೆಗಳಿಂದ ಇಡೀ ಮಾನವ ಜನಾಂಗ ನೊಂದಿದೆ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನೋವುಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗ ನೀಡುವ ಮಾನಸಿಕ ಸಮಾಧಾನ, ದೈಹಿಕ ಆರೋಗ್ಯ ಮಹತ್ವ ಪಡೆದುಕೊಂಡಿದೆ. ಇದಕ್ಕಾಗಿಯೇ ಆಯುಷ್ ಇಲಾಖೆಯಿಂದ ಯೋಗ್ಯಾಭ್ಯಾಸ ಕುರಿತು ಹೆಚ್ಚು ಅರಿವು ಮೂಡಿಸಲಾಗಿದೆ. ವಿಶೇಷವಾಗಿ, ಮನೆ ಆರೈಕೆಯಲ್ಲಿರುವ ಕೋವಿಡ್ ರೋಗಿಗಳು, ಗುಣಮುಖರಾದ ರೋಗಿಗಳು ಯೋಗ ಹಾಗೂ ಪ್ರಾಣಾಯಾಮ ಮಾಡುವುದು ಸೂಕ್ತ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

ಯೋಗದ ಭಾಗವಾದ ಪ್ರಾಣಾಯಾಮ ಉಸಿರಾಟದ ಪ್ರಕ್ರಿಯೆ ಯನ್ನು ಹೆಚ್ಚು ಸದೃಢವಾಗಿರಿಸುತ್ತದೆ. ಕೋವಿಡ್ ಎರಡನೇ ಅಲೆ ಯಲ್ಲಿ ಕೋವಿಡ್‌ ರೋಗಿಗಳು ವೈದ್ಯಕೀಯ ಆಮ್ಲಜನಕದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಣಾಯಾಮದಂತಹ ಅಭ್ಯಾಸ ಅಗತ್ಯವಿದೆ. ಶಾಲಾ, ಕಾಲೇಜುಗಳ ಪಠ್ಯಕ್ರಮಗಳಲ್ಲೇ ಇದನ್ನು ಅಳವಡಿಸುವ ಅಗತ್ಯವೂ ಇದೆ.

ಆಧುನಿಕ ಜೀವನ ಶೈಲಿಯಿಂದಾಗಿ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದೊತ್ತಡ, ಖಿನ್ನತೆ, ಮೂತ್ರಪಿಂಡದ ಸಮಸ್ಯೆ, ಗರ್ಭಧಾರಣೆಯಲ್ಲಿನ ತೊಂದರೆ ಮೊದಲಾದ ಸಮಸ್ಯೆಗಳು ತೀವ್ರವಾಗಿ ಜನರನ್ನು ಕಾಡುತ್ತಿದೆ. ಇತ್ತೀಚಿಗೆ ಹೆಚ್ಚಾಗಿ ಕಾಣಿಸಿಕೊಂಡಿರುವ ಕಪ್ಪು ಶಿಲೀಂಧ್ರ ರೋಗ ಮಧುಮೇಹಿಗಳು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಹೆಚ್ಚಾಗಿ ಕಾಡುತ್ತಿದೆ. ಕೋವಿಡ್‌ ಸಾಂಕ್ರಾಮಿಕ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೇಗನೆ ತಗುಲುತ್ತಿದೆ. ಜೀವನಶೈಲಿಯನ್ನು ಶಿಸ್ತಾಗಿ ಮಾರ್ಪಡಿಸುವ ಯೋಗಾಭ್ಯಾಸವೇ ಇವುಗಳಿಗೆ ಸೂಕ್ತ ಪರಿಹಾರ.

ಭಾರತದ ಯೋಗಗುರುಗಳಾದ ಬಿ.ಕೆ.ಎಸ್.ಅಯ್ಯಂಗಾರ್, ತಿರುಮಲೈ ಕೃಷ್ಣಮಾಚಾರ್ಯ, ಕೆ.ಪಟ್ಟಾಭಿ ಜೋಯಿಸ್, ಸ್ವಾಮಿ ಶಿವಾನಂದ ಸರಸ್ವತಿ ಯೋಗವನ್ನು ಜೀವನದ ಭಾಗವಾಗಿಸಿ ಅಭ್ಯಾಸ ಮಾಡಿದವರು. ಯೋಗವು ಜಗದಗಲ ವ್ಯಾಪಿಸಲು ಕಾರಣರಾದ ಈ ಮಹನೀಯರು ತಮ್ಮದೇ ಆದ ಯೋಗಶೈಲಿ ಪರಿಚಯಿಸಿದ್ದರು. ಇದೇ ರೀತಿ ಇಂದಿನ ಜೀವನಶೈಲಿಗೆ ಅಗತ್ಯವಾದ ಯೋಗಾಭ್ಯಾಸದ ವಿಧಾನವನ್ನು ಜನರಿಗೆ ನೀಡಿ, ರೋಗಗಳಿಂದ ಸಾಧ್ಯವಾದಷ್ಟು ದೂರವಿರುವಂತೆ ಮಾಡುವ ತುರ್ತು ಅಗತ್ಯವಿದೆ.

‘ವಜ್ರದ ಗಟ್ಟಿತನವು ಅದರ ಪ್ರಯೋಜನದ ಭಾಗ. ಆದರೆ ಅದರಿಂದ ಹೊರಹೊಮ್ಮಿ ಹೊಳೆಯುವ ಬೆಳಕಿನಲ್ಲಿ ಅದರ ನೈಜ ಮೌಲ್ಯವಿದೆ’ ಎಂದು ಯೋಗವನ್ನು ವಿಶ್ವಾದ್ಯಂತ ಹರಡಿದಕೋಲಾರದ ಯೋಗಗುರು ಬಿ.ಕೆ.ಎಸ್.ಅಯ್ಯಂಗಾರ್ ಹೇಳಿದ್ದರು. ಜಗತ್ತಿನಲ್ಲೇ ಅತಿಹೆಚ್ಚು ಯುವಜನರನ್ನು ಹೊಂದಲಿರುವ ಭಾರತದಲ್ಲಿ, ಪ್ರತಿ ವ್ಯಕ್ತಿಯ ಒಳಗಿನ ನಿಜವಾದ ಶಕ್ತಿ ಹೊರಬಂದು ಪ್ರಕಾಶಿಸಲು ಯೋಗಾಭ್ಯಾಸವೇ ಉತ್ತಮ ಹಾದಿ. ಈ ಯೋಗದ ಬೆಳಕಿನಲ್ಲಿ ಎಲ್ಲರೂ ನಡೆದರೆ ಭಾರತ ಪ್ರಕಾಶಿಸಲಿದೆ.

ಲೇಖಕ: ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT