ಭಾನುವಾರ, ಜನವರಿ 17, 2021
18 °C

ಕೊರೊನಾ ಒಂದಿಷ್ಟು ತಿಳಿಯೋಣ: ಲಸಿಕೆ, ಪ್ರತಿ ವರ್ಷ ಪಡೆಯಬೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಲಸಿಕೆಯ ಡೋಸ್‌ ಪಡೆದವರು, ಪಡೆಯುವವರು ಎಲ್ಲರಲ್ಲೂ ಒಂದು ಅನುಮಾನವಿದೆ, ಅದೆಂದರೆ ಈ ಲಸಿಕೆ ಎಷ್ಟು ದಿನ ಅಥವಾ ವರ್ಷಗಳ ಕಾಲ ವೈರಸ್‌ ವಿರುದ್ದ ರೋಗ ನಿರೋಧಕ ಶಕ್ತಿ ನೀಡಬಲ್ಲದು ಎಂದು. ಅಮೆರಿಕದಲ್ಲಿ ನೀಡಲಾಗುತ್ತಿರುವ ಫೈಜರ್‌ ಅಥವಾ ಮೋಡರ್ನಾ ಲಸಿಕೆ ಪಡೆದುಕೊಂಡವರಲ್ಲಿ ಮೂರು ವರ್ಷಗಳ ಕಾಲ ಪ್ರತಿರಕ್ಷಣ ಗುಣ ಇರುತ್ತದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈ ಲಸಿಕೆಯನ್ನು ಪ್ರತಿ ವರ್ಷ ಪಡೆಯಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಪ್ರತಿಕಾಯಗಳ ಸಂಖ್ಯೆ ಕುಸಿದ ನಂತರ ಈ ಶಕ್ತಿಯೂ ಇರುವುದಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ ಎನ್ನುವ ತಜ್ಞರು, ದಡಾರದ ತರಹ ಒಂದು ಸಲ ಕೊಟ್ಟರೆ ಸಾಲದು ಎನ್ನುತ್ತಾರೆ.

ಇದನ್ನು ಅಮೆರಿಕದ ಒರೆಗಾನ್‌ ಸ್ಟೇಟ್‌ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ವಿಭಾಗದ ನಿರ್ದೇಶಕ ಚುನ್‌ಹುಯ್‌ ಚಿ ದೃಢಪಡಿಸಿದ್ದಾರೆ. ಕೋವಿಡ್‌ಗೆ ಸದ್ಯಕ್ಕೆ ಕಂಡು ಹಿಡಿಯಲಾಗಿರುವ ಎಲ್ಲಾ ಲಸಿಕೆಗಳು ನೀಡುವ ರೋಗ ನಿರೋಧಕ ಶಕ್ತಿಯ ಅವಧಿ ಹೆಚ್ಚೇನಿಲ್ಲ. ಇತರ ಲಸಿಕೆಗಳನ್ನು ತೆಗೆದುಕೊಂಡರೆ, ಉದಾಹರಣೆಗೆ ಫ್ಲು ಲಸಿಕೆ ಕೆಲವು ತಿಂಗಳುಗಳ ಕಾಲ ಪ್ರತಿರಕ್ಷಣೆ ನೀಡಬಲ್ಲದು. ಆದರೆ ದಡಾರ ಲಸಿಕೆ ಜೀವನಪರ್ಯಂತ ರೋಗ ನಿರೋಧಕ ಶಕ್ತಿ ನೀಡುತ್ತದೆ. ಈ ಅವಧಿ ವೈರಸ್‌ ಮತ್ತು ಲಸಿಕೆಯ ಗುಣಗಳನ್ನು ಅವಲಂಬಿಸಿದೆ ಎಂದು ಅವರು ವಿಶ್ವವಿದ್ಯಾಲಯದ ಜರ್ನಲ್‌ನಲ್ಲಿ ಈ ಕುರಿತು ಪ್ರಕಟಿಸಿರುವ ಲೇಖನದಲ್ಲಿ ಹೇಳಿದ್ದಾರೆ.

ಲಸಿಕೆಯನ್ನು ಪಡೆದವರ ಮೇಲೆ ಸೂಕ್ತ ಅಧ್ಯಯನ ನಡೆಸಿದರೆ ಈ ಬಗ್ಗೆ ಬೆಳಕು ಚೆಲ್ಲಬಹುದು. ಫೈಜರ್‌ ಮತ್ತು ಮೋಡರ್ನಾ ಲಸಿಕೆಗಳು ಎಂಆರ್‌ಎನ್‌ಎ ಮೂಲವಾಗಿಟ್ಟುಕೊಂಡು ತಯಾರಿಸಲಾದ ಲಸಿಕೆಗಳು. ಲಸಿಕೆ ದೇಹವನ್ನು ಸೇರಿದ ನಂತರ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ವೈರಸ್‌ ಅನ್ನು ಗುರುತಿಸಿ ಹೋರಾಟ ನಡೆಸುವುದು ಟಿ ಕೋಶ. ಈ ಕೋಶಗಳು ಎಷ್ಟು ಕಾಲ ಕೊರೊನಾ ವೈರಸ್‌ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಜೀವಕೋಶಗಳ ಸ್ಮರಣ ಶಕ್ತಿಯ ಅವಧಿ ಅತ್ಯಂತ ಕಡಿಮೆ ಎಂದು ಅವರು ಲೇಖನದಲ್ಲಿ ವಿವರಿಸಿದ್ದಾರೆ.

ಬೇರೆ ಕೆಲವು ಲಸಿಕೆಗಳನ್ನು ಜೀವಂತ ಅಥವಾ ಸತ್ತ ವೈರಸ್‌ನಿಂದ ಮಾಡಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ರೂಪಾಂತರ ಹೊಂದಿದ ವೈರಸ್‌ ಇಂಗ್ಲೆಂಡ್‌ನಲ್ಲಿ ಮೊದಲು ಕಾಣಿಸಿಕೊಂಡಿತು. ಇದು ತೀವ್ರವಾಗಿ ಸೋಂಕು ಹರಡುವ ವೈರಸ್‌ ಆಗಿದ್ದು, ಅಮೆರಿಕ, ದಕ್ಷಿಣ ಆಫ್ರಿಕಾ ಮೊದಲಾದ ಕಡೆಯೂ ಹರಡಿದೆ. ಆದರೆ ಫ್ಲು ವೈರಸ್‌ ತರಹ ಈ ರೂಪಾಂತರಗೊಂಡ ವೈರಸ್‌ನಲ್ಲಿ ಹೆಚ್ಚಿನ ವೈವಿಧ್ಯವಿಲ್ಲ. ಹೀಗಾಗಿ ಇದೇ ಲಸಿಕೆಯೇ ರೂಪಾಂತರಗೊಂಡ ವೈರಸ್‌ನಿಂದಲೂ ರಕ್ಷಣೆ ನೀಡುತ್ತದೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು