ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಗು ಸ್ವಾವಲಂಬಿಯೇ?

Last Updated 2 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಗೆಳತಿ ನಿಯತಿಯ ಮಗನಿಗೆ ಇನ್ನೂ 7 ವರ್ಷ. ಊಟ– ತಿಂಡಿ ಆದ ತಕ್ಷಣ ತನ್ನ ಪ್ಲೇಟ್‌, ಲೋಟ ಎತ್ತಿಕೊಂಡು ವಾಷ್‌ ಬೇಸಿನ್‌ನಲ್ಲಿ ತೊಳೆದು ಅಡುಗೆಕಟ್ಟೆಯ ಮೇಲೆ ಕವುಚಿ ಇಡುವ ಅಭ್ಯಾಸ ಬೆಳೆಸಿಕೊಂಡಿದ್ದಾನೆ. ಸ್ನಾನ ಮಾಡುವಾಗ ಪುಟ್ಟ ಚೆಡ್ಡಿಯನ್ನು ತೊಳೆದು, ಹಿಂಡಿ ಬಾಲ್ಕನಿಯಲ್ಲಿ ಒಣ ಹಾಕುವುದಲ್ಲದೇ, ಒಣಗಿದ ಬಟ್ಟೆಯನ್ನು ಮಡಿಸಿ ಒಳಗಿಡುವ ರೂಢಿಯೂ ಆತನಿಗಿದೆ. ಶಾಲೆಗೆ ಹಾಕಿಕೊಂಡು ಹೋಗುವ ಶೂ ಧೂಳು ಒರೆಸಿ ಓರಣವಾಗಿಟ್ಟುಕೊಳ್ಳುವ ಆ ಬಾಲಕನ ನಡವಳಿಕೆ ಎಂಥವರಿಗೂ ಖುಷಿ ಕೊಡುವಂತಹದ್ದು.

‘ಸೊಪ್ಪು ತಂದರೆ ಬಿಡಿಸಿ ಕೊಡ್ತಾನೆ. ಶಾಲೆಗೆ ಒಯ್ಯುವ ಡಬ್ಬಿಯನ್ನು ತೊಳೆದಿಡುವುದೂ ಅವನೇ. ಮೊನ್ನೆ ‘ದೋಸೆ ಮಾಡುವುದು ಹೇಳಿ ಕೊಡು’ ಎನ್ನುತ್ತಿದ್ದ. ನಾನೇ ಗ್ಯಾಸ್‌ ಬಳಿ ಬಿಡುವುದಿಲ್ಲ’ ಎಂದು ಮಗನನ್ನು ಹೊಗಳುತ್ತಿದ್ದ ನಿಯತಿಯ ಮುಖದಲ್ಲಿ ಹೆಮ್ಮೆಯ ನಗುವಿತ್ತು.

ಹೌದು, ಮಕ್ಕಳಿಗೆ ಸ್ವಾವಲಂಬನೆಯ ಪಾಠ ಕಲಿಸುವುದು ಒಳ್ಳೆಯದೇ. ಚಿಕ್ಕಂದಿನಿಂದಲೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತ, ಪೋಷಕರಿಗೂ ನೆರವಾಗುತ್ತ ಬೆಳೆಯುವ ಮಕ್ಕಳು ಕೌಶಲಗಳಲ್ಲಿ ಪಳಗುತ್ತಾರಂತೆ; ಹಾಗೆಯೇ ಶೈಕ್ಷಣಿಕವಾಗಿಯೂ ಉತ್ತಮ ಬೆಳವಣಿಗೆ ತೋರಿಸುತ್ತಾರಂತೆ.

ಆದರೆ ಮಕ್ಕಳನ್ನು ಸ್ವಾವಲಂಬಿಯಾಗಿ ಬೆಳೆಸುವಲ್ಲಿ ಪೋಷಕರ ಪಾತ್ರವೇನು? ಮಕ್ಕಳಿಗೆ ಈ ರೀತಿಯ ಅಭ್ಯಾಸಗಳನ್ನು ಹೇಳಿಕೊಟ್ಟು, ರೂಢಿಸುವಾಗ ಸಹನೆ ಬಹಳ ಮುಖ್ಯ. ಕೇವಲ ಕೆಲಸ ಕೊಡುವ ಬದಲು ಮಾರ್ಗದರ್ಶನ ಮಾಡುವುದು ಸೂಕ್ತ.

ಬಹಳಷ್ಟು ಪೋಷಕರು ಮಾಡುವ ತಪ್ಪೆಂದರೆ ಮಕ್ಕಳ ಮೇಲೆ ಅವಶ್ಯಕತೆಗಿಂತ ಹೆಚ್ಚಿನ ಕಾಳಜಿ ತೋರಿಸಿ ಬೆಳೆಸುವುದು. ಮಕ್ಕಳಿಗೇನಾದರೂ ಸಮಸ್ಯೆ ಬಂದರೆ ತಾವೇ ಬಗೆಹರಿಸುತ್ತಾರೆಯೇ ಹೊರತು ಅದನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುವುದಿಲ್ಲ. ತಮ್ಮ ಮಕ್ಕಳು ಯಾವುದರಲ್ಲೂ ವಿಫಲರಾಗಬಾರದು ಎಂಬ ಮನಸ್ಥಿತಿ ಬಹಳಷ್ಟು ಪೋಷಕರದ್ದು. ಇಂತಹ ಮಕ್ಕಳು ಮುಂದೆ ಬದುಕಿನಲ್ಲಿ ಹೆಚ್ಚು ಸಫಲರಾಗುವುದಿಲ್ಲ ಎಂಬುದು ತಜ್ಞರ ಅಂಬೋಣ. ಹೀಗಾಗಿ ಮಕ್ಕಳ ಎಲ್ಲಾ ಕೆಲಸಗಳನ್ನು ನೀವೇ ಮಾಡಿಕೊಡಲು ಹೋಗಬೇಡಿ. ಬದಲಾಗಿ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡಿ. ಇದರಿಂದ ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಂಡು, ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ.

ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಬೇಕಾದ ಕೆಲಸಗಳು, ಉದಾಹರಣೆಗೆ ಅಡುಗೆಮನೆಯಲ್ಲಿ ಚಾಕೂವಿನಿಂದ ತರಕಾರಿ ಹೆಚ್ಚುವಂತಹ, ಗ್ಯಾಸ್‌ ಸ್ಟವ್‌ ಮೇಲೆ ಬೇಯಿಸುವಂತಹ, ಚಹ ಮಾಡುವಂತಹ ಕೆಲಸಗಳಿದ್ದರೆ ನೀವು ಅಲ್ಲೇ ಇದ್ದರೆ ಉತ್ತಮ. ಮಕ್ಕಳು ಎಲ್ಲಾ ಎಚ್ಚರಿಕೆ ತೆಗೆದುಕೊಂಡು ಮಾಡುತ್ತಾರೆ ಎಂಬ ವಿಶ್ವಾಸ ನಿಮಗೆ ಬಂದ ಮೇಲೆ ನಿಧಾನವಾಗಿ ಅವರಷ್ಟಕ್ಕೇ ಮಾಡಲು ಬಿಡಿ.

ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಂಡಾಗ ಮೆಚ್ಚುಗೆಯ ಮಾತನಾಡಿ. ಆದರೆ ಸರಿಯಾಗಿ ಮಾಡಿಲ್ಲ.. ಇನ್ನೂ ಚೆನ್ನಾಗಿ ಮಾಡಬಹುದಿತ್ತು.. ಎಂಬಂತಹ ಮಾತುಗಳನ್ನು ಆಡಬೇಡಿ. ಮಕ್ಕಳು ತಮ್ಮಷ್ಟಕ್ಕೇ ಚೆನ್ನಾಗಿ ಕೆಲಸ ಮಾಡುವುದನ್ನು ಕಲಿತುಕೊಳ್ಳುತ್ತಾರೆ.

ಮಕ್ಕಳಿಗೆ ಇಂತಹ ಕೆಲಸ ನಿನ್ನದು ಎನ್ನುವುದಕ್ಕಿಂತ ಸರಳವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಅಡುಗೆಯಾದ ಮೇಲೆ ಟೇಬಲ್‌ ಮೇಲೆ ಪಾತ್ರೆಗಳನ್ನು ಜೋಡಿಸಿಡುವುದು, ತೊಳೆದ ಬಟ್ಟೆಗಳನ್ನು ಒಣಹಾಕುವುದು.. ಹೀಗೆ ಮಕ್ಕಳು ಹೊಣೆಗಾರಿಕೆಯಿಂದ ಕೆಲಸ ಮಾಡುವುದನ್ನು ಕಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT