ಭಾನುವಾರ, ಮೇ 22, 2022
22 °C
ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚು: ಹೆಚ್ಚುತ್ತಿದೆ ಕೊರೊನಾ,ಇತರೆ ಸೋಂಕು

ಇದು ಬರೀ ಬಿಸಿಲಷ್ಟೇ ಅಲ್ರಪಾ... ರೋಗಗಳ ಹಾವಳಿ

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:ಅವಳಿ ನಗರದಲ್ಲೀಗ ಬಿರು ಬಿಸಿಲಿನದ್ದೇ ಕಾರುಬಾರು. ನೆತ್ತಿ ಸುಡುವ ಸೂರ್ಯ, ಅಂಗಾಲು ಸುಡುವ ಭೂಮಿ. ತಾಪಮಾನ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.  ಬಿಸಿಲು ಹೆಚ್ಚಿದಂತೆ ಸಾಂಕ್ರಾಮಿಕ ರೋಗಗಳ ಬಾಧೆಯೂ ಹೆಚ್ಚು. ಕಳೆದ ವರ್ಷದಿಂದ ಮುಂದುವರಿದ ಕೊರೊನಾ ಸೋಂಕಿನ ಕಾಟ ಈ ವರ್ಷದ ಬೇಸಿಗೆಗೂ ಸಾಥ್‌ ನೀಡಿದೆ. ಪ್ರತಿಯೊಬ್ಬರೂ ಆರೋಗ್ಯದತ್ತ ಎಂದಿಗಿಂತ ಹೆಚ್ಚು ಕಾಳಜಿ ವಹಿಸಲೇ ಬೇಕಾದ ಅನಿವಾರ್ಯತೆ ಇದೆ.


ಡಾ.ಈಶ್ವರ ಹಸಬಿ

ಬಿಸಿಲಿನಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಪರಿಣಾಮ ತಲೆ ಸುತ್ತು, ದೇಹದಲ್ಲಿ ಗುಳ್ಳೆಗಳು ಏಳುತ್ತವೆ. ಬಿಸಿಲು, ದೂಳು, ಬೆವರುಸಾಲೆ, ಅಲರ್ಜಿಯಿಂದಾಗಿ ದೇಹ ಹೆಚ್ಚು ತತ್ತರಿಸಿದಂತಾಗುವುದು ಈ ಸಮಯದಲ್ಲಿಯೇ ಹೆಚ್ಚು ಎನ್ನುತ್ತಾರೆ ವೈದ್ಯರು.

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಬಿಸಿಲಿನ ತಾಪಮಾನ ದೊಂದಿಗೆ ದೂಳಿನ ಮಜ್ಜನವೂ ಸೇರಿಕೊಂಡಿದೆ. ಕೊರೊನಾ ಪ್ರಕರಣ ಗಳು ಹೆಚ್ಚುತ್ತಿದ್ದರೂ ಜನರು ಮಾಸ್ಕ್‌ ಧರಿಸುವುದಾಗಲಿ, ಅಂತರ ಕಾಪಾಡಿ ಕೊಳ್ಳುವುದಾಗಲಿ ಕಾಣುತ್ತಿಲ್ಲ. ಮಾರುಕಟ್ಟೆ ಪ್ರದೇಶ, ಬಸ್‌ನಿಲ್ದಾಣ, ಚಿತ್ರಮಂದಿರ, ಮಾಲ್, ಸಂತೆ, ಶಾಲಾ, ಕಾಲೇಜುಗಳ ಮುಂಭಾಗ, ಈಗ ವಿವಿಧೆಡೆ ನಡೆಯುತ್ತಿರುವ ಸಭೆ ಸಮಾರಂಭಗಳಲ್ಲಿ ಸೇರುವ ಜನದಟ್ಟಣೆಯಲ್ಲಿ ಮಾಸ್ಕ್‌ ಧರಿಸು ವವರ ಸಂಖ್ಯೆ ಬೆರಳೆಣಿಕೆಯಷ್ಟು. ಜನರ ನಿರ್ಲಕ್ಷ್ಯದಿಂದಾಗಿ ಮತ್ತೆ ಸೋಂಕುಗಳ ಪ್ರಮಾಣ ಹೆಚ್ಚುತ್ತಿದೆ.

'ಜನರು ಅಂತರ ಕಾಯ್ದುಕೊಳ್ಳಬೇಕು. ಜಾತ್ರೆ, ಸಾರ್ವಜನಿಕ ಸಮಾರಂಭ, ಜನನಿಬಿಡ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರ ಇರಬೇಕು,  ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಯಾವುದಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಕಾಣಬೇಕು’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ.

ಸಾಂಕ್ರಾಮಿಕ ರೋಗಗಳಾದ ಭೇದಿ, ಜಾಂಡೀಸ್‌, ಕರಳುಬೇನೆ, ಹೆಪಟೈಟಿಸ್ ಎ ಮತ್ತು ಇ, ಚಿಕನ್ ಫಾಕ್ಸ್‌ ಇವೆಲ್ಲ ಹರಡುವ ಸಮಯ ಕೂಡ ಈಗಲೇ. ಜತೆಗೆ ಜಾತ್ರೆ, ಸಂತೆ, ಸಾಮೂಹಿಕ ಸಮಾರಂಭಗಳಲ್ಲಿ ತೆಗೆದುಕೊಳ್ಳುವ ಆಹಾರ, ನೀರಿನ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು.

ಬಿರು ಬಿಸಿಲಿನಿಂದಾಗಿ ಸಾಮಾನ್ಯವಾಗಿ ಬೆವರುಸಾಲೆ, ಚರ್ಮದ ಮೇಲೆ ದದ್ದು, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದ್ರವಾಂಶವಿರುವ ಆಹಾರ ಹೆಚ್ಚಾಗಿ ತೆಗೆದುಕೊಳ್ಳಬೇಕು.  ಹಸಿ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು ವಿಟಮಿನ್‌ ಹಾಗೂ ನಾರಿನಅಂಶ ಸಿಗುತ್ತವೆ. ಹಣ್ಣನ್ನು ಜ್ಯೂಸ್‌ ಮಾಡಿಕೊಂಡು ಸೇವನೆ ಮಾಡುವುದಕ್ಕಿಂತ ಹಾಗೆಯೇ ಸೇವನೆ ಮಾಡುವುದರಿಂದ ಅದರಲ್ಲಿನ ಪೌಷ್ಟಿಕಾಂಶಗಳು ನಷ್ಟವಾಗುವುದಿಲ್ಲ ಎನ್ನುತ್ತಾರೆ ಕಿಮ್ಸ್‌ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಈಶ್ವರ ಹಸಬಿ ಅವರು.

ಬೇಸಿಗೆಯಲ್ಲಿ ಆಹಾರ, ನಿತ್ಯದ ಚಟುವಟಿಕೆ ಹೀಗಿದ್ದರೆ ಉತ್ತಮ

* ಹೆಚ್ಚು ಹೆಚ್ಚು ದ್ರವ ಆಹಾರ ಸೇವನೆ ಮಾಡಬೇಕು

* ದಿನಕ್ಕೆ ಕನಿಷ್ಠ 3ರಿಂದ 4 ಲೀಟರ್ ನೀರು ಸೇವನೆ ಕಡ್ಡಾಯ

* ಹಸಿ ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು.

* ಹಾಲು, ಮೊಸರು, ಮಜ್ಜಿಗೆ, ಜ್ಯೂಸ್‌, ಎಳನೀರಿನ ಸೇವನೆ ಇರಲಿ

* ಕಾರ್ಬೋಹೈಡ್ರೇಟ್ಸ್‌ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕು.

* ಮಾಂಸಾಹಾರ ಕಡಿಮೆ ಸೇವನೆ ಮಾಡಬೇಕು.

* ಎಣ್ಣೆ, ತುಪ್ಪ, ಬೆಣ್ಣೆ, ಕರಿದ ಆಹಾರ ಪದಾರ್ಥ ಸೇವನೆ ಬಹಳ ಕಡಿಮೆ ಮಾಡಬೇಕು.

* ಫ್ರಿಡ್ಜ್‌ನಲ್ಲಿಟ್ಟ ಆಹಾರಗಳನ್ನು ಸೇವನೆ ಸಾಧ್ಯವಾದಷ್ಟು ಕಡಿಮೆ ಮಾಡಿ.

* ಮಧುಮೇಹ ಇರುವವರು ಸಪೋಟ, ಬಾಳೆ, ಮಾವಿನಹಣ್ಣನ್ನು ಹೊರತುಪಡಿಸಿ ಉಳಿದ ಹಣ್ಣುಗಳನ್ನು ಸೇವಿಸಬಹುದು.

* ಪ್ರಖರ ಬಿಸಿಲಿನ ವೇಳೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು. ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸಿ. ದಿನಕ್ಕೆ ಎರಡು ಬಾರಿ (ಮುಂಜಾನೆ, ಸಂಜೆ) ಸ್ನಾನ ಮಾಡಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವವರು ಕೋಡೆ ಒಯ್ಯುವುದರ ಜೊತೆ ಸದಾ ಹಣ್ಣಿನ ರಸ, ಮಜ್ಜಿಗೆ ಅಥವಾ ನೀರು ಕಡ್ಡಾಯವಾಗಿ ಸೇವಿಸಲೇಬೇಕು.

* ಸರಳ ವ್ಯಾಯಾಮ, ನಡಿಗೆ ಸಹಕಾರಿ. ಅತಿಯಾದ ಬಿಸಿಲಿನಲ್ಲಿ ವ್ಯಾಯಾಮ ಬೇಡ. ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಿ.

 * ಬಿರುಬಿಸಿಲಿನಲ್ಲಿ ಆಡುವ ಮಕ್ಕಳಿಗೆ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದಕ್ಕೆ ‘ಸನ್ ಕ್ರೀಂ’ ಬಳಸಬಹುದು.  

* ಎಳೆ ಬಿಸಿಲು ಬಿಟ್ಟು ಯಾವುದೇ ಕಾರಣಕ್ಕೂ ಬಿಸಿಲಿಗೆ ಮಗುವನ್ನು ಹೊರಗಡೆ ತರಬಾರದು. ಆದಷ್ಟು ಹಿತಕರ ಜಾಗದಲ್ಲಿಯೇ ಮಗು, ತಾಯಿ ಆರೈಕೆ ನಡೆಯಲಿ. 

* ಎ.ಸಿ.ರೂಮಿನಲ್ಲಿ ಕುಳಿತು ಕೆಲಸ ಮಾಡುವವರು ಕೂಡ ಬೆವರದೇ ಇದ್ದರೂ ಆಗಾಗ ನೀರು ಕುಡಿಯುವುದನ್ನು ಮರೆಯಬಾರದು.  

* ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗುವವರ ಆದಷ್ಟು ತಂಪಾದ ಸ್ಥಳಗಳಿಗೆ ಹೋಗಬಹುದು. ಎಲ್ಲಿ ಹೋದರೂ ನಿಮ್ಮ ಬಳಿ ನೀರಿನ ಬಾಟಲಿ ಇಟ್ಟುಕೊಂಡು ಹೋಗಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು