ಸೋಮವಾರ, ಅಕ್ಟೋಬರ್ 26, 2020
28 °C

ಕೊರೊನಾ ಕಾಲದಲ್ಲಿ ದಂತ ಸಮಸ್ಯೆ ಅಧಿಕವೇಕೆ?

ರೇಷ್ಮಾ Updated:

ಅಕ್ಷರ ಗಾತ್ರ : | |

Teeth health

ಲಾಕ್‌ಡೌನ್‌, ಕೋವಿಡ್‌–19 ಕಾರಣದಿಂದ ಮನೆಯಲ್ಲೇ ಇರುವುದರಿಂದ ಬೇಸರ ಕಳೆಯಲು ಬಾಯಿಗೆ ರುಚಿಸಿದ್ದನ್ನೆಲ್ಲಾ ತಿನ್ನುವುದು ರೂಢಿಯಾಗಿದೆ. ಹೊರಗಡೆ ಹೋಗಿ ತಿನ್ನುವುದು ಕಡಿಮೆಯಾದರೂ ಮನೆಯಲ್ಲೇ ಬಗೆ ಬಗೆಯ ಜಂಕ್‌ಫುಡ್ ಹಾಗೂ ಫಾಸ್ಟ್‌ಫುಡ್‌ಗಳನ್ನು ತಯಾರಿಸಿ ತಿನ್ನುತ್ತಿದ್ದೇವೆ. ಕೊರೊನಾ ಸಮಯದಲ್ಲಿ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಗಮನ ಹರಿಸುವ ಭರದಲ್ಲಿ ಹಲ್ಲಿನ ಆರೋಗ್ಯದ ಮೇಲೆ ಗಮನ ಹರಿಸುವುದು ಕಡಿಮೆಯಾಗಿದೆ. ಇದರಿಂದ ಹಲ್ಲು ನೋವು, ಊತ, ಹುಳುಕು, ಕೀವಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. 

‘ಬಾಯಿಯಿಂದ ಕೊರೊನಾದಂತಹ ಸೋಂಕು ಬೇಗನೆ ಹರಡುತ್ತವೆ. ಆ ಕಾರಣಕ್ಕೆ ದಂತ ವೈದ್ಯರು ಹಾಗೂ ರೋಗಿಗಳು ಸಾಕಷ್ಟು ಸುರಕ್ಷತೆ ವಹಿಸಬೇಕು. ಈಗ ಕ್ಲಿನಿಕ್‌ಗಳನ್ನು ತೆರೆದಿದ್ದರೂ ಎಲ್ಲರಿಗೂ ಚಿಕಿತ್ಸೆ ನೀಡುವುದು ಕಷ್ಟ. ಆ ಕಾರಣಕ್ಕೆ ಮನೆಯಲ್ಲೇ ಕೆಲವೊಂದು ಸುರಕ್ಷತಾ ಮಾರ್ಗಗಳನ್ನು ಅನುಸರಿಸುವುದು ಸೂಕ್ತ’ ಎನ್ನುತ್ತಾರೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಷಾ ಮೆಡಿಕಲ್ ಸೆಂಟರ್‌ನ ಮ್ಯಾಕ್ಸಿಲ್ಲೊಫೆಷಿಯಲ್ ಶಸ್ತ್ರಚಿಕಿತ್ಸಕ ಡಾ. ಸಮರ್ಥ್ ಆರ್‌. ಶೆಟ್ಟಿ 

ಹಲ್ಲು ನೋವು ಹೆಚ್ಚಲು ಕಾರಣಗಳು 

ಬದಲಾದ ಕೆಲಸದ ದಿನಚರಿ, ಪದೇ ಪದೇ ಏನನ್ನಾದರೂ ಜಗಿದು ತಿನ್ನುತ್ತಿರುವುದು, ಮನೆಯಲ್ಲಿ ಬೇಸರ ಕಳೆಯಲು ಊಟ– ತಿಂಡಿಯ ಮಧ್ಯೆ ಹೆಚ್ಚು ಸ್ನ್ಯಾಕ್ಸ್ ಸೇವಿಸುವುದು 

ಲಾಕ್‌ಡೌನ್ ಒತ್ತಡದ ಕಾರಣ ದಿಂದ ಜನರಲ್ಲಿ ಸಿಗರೇಟ್, ತಂಬಾಕಿನ ಸೇವನೆಯ ಪ್ರಮಾಣ ಹೆಚ್ಚಿದೆ.  ಇದು ವಸಡಿನಲ್ಲಿ ರಕ್ತಸ್ರಾವ ಹಾಗೂ ಸೆಳೆತಕ್ಕೆ ಕಾರಣವಾಗಿದೆ 

ಕಳೆದ ಕೆಲವು ತಿಂಗಳಿನಿಂದ ದಂತ ಕ್ಲಿನಿಕ್‌ಗಳು ತೆರೆದಿರಲಿಲ್ಲ. ಆ ಕಾರಣಕ್ಕೆ ದಂತ ಸಮಸ್ಯೆಗೆ ಸಂಬಂಧಿಸಿ ಜನರಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿರಲಿಲ್ಲ. ಈಗ ಕ್ಲಿನಿಕ್‌ಗಳು ಪುನರಾರಂಭಗೊಂಡರೂ ಕೋವಿಡ್ ಸಂಪೂರ್ಣ ನಿಲ್ಲದ ಕಾರಣ ಚಿಕಿತ್ಸೆ ನೀಡುವುದು ಕಷ್ಟವಾಗಿದೆ. ಆ ಕಾರಣಕ್ಕೆ ಅರ್ಧದಷ್ಟು ಮಂದಿ ಚಿಕಿತ್ಸೆ ಇಲ್ಲದೇ ಪರದಾಡುತ್ತಿದ್ದಾರೆ. 

ಜಂಕ್‌ಫುಡ್‌ನಿಂದಾಗುವ ಸಮಸ್ಯೆಗಳು 

‘ಜಂಕ್‌ ಆಹಾರಗಳು ಬಾಯಿಗೆ ರುಚಿ ಎನ್ನಿಸಿದರೂ ಅವು ದೇಹ ಹಾಗೂ ಹಲ್ಲಿನ ಆರೋಗ್ಯಕ್ಕೆ ಉತ್ತಮವಲ್ಲ. ಹಲ್ಲಿನ ಸಂಧಿಯಲ್ಲಿ ಸೇರುವ ಜಂಕ್‌ ಆಹಾರಗಳು ಉತ್ಪತ್ತಿ ಮಾಡುವ ಸಕ್ಕರೆಯ ಅಂಶವು ಹಲ್ಲಿನ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ’ ಎನ್ನುತ್ತಾರೆ ಡಾ.ಸಮರ್ಥ್ ಶೆಟ್ಟಿ. 

ಹುಳುಕು

ವಸಡಿನಲ್ಲಿ ಸೋಂಕು 

ಅತಿಯಾದ ಕೋಲ್ಡ್‌ಡ್ರಿಂಕ್ಸ್‌ ಸೇವನೆಯಿಂದ ಹಲ್ಲಿನ ಬಣ್ಣ ಬದಲಾಗುವುದು 

ಹಲ್ಲಿನ ಸುತ್ತಲೂ ರಕ್ಷಣೆಗಾಗಿ ಇರುವ ಎನಾಮಲ್ ಅಂಶ ದುರ್ಬಲಗೊಳ್ಳುವುದು 

ಜಂಕ್‌ಫುಡ್ ಸೇವನೆಯಿಂದ ಉಂಟಾಗುವ ಆ್ಯಸಿಡಿಟಿ ಕೂಡ ಹಲ್ಲಿನ ಮೇಲೆ ಪರಿಣಾಮ ಬೀರಬಹುದು. 

ಹಲ್ಲಿನ ಆರೋಗ್ಯದ ರಕ್ಷಣೆ 

ಹೆಚ್ಚು ಹೆಚ್ಚು ಹಣ್ಣು ಹಾಗೂ ತರಕಾರಿಗಳ ಸೇವನೆ 

ಜಂಕ್, ಫಾಸ್ಟ್‌ಫುಡ್ ಬದಲು ಸಾಂಪ್ರದಾಯಿಕ ಹಾಗೂ ನೈಸರ್ಗಿಕ ಆಹಾರ ಸೇವನೆ 

ಜಂಕ್‌ ಅಥವಾ ಫಾಸ್ಟ್‌ಫುಡ್ ಸೇವಿಸಿದ ತಕ್ಷಣ ಬಾಯಿ ಮುಕ್ಕಳಿಸುವುದು 

ಹೆಚ್ಚು ನೀರು ಕುಡಿಯುವುದು. ನೀರು ಕುಡಿದಷ್ಟೂ ಹಲ್ಲಿನಲ್ಲಿ ಅಂಟಿಕೊಂಡಿರುವ ಕೊಳೆ ಸ್ವಚ್ಛವಾಗುತ್ತದೆ 

ಬೆಳಿಗ್ಗೆ ಹಾಗೂ ರಾತ್ರಿ 2 ಬಾರಿ ಬ್ರಷ್ ಮಾಡುವುದು ಕಡ್ಡಾಯ

ಕೆಲವರಿಗೆ ಬಾಯಿಯ ಸೋಂಕು ಉಂಟಾಗುವುದು ಜಾಸ್ತಿ. ಅಂತಹವರು ಮೌಥ್‌ವಾಷ್ ಹಾಗೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು

ರಾತ್ರಿ ಮಲಗುವಾಗ ತಿಂಡಿ ಏನಾದರೂ ತಿಂದರೆ ಬಾಯಿ ಮುಕ್ಕಳಿಸಿ ಮಲಗಬೇಕು

ಅತಿಯಾದ ನೋವು, ಊತ ಕಾಣಿಸಿಕೊಂಡರೆ ವೈದ್ಯರ ಬಳಿ ಹೋಗುವುದು
ಉತ್ತಮ


ಡಾ.ಸಮರ್ಥ್ ಆರ್‌. ಶೆಟ್ಟಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು