15 ಮತ್ತು 10 ವರ್ಷದ ಇಬ್ಬರು ಮಕ್ಕಳ ತಾಯಿ. ಟಿವಿ, ನ್ಯೂಸ್ ಪೇಪರ್‌ಗಳಲ್ಲಿ ಬರೀ ಮನುಷ್ಯನ ವಿಕೃತಿಗಳೇ ತುಂಬಿರುತ್ತವೆ. ಮಕ್ಕಳಿಂದ ಇಂಥ ವಿಷಯಗಳನ್ನು ಎಷ್ಟೇ ದೂರದಲ್ಲಿಟ್ಟರೂ ಅವರೂ ಮುಂದೆ ಈ ಸಮಾಜವನ್ನು ಎದುರಿಸಲೇಬೇಕು. ಇಂತಹ ಸಮಾಜಕ್ಕೆ ಅವರನ್ನು ಹೇಗೆ ಬಿಟ್ಟುಕೊಡುವುದೆಂದು ಆತಂಕವಾಗುತ್ತಿದೆ. ಹಿಂದೊಮ್ಮೆ ನೀವು ಮಕ್ಕಳ ಪೋಷಣೆಯಲ್ಲಿ ತಾಯಿಯ ಪಾತ್ರ ಹಿರಿದು ಅಂದಿದ್ದೀರಿ. ಆದ್ರೆ ಈಗಿನ ಕಾಲದ ಮಕ್ಕಳಿಗೆ ಸ್ನೇಹಿತರು, ಮೊಬೈಲ್, ಸಮಾಜದ ಆಕರ್ಷಣೆಯೇ ಜಾಸ್ತಿಯಿದೆ. ಇಂತಹ ವಿಚಾರಗಳಿಂದ ಚಂಚಲಿತರಾಗದಂತೆ ಅಥವಾ ಪ್ರಭಾವಕ್ಕೊಳಗಾಗದಂತೆ ಅವರನ್ನು ಹೇಗೆ ಕಾಪಾಡುವುದು? ಒಳ್ಳೆಯ ಪ್ರಜೆಯಾಗಿ ಬಾಳಿಬದುಕಲು ನಾವೇನು ಮಾಡಬಹುದು?
ಹೆಸರು ಊರು ತಿಳಿಸಿಲ್ಲ.
ನಿಮ್ಮ ಪತ್ರದಲ್ಲಿ ಮಕ್ಕಳ ಕುರಿತಾಗಿ ಪ್ರೀತಿ ಕಾಳಜಿ ಕಾಣಿಸುತ್ತಿದೆ. ಜತೆಜೊತೆಗೇ ಆತಂಕವೂ ವ್ಯಕ್ತವಾಗಿದೆ. ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರ ಹಿರಿದು ಎನ್ನುವುದು ತಪ್ಪು ಕಲ್ಪನೆ. ತಮ್ಮ ದೇಹದ ಭಾಗವಾಗಿ ಬೆಳೆಸಿರುವ ಮಕ್ಕಳ ಕುರಿತು ತಾಯಂದಿರಿಗೆ ಹೆಚ್ಚಿನ ಕಕ್ಕುಲಾತಿ ಇರುವುದು ನಿಜ. ಇದು ಮಕ್ಕಳ ಮೇಲಿನ ಅಧಿಕಾರವಲ್ಲ.8ನೇ ಜುಲೈ 2023ರಂದು ಇದೇ ಅಂಕಣದಲ್ಲಿ ಪ್ರಕಟವಾದ ‘ಮಕ್ಕಳು ಕೌಟುಂಬಿಕ ವಾತಾವರಣದ ಕನ್ನಡಿ‘ ಎನ್ನುವ ಬರಹದಲ್ಲಿ ಕುಟುಂಬದ ಭಾವನಾತ್ಮಕ ವಾತಾವರಣ ಮಕ್ಕಳನ್ನು ಹೇಗೆ ರೂಪಿಸುತ್ತದೆ ಎನ್ನುವುದನ್ನು ವಿವರವಾಗಿ ಬರೆಯಲಾಗಿದೆ.
‘ಮಕ್ಕಳನ್ನು ಸಮಾಜಕ್ಕೆ ಹೇಗೆ ಬಿಟ್ಟುಕೊಡುವುದು‘ ಎನ್ನುವ ಶಬ್ದಗಳು ಆತಂಕ ಮತ್ತು ಮಕ್ಕಳ ಮೇಲೆ ಹೊಂದಿರುವ ಅಧಿಕಾರದ ಭಾವವನ್ನು ಸೂಚಿಸುತ್ತದೆ. ಮಕ್ಕಳು ಎಲ್ಲಿ ಬಾಳಬೇಕಾಗಿದೆಯೇ ಅದೇ ಸಮಾಜದಲ್ಲಿಯೇ ಜೀವನಪಾಠಗಳನ್ನು ಕಲಿಯಬೇಕಾಗುತ್ತದೆ. ಮನೆಯಲ್ಲಿ ಅವರನ್ನು ತಯಾರಿಸಿ ಸಮಾಜಕ್ಕೆ ಬಿಡುವುದು ಎನ್ನುವುದು ತಪ್ಪುಕಲ್ಪನೆ. ಸಮಾಜದಲ್ಲಿಯೇ ಹೊಸಹೊಸ ಜೀವನಪಾಟಗಳನ್ನು ಕಲಿಯಲು ಉತ್ತೇಜಿಸಬೇಕು. ಇದಕ್ಕೆ ಸಹಾಯವಾಗುವ ಕೆಲವು ಸರಳ ಅಂಶಗಳನ್ನು ಇಲ್ಲಿ ಹೇಳಬಹುದು.
1. ಪೋಷಕರು ತಮ್ಮ ಆತಂಕ ಒತ್ತಡಗಳನ್ನು ನಿಭಾಯಿಸುವುದನ್ನು ಕಲಿಯಬೇಕು. ಇಲ್ಲದಿದ್ದರೆ ಅವೆಲ್ಲವೂ ಮಕ್ಕಳಿಗೆ ವರ್ಗಾವಣೆಯಾಗುತ್ತವೆ. ಎಲ್ಲಾ ಪೋಷಕರಿಗೂ ಮಕ್ಕಳ ಮೇಲೆ ಪ್ರೀತಿ ಕಾಳಜಿ ಇದ್ದೇ ಇರುತ್ತದೆ. ಆದರೆ ಕಾಳಜಿಯನ್ನು ಆತಂಕವಾಗಿ ಬದಲಾಯಿಸಿ ಮಕ್ಕಳ ಮೇಲೆ ಹೇರಿದರೆ ಇಬ್ಬರ ಸಂಬಂಧದಲ್ಲಿ ಬಿರುಕುಗಳು ಮೂಡುತ್ತವೆ.
2. ನಾವೆಲ್ಲರೂ ಹೆಚ್ಚಾಗಿ ಕಲಿಯುವುದು ನಮ್ಮದೇ ಜೀವನದ ಅನುಭವಗಳಿಂದಲೇ ಹೊರತು ಬುದ್ಧಿವಾದ ಉಪದೇಶಗಳಿಂದಲ್ಲ. ಹಾಗಾಗಿ ಸುರಕ್ಷಿತ ಎನ್ನಿಸುವ ಸಂದರ್ಭಗಳಲ್ಲಿ ಮಕ್ಕಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು. ನಿರ್ಧಾರಗಳು ತಪ್ಪಾದರೆ ತಪ್ಪಿನ ಅರಿವನ್ನು ಮೂಡಿಸಿ ಹೊಸದಾರಿಗಳನ್ನು ಕಲಿಸುವುದು ಸುಲಭ.
3. ಮಕ್ಕಳನ್ನು ಕುಟುಂಬದ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು. ಕುಟುಂಬದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಅವರ ಸಲಹೆ ಅಭಿಪ್ರಾಯಗಳನ್ನು ಪಡೆಯಿರಿ.
4. ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ಮಿದುಳು ಮತ್ತೆಮತ್ತೆ ತಪ್ಪು ನಿರ್ಧಾರಗಳನ್ನು ಮಾಡುವುದು ಸಹಜ. ಅದಕ್ಕಾಗಿ ಟೀಕೆ, ಉಪದೇಶಗಳ ಅಗತ್ಯವಿಲ್ಲ. ಯಾವುದೇ ಸಂದರ್ಭದಲ್ಲಿಯೂ ನಮ್ಮ ಪ್ರೀತಿ ಬೆಂಬಲವನ್ನು ಹಿಂಪಡೆಯಬಾರದು. ಹೊಸದಾರಿಗಳನ್ನು ಹುಡುಕಲು ಅವರನ್ನು ಪ್ರೇರೇಪಿಸಬೇಕು. ಬುದ್ಧಿವಾದ ಮಾರ್ಗದರ್ಶನಕ್ಕಿಂತ ಹೊಸಹೊಸ ಪ್ರಶ್ನೆಗಳನ್ನು ಕೇಳಿ ಅವರ ಮಿದುಳನ್ನು ಕ್ರಿಯಾಶೀಲಗೊಳಿಸಬಹುದು.
5. ನಮ್ಮ ಮಿದುಳಿನಲ್ಲಿ ಎಲ್ಲಾ ಭಾವನೆಗಳಿಗೆ ಬೇರೆಬೇರೆ ಸಂಪರ್ಕಜಾಲಗಳಿವೆ. ಭಾವನೆಗಳನ್ನು ಅನುಭವಿಸುವುದರ ಮೂಲಕವೇ ಆ ಸಂಪರ್ಕ ಜಾಲಗಳು ಸಶಕ್ತವಾಗಿ ಬೆಳೆದು ಮುಂದೆ ಇಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತವೆ. ಸಿಟ್ಟು, ದುಃಖ, ಹತಾಶೆ, ಅಸಹಾಯಕತೆ ಹೀಗೆ ಎಲ್ಲಾ ಭಾವನೆಗಳನ್ನು ಅನುಭವಿಸಲು ಮಕ್ಕಳಿಗೆ ಅವಕಾಶಕೊಡಬೇಕು. ಆದರೆ ಸಿಟ್ಟು ಕೆಟ್ಟ ಮಾತು ಅಥವಾ ವರ್ತನೆಯಾಗದಂತೆ ನಿಯಮಗಳನ್ನು ಮಾಡಬಹುದು. ಸಿಟ್ಟುಬಂದಾಗ ‘ನಿನಗೆ ಸಿಟ್ಟು ಬಂದಿದೆ. ನಮ್ಮಿಬ್ಬರ ನಡುವೆ ಏನು ನಡೆಯಿತು ಎಂದು ಮಾತನಾಡೋಣ. ಆದರೆ ಕೂಗಾಡುವುದು, ಕೆಟ್ಟಮಾತುಗಳನ್ನಾಡುವುದು, ಮಾತನ್ನು ನಿಲ್ಲಿಸುವುದು ನನಗೆ ಒಪ್ಪಿಗೆಯಿಲ್ಲ’ ಎಂದು ಹೇಳಬಹುದು. ದುಃಖ ಸೋಲು ಹತಾಶೆಗಳಿಗೆ ತಕ್ಷಣ ಸಮಾಧಾನದ ಅಗತ್ಯವಿಲ್ಲ. ದುಃಖದಲ್ಲಿರುವಾಗ ‘ನೀನು ಕಷ್ಟದ ಪರಿಸ್ಥಿತಿಯಲ್ಲಿದ್ದೀಯಾ. ಹಾಗಾಗಿ ಬೇಸರ ನೋವು ಸಹಜ. ನಾನು ಬೆಂಬಲಕ್ಕೆ ಇದ್ದೇನೆ. ಪ್ರಯತ್ನವನ್ನು ಮುಂದುವರೆಸು. ಇಬ್ಬರೂ ಸೇರಿ ಬದಲಾವಣೆಯ ದಾರಿ ಹುಡುಕೋಣ” ಎಂದು ಹೇಳಬಹುದು. ಹೀಗೆ ಯಾವುದೇ ಸಂದರ್ಭದಲ್ಲಿಯೂ ಮಕ್ಕಳಿಂದ ಮಾನಸಿಕವಾಗಿ ದೂರಹೋಗಬಾರದು. ಎಲ್ಲಾ ಭಾವನೆಗಳನ್ನು ಗೌರವಿಸೋಣ, ಆದರೆ ಕೆಟ್ಟ ಮಾತು ವರ್ತನೆಗಳನ್ನಲ್ಲ.
6. ಮಕ್ಕಳ ತಪ್ಪು ನಿರ್ಧಾರಗಳು ಅಥವಾ ಕೆಟ್ಟ ವರ್ತನೆಗಳಿಗೆ ನಮ್ಮ ಆತಂಕ ಸಿಟ್ಟು ದೂಷಣೆ ಬುದ್ಧಿವಾದಗಳು ಮಾತ್ರ ಉತ್ತರವಾದಾಗ ಅವರು ನಮ್ಮೊಡನೆ ವಿಷಯಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಾರೆ. ಹೀಗೆ ಅವರು ಮಾನಸಿಕವಾಗಿ ದೂರವಾದಾಗ ಪೋಷಕರು ಸಂಪೂರ್ಣ ಅಸಹಾಯಕರಾಗುತ್ತಾರೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸುವ ವಾತಾವರಣವಿದ್ದರೆ ಮಾತ್ರ ಮಕ್ಕಳು ಜವಾಬ್ದಾರಿಯುತವಾಗಿ ಬೆಳೆಯುತ್ತಾರೆ.
ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.