ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸುವುದು ನಮ್ಮ ನೆಮ್ಮದಿಗಾಗಿ

Last Updated 14 ನವೆಂಬರ್ 2022, 21:30 IST
ಅಕ್ಷರ ಗಾತ್ರ

ಯಾರೋ ನಮಗೆ ಕಸ ತುಂಬಿದ ಚೀಲವನ್ನು ಕೊಟ್ಟರೆ ನಾವೇನು ಮಾಡುತ್ತೇವೆ? ಸುಮ್ಮನೆ ಬಿಸಾಕಿ ಮುಂದೆಹೋಗುವುದಿಲ್ಲವೇ? ಹಾಗಿದ್ದ ಮೇಲೆ ಬೇರೆಯವರು ಕೊಟ್ಟ ನೋವನ್ನು ಯಾಕೆ ಹೊತ್ತುಕೊಂಡಿರಬೇಕು?

ನಮ್ಮ ತಪ್ಪಿದ್ದಾಗ ಅದನ್ನು ಅರಿತುಕೊಂಡು ‘ಕ್ಷಮಿಸು’ ಎಂದು ಕೇಳುವುದಕ್ಕಿಂತಲೂ ಕಠಿಣ ನಾವು ಬೇರೆಯವರನ್ನು ಕ್ಷಮಿಸುವುದು. ಯಾರೋ ಎಂದೋ ಆಡಿದ ಮಾತು, ನೋಡಿದ, ನಡೆಸಿಕೊಂಡ ರೀತಿಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೋಪಿಸಿಕೊಳ್ಳುವಾಗ ಅಥವಾ ದುಃಖಿಸುವಾಗ ನಮಗೆ ನಾವೇ ನೋವು ಕೊಟ್ಟುಕೊಳ್ಳುತ್ತೇವೆ. ಇದರಿಂದ ನಮ್ಮ ನೆಮ್ಮದಿ, ಆರೋಗ್ಯ, ನಿದ್ದೆ, ಸಮಯ, ಸಂಬಂಧಗಳು ಎಲ್ಲವೂ ಹಾಳಾಗುತ್ತದೆ. ಹಾಗಾಗಿ ಕ್ಷಮಿಸುವುದು ನಮ್ಮನ್ನು ನಾವೇ ಪ್ರೀತಿಸಿಕೊಳ್ಳುವುದರ, ಗೌರವಿಸಿಕೊಳ್ಳುವುದರ ಪ್ರತೀಕ.

ಕಾನೂನಿನ ಚೌಕಟ್ಟಿನಲ್ಲಿ ತಪ್ಪು-ಸರಿಗಳನ್ನು ನಿರ್ಧರಿಸುವ ರೀತಿಯೇ ಬೇರೆ, ಸಂಬಂಧಗಳಲ್ಲಿನ ವ್ಯಕ್ತಿನಿಷ್ಠ ತಪ್ಪು-ಸರಿಗಳನ್ನು ನಿರ್ಧರಿಸುವ ರೀತಿಯೇ ಬೇರೆ. ಸಂಬಂಧಗಳ ನೆಲೆಯಲ್ಲಿ ಘಟನೆಗಿಂತ ಹೆಚ್ಚಾಗಿ ನಾವು ಆ ಘಟನೆಯ ಜೊತೆ ಹೇಗೆ ಗುರುತಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

ಕ್ಷಮಿಸುವವರು ಮೇಲು, ಕ್ಷಮೆ ಕೇಳುವವರು ಕೀಳು; ಕ್ಷಮಿಸುವವರು ಕ್ಷಮಿಸುವುದರ ಮೂಲಕ (ಅವರ ಪ್ರಕಾರ) ತಪ್ಪು ಮಾಡಿದವರಿಗೆ ಯಾವುದೋ ಔದಾರ್ಯ ತೋರುತ್ತಾ ಮೇಲ್ಮಟ್ಟದಲ್ಲಿದ್ದಾರೆ ಎಂದೇನಲ್ಲ. ನಾವು ಯಾರನ್ನಾದರೂ ಕ್ಷಮಿಸುವುದು ನಮ್ಮ ನೆಮ್ಮದಿಗಾಗಿ ಹೊರತು ಅವರ ಉದ್ಧಾರಕ್ಕಾಗಿ ಅಲ್ಲ.

ಸಣ್ಣ ಪುಟ್ಟ ಮೋಸ, ವಂಚನೆ, ಕೆಟ್ಟ ಮಾತುಗಳನ್ನು ಹೇಗಾದರೂ ಕ್ಷಮಿಸಬಹುದು. ಆದರೆ ಯಾವುದು ನಮ್ಮ ಮನಸ್ಸಿಗೆ ಆಳವಾದ ಗಾಯ ಮಾಡುವ ಮೂಲಕ ನಮ್ಮ ಬದುಕಿನಲ್ಲಿ ಈಗಲೂ ನೋವು ಕೊಡುತ್ತಿದೆಯೋ ಅದಕ್ಕೆ ಕಾರಣರಾದವರನ್ನು ಕ್ಷಮಿಸುವುದು ಹೇಗೆ? ಉದಾಹರಣೆಗೆ ಬಾಲ್ಯದಲ್ಲಿ ನಡೆದ ದೈಹಿಕ, ಮಾನಸಿಕ ದೌರ್ಜನ್ಯಗಳಿಗೆ ಕಾರಣರಾದವರನ್ನು ಕ್ಷಮಿಸುವುದೆಂದರೆ ಸಾಮಾನ್ಯ ವಿಷಯವಲ್ಲ; ಅದು ಒಂದಿಡೀ ಜೀವಮಾನದ ಪಯಣ. ಬಾಲ್ಯದಲ್ಲಿ ಶಿಕ್ಷಣದಿಂದ, ಬೆಳೆಯುವ ಅವಕಾಶಗಳಿಂದ ವಂಚಿತರಾದವರು, ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿಗಳನ್ನು ಹೊತ್ತವರು, ಅತಿ ಶಿಸ್ತಿನ, ಒರಟುತನದ ಮನೆಗಳಲ್ಲಿ ಬೆಳೆದವರು, ಜೀವನದ ಸಂಭ್ರಮದ ಕ್ಷಣಗಳನ್ನು ಯಾರ ಅಡೆತಡೆಯಿಲ್ಲದೆ ಅನುಭವಿಸಲಾರದವರು, ಅದಕ್ಕೆ ಯಾರು ಕಾರಣರು ಎಂದೆಣಿಸುತ್ತಾರೋ ಅವರ ಮೇಲೆ ಹಾಗೂ ಕೊನೆಗೆ ತಮ್ಮ ಮೇಲೆಯೇ ಕೋಪಗೊಂಡು ವರ್ತಮಾನದ ಬದುಕನ್ನೂ ಆಸ್ವಾದಿಸದೆ ಕೊರಗುವುದನ್ನು ನಮ್ಮ ಸುತ್ತಲೂ ಅನೇಕ ಜನರಲ್ಲಿ ಕಾಣುತ್ತೇವೆ.

ಕ್ಷಮಿಸುವುದು ಉದಾತ್ತ ಚಿಂತನೆಯ, ಶ್ರೇಷ್ಠ ಬದುಕಿನ ಸಂಕೇತವೇ ಹೌದಾದರೂ ನಮಗೆ ದುಃಖವನ್ನುಂಟುಮಾಡಿದವರನ್ನು ಆ ಕ್ಷಣದಲ್ಲಿಯೇ ಕ್ಷಮಿಸಿಬಿಡುವುದು ವಾಸ್ತವಕ್ಕೆ ದೂರವಾದುದು. ಹಲವು ಬಾರಿ ನಾವೆಷ್ಟೇ ‘ಕ್ಷಮಿಸಿಬಿಡಬೇಕು’ ಎಂದುಕೊಂಡರೂ ಕ್ಷಮಿಸುವುದಕ್ಕೆ ಮನಸ್ಸು ಒಪ್ಪುವುದೇ ಇಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಎಲ್ಲಿಯವರೆಗೆ ನಾವು ನಮಗಾದ ನೋವು, ಸಂಕಟ, ಅನ್ಯಾಯವನ್ನು ಒಪ್ಪಿಕೊಂಡು ನಮ್ಮನ್ನು ನಾವೇ ಸಂತೈಸಿಕೊಳ್ಳುವಷ್ಟು ಪ್ರಬುದ್ಧತೆ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಬೇರೆಯವರನ್ನು ಕ್ಷಮಿಸುವುದಕ್ಕಾಗುವುದಿಲ್ಲ. ಕ್ಷಮೆ ಎನ್ನುವುದು ಒಂದು ದೀರ್ಘ ಪ್ರಕ್ರಿಯೆ; ಅದಕ್ಕೆ ಸಾಕಷ್ಟು ಸಮಯಬೇಕು.

ನಮ್ಮ ಒಳಿತಿಗೆ, ಕೆಡುಕಿಗೆ ಯಾರೋ ನೇರ ಕಾರಣ ಎನ್ನುವುದು ನಮ್ಮ ಸೀಮಿತ ಗ್ರಹಿಕೆ. ಎಲ್ಲ ಘಟನೆಗಳನ್ನು ಸಂಕುಚಿತ ಕಾರ್ಯ-ಕಾರಣ ಸಂಬಂಧದ ದೃಷ್ಟಿಯಿಂದ ನೋಡದೆ ಪ್ರಪಂಚದ ಆಗುಹೋಗುಗಳು, ಪ್ರಕೃತಿಯಲ್ಲಿನ ವಿದ್ಯಮಾನಗಳು, ಮನುಷ್ಯ ಸಂಬಂಧಗಳ ಮೂಲಸ್ವಭಾವ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವುದನ್ನು ಅರ್ಥಮಾಡಿಕೊಂಡಾಗ ಜೀವನದ ವಿಶಾಲ ಭಿತ್ತಿಯ ಮೇಲೆ ವೈಯಕ್ತಿಕ ಲಾಭ ನಷ್ಟಗಳನ್ನು ಬೇರೆಯದೇ ದೃಷ್ಟಿಕೋನದಿಂದ ನೋಡಬಹುದು. ಅನ್ಯರು ನಮಗೇನೋ ಕೆಡುಕು ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ, ನಾವು ಕೇವಲ ಅವರು ಕೊಟ್ಟಿದ್ದನ್ನು ಅನ್ಯೋಪಾಯವಿಲ್ಲದೆ ಅನುಭವಿಸುತ್ತಿದ್ದೇವೆ – ಎನ್ನುವ ನಿಷ್ಕ್ರಿಯ ಮನಃಸ್ಥಿತಿಯನ್ನು ವಿಮರ್ಶೆಗೊಳಪಡಿಸಬೇಕು. ಯಾರೋ ನಮಗೆ ಕಸ ತುಂಬಿದ ಚೀಲವನ್ನು ಕೊಟ್ಟರೆ ನಾವೇನು ಮಾಡುತ್ತೇವೆ? ಸುಮ್ಮನೆ ಬಿಸಾಕಿ ಮುಂದೆಹೋಗುವುದಿಲ್ಲವೇ? ಹಾಗಿದ್ದ ಮೇಲೆ ಬೇರೆಯವರು ಕೊಟ್ಟ ನೋವನ್ನು ಯಾಕೆ ಹೊತ್ತುಕೊಂಡಿರಬೇಕು?

ಕ್ಷಮಿಸುವ ದಾರಿಯಲ್ಲಿ ಎರಡು ತೀಕ್ಷ್ಣ ಭಾವಗಳು ನಮಗೆ ಎದುರಾಗುತ್ತವೆ. ಒಂದು ಸೇಡು; ಮತ್ತೊಂದು ಕೋಪ. ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಯಾರ ಮೇಲೆ ನಮಗೆ ಕೋಪವಿರುತ್ತದೆಯೋ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಮನೋಭಾವವೂ ಇರುತ್ತದೆ; ‘ನಾನು ಅನುಭವಿಸಿದ ನೋವನ್ನು ಅವರೂ ಅನುಭವಿಸಲಿ’ ಎಂಬ ಉದ್ದೇಶದಿಂದ. ಆದರೆ ಹಾಗೆ ಸೇಡು ತೀರಿಸಿಕೊಳ್ಳುವ ಮನೋಭಾವ ಏನನ್ನು ತೋರಿಸುತ್ತದೆ? ನಮಗೆ ಕಷ್ಟ ಕೊಟ್ಟವರು ಇನ್ನೂ ನಮ್ಮ ಮನಸ್ಸಿನಲ್ಲಿದ್ದಾರೆ, ನಮ್ಮ ಜೀವನವನ್ನು ಈಗಲೂ ಪ್ರಭಾವಿಸುತ್ತಿದ್ದಾರೆ, ನಾವಿನ್ನೂ ಅವರ ಹಿಡಿತದಲ್ಲೇ ಇದ್ದೇವೆ – ಎಂದಂತಾಗುವುದಿಲ್ಲವೇ?

ಕೋಪ ಎನ್ನುವುದು ಒಂದು ಪ್ರಬಲ ಸೂಚನೆ. ಎಲ್ಲಿ ನಮಗೆ ಅನ್ಯಾಯವಾಗಿದೆಯೋ, ಸಹಜವಾಗಿ ಸಿಗಬೇಕಾದ್ದು ಸಿಗಲಿಲ್ಲವೋ, ನಮ್ಮನ್ನು ನಾವಾಗಿರಲು ಬಿಡದ ನಿರ್ಬಂಧಗಳ ಒತ್ತಡ ಹೆಚ್ಚಾಗಿದೆಯೋ ಅಲ್ಲಿ ಅತಿಯಾದ ಕೋಪವಿರುತ್ತದೆ. ‘ನಾನೇನೋ ಕಳೆದುಕೊಂಡಿದ್ದೇನೆ’ ಎಂಬ ಕೊರಗಿರುತ್ತದೆ. ಮೊದಲಿಗೆ ನಮ್ಮ ಕೋಪ ನ್ಯಾಯಬದ್ಧವಾದದ್ದೇ ಎಂದೆಣಿಸಿ ಅದಕ್ಕೆ ಅವಕಾಶವನ್ನು ಕೊಡಬೇಕು. ಕೋಪದ ಬಗ್ಗೆಯೇ ಅಸಹನೆ ಸಲ್ಲದು. ನಮ್ಮ ಕೋಪ ಏನು ಹೇಳುತ್ತಿದೆ, ಯಾವುದರ ಕಡೆಗೆ ನಮ್ಮ ಗಮನ ಸೆಳೆಯುತ್ತಿದೆ ಎನ್ನುವುದನ್ನು ತಿಳಿಯಬೇಕು. ‘ನಾನು ಏನನ್ನು ಕಳೆದುಕೊಂಡಿರುವುದಕ್ಕಾಗಿ ಕೋಪದಲ್ಲಿದ್ದೇನೆ’ ಎನ್ನುವುದನ್ನು ಪದಗಳ ಮೂಲಕ ಅಭಿವ್ಯಕ್ತಿಸಬೇಕು. ನಾವು ಕಳೆದುಕೊಂಡಿದ್ದರೆ ಬಗ್ಗೆ ಆಗುವ ದುಃಖಕ್ಕೂ ಅವಕಾಶ ಕೊಡಬೇಕು. ಪ್ರಪಂಚ ನಮಗೆ ಏನು ಕೊಡಬೇಕೆಂದು ಬಯಸುತ್ತೇವೋ, ಏನು ಪ್ರಪಂಚದಿಂದ ಸಿಗಲಿಲ್ಲವೆಂದು ಕೊರಗುತ್ತೇವೋ ಅದನ್ನು ನಮಗೆ ನಾವೇ ಕೊಟ್ಟುಕೊಳ್ಳುವಷ್ಟು ಭಾವನಾತ್ಮಕ ಸ್ವಾವಲಂಬನೆಯನ್ನು ಬೆಳೆಸಿಕೊಂಡಾಗ ಮಾತ್ರ ಕ್ಷಮಿಸುವುದು ಸುಲಭವಾಗುತ್ತದೆ

ನಾವೇನನ್ನೋ ಕಳೆದುಕೊಂಡಿದ್ದೇವೆ; ಅದು ಏನು – ಎಂದು ಪ್ರಶ್ನೆ ಹಾಕಿಕೊಂಡಾಗ ನಾವು ಕಳೆದುಕೊಂಡಿರುವುದು ನಮ್ಮ ಹೃದಯದಲ್ಲಿ ಭದ್ರವಾಗಿ ಕುಳಿತುಕೊಂಡು ನಮ್ಮ ಜೀವನವನ್ನೆಲ್ಲಾ ವ್ಯಾಪಿಸಿಕೊಂಡಿರುವುದನ್ನು ಕಾಣುತ್ತೇವೆ. ನಾವು ಏನನ್ನೋ ಕಳೆದುಕೊಂಡಿದ್ದರಿಂದಲೇ ಅದರ ಮೌಲ್ಯವನ್ನು ಅರಿತಿರುತ್ತೇವೆ. ಅದನ್ನು ಹುಡುಕುವ ನೆಪದಲ್ಲಿ ಜೀವನಕ್ಕೆ ಹೊಸ ದಿಕ್ಕು ದೊರೆತಿರುತ್ತದೆ. ನಿಜವಾಗಿ ನೋಡಿದರೆ, ಯಾರೂ ನಮ್ಮಿಂದ ಏನನ್ನೂ ಕಸಿದುಕೊಳ್ಳಲಾಗುವುದಿಲ್ಲ. ’ನಾವು ಕಳೆದುಕೊಂಡಿದ್ದು ಕಳೆದೇ ಹೋಯ್ತು ಅಂತಾಗಬೇಕಿಲ್ಲ; ಅದು ಅನೇಕ ರೂಪಾಂತರಗಳನ್ನು ಹೊಂದಿ ಅನೇಕ ಹೆಸರುಗಳೊಂದಿಗೆ ಸದಾ ನಮ್ಮ ಹಿಂದೆ ಮುಂದೆ ಸುಳಿಯುತ್ತಲೇ ಇರುತ್ತದೆ’ ಎಂಬ ನಂಬಿಕೆ ಗಟ್ಟಿಯಾಗಬೇಕಷ್ಟೇ. ನಿಜವಾದ ಪ್ರತೀಕಾರ ಎಂದರೆ ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಬಯಕೆಯೇ ಉಂಟಾಗದಷ್ಟು ಬೆಳೆಯುವುದು; ಆತ್ಮವಿಕಾಸ ಹೊಂದುವುದು. ಆಗ ಕ್ಷಮಿಸುವುದೂ ಸಹಜವಾಗಿಬಿಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT