ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಮಧ್ಯ ವಯಸ್ಸಿನ ಮುಗ್ಗಟ್ಟು

Published 17 ಜುಲೈ 2023, 23:30 IST
Last Updated 17 ಜುಲೈ 2023, 23:30 IST
ಅಕ್ಷರ ಗಾತ್ರ

ಬಾಲ್ಯ, ಯೌವ್ವನ, ನಡು ವಯಸ್ಸು ಹಾಗೂ ವೃದ್ಧಾಪ್ಯ  ಇವು ಮಾನವನ ಬದುಕಿನ ನಾಲ್ಕು ಘಟ್ಟಗಳು. ಪ್ರತೀ ಹಂತದಲ್ಲೂ ಮನುಷ್ಯನ ವರ್ತನೆ ಬೇರೆ ಬೇರೆಯಾಗಿರುತ್ತದೆ. ಹರೆಯ ಹಾಗೂ ಮುಪ್ಪಿನ ನಡುವೆ ಬರುವುದೇ ಮಧ್ಯ ವಯಸ್ಸು. ಸುಮಾರು 40ರಿಂದ 60ರ ವಯಸ್ಸಿನಲ್ಲಿ ತಮ್ಮದೇ ಜೀವನದ ಬಗ್ಗೆ ವಿಮರ್ಶೆ ಹುಟ್ಟಿಕೊಳ್ಳುತ್ತದೆ. ಇದು ಇಲ್ಲಿಯವರೆಗಿನ ಹೋರಾಟವಾಗಿರಬಹುದು, ವೃತ್ತಿ ಜೀವನಕ್ಕೆ ಸಂಬಂಧಿಸಿದ್ದಿರಬಹುದು ಅಥವಾ ಭವಿಷ್ಯದ ಭಯವಿರಲೂಬಹುದು. ಸಾಧಾರಣವಾಗಿ ಮಧ್ಯವಯಸ್ಸಿಗೆ ಬರುವ ವೇಳೆಗೆ ಮಕ್ಕಳು ದೊಡ್ಡವರಾಗಿರುತ್ತಾರೆ. ನಡುವಯಸ್ಕರು ಉದ್ಯೋಗದಲ್ಲಿ ಒಂದು ಹಂತಕ್ಕೆ ತಲುಪಿರುತ್ತಾರೆ. ವಯಸ್ಸಾದ ಪೋಷಕರ ಜವಾಬ್ದಾರಿ ಇರುತ್ತದೆ. ನಿವೃತ್ತಿ ಜೀವನದ ಬಗ್ಗೆ ಒಂದು ಸ್ಪಷ್ಟತೆ ಬಂದಿರುತ್ತದೆ. ಆದರೂ ಒಂದು ರೀತಿಯ ದುಗುಡ ಕಾಡಲು ಆರಂಭವಾಗುತ್ತದೆ.

ಬದುಕಿನ ಬಂಡಿಯನ್ನೊಮ್ಮೆ ತಿರುಗಿಸಿದಾಗ ನೋಡಿದಾಗ, ಇದುವರೆವಿಗೂ ತಾನು ಮಾಡಿದ್ದು ಸರಿಯೋ, ತಪ್ಪೋ ಎಂಬ ಜಿಜ್ಞಾಸೆ ಕಾಡತೊಡಗುತ್ತದೆ. ಮುಂದಿನ ಬದುಕು ಹೇಗೆ ಎಂಬ ಪ್ರಶ್ನೆ ದುತ್ತೆಂದು ಎದುರು ನಿಲ್ಲುತ್ತದೆ. ಎಲ್ಲವೂ ಸರಿ ಇದೆ ಎನ್ನುವಾಗಲೇ ಈ ಮಧ್ಯ ವಯಸ್ಸಿನ ಮುಗ್ಗಟ್ಟು ಹಲವರಲ್ಲಿ ಗೊಂದಲ ತರುತ್ತದೆ.  ಈ ಬಿಕ್ಕಟ್ಟಿಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಈ ರೀತಿ ದುಗುಡ, ಬದುಕಿನಲ್ಲಿ ನಿರಾಸಕ್ತಿ ಬಹಳಷ್ಟು ಜನರ ಬದುಕಿನಲ್ಲಿ ಸಾಮಾನ್ಯ. ಕೆಲವರು ತಮ್ಮ ಭಾವನೆಗಳಿಗೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಬದುಕೇ ಅಸಹನೀಯವಾಗಿ ತೋರುತ್ತದೆ.

ಸಾಮಾನ್ಯವಾಗಿ ಮಹಿಳೆಯರಿಗೆ ಋತುಬಂಧದ ಸಮಯದಲ್ಲಾಗುವ ಬದಲಾವಣೆಗಳನ್ನು ನಡು ವಯಸ್ಸಿನ ಸಮಸ್ಯೆಯೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಸ ಮಧ್ಯ ವಯಸ್ಸು ಸಮೀಪಿಸುತ್ತಿರುವಂತೆಯೇ ಒಂದು ಬಗೆಯ ವ್ಯಸನ ಕಾಡಲು ಆರಂಭಿಸುತ್ತದೆ. ಕೆಲಸದ ಬಗ್ಗೆ ನಿರಾಸೆ ಮೂಡಬಹುದು. ಒತ್ತಡ ಹೆಚ್ಚಾಗಿ ಖಿನ್ನತೆಗೆ ಜಾರಬಹುದು. ಯಾವುದೂ ಮೊದಲಿನಂತೆ ಇಲ್ಲ ಎಂದೆನಿಸಬಹುದು. ಸಿಟ್ಟು, ಸಿಡುಕು ಹೆಚ್ಚಾಗಬಹುದು. ತಮ್ಮ ದೇಹದ ಬಗ್ಗೆಯೇ ಕೀಳರಿಮೆ ಮೂಡಬಹುದು.  ಒಂಟಿತನ ಕಾಡಬಹುದು. ಮುಂದಿನ ಜೀವನದ ಬಗ್ಗೆ ಭಯ ಹುಟ್ಟಬಹುದು. ಒಟ್ಟಿನಲ್ಲಿ ಏನೋ ನಿರಾಶೆ, ಹತಾಶೆಯ ಭಾವ ಆವರಿಸಬಹುದು. ಇದಕ್ಕೆ ಬದುಕಿನ ಬವಣೆಗಳೇ ಕಾರಣವಾಗಬೇಕೆಂದಿಲ್ಲ. ಎಲ್ಲವೂ ಚೆನ್ನಾಗಿಯೇ ಇದ್ದಾಗಲೂ ಯಾರಿಗೆ ಬೇಕಾದರೂ ಅನಿಸಬಹುದಾದ ಭಾವನೆಗಳು ಇವು. ಈ ಮಧ್ಯ ವಯಸ್ಸಿನ ಸಮಸ್ಯೆಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ. ಇದುವರೆವಿಗೂ ಇಷ್ಟವಾಗುತ್ತಿದ್ದ ಕೆಲಸಗಳು, ಆಶಯಗಳು, ವ್ಯಕ್ತಿಗಳು ಇಷ್ಟವಾಗದೇ ಹೋಗಬಹುದು! ಇದಕ್ಕೇ ಇಂಥದ್ದೇ ಎಂದು ನಿರ್ದಿಷ್ಟವಾದ ಕಾರಣಗಳಿಲ್ಲ. ಇವು ಬದುಕಿನಲ್ಲಿ ನಡೆದ ಅನಿರೀಕ್ಷಿತ ಅಹಿತಕರ ಘಟನೆಗಳಿಂದ ಶುರುವಾಗಬಹುದು. ಏನೂ ಆಗದೆಯೂ ಬದುಕಿನಲ್ಲಿ ಹೊಸತನ್ನು ಹುಡುಕುವ ಗೀಳಿನಿಂದಲೂ ಉದಯಿಸಬಹುದು. ಇವು ಯಾವುವೂ ಅಲ್ಲದೆ ಬದುಕಿನ ಏಕತಾನತೆಯ ಬೇಸರದಿಂದಲೂ ಈ ಮಧ್ಯ ವಯಸ್ಸಿನ ಮಗ್ಗಟ್ಟು ಉಂಟಾಗಬಹುದು.

ಈ ಸಮಸ್ಯೆಗಳು ಎಲ್ಲಾ ಮಧ್ಯ ವಯಸ್ಕರನ್ನೂ ಕಾಡಬೇಕೆಂದಿಲ್ಲ. ಕೆಲವರು ತಮ್ಮ ಭಾವನೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಮುಂಚಿನಂತೆಯೇ ಇರಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರ ಜೀವನದಲ್ಲಿ ಈ ಘಟ್ಟ ಬಂದು ಹೋಗಿದ್ದೂ ಗೊತ್ತಾಗುವುದಿಲ್ಲ. ಮತ್ತೂ ಕೆಲವರು ಬದುಕೇ ಮುಗಿದು ಹೋಯಿತೇನೋ ಎಂಬಂಥಾ ಸ್ಥಿತಿಯನ್ನು ತಲುಪುತ್ತಾರೆ. ಈ ತೊಂದರೆಗಳನ್ನು ಹೀಗೇ ಎಂದು ಅಧಿಕೃತವಾಗಿ ನಿರ್ಣಯಿಸಲು ಆಗುವುದಿಲ್ಲ. ಇದೊಂದು ಬಹಳ ಸಾಧಾರಣವಾದ ಜೀವನದ ಹಂತಗಳಲ್ಲಿ ಒಂದು. ಈ ಒಂದು ಹಂತವನ್ನು ದಾಟಿ ಮುಂದೆ ನಡೆದರೆ ಬದುಕು ಸರಾಗ. ಇದಕ್ಕಾಗಿ ಕೆಲವು ಸರಳವಾದ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸರಿ, ಬದುಕು ಉಲ್ಲಾಸದಿಂದ, ಶಾಂತಿಯಿಂದ ಕೂಡಿರುತ್ತದೆ.

ಆದ್ಯತೆ ಅರಿಯಿರಿ: ‘ಮಿ ಟೈಮ್‘ ಅಂದರೆ ನನ್ನ ಸಮಯವೆಂಬುದಿದೆ. ಇಷ್ಟಾನಿಷ್ಟಗಳಿಗೆ ಆದ್ಯತೆ ಕೊಡುವತ್ತ ಯೋಚಿಸಿ. ಈ ಸಮಯದಲ್ಲಿ  ನಿಮಗಿಷ್ಟವಾದ ಕೆಲಸಗಳನ್ನು ಮಾಡಿ. ಅದು ಇಂಥದ್ದೇ ಆಗಿರಬೇಕೆಂದಿಲ್ಲ. ಸಂಗೀತವಾಗಿರಬಹುದು, ಆಟವಾಗಿರಬಹುದು, ಸಾಮಾಜಿಕ ಜಾಲತಾಣವಾಗಿರಬಹುದು, ನಿಮಗಿಷ್ಟವಾದ ಮನರಂಜನೆಯಾಗಿರಬಹುದು, ಕೈತೋಟದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಹೀಗೆ ನೀವು ಆಸಕ್ತಿಯಿಂದ ಮಾಡುವ ಯಾವುದೇ ಕೆಲಸವಾದರೂ ಸರಿ.  ಬೇಡದ ಯೋಚನೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಪ್ರಯತ್ನಿಸಿ ನೋಡಿ! ಇಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವುದೂ ಒಂದು ರೀತಿಯ ಧ್ಯಾನವೇ!

ಚಟ ಬಿಡಿ: ಮನಸ್ಸನ್ನು ಬೇರೆಡೆಗೆ ಹೊರಳಿಸಲು ಏಕಾಗ್ರತೆ ಬೇಕು. ಇದಕ್ಕಾಗಿ ಯಾವುದೇ ರೀತಿಯ ಕೆಟ್ಟ ಚಟಗಳಿದ್ದರೂ ಅದನ್ನು ಬಿಡಿ. ಮಧ್ಯ ವಯಸ್ಸಿಗೆ ಬರುವ ವೇಳೆಗೆ ಬದುಕಿನ ನಾನಾ ರೀತಿಯ ಮಜಲುಗಳನ್ನು ಏರಿ ಬಂದಾಗಿರುತ್ತದೆ. ಸುಖ-ದುಃಖ, ನೋವು-ನಲಿವು ಎಲ್ಲವನ್ನೂ ಕಂಡಿರುವ ವಯಸ್ಸಾಗಿರುತ್ತದೆ. ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನಸ್ಥಿತಿ ಈ ವೇಳೆಗೆ ಬಂದಿರುತ್ತದೆ. ನಿಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ತಿಳಿದುಕೊಳ್ಳಿ. ಬದುಕಿನಲ್ಲಿ ಬರುವ ಯಾವುದೇ ಬದಲಾವಣೆಗಳನ್ನು ಸ್ವೀಕರಿಸುವ ಸಿದ್ಧತೆ ಮಾಡಿಕೊಳ್ಳಿ. ಕೆಟ್ಟ ಚಟಗಳು ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳಿ.

ಹೋಲಿಕೆ ಬೇಡ: ನಿಮಗಿಷ್ಟವಾದ ಸ್ನೇಹಿತರ ಸಂಪರ್ಕ ಬೆಳೆಸಿ. ಹಳಬರಾಗಿರಬಹುದು ಅಥವಾ ಹೊಸಬರಾಗಿರಬಹುದು. ಸ್ನೇಹಿತರೊಂದಿಗಿನ ಒಡನಾಟ ಮನಸ್ಸನ್ನು ಹಗುರಗೊಳಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರ ಜೀವನವೂ ವಿಭಿನ್ನವಾಗಿರುತ್ತದೆ. ಮಿತ್ರರ ಜೊತೆಯಿದ್ದಾಗ ಭಾವನಾತ್ಮಕ ಆರೋಗ್ಯ ಸುಧಾರಿಸುತ್ತದೆ. ಹಿತೈಷಿಗಳು ಸಿಗದಿದ್ದಾಗ, ಸಾಮಾಜಿಕ ಜಾಲತಾಣ ಅಥವಾ ಮನರಂಜನಾ ತಾಣಗಳ ಬಳಕೆ ಮಾಡಿ.

ಕಾಳಜಿ ಮಾಡಿ: ಬೇರೆಯವರ ಬಗ್ಗೆ ತೋರುವ ಕಾಳಜಿಯನ್ನು ನಿಮ್ಮ ಬಗ್ಗೆಯೂ ತೋರಿ ನೋಡಿ. ಮನಸ್ಸಿನ ದುಗುಡ ಕ್ರಮೇಣ ಓಡಿ ಹೋಗುತ್ತದೆ. ನಿಮಗೊಪ್ಪುವಂಥ ಉಡುಪನ್ನು ಧರಿಸಿ, ನಿಮ್ಮನ್ನು ನಿಮಗೊಪ್ಪುವ ರೀತಿಯಲ್ಲಿ ಸಿಂಗರಿಸಿಕೊಳ್ಳಿ. 

ನಾವು ತಿನ್ನುವ ಆಹಾರ, ವ್ಯಾಯಾಮ ಹಾಗೂ ಪ್ರಕೃತಿಯ ಏರು ಪೇರಿನಿಂದ ದೇಹದ ಮೇಲಾಗುವ ಪರಿಣಾಮಗಳು ಸ್ವಾಭಾವಿಕ. ಆದರೆ ಮನಸ್ಸಿನ ಮೇಲೆ ಆಗುವ ದಾಳಿಯನ್ನು ನಾವೇ ನಿಯಂತ್ರಿಸಬೇಕು. ನಮ್ಮ ಭಾವನೆಗಳು ನಮ್ಮ ಹಿಡಿತದಲ್ಲಿರಬೇಕು. ಯಾವ ಭಾವ ನಮ್ಮನ್ನು ಆಳಬೇಕು ಎಂಬುದನ್ನು ನಿರ್ಧರಿಸಬೇಕಾಗಿರುವುದು ನಾವು ಮಾತ್ರ! ಈ ಮಧ್ಯ ವಯಸ್ಸಿನ ಸಮಸ್ಯೆಗಳು ನಿರಂತರವಲ್ಲ. ಬದುಕಿನ ಹಲವಾರು ಮೆಟ್ಟಿಲುಗಳಲ್ಲಿ ಒಂದೆರೆಡು ಮಜಲುಗಳಷ್ಟೇ! ಇದಕ್ಕೆ ಪರಿಹಾರ ದೊಡ್ಡ ರೀತಿಯಿಂದಲೇ ಆಗಬೇಕೆಂದಿಲ್ಲ. ಬದುಕಿನಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಈ ಮಧ್ಯ ವಯಸ್ಸಿನ ಮಗ್ಗಟ್ಟನ್ನು ಯಶಸ್ವಿಯಾಗಿ ದಾಟಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT